Dharwad: ದಿಂಗಾಲೇಶ್ವರ ಸ್ವಾಮೀಜಿ ಚುನಾವಣೆ ಸ್ಪರ್ಧೆ ಏ.2ರಂದು ತೀರ್ಮಾನ
ಹುಬ್ಬಳ್ಳಿ, ಮಾರ್ಚ್ 27: ಉತ್ತರ ಪ್ರದೇಶದ ಮಾದರಿಯಂತೆ ಧಾರವಾಡ ಕ್ಷೇತ್ರದಿಂದ ಶ್ರೀ ಶಿರಹಟ್ಟಿ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಲೋಕಸಭಾ ಚುನಾವಣೆ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ. ಈ ಕುರಿತು ಬುಧವಾರ ಮೂರು ಸಾವಿರ ಮಠದಲ್ಲಿ ವಿವಿಧ 80 ಕ್ಕೂ ಹೆಚ್ಚು ಮಠಾಧೀಶರ ಸಮ್ಮುಖದಲ್ಲಿ ಮಹತ್ವದ ಸಭೆ ನಡೆದಿದೆ.
ಸಭೆಯಲ್ಲಿ ಧಾರವಾಡದಲ್ಲಿ ಲಿಂಗಾಯತರ ಮತ ವಿಭಜನೆ, ಧಾರ್ಮಿಕವಾಗಿ ವೀರಶೈವ ಲಿಂಗಾಯತರ ಅವನತಿ ಆಗುತ್ತಿದೆ ಎಂಬ ಹಲವು ವಿಚಾರ ಕುರಿತು ಶ್ರೀಗಳು ಚರ್ಚಿಸಿದರು. ಈ ವೇಳೆ ಧಾರವಾಡದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬದಲಾವಣೆ ಮಾಡಬೇಕು ಎಂದು ಒಕ್ಕೋರಲಿನಿಂದ ಆಗ್ರಹಿಸಲಾಯಿತು.

ಮಾರ್ಚ್ 31ರೊಳಗೆ ಧಾರವಾಡ ಅಭ್ಯರ್ಥಿಯನ್ನು ಬದಲಾವಣೆ ಮಾಡಬೇಕು. ಈ ಬಗ್ಗೆ ಬಿಜೆಪಿ ಮನವಿ ಮಾಡಲಾಗುವುದು. ಒಂದು ವೇಳೆ ಮಾಡದಿದ್ದರೆ, ಏಪ್ರಿಲ್ 2ರಂದು ದಿಂಗಾಲೇಶ್ವರ ಶ್ರೀಗಳ ಕಣಕ್ಕಿಳಿಸುವ ಕುರಿತು ನಿರ್ಧರಿಸಲಾಗುವುದು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ.
ಮಠಾಧೀಶರಿಂದ ಸಲಹೆ
ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಕಣಕ್ಕೆ ಇಳಿಸಬೇಕೋ ಬೇಡವೋ ಎಂಬುದರ ಬಗ್ಗೆ ಮಠಾಧೀಶರಿಂದ ಸಲಹೆ ಪಡೆಯಲಾಗಿದೆ. ಧಾರವಾಡ ಲೋಕಸಭಾ ಕ್ಷೇತ್ರದಿಂದ ಪ್ರಹ್ಲಾದ್ ಜೋಶಿ ವಿರುದ್ಧ ಕಣಕ್ಕೆ ಇಳಿಸುವುದು, ಲಿಂಗಾಯತ ಮತ ವಿಭಜನೆಯಿಂದ ಆಗುವ ಹಾನಿ ಲಾಭ ಕುರಿತು ಮಠಾಧೀಶರು ಚರ್ಚೆ ನಡೆಸಿದ್ದಾರೆ.

ಮೂಜಗು ಸ್ವಾಮೀಜಿ ಪ್ರತಿಕ್ರಿಯೆ
ಇದೇ ವೇಳೆ ಮೂರು ಸಾವಿರ ಮಠದ ಮೂಜಗು ಸ್ವಾಮೀಜಿ ಅವರು ಮಾತನಾಡಿ, ದಿಂಗಾಕೇಶ್ವರ ಸ್ವಾಮೀಜಿ ಧಾರ್ಮಿಕ ಕಾರ್ಯ ಮಾಡಬೇಕು ಅನ್ನೋ ನಿರ್ಣಯ ತೆಗೆದುಕೊಳ್ಳಲಾಗಿದೆ. ಮಠಗಳು ರಾಜಕೀಯದಿಂದ ಅಂತರ ಕಾಯ್ದುಕೊಂಡಿವೆ.
ನಾವು ಯಾವ ಪಕ್ಷದ ಜೊತೆಗೂ ಗುರುತಿಸಿಕೊಂಡಿಲ್ಲ ಎಂದರು.
ಎಲ್ಲ ರಾಜಕೀಯ ಪಕ್ಷದವರು ಮಠಗಳಿಗೆ ಬರುತ್ತಾರೆ. ಮಠದೊಂದಿಗೆ ಎಲ್ಲಾ ಪಕ್ಷಗಳು ಉತ್ತಮ ಸಂಬಂಧ ಹೊಂದಿವೆ. ರಾಜಕೀಯ ಪಕ್ಷಗಳು ಜವಾಬ್ದಾರಿ ಮರೆತಾಗ ಎಚ್ಚರಿಸುವ ಕೆಲಸ ಮಠಗಳು ಮಾಡಿವೆ. ವೀರಶೈವ ಲಿಂಗಾಯತ ಸಮಾಜಕ್ಕೆ ನ್ಯಾಯ ಒದಗಿಸಲು ರಾಜಕೀಯ ಪಕ್ಷಗಳು ಹಿಂದೆ ಬಿದ್ದಿವೆ ಎಂಬ ವಿಚಾರ ಚರ್ಚೆಗೆ ಬಂದಿವೆ. ಇದೆಲ್ಲ ಕಾರಣದಿಂದ ಉತ್ತರ ಪ್ರದೇಶ ಮಾದರಿಯಲ್ಲಿ ಮಠಾಧೀಶರಲ್ಲಿ ಒಬ್ಬರು ಕಣಕ್ಕಿಳಿಯಲು ನಿರ್ಧರಿಸಲಾಗಿದೆ ಎಂದರು.
ಕೇಂದ್ರ ಸಚಿವರ ವಿರುದ್ಧ ಶ್ರೀಗಳು ಅಸಮಾಧಾನ
ಇದೇ ವೇಳೆ ಮಾತನಾಡಿದ ಶ್ರೀ ದಿಂಗಾಲೇಶ್ವರ ಸ್ವಾಮೀಜಿಯವರು, ಮಾಜಿ ಮುಖ್ಯಮಂತ್ರಿಗಳಿಗೆ ಟಿಕೆಟ್ ಬೇರೆ ಕಡೆ ಕೊಟ್ಟಂತೆ, ಕೇಂದ್ರ ಸಚಿವರಿಗೂ ಕ್ಷೇತ್ರ ಬದಲಾವಣೆ ಮಾಡಿ. ಅವರು ಲಿಂಗಾಯತರಿಗೆ, ಮಠಾಧೀಶರಿಗೆ ಅಗೌರವ ತೋರಿದ್ದಾರೆ. ಅವರಿಗೆ ಹಣ, ಅಧಿಕಾರ ಮದ ಏರಿಕೆ ಎಂದು ಆರೋಪಿಸಿದರು.
ಮುಂದಿನ ವಾರ ದಿಂಗಾಲೇಶ್ವರ ಶ್ರೀಗಳ ಸ್ಪರ್ಧೆ ಕುರಿತು ಅಧಿಕೃತ ಮಾಹಿತಿ ಹೊರ ಬೀಳುವ ನಿರೀಕ್ಷೆಗಳು ಇವೆ. ಈ ಮಠಾಧೀಶರ ಚಿಂಥನ ಮಂಥನ ಸಭೆಗೆ ಉತ್ತರ ಕನ್ನಡ, ಹಾವೇರಿ, ಚಿತ್ರದುರ್ಗ,ಮುರುಘಾಮಠ,ಬಾಲ್ಕಿ, ಬೀದರ್, ರಾಯಚೂರು, ಬಾಗಲಕೋಟೆ, ವಿಜಯಪುರ ಸೇರಿದಂತೆ ಅನೇಕ ಮಠಗಳ ಮಠಾಧೀಶರು ಪಾಲ್ಗೊಂಡಿದ್ದರು.












Click it and Unblock the Notifications