ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೊಡುವವರೆಗೂ ಹೋರಾಟ: ಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ
ಹುಬ್ಬಳ್ಳಿ, ಅಕ್ಟೋಬರ್, 13: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಇಂದು ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಗೊಬ್ಬೂರು ಬಳಿಯ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.
ಪಂಚಮಸಾಲಿ 2ಎ ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರದಿಂದ ಪ್ರದೇಪದೇ ನಿರ್ಲಕ್ಷ್ಯ ಮಾಡಲಾಗುತ್ತಿದೆ. ನಮಗೆ 2ಎ ಮೀಸಲಾತಿ ಕೊಡುವವರೆಗೂ ಹೋರಾಟ ಮುಂದುವರೆಸುತ್ತೇವೆ ಎಂದು ಜಯ ಮೃತ್ಯುಂಜಯ ಸ್ವಾಮೀಜಿಗಳ ಎಚ್ಚರಿಕೆ ನೀಡಿದ್ದರು.

2ಎ ಮೀಸಲಾತಿಗಾಗಿ ಹೋರಾಟ
ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ಹಮ್ಮಿಕೊಂಡಿರುವ ಇಷ್ಟಲಿಂಗ ಪೂಜೆಯ ಹೋರಾಟಕ್ಕೆ ಚಾಲನೆ ನೀಡಲಾಯಿತು. ಕುಂದಗೋಳ ಶಾಸಕ ಎಂ.ಆರ್.ಪಾಟೀಲ ಅವರು ಇಲ್ಲಿನ ಕಿತ್ತೂರು ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಚಾಲನೆ ನೀಡಿದರು. ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಇಲ್ಲಿಂದ ಬಂಕಾಪುರ ಚೌಕ್ ವರೆಗೆ ಬೈಕ್ ರ‍್ಯಾಲಿ, ನಂತರ ಗಬ್ಬೂರು ವೃತ್ತದವರೆಗೂ ಪಾದಯಾತ್ರೆ ಮೂಲಕ ತೆರಳಿ ಅಲ್ಲಿ ಇಷ್ಟಲಿಂಗ ಪೂಜೆ ಮೂಲಕ ಮೀಸಲಾತಿಗೆ ಹಕ್ಕೊತ್ತಾಯ ಮಾಡಲು ಸಜ್ಜಾಗಿದ್ದರು.
ನಂತರ ಮಾತನಾಡಿದ ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಆಯಾ ಜಿಲ್ಲಾ ಮಟ್ಟದಲ್ಲಿ ಇಷ್ಟಲಿಂಗ ಪೂಜೆ ಮೂಲಕ ಹಕ್ಕೊತ್ತಾಯ ಮಾಡಲಾಗುತ್ತಿದೆ. ಎಲ್ಲಾ ಜಿಲ್ಲೆಗಳಲ್ಲೂ ಈ ಹೋರಾಟ ನಡೆಯಲಿದೆ. ಸಮಾಜದ ಬೇಡಿಕೆ ಈಡೇರುವವರೆಗೂ ಈ ಹೋರಾಟ ನಿಲ್ಲುವುದಿಲ್ಲ. ಮೀಸಲಾತಿ ಪಡೆದೆ ತೀರುತ್ತೇವೆ ಎಂದು ಸಮಾಜ ನಿರ್ಧರಿಸಿದೆ ಎಂದರು.
ಹಿಂದಿನ ಸರ್ಕಾರ ಜಾರಿಗೆ ತಂದಿರುವ ಮೀಸಲಾತಿ ಅನುಷ್ಠಾನ ಆಗಿಲ್ಲ. ಈ ಸರ್ಕಾರ ನಮ್ಮ ಬೇಡಿಕೆಯನ್ನು ಈಡೇರಿಸಬೇಕು. ಎಲ್ಲಾ ಜಿಲ್ಲೆಗಳಲ್ಲಿ ಹೋರಾಟ ಮುಗಿಯುವುದರೊಳಗೆ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶಾಸಕ ಎಂ.ಆರ್.ಪಾಟೀಲ್ ಬಾಪುಗೌಡ ಪಾಟೀಲ್, ಗಂಗಾಧರ ದೊಡವಾಡ, ವಿರುಪಾಕ್ಷಪ್ಪ ಕಳ್ಳಿಮನಿ, ಈಶ್ವರ ಶಿರಸಂಗಿ, ಲಿಂಗಣ್ಣ ಕರಿಕಟ್ಟಿ, ಸದಾನಂದ ಡಂಗನವರ, ವೀರೇಶ್ ಉಂಡಿ, ರಾಜಶೇಖರ ಮೆಣಸಿನಕಾಯಿ, ನಂದಕುಮಾರ್ ಪಾಟೀಲ, ಕುಮಾರ್ ಕುಂದನಳ್ಳಿ, ಕುಮಾರ್ ಗೌಡ ಪಾಟೀಲ್, ಗುರುಸಿದ್ದ ಗೌಡ, ದ್ಯಾವನಗೌಡ್ರು, ರವಿರಾಜ ಕೊಡ್ಲಿ, ಮಹಾಂತೇಶ ಪಾಟೀಲ್, ಶಶಿ ಡಂಗನವರ, ಶಂಕರ್ ಮಲ್ಕಣ್ಣವರ, ರವಿ ಬಂಕದ, ಬಸವರಾಜ್ ಬಿರಾದಾರ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.












Click it and Unblock the Notifications