ಹಳಿ ತಪ್ಪಿದ ಕಾಂಗ್ರೆಸ್ ಸರ್ಕಾರ ಅಪಾಯದಲ್ಲಿರುವುದು ಗ್ಯಾರಂಟಿ!
ಬೆಂಗಳೂರು, ಅಕ್ಟೋಬರ್ 04; ಕರ್ನಾಟಕದ ಕಾಂಗ್ರೆಸ್ ಸರ್ಕಾರ ಲಿಂಗಾಯತ ಸಮುದಾಯದ ಐಎಎಸ್, ಕೆಎಎಸ್ ಅಧಿಕಾರಿಗಳಿಗೆ ಅನ್ಯಾಯ ಮಾಡಿದೆಯೇ?. ಅವರಿಗೆ ಪ್ರಮುಖ ಹುದ್ದೆಗಳನ್ನು ನೀಡಿಲ್ಲ ಎಂಬ ಚರ್ಚೆಗಳು ರಾಜ್ಯದಲ್ಲಿ ಆರಂಭವಾಗಿವೆ. ಈ ಚರ್ಚೆ ಹುಟ್ಟು ಹಾಕಿದ್ದು, ಕಾಂಗ್ರೆಸ್‌ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಹೇಳಿಕೆ.
ಕಳೆದ ವಾರ ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರೂ ಆದ ಶಾಮನೂರು ಶಿವಶಂಕರಪ್ಪ, ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಅಧಿಕಾರಿಗಳಿಗೆ ಆಯಕಟ್ಟಿ ಜಾಗ ನೀಡದ್ದರಿಂದ ಅವರ ಪಾಡು ನಾಯಿ ಪಾಡಾಗಿದೆ ಎಂದು ಹೇಳಿದ್ದರು.

ಬುಧವಾರ ಕರ್ನಾಟಕ ಬಿಜೆಪಿ ಶಾಮನೂರು ಶಿವಶಂಕರಪ್ಪ ಹೇಳಿಕೆ ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಟೀಕೆ ಮಾಡಿದೆ. 'ಶಾಮನೂರು ಶಿವಶಂಕರಪ್ಪ ಅವರು ಸರ್ಕಾರವನ್ನೇ ಉರುಳಿಸುವ ಮಾತನಾಡಿದ್ದಾರೆ. ಹಳಿ ತಪ್ಪಿದ ಕಾಂಗ್ರೆಸ್ ಸರ್ಕಾರ ಅಪಾಯದಲ್ಲಿರುವುದು ಗ್ಯಾರಂಟಿ..!' ಎಂದು ಮುಖ್ಯಮಂತ್ರಿಗಳನ್ನು ಎಚ್ಚರಿಸಿದೆ.
ಬಿಜೆಪಿಯ ಟ್ವೀಟ್
'ಕಾಂಗ್ರೆಸ್ಸಿನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರು ಸಿದ್ದರಾಮಯ್ಯ ಅವರ ಸರ್ಕಾರದ ವಿರುದ್ಧ ಸಿಡಿದೇಳಲು ಕಾರಣವಾದ ಅಂಶಗಳು' ಎಂದು ಬಿಜೆಪಿ ಪಟ್ಟಿಯೊಂದನ್ನು ಮಾಡಿದೆ.
* ವೀರಶೈವ-ಲಿಂಗಾಯತ ಶಾಸಕರು, ಮಂತ್ರಿಗಳನ್ನು ಕಾಲ ಕಸದಂತೆ ಕಾಣುತ್ತಿರುವುದು..!
* ವೀರಶೈವ-ಲಿಂಗಾಯತ ಅಧಿಕಾರಿಗಳನ್ನು ಮೂಲೆಗುಂಪು ಮಾಡುತ್ತಿರುವುದು..!
* ಹಿರಿಯ ನಾಯಕರಿಗೆ ಸಿದ್ದರಾಮಯ್ಯ ಅವರು ಕ್ಯಾರೆ ಎನ್ನದೆ ಇರುವುದು..!
* ದಶಕಗಳಿಂದಲೂ ಕಾಂಗ್ರೆಸ್ ವೀರಶೈವ-ಲಿಂಗಾಯತರನ್ನು ಮುಖ್ಯಮಂತ್ರಿ ಮಾಡದಿರುವುದು..!
* ವೀರಶೈವ-ಲಿಂಗಾಯತರಿಗೆ ಸಿದ್ದರಾಮಯ್ಯರವರ ಸರ್ಕಾರ ಅವಮಾನ ಮಾಡುತ್ತಿರುವುದು..!
'ಶಿವಶಂಕರಪ್ಪ ಅವರ ಎಚ್ಚರಿಕೆಯ ನಡುವೆಯೂ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅವರು ಲಿಂಗಾಯತರಿಗೆ ಗೌರವ ನೀಡದೆ ಅವಮಾನಿಸುವುದನ್ನು ಮುಂದುವರಿಸಿದ್ದಾರೆ. ಹೀಗಾಗಿ ಶಾಮನೂರು ಶಿವಶಂಕರಪ್ಪ ಅವರು ಸರ್ಕಾರವನ್ನೇ ಉರುಳಿಸುವ ಮಾತನಾಡಿದ್ದಾರೆ. ಹಳಿ ತಪ್ಪಿದ ಕಾಂಗ್ರೆಸ್ ಸರ್ಕಾರ ಅಪಾಯದಲ್ಲಿರುವುದು ಗ್ಯಾರಂಟಿ..!' ಎಂದು ಬಿಜೆಪಿ ಟ್ವೀಟ್‌ನಲ್ಲಿ ಹೇಳಿದೆ.
ಮಂಗಳವಾರವೂ ಇದೇ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ಟ್ವೀಟ್ ಮಾಡಿತ್ತು. 'ಕಾಂಗ್ರೆಸ್‌ನಲ್ಲಿ ವೀರಶೈವ-ಲಿಂಗಾಯತರನ್ನು ಇನ್ನಿಲ್ಲದಂತೆ ಕಡೆಗಣಿಸುತ್ತಿದ್ದಾರೆ ಎಂಬ ಸತ್ಯವನ್ನು ನುಡಿದಿದ್ದೇ ತಡ, ಶಾಮನೂರು ಶಿವಶಂಕರಪ್ಪರವರಿಗೆ "ಕೈ" ಹೈಕಮಾಂಡ್ ನೋಟಿಸ್ ನೀಡಲು "ಸಿದ್ದ"ವಾಗಿದೆ.
ಜಮೀರ್ ಅಹಮದ್, ತನ್ವೀರ್ ಸೇಠ್‌ರಂತಹವರಿಗೆ ಇಲ್ಲದ ಎಚ್ಚರಿಕೆಯ ನೋಟಿಸು ಶಾಮನೂರು ಶಿವಶಂಕರಪ್ಪರವರಿಗೆ ಮಾತ್ರ ಏಕೆ..??. ಕಾಂಗ್ರೆಸ್ ವೀರಶೈವ-ಲಿಂಗಾಯತ ವಿರೋಧಿ ಎನ್ನುವುದಕ್ಕೆ ಇದಕ್ಕಿಂತ ಮತ್ತೊಂದು ಪುರಾವೆ ಬೇಕೆ..!?' ಎಂದು ಪ್ರಶ್ನೆ ಮಾಡಿತ್ತು.
ಮತ್ತೊಂದು ಟ್ವೀಟ್‌ನಲ್ಲಿ ಬಿಜೆಪಿ, 'ಕರ್ನಾಟಕದಲ್ಲಿ ಕಾಂಗ್ರೆಸ್ ಚುನಾವಣೆಯ ಮುನ್ನ ವೀರಶೈವ-ಲಿಂಗಾಯತ ಸಮುದಾಯವನ್ನು ಬಳಸಿಕೊಂಡು, ಆ ನಂತರ ತೀವ್ರವಾಗಿ ಕಡೆಗಣಿಸಿದೆ. ಕಾಂಗ್ರೆಸ್‌ನ ಈ ಪರಿಪಾಠ ನಿನ್ನೆ ಮೊನ್ನೆಯದಲ್ಲ. ದಶಕಗಳ ಕಾಲದಿಂದಲೂ ಕಾಂಗ್ರೆಸ್ ವೀರಶೈವ-ಲಿಂಗಾಯತ ಸಮುದಾಯಕ್ಕೆ ಮೋಸ ಮಾಡುತ್ತಲೇ ಇದೆ' ಎಂದು ಆರೋಪ ಮಾಡಿದೆ.
* 1989 ರ ಚುನಾವಣೆಯಲ್ಲಿ ವಿರೇಂದ್ರ ಪಾಟೀಲ್‌ರವರಿಂದ ಅಧಿಕಾರ ಪಡೆದು, ನಂತರ ಏಕಾಏಕಿ ಅವರ ಅಧಿಕಾರ ಕಸಿದು ಅವಮಾನಿಸಿದ್ದು!
* ಚುನಾವಣೆಯಲ್ಲಿ ಮತ ವಿಭಜನೆಯಾಗಬೇಕೆಂಬ ಏಕೈಕ ದುರುದ್ದೇಶದಿಂದ ವೀರಶೈವ-ಲಿಂಗಾಯತ ವಿವಾದವನ್ನು ಹುಟ್ಟುಹಾಕಿ, ವೀರಶೈವ-ಲಿಂಗಾಯತ ಸಮುದಾಯ ಒಗ್ಗಟ್ಟಿಗೆ ಹುಳಿ ಹಿಂಡಿದ್ದು.
* ಅಕ್ಷರ-ಆಶ್ರಯ-ದಾಸೋಹ ಪರಿಕಲ್ಪನೆಯ ನಾಡಿನ ಹಲವಾರು ವೀರಶೈವ-ಲಿಂಗಾಯತ ಮಠಗಳಿಗೆ ಬಿ.ಜೆ.ಪಿ. ಸರ್ಕಾರ ನೀಡುತ್ತಿದ್ದ ಅನುದಾನವನ್ನು ವ್ಯಂಗ್ಯವಾಗಿ ಟೀಕಿಸಿ ನಿಲ್ಲಿಸಿದ್ದು.
* ವೀರಶೈವ-ಲಿಂಗಾಯತ ಸಮುದಾಯದವರೆಲ್ಲರೂ ಭ್ರಷ್ಟರು ಎಂದು ಸಿದ್ದರಾಮಯ್ಯರವರು ಅವಮಾನಿಸಿ ಕೆಟ್ಟ ಪಟ್ಟ ಕಟ್ಟುವ ಪ್ರಯತ್ನ ಮಾಡಿದ್ದು.
* ದಶಕಗಳ ಕಾಲ ಕೆ.ಪಿ.ಸಿ.ಸಿ. ಹಾಗೂ ಎ.ಐ.ಸಿ.ಸಿ. ಗೆ ವೀರಶೈವ-ಲಿಂಗಾಯತ ಸಮುದಾಯದವರನ್ನು ಅಧ್ಯಕ್ಷ ಸ್ಥಾನ ಹಾಗೂ ಇನ್ನಿತರ ಪ್ರಮುಖ ಹುದ್ದೆಗಳಿಗೆ ಪರಿಗಣಿಸದಿರುವುದು.
'ಈಗಿನ ಸರ್ಕಾರದಲ್ಲಿ ಸಹ ವೀರಶೈವ-ಲಿಂಗಾಯತ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಕಾಂಗ್ರೆಸ್ ಶಾಸಕ-ನಾಯಕರುಗಳೇ ಹೇಳಿದ್ದಾರೆ. ಈ ಅನ್ಯಾಯ ಒಕ್ಕಲಿಗರು, ದಲಿತರು ಹಾಗೂ ಹಿಂದುಳಿದವರಿಗೂ ಸಹ ದೊಡ್ಡ ಪ್ರಮಾಣದಲ್ಲಿ ಆಗಿದೆ, ಆ ಸತ್ಯಗಳೂ ಅವರಿಂದಲೇ ಹೊರಬರುತ್ತಿವೆ..!!' ಎಂದು ಬಿಜೆಪಿ ತಿಳಿಸಿದೆ.












Click it and Unblock the Notifications