ಒಂದಾದ ನಾಯಕರು: ಶಾಮನೂರು ಶಿವಶಂಕರಪ್ಪ ಮಾತಿಗೆ ಸರಿ ಎಂದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ
ಬೆಂಗಳೂರು, ಅಕ್ಟೋಬರ್ 02: ರಾಜ್ಯದಲ್ಲಿ ಲಿಂಗಾಯತ ಅಧಿಕಾರಿಗಳ ಸ್ಥಿತಿ ನಾಯಿಪಾಡಾಗಿದೆ ಎಂಬ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಮಾತಿ ಧ್ವನಿಗೂಡಿಸಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಶಾಮನೂರರ ಮಾತಿಗೆ ನನ್ನ ಬೆಂಬಲವಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸಲಾಗುತ್ತಿದೆ. ಸರ್ಕಾರಿ ಅಧಿಕಾರಿಗಳಲ್ಲಿ ವಿರಶೈವ ಲಿಂಗಾಯತ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ಸಮುದಾಯದ ಅಧಿಕಾರಿಗಳನ್ನು ಕಡೆಗಣಿಸಲಾಗುತ್ತಿದೆ. ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಶಾಮನೂರು ಶಿವಶಂಕರಪ್ಪ ಅವರು ಕಳಕಳಿಯಿಂದ ಮಾತನಾಡಿದ್ದಾರೆ. ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗುತ್ತದೆ ಎಂಬುದನ್ನು ಸರ್ಕಾರ ಗಂಭೀರವಾಗಿ ಪರಿಣಗಣಿಸಬೇಕು ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಉನ್ನತ ಹುದ್ದೆಗಳು ಸಿಗುತ್ತಿಲ್ಲ ಎಂದು ಶಾಮನೂರು ಶಿವಶಂಕರಪ್ಪ ಹಾಗೂ ಬಿಎಸ್ ಯಡಿಯೂರಪ್ಪ ಆರೋಪಿಸಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮದು ಜಾತ್ಯತೀತ ಸರ್ಕಾರ. ನಾವು ಜಾತಿ ನೋಡಿ ಯಾರಿಗೂ ಹುದ್ದೆ ಸ್ಥಾನ ನೀಡುವುದಿಲ್ಲ. ಸಂವಿಧಾನ ಕಾನೂನು ಪ್ರಕಾರವೇ ಕೆಲಸ ಮಾಡಲಾಗುತ್ತದೆ. ನಾವು ನಮ್ಮ ಯೋಜನೆಗಳಾದ ಅನ್ನಭಾಗ್ಯ, ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆಗಳನ್ನು ಜಾತಿ ನೋಡಿ ಕೊಟ್ಟಿಲ್ಲ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರ ಮಾತಿಗೆ ಪೂರಕವಾಗಿ ಮಾತನಾಡಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಜಾತಿ ಆಧಾರದಲ್ಲಿ ಅಧಿಕಾರಿಗಳಿಗೆ ಹುದ್ದೆ ನೀಡಲು ಸಾಧ್ಯವಿಲ್ಲ. ಸರ್ಕಾರ ಎಲ್ಲ ಸಮುದಾಯಗಳನ್ನು ಗಮನಿಸಬೇಕಿದೆ. ಮುಖ್ಯಮಂತ್ರಿಗಳು ಎಲ್ಲರನ್ನು ಸಮಾನವಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಶಾಮನೂರು ಶಿವಶಂಕರಪ್ಪ ಅವರು ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಹೌದು. ಅವರಿಗೆ ಸಮಾಜಕ್ಕೆ ಎಷ್ಟು ಸ್ಥಾನ ಸಿಕ್ಕಿದೆ ಎಂಬ ಮಾಹಿತಿ ಇರುತ್ತದೆ. ಅಧಿಕಾರಿಗಳು ಸಹಜವಾಗಿ ತಮಗೆ ಉತ್ತಮ ಹುದ್ದೆ ಬೇಕು ಎಂದು ನಿರೀಕ್ಷಿಸುತ್ತಾರೆ. ಆದರೆ ಜಾತಿ ಆಧಾರದಲ್ಲಿ ಹುದ್ದೆ ಕಲ್ಪಿಸಲು ಸಾಧ್ಯವಿಲ್ಲ. ಲಿಂಗಾಯತ ಸಮುದಾಯದ ನಾಯಕರೂ ಆಗಿರುವುದಕ್ಕೆ ಶಾಮನೂರರ ಮೇಲೂ ಒತ್ತಡವಿರುತ್ತದೆ. ಕೆಲವು ಅಧಿಕಾರಿಗಳು ಅವರ ಬಳಿ ಹೋಗಿ ಮನವಿ ಮಾಡಿಕೊಂಡಿರಬಹುದು. ಈ ರೀತಿ ಕೇಳುವುದು ತಪ್ಪಿಲ್ಲ ಬಿಡಿ ಎಂದರು.
ಶಾಮನೂರು ಶಿವಶಂಕರಪ್ಪ ಇತ್ತೀಚೆಗೆ ಈ ವಿಷಯವನ್ನು ಪ್ರಸ್ತಾಪಿಸಿದ್ದು, ರಾಜಕೀಯ ವಲಯದಲ್ಲಿ ಅಲೆಗಳನ್ನು ಸೃಷ್ಟಿಸಿದೆ. ಲಿಂಗಾಯತರು ಮುಖ್ಯಮಂತ್ರಿಗಳಾಗಿದ್ದಾಗಲೆಲ್ಲಾ - ಎಸ್ ನಿಜಲಿಂಗಪ್ಪ, ಬಿ ಎಸ್ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ, ಸಮುದಾಯದ ಅಧಿಕಾರಿ ವರ್ಗದವರು ತನ್ನತ ಹುದ್ದೆಗಳನ್ನು ಪಡೆದರು. ಆದರೆ ಸಿದ್ದರಾಮಯ್ಯ ಸರ್ಕಾರದಲ್ಲಿ ಇದು ಆಗುತ್ತಿಲ್ಲ. ಉಪಜಾತಿಗಳ ನಡುವೆ ಒಗ್ಗಟ್ಟು ಇಲ್ಲದಿರುವುದೇ ಇದಕ್ಕೆ ಕಾರಣ ಎಂದರು.
ಯಡಿಯೂರಪ್ಪ ಮತ್ತು ಅವರ ಪುತ್ರ ಬಿ ವೈ ವಿಜಯೇಂದ್ರ ಮಾತನಾಡಿ, ಶಾಮನೂರು ಸಮುದಾಯದ ಅಧಿಕಾರಿಗಳ ಬಗೆಗಿನ ಹೇಳಿಕೆ ಇದು ವಾಸ್ತವವಾಗಿದೆ. ಸಮುದಾಯ ಒಗ್ಗಟ್ಟಾಗಿ ಇರುವುದೇ ಪರಿಹಾರ. ಈ ನಿಟ್ಟಿನಲ್ಲಿ ಎಲ್ಲಾ ನಾಯಕರು ಕೆಲಸ ಮಾಡಬೇಕೆಂದು ನಾನು ಒತ್ತಾಯಿಸುತ್ತೇನೆ. ಪೋಸ್ಟಿಂಗ್ ನೀಡುವಾಗ ಜಾತಿಗೆ ಆದ್ಯತೆ ನೀಡುವುದರೊಂದಿಗೆ ವ್ಯವಸ್ಥೆಯು ಹೇಗೆ ಕೊಳೆಯುತ್ತಿದೆ ಎಂಬುದನ್ನು ಕಾಂಗ್ರೆಸ್ ನಾಯಕರು ಬಹಿರಂಗಪಡಿಸಿದ್ದಾರೆ. ಇದು ಸಂವಿಧಾನ ಬಾಹಿರವಾಗಿದೆ ಎಂದರು.
ಇದೇ ವೇಳೆ ವೀರಶೈವ ಲಿಂಗಾಯತ ಮುಖಂಡರೊಬ್ಬರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಗುಸುಗುಸು ಕೇಳಿಬರುತ್ತಿದ್ದು, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಡಿಸಿಎಂ ಸ್ಥಾನ ನೀಡಬೇಕೆಂದು ಸಮುದಾಯದ ಮುಖಂಡರೊಬ್ಬರು ಒತ್ತಾಯಿಸಿದ್ದಾರೆ. ಆದರೆ ಶಾಮನೂರು ಸಮುದಾಯದ ಪ್ರತಿನಿಧಿಯಂತೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಖಂಡಿಸಿದರು. ಏಳು ಮಂದಿ ವೀರಶೈವ ಲಿಂಗಾಯತ ಸಚಿವರಿದ್ದಾರೆ. ಅವರು ಹೆಚ್ಚಿನ ಸಮುದಾಯದ ಮತಗಳನ್ನು ಪಡೆದು ಮುಖ್ಯಮಂತ್ರಿಯಾಗಲಿ. ಈ ಬಾರಿ ಸಿದ್ದರಾಮಯ್ಯನವರ ನಾಯಕತ್ವವೇ ಅಂತಿಮ ಎಂದು ಬೆಳಗಾವಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.












Click it and Unblock the Notifications