ಬಿಜೆಪಿಗೆ ಸೇರಿ ಜಗದೀಶ್ ಶೆಟ್ಟರ್ ಲಿಂಗಾಯತರಿಗೆ ಮೋಸ ಮಾಡಿದ್ದಾರೆ: ಹೀಗಂದವರು ಯಾರು? ಏಕೆ?
ಹುಬ್ಬಳ್ಳಿ, ಜನವರಿ 28: ಕಾಂಗ್ರೆಸ್ ಸೇರಿ ಕೆಲವೇ ತಿಂಗಳಲ್ಲಿ ಮರಳಿ ಬಿಜೆಪಿಗೆ ಸೇರ್ಪಡೆ ಆಗಿದ್ದಕ್ಕೆ ಜಗದೀಶ್ ಶೆಟ್ಟರ್ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ. ಲಿಂಗಾಯತ ಸಮುದಾಯದ ಹಿರಿಯ ನಾಯಕ ಶೆಟ್ಟರ್ ನಡೆ, ನಿರ್ಧಾರ ವಿರುದ್ಧ ಅವರ ಸಮುದಾಯದವರೇ ಕಿಡಿ ಕಾರಿದ್ದಾರೆ.
ಹೌದು, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮರಳಿ ಭಾರತೀಯ ಜನತಾ ಪಕ್ಷಕ್ಕೆ ಬಂದಿದ್ದು, ಈ ಸಂಬಂಧ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಬೆಂಬಲಿತ ಲಿಂಗಾಯತ ನಾಯಕರು ಸುದ್ದಿಗೋಷ್ಠಿ ನಡೆಸಿ ಅಸಮಾಧಾನ ಹೊರ ಹಾಕಿದರು. ನಮ್ಮ ಸಮುದಾಯಕ್ಕೆ ಜಗದೀಶ್ ಶೆಟ್ಟರ್ ಮೋಸ ಮಾಡಿ ಹೋಗಿದ್ದಾರೆ ಎಂದು ಲಿಂಗಾಯತ ಮುಖಂಡ ಮೋಹನ್ ಲಿಂಬಿಕಾಯಿ ಆರೋಪಿಸಿದರು.

ಇಲ್ಲಿ ಒಬ್ಬ ನಿತೀಶ್ ಕುಮಾರ್ ಹುಟ್ಟಿದ್ದಾರೆ
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಯಾಕೆ ಬಿಜೆಪಿಗೆ ಹೋದರೂ ಎಂಬುದೇ ನಿಗೂಢವಾಗಿದೆ. ಇಂತವರಿಂದ ಯುವಕರಿಗೆ ಏನೂ ಸಂದೇಶ ಹೋಗತ್ತದೆ. ಜಗದೀಶ್ ಶೆಟ್ಟರ್ ಬಿಜೆಪಿ ಮರು ಸೇರ್ಪಡೆಯಿಂದ ನಮ್ಮ ಸಮಾಜಕ್ಕೆ ಅನ್ಯಾಯ ಆಗಿದೆ. ಹುಬ್ಬಳ್ಳಿ ಧಾರವಾಡದಲ್ಲಿ ಒಬ್ಬ ನಿತೀಶ್ ಕುಮಾರ್ ಹುಟ್ಟಿದ್ದಾರೆ ಎಂದು ಪಕ್ಷಾಂತರ ಪ್ರಸ್ತಾಪಿಸಿ ಅವರು ವ್ಯಂಗ್ಯವಾಡಿದರು.
ನಾವ ಬಿಹಾರಕ್ಕೆ ಹೋಗೋದು ಬೇಡಾ, ಜಗದೀಶ್ ಶೆಟ್ಟರ್ ಮತ್ತೊಬ್ಬ ನಿತೀಶ್ ಕುಮಾರ್ ಇಲ್ಲಿಯೇ ಹುಟ್ಟಿದ್ದಾರೆ. ಸ್ವಾರ್ಥಕ್ಕಾಗಿ ಇವತ್ತು ಇಲ್ಲೆ ನಾಳೆ ಮತ್ತೊಂದು ಕಡೆ ಅನ್ನೋದಕ್ಕೆ ದೇಶದಲ್ಲಿ ಜಗದೀಶ್ ಶೆಟ್ಟರ್ ಉದಾಹರಣೆ. ನೀತಿಗೆಟ್ಟ ರಾಜಕಾರಣ ಮಾಡುವವರನ್ನು ಸಮಾಜ ಬೆಂಬಲಿಸುವುದಿಲ್ಲ ಎಂದು ಎಚ್ಚರಿಸಿದರು.
ಬಿಜೆಪಿ ವಿರುದ್ಧ ಬೈದಿದ್ದ ಶೆಟ್ಟರ್
ಸಮಾಜದ ನಂಬಿಕೆಯನ್ನು ಜಗದೀಶ್ ಶೆಟ್ಟರ್ ಕಳೆದುಕೊಂಡಿದ್ದಾರೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ವೇಳೆ ಅವರು ಬಿಜೆಪಿ ವಿರುದ್ಧ ಹಿಗ್ಗಾ ಮುಗ್ಗಾ ಮಾತನಾಡಿದ್ದರು. ಅಲ್ಲದೇ ಒಂದು ವಾರದ ಹಿಂದಷ್ಟೇ ಕೂಡಾ ಬಿಜೆಪಿ ವಿರುದ್ಧ ಮಾತಾಡಿದ್ದರು. ಆದರೆ ಇದೀಗ ಶೆಟ್ಟರ್ ಬಿಜೆಪಿಗೆ ಯಾಕೆ ಹೋದರು ಎಂಬುದೇ ನಿಗೂಢವಾಗಿದೆ ಎಂದು ವಿವರಿಸಿದರು.

ಮುಂಬರುವ ಲೋಕಸಭೆ ಟಿಕೆಟ್ 2024 ಲಿಂಗಾಯತರಿಗೆ ಕೊಡಬೇಕು. ಹುಬ್ಬಳ್ಳಿಯಲ್ಲಿ ಲಿಂಗಾಯತ ಮುಖಂಡರಿಂದ ಜಗದೀಶ್ ಶೆಟ್ಟರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಸೇರುತ್ತಿದ್ದಂತೆ ಕಾಂಗ್ರೆಸ್ ನಾಯಕರಲ್ಲಿ ತಳಮಳ ಉಂಟಾಗಿದೆ. ದಿಢೀರ್ ಬೆಳವಣಿಗೆಗೆ ಹಾಗೂ ಶೆಟ್ಟರ್ ವಿರುದ್ಧ ಕಾಂಗ್ರೆಸ್ ನಾಯಕರು ಹರಿಹಾಯ್ದಿದ್ದಾರೆ. ಶೆಟ್ಟರ್‌ಗೆ ಕಾಂಗ್ರೆಸ್‌ನಿಂದ ಧಾರವಾಡ ಟಿಕೆಟ್ ನೀಡುವುದಾಗಿ ಸ್ವತಃ ಸಿಎಂ ಹೇಳಿದ್ದರು. ಇದೀಗ ಅವರು ಬಿಜೆಪಿಗೆ ಮರಳಿದ್ದಾರೆ. ಎಲ್ಲರ ಚಿತ್ತ ಬಿಜೆಪಿಯು ಧಾರವಾಡದ ಟಿಕೆಟ್ ಅನ್ನು ಯಾರಿಗೆ ನೀಡುತ್ತದೆ ಎಂಬುದರತ್ತ ನೆಟ್ಟಿದೆ.












Click it and Unblock the Notifications