• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಂದು ಸೋನಿಯಾಗೆ, ಇಂದು ರಾಹುಲ್‌ಗೆ ಎಚ್ಡಿಕೆ ಭರ್ಜರಿ ಶಾಕ್!

By ಆರ್ ಟಿ ವಿಠ್ಠಲಮೂರ್ತಿ
|
   ರಾಹುಲ್ ಗಾಂಧಿ ಬೆಚ್ಚಿ ಬೀಳಲು ಕಾರಣವಾಗಿದ್ದು ಎಚ್ ಡಿ ಕೆ ಹೇಳಿದ ಆ ಒಂದು ಮಾತು | Oneindia Kannada

   ಹನ್ನೆರಡು ವರ್ಷಗಳ ಹಿಂದೆ ಸೋನಿಯಾ ಗಾಂಧಿ ಬೆಚ್ಚಿ ಬೀಳುವಂತೆ ಮಾಡಿದ್ದ ಎಚ್ ಡಿ ಕುಮಾರಸ್ವಾಮಿ ಈಗ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬೆಚ್ಚಿ ಬೀಳುವಂತೆ ಮಾಡಿದ್ದಾರೆ.

   ಅವತ್ತು ಅಸ್ತಿತ್ವದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ಸರ್ಕಾರವನ್ನು ಉರುಳಿಸಿದ್ದ ಕುಮಾರಸ್ವಾಮಿ ಅವರು ಸೋನಿಯಾ ಗಾಂಧಿ ಅವರಿಗೆ ಭರ್ಜರಿ ಶಾಕ್ ನೀಡಿದ್ದರು. ಆದರೆ ಈಗ ಕಾಂಗ್ರೆಸ್ ಜತೆಗಿದ್ದೇ ರಾಹುಲ್ ಗಾಂಧಿ ಅವರಿಗೆ ಶಾಕ್ ನೀಡಿದ್ದಾರೆ.

   ರಾಹುಲ್ ಬಳಿ ಸಿದ್ದು ಬಗ್ಗೆ ದೂರು ನೀಡಿದರಾ ಕುಮಾರಸ್ವಾಮಿ?

   ಕಳೆದ ವಾರ ದೆಹಲಿಯಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ಕುಮಾರಸ್ವಾಮಿ ನೇರವಾಗಿಯೇ, ನನ್ನನ್ನು ಸಿಎಂ ಮಾಡಿ ಅಂತ ನಾನೇನಾದರೂ ಕಾಂಗ್ರೆಸ್ ಪಕ್ಷದ ಬೆನ್ನು ಬಿದ್ದಿದ್ದೆನಾ? ಅವತ್ತು ನಿಮ್ಮ ಪಕ್ಷದವರೇ ಬಂದು, ಮೈತ್ರಿಕೂಟ ಸರ್ಕಾರಕ್ಕೆ ನೀವೇ ಸಿಎಂ ಆಗಬೇಕು ಎಂದು ಹೇಳಿ ಈಗ ಸಲ್ಲದ ಕಿರುಕುಳ ನೀಡುತ್ತಿದ್ದಾರೆ. ಎಷ್ಟು ಕಾಲ ಇದನ್ನು ಸಹಿಸಿಕೊಂಡು ನಾನು ಮೌನವಾಗಿರಬೇಕು? ಅಂತ ಪ್ರಶ್ನಿಸಿದ್ದಾರೆ.

   ಇಂತಹ ಪ್ರಶ್ನೆಯನ್ನು ಕುಮಾರಸ್ವಾಮಿ ಈ ಹಿಂದೆ ಕೇಳಿದ್ದರಾದರೂ ಈ ಬಾರಿ ಮತ್ತಷ್ಟು ಟಫ್ ಆಗಿ ಕೇಳಿದ್ದಾರೆ. ಅಷ್ಟೇ ಅಲ್ಲ, ನಿಮಗೆ ನಾನು ಸಿಎಂ ಆಗಿರುವುದು ಬೇಡ ಎಂಬುದಾದರೆ ಹೇಳಿ, ತಕ್ಷಣವೇ ಆ ಹುದ್ದೆಗೆ ರಾಜೀನಾಮೆ ಕೊಡುತ್ತೇನೆ. ನಿಮ್ಮ ಪಕ್ಷದವರನ್ನೇ ಸಿಎಂ ಮಾಡಿ, ಜೆಡಿಎಸ್ ಪಕ್ಷ ನಿಮಗೆ ಬಾಹ್ಯ ಬೆಂಬಲ ಕೊಡುತ್ತದೆ ಎಂದಿದ್ದಾರೆ.

   ಸಮನ್ವಯ ಸಮಿತಿ ಸಭೆಯಲ್ಲಿ ಸಿದ್ದರಾಮಯ್ಯ-ಎಚ್‌ಡಿಕೆ ಜಟಾಪಟಿ

   ಯಾವಾಗ ಕುಮಾರಸ್ವಾಮಿ ಸಿಎಂ ಹುದ್ದೆಗೆ ರಾಜೀನಾಮೆ ಕೊಡುವ ಮಾತನಾಡಿದರೋ? ಆಗ ರಾಹುಲ್ ಗಾಂಧಿ ಸಹಜವಾಗಿ ಬೆಚ್ಚಿ ಬಿದ್ದಿದ್ದಾರೆ. ಯಾಕೆಂದರೆ ಕುಮಾರಸ್ವಾಮಿ ಅವರೇನಾದರೂ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದರೆ ಕೈ ಪಾಳೆಯದ ಸೆಕ್ಯೂಲರ್ ಟ್ರ್ಯಾಕ್ ರೆಕಾರ್ಡ್ ಗೆ ಧಕ್ಕೆಯಾಗುತ್ತದೆ. ಅಷ್ಟೇ ಮುಖ್ಯವಾಗಿ ಮುಂದಿನ ಸಂಸತ್ ಚುನಾವಣೆಯಲ್ಲಿ ತೃತೀಯ ಶಕ್ತಿಯ ಅಂಗಪಕ್ಷಗಳು ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಅನುಮಾನದಿಂದ ನೋಡುತ್ತವೆ.

   ರಾಹುಲ್ ಗಾಂಧಿ ಎಚ್ಚರಿಕೆಯ ನಡೆ

   ಅಂದ ಹಾಗೆ ಮುಂದಿನ ಸಂಸತ್ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಇನ್ನೂರಾ ಇಪ್ಪತ್ತೇಳು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಇತ್ತೀಚಿನ ಸಮೀಕ್ಷೆಗಳು ಹೇಳಿವೆಯಾದರೂ ಅದು ಕನಿಷ್ಠ ನೂರಾ ಐವತ್ತು ಸ್ಥಾನಗಳನ್ನು ಗಳಿಸಿದರೂ ಎನ್.ಡಿ.ಎ ಅಂಗಪಕ್ಷಗಳೊಂದಿಗೆ ಸರ್ಕಾರ ರಚಿಸಬಹುದು ಎಂಬ ಆತಂಕ ಕಾಂಗ್ರೆಸ್ ಪಕ್ಷಕ್ಕಿದ್ದೇ ಇದೆ.

   ದೇಶದಲ್ಲಿ ತೃತೀಯ ಶಕ್ತಿಗಳು ಹುಟ್ಟಿದ್ದೇ ಕಾಂಗ್ರೆಸ್ ವಿರುದ್ಧ, ಅವು ಬಿಜೆಪಿಯನ್ನು ಕೋಮುವಾದಿ ಎಂದು ಜರಿದರೂ ಆಳದಲ್ಲಿ ಅದರ ಹುಟ್ಟಿಗೆ ಕಾರಣವಾಗಿದ್ದು ಕಾಂಗ್ರೆಸ್ ಪಕ್ಷವೇ. ಹೀಗಾಗಿ ಈ ಶಕ್ತಿಯ ಭಾಗವಾಗಿರುವ ಪಕ್ಷಗಳು ಕಾಂಗ್ರೆಸ್ ಪಕ್ಷವನ್ನು ಒಂದು ಅನುಮಾನದಿಂದ ನೋಡುತ್ತಾ ಬಂದಿವೆ. ಇದನ್ನು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಕೂಡ ಚೆನ್ನಾಗಿ ಅರಿತಿದ್ದಾರೆ.

   ಬಿಜೆಪಿ ವಿರೋಧಿ ಪಕ್ಷಗಳನ್ನು ಒಗ್ಗೂಡಿಸಬೇಕು, ವಿಶ್ವಾಸ ಗಳಿಸಬೇಕು ಎಂಬ ಉದ್ದೇಶದಿಂದಲೇ ರಾಹುಲ್ ಗಾಂಧಿ ಅವರು ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಲು ಅನುವು ಮಾಡಿಕೊಟ್ಟಿದ್ದು. ಲೋಕಸಭೆ ಚುನಾವಣೆ ಮುಗಿಯುವವರೆಗೆ ಜೆಡಿಎಸ್-ಕಾಂಗ್ರೆಸ್ ಸರಕಾರ ಗಟ್ಟಿಯಾಗಿ ಉಳಿಯಬೇಕಾಗಿದೆ ಎಂಬುದನ್ನು ರಾಹುಲ್ ಚೆನ್ನಾಗಿ ಅರಿತಿದ್ದಾರೆ.

   ರಾಹುಲ್ ವೀಕ್ನೆಸ್, ಕುಮಾರಸ್ವಾಮಿ ಬಲ

   ಈ ಹಿಂದೆ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಮೈತ್ರಿಕೂಟ ಸರ್ಕಾರದ ಕಾಲದಲ್ಲಿ ಅಂಗಪಕ್ಷಗಳ ಶಕ್ತಿಯನ್ನು ನುಂಗಿ ನೊಣೆಯಲು ಕಾಂಗ್ರೆಸ್ ಯತ್ನಿಸಿದ್ದು ನಿಜವೂ ಹೌದು. ಬಿಜೆಪಿಯೇತರ ಮತಗಳನ್ನು ಒಂದುಗೂಡಿಸಿದರೆ ಮಾತ್ರ ತನ್ನ ಶಕ್ತಿ ಹೆಚ್ಚುತ್ತದೆ ಎಂಬುದು ಕಾಂಗ್ರೆಸ್ ಪಕ್ಷದ ಹಳೆಯ ಲೆಕ್ಕಾಚಾರ.

   ಆ ಲೆಕ್ಕಾಚಾರಕ್ಕೆ ಪೂರಕವಾಗಿ ಅದು ಯುಪಿಎ ಸರ್ಕಾರವಿದ್ದ ಕಾಲದಲ್ಲಿ ತನ್ನೊಂದಿಗಿದ್ದ ಮೈತ್ರಿ ಪಕ್ಷಗಳನ್ನೇ ಉಡುಗಿಸಲು ಯತ್ನಿಸಿತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಯಾಕೆಂದರೆ ಮುಂದಿನ ಪಾರ್ಲಿಮೆಂಟ್ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷ ಸ್ವಯಂಬಲದ ಮೇಲೆ ನೂರು ಸೀಟುಗಳನ್ನು ಗೆಲ್ಲುವ ಭರವಸೆ ಮೂಡುತ್ತಿಲ್ಲ.

   ಹೀಗಾಗಿ ತೃತೀಯ ಶಕ್ತಿಯ ಬೆಂಬಲವಿಲ್ಲದೆ ಅದು ಏನೂ ಮಾಡಲು ಸಾಧ್ಯವಿಲ್ಲ. ಮತ್ತು ಇದೇ ಕಾರಣಕ್ಕಾಗಿ ರಾಹುಲ್ ಗಾಂಧಿ, ಏನೇ ಕಿರಿಕಿರಿಯಾದರೂ ರಾಜ್ಯ ಮಟ್ಟದಲ್ಲಿ ಬಿಜೆಪಿಯೇತರ ಶಕ್ತಿಗಳ ಜತೆ ಸಂಘರ್ಷ ಮಾಡಿಕೊಳ್ಳಬೇಡಿ ಎಂದು ಸ್ಥಳೀಯ ನಾಯಕರಿಗೆ ಹೇಳುತ್ತಲೇ ಬಂದಿದ್ದಾರೆ. ಆದರೆ ಅವರು ಏನೇ ಹೇಳಿದರೂ ತೃತೀಯ ಶಕ್ತಿಯ ಭಾಗವಾಗಿರುವ ಪಕ್ಷಗಳ ನಾಯಕರಿಗೆ ಇನ್ನೂ ನಂಬಿಕೆ ಬಂದಿಲ್ಲ.

   ಅವರ ಈ ಮನ:ಸ್ಥಿತಿಯೇ ಕುಮಾರಸ್ವಾಮಿ ಅವರಿಗೆ ಪ್ಲಸ್ ಪಾಯಿಂಟ್. ಈ ವಿಷಯವನ್ನು ಅವರ ತಂದೆ ದೇವೇಗೌಡರು ಮೊದಲೇ ಊಹಿಸಿದ್ದರಾದ್ದರಿಂದ ಕಾಂಗ್ರೆಸ್ ಜತೆ ಸೇರಿ ಮೈತ್ರಿಕೂಟ ಸರ್ಕಾರ ರಚಿಸುವುದು ಸೂಕ್ತ ಎಂಬ ತೀರ್ಮಾನಕ್ಕೆ ಬಂದಿದ್ದರು.

   ತಮ್ಮಿಚ್ಛೆಯಂತೆ ಸರಕಾರ ನಡೆಸುತ್ತಿರುವ ಎಚ್ಡಿಕೆ

   ಕುಮಾರಸ್ವಾಮಿ ಅವರ ಲೆಕ್ಕಾಚಾರ ಸರಿಯಾಗಿದೆ ಮತ್ತು ಭರ್ಜರಿಯಾಗಿ ಕೆಲಸ ಮಾಡುತ್ತಿದೆ. ಮತ್ತು ಈ ಲೆಕ್ಕಾಚಾರ ಸರಿ ಇರುವುದರಿಂದಲೇ ಕುಮಾರಸ್ವಾಮಿ ತಮ್ಮಿಚ್ಛೆಯಂತೆ ಸರ್ಕಾರವನ್ನು ನಡೆಸಲು ಬಯಸುತ್ತಿದ್ದಾರೆ. ಕಳೆದ ನೂರು ದಿನಗಳ ಅವಧಿಯಲ್ಲಿ ಅವರ ಸರ್ಕಾರ ನಡೆದ ದಾರಿಯನ್ನೇ ನೋಡಿ. ಕಾಂಗ್ರೆಸ್ ನಾಯಕರು ಹಸ್ತಕ್ಷೇಪ ಮಾಡಲು ಅವರು ಬಿಟ್ಟೇ ಇಲ್ಲ.

   ರೈತರ ಸಾಲ ಮನ್ನಾ ಮಾಡಿದ್ದರಿಂದ ಹಿಡಿದು ಅವರು ಮಾಡಿದ ಬಹುತೇಕ ಕೆಲಸಗಳು ಜೆಡಿಎಸ್ ಪಕ್ಷದ ವೋಟ್ ಬ್ಯಾಂಕ್ ಅನ್ನು ಭದ್ರಮಾಡುವಂತವೇ ಹೊರತು ಬೇರೇನಲ್ಲ. ಕಾಂಗ್ರೆಸ್ಸಿಗೆ ಈ ಘೋಷಣೆಗಳು ಸಹಾಯವನ್ನೂ ನೀಡುವುದಿಲ್ಲ. ಹೀಗೆ ರೈತರ ಸಾಲ ಮನ್ನಾ ಮಾಡುವ ಜತೆಗೆ, ರೈತರ ಸಾಲ ಮನ್ನಾ ಮಾಡಲು ಕಾಂಗ್ರೆಸ್ ಪಕ್ಷದ ವಿರೋಧವಿತ್ತು ಎಂಬುದನ್ನೂ ಅವರು ಯಶಸ್ವಿಯಾಗಿ ಬಿಂಬಿಸುತ್ತಾ ಬಂದಿದ್ದಾರೆ.

   ಈ ಮಧ್ಯೆ ಅವರು ನೆಪ ಮಾತ್ರಕ್ಕೂ ಸಿದ್ದರಾಮಯ್ಯ ಅಧ್ಯಕ್ಷತೆಯ ಸಮನ್ವಯ ಸಮಿತಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ಅದೀಗ ಸಮನ್ವಯ ಸಮಿತಿ ಎಂಬುದಕ್ಕಿಂತ ಮುಖ್ಯವಾಗಿ ಟೀ ಪಾರ್ಟಿ ಕಮಿಟಿಯಂತಾಗಿ ಹೋಗಿದೆ. ಇದೇ ಕಾರಣಕ್ಕಾಗಿ ಸಿದ್ದರಾಮಯ್ಯ ಅವರಿಗೆ ಅಸಮಾಧಾನವಾಗಿರುವುದೂ ನಿಜ.

   ಸಮನ್ವಯ ಸಮಿತಿ ಸಭೆ: ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕ್ಕೆ ಅಸ್ತು

   ಕುಮಾರಸ್ವಾಮಿ, ರೇವಣ್ಣ ಕೈಯಲ್ಲಿ ಸರಕಾರದ ಗ್ರಿಪ್ಪು

   ಅಂದ ಹಾಗೆ ಹಿಂದಿನ ಸಿದ್ದರಾಮಯ್ಯ ಸರ್ಕಾರದ ಹಲವು ಜನಪ್ರಿಯ ಯೋಜನೆಗಳನ್ನು ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಬೇಕಂತಲೇ ಕೈ ಬಿಟ್ಟಿದೆ. ಹಳೆಯ ಸರ್ಕಾರದ ಯೋಜನೆಗಳನ್ನು ಮುಂದುವರಿಸುವುದಾಗಿ ಅದು ಹೇಳಿದರೂ ವಾಸ್ತವದಲ್ಲಿ ಅನ್ನಭಾಗ್ಯದಂತಹ ಯೋಜನೆಗಳು ಈಗಾಗಲೇ ಕುಂಟತೊಡಗಿವೆ. ಸಮನ್ವಯ ಸಮಿತಿಯ ಸಭೆಯಲ್ಲಿ ಈ ಕುರಿತು ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ.

   ಅಷ್ಟೇ ಅಲ್ಲ, ಏನೇ ಅಳೆದು ಸುರಿದು ನೋಡಿದರೂ ಕುಮಾರಸ್ವಾಮಿ ಸರ್ಕಾರದಲ್ಲಿ ಪ್ರಬಲರಂತೆ ಕಾಣುತ್ತಿರುವುದು ನಾಲ್ಕೇ ಮಂದಿ. ಅವರೆಂದರೆ ಕುಮಾರಸ್ವಾಮಿ, ಪರಮೇಶ್ವರ್, ರೇವಣ್ಣ ಹಾಗೂ ಡಿ.ಕೆ.ಶಿವಕುಮಾರ್. ಈ ಪೈಕಿ ಸರ್ಕಾರದ ಬಹುತೇಕ ಆದಾಯವನ್ನು ಖರ್ಚು ಮಾಡುವ ಗ್ರಿಪ್ಪು ಕುಮಾರಸ್ವಾಮಿ ಮತ್ತು ಅವರ ಸಹೋದರ ರೇವಣ್ಣ ಅವರ ಕೈಲಿದೆ.

   ಹೀಗಾಗಿ ಸಹಜವಾಗಿಯೇ ಸರ್ಕಾರದ ಇಮೇಜ್ ಬಿಲ್ಡ್ ಆಗಿಲ್ಲ. ಸರ್ಕಾರ ಅನ್ನುವುದು ನಿರಂತರ ಪ್ರಕ್ರಿಯೆಯಾದ್ದರಿಂದ ಅದು ಯಾವತ್ತೂ ಚಲನಶೀಲವೇ. ಯಾಕೆಂದರೆ ಶಾಸಕಾಂಗ ಇರಲಿ, ಬಿಡಲಿ, ಕಾರ್ಯಾಂಗ ತನ್ನ ಕೆಲಸವನ್ನು ಮಾಡುವುದರಿಂದ ಒಂದು ಮಟ್ಟದಲ್ಲಿ ಸರ್ಕಾರ ಕೆಲಸ ಮಾಡುತ್ತಲೇ ಇರುತ್ತದೆ.

   ಸಿದ್ದು ಬಲ ಕುಗ್ಗಿಸಲು ನಾನಾ ತಂತ್ರ

   ಆದರೆ ಈಗ ನಡೆಯುತ್ತಿರುವುದು ಲಿಟರಲಿ, ಜೆಡಿಎಸ್ ವರ್ಸಸ್ ಸಿದ್ದರಾಮಯ್ಯ ನಡುವಣ ರಾಜಕೀಯ ಸಂಘರ್ಷ. ಈ ಸಂಘರ್ಷಕ್ಕೆ ಇನ್ನೂ ಹಲವು ಕಾರಣಗಳಿವೆಯಾದರೂ, ಸದ್ಯ ಬಲ ವರ್ಧಿಸಿಕೊಳ್ಳುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಲವನ್ನು ಕುಗ್ಗಿಸದೆ ಜೆಡಿಎಸ್ ಶಕ್ತಿ ಹೆಚ್ಚುವುದಿಲ್ಲ ಎಂಬುದು ದೇವೇಗೌಡ-ಕುಮಾರಸ್ವಾಮಿ ಅವರ ಲೆಕ್ಕಾಚಾರ. ಈ ಲೆಕ್ಕಾಚಾರ ಅದಾಗಲೇ ಅತ್ಯಂತ ವ್ಯವಸ್ಥಿತವಾಗಿಯೇ ಜಾರಿಯಾಗುತ್ತಿದೆ.

   ಈ ಬೆಳವಣಿಗೆ ಸಿದ್ದರಾಮಯ್ಯ ಅವರನ್ನು ಕೆರಳಿಸುವುದು ಸಹಜ. ಪರಿಸ್ಥಿತಿ ಹೀಗಿರುವಾಗ ಅವರು, ನಾನು ಮರಳಿ ಸಿಎಂ ಆಗುತ್ತೇನೆ ಎಂದರೆ ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಗೆ ಹೇಗಾಗಬೇಡ? ಅವರಲ್ಲಿನ ಅಸಮಾಧಾನ ಕೆಲಸ ಮಾಡದಿರಲು ಸಾಧ್ಯವೇ? ಹಾಗಂತಲೇ ಕಾಂಗ್ರೆಸ್ ಪಕ್ಷದಲ್ಲೇ ಇರುವ ತಮ್ಮ ಕೆಲವು ಆಪ್ತರ ಜತೆ ಮಾತನಾಡಿದ ಕುಮಾರಸ್ವಾಮಿ ತದ ನಂತರ ದೆಹಲಿಯಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಬಯಸಿದ್ದಾರೆ.

   ಎಷ್ಟೇ ಆದರೂ ಅವರು ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ. ಹಾಗಂತಲೇ ರಾಹುಲ್ ಗಾಂಧಿ ಕೂಡಾ ತಕ್ಷಣವೇ ಅವರನ್ನು ಭೇಟಿ ಮಾಡಲು ಯೆಸ್ ಎಂದಿದ್ದಾರೆ. ನೂರು ದಿನ ಪೂರೈಸಿರುವ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರಿಗೆ ಧನ್ಯವಾದ ಹೇಳುವ ನೆಪದಲ್ಲಿ ಕುಮಾರಸ್ವಾಮಿ ಅವರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ ಮತ್ತು ಸಣ್ಣ ಬೆದರಿಕೆಯನ್ನೂ ಒಡ್ಡಿದ್ದಾರೆ.

   ಯಾವ ಕಾರಣಕ್ಕೂ ಸರಕಾರ ಬೀಳಬಾರದು

   ಆದರೆ ದೆಹಲಿಗೆ ಹೋದ ಕುಮಾರಸ್ವಾಮಿ ನೇರವಾಗಿಯೇ ರಾಹುಲ್ ಗಾಂಧಿ ಅವರು ಬೆಚ್ಚಿ ಬೀಳುವಂತೆ ಮಾತನಾಡಿದ್ದಾರೆ. ಬೇಡ ಎಂದರೆ ಹೇಳಿ ಬಿಡಿ, ಮುಖ್ಯಮಂತ್ರಿ ಹುದ್ದೆಗೆ ತಕ್ಷಣ ರಾಜೀನಾಮೆ ಕೊಡುತ್ತೇನೆ. ನಿಮ್ಮ ಪಕ್ಷದವರನ್ನೇ ಬೇಕಾದರೆ ಮುಖ್ಯಮಂತ್ರಿಯನ್ನಾಗಿ ಮಾಡಿ. ನಾವು ಬಾಹ್ಯ ಬೆಂಬಲ ನೀಡುತ್ತೇವೆ ಎಂದು ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

   ಕುಮಾರಸ್ವಾಮಿಯವರ ಮಾತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಬೆಚ್ಚಿ ಬೀಳುವಂತೆ ಮಾಡಿದ್ದಷ್ಟೇ ಅಲ್ಲ, ತಕ್ಷಣವೇ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಅವರ ಜತೆ ಮಾತನಾಡುವಂತೆ ಮಾಡಿದೆ. ಸಿದ್ರಾಮಯ್ಯಾಜೀ, ಯಾವ ಕಾರಣಕ್ಕೂ ಈ ಸರ್ಕಾರ ಬೀಳಬಾರದು. ನೀವು ಸಹಕರಿಸದಿದ್ದರೆ ಅದು ಕಷ್ಟ ಎಂದು ರಾಹುಲ್ ಗಾಂಧಿ ಕಿವಿಮಾತು ಹೇಳಿದ್ದಾರೆ.

   ಸಹಜವಾಗಿಯೇ ರಾಹುಲ್ ಗಾಂಧಿ ಎಂದರೆ ಸಿದ್ದರಾಮಯ್ಯ ಅವರಿಗೆ ವಿಶೇಷ ಗೌರವ. ಯಾಕೆಂದರೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಬ್ಬರೂ ಇತ್ತೀಚಿನ ವರ್ಷಗಳಲ್ಲಿ ಸಿದ್ದರಾಮಯ್ಯ ಅವರಿಗೆ ತುಂಬಾ ಫೆವರ್ ಮಾಡಿದ್ದಾರೆ. ಇನ್ನು ಅವರಿಬ್ಬರ ವಿರುದ್ಧ ಸಿದ್ದರಾಮಯ್ಯ ತಿರುಗಿ ನಿಲ್ಲುವುದು ಸಾಧ್ಯವೆ?

   ಮುಖವಾಡ ಧರಿಸಿರುವ ಸಿದ್ದರಾಮಯ್ಯ

   ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿಲ್ಲದೇ ಹೋದ ಸಂದರ್ಭದಲ್ಲಿ ಸಿದ್ದರಾಮಯ್ಯ ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಲು ಅನುಕೂಲವಾಗುವಂತೆ ಅವರು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕರೆಸಿಕೊಂಡರು. ಅವತ್ತು ಹೋದ ಖರ್ಗೆ ಇವತ್ತೂ ಅಲ್ಲಿಯೇ ಇದ್ದಾರೆ.

   ಇದಾದ ನಂತರ ಕರ್ನಾಟಕದಲ್ಲಿ ಪಕ್ಷ ಅಧಿಕಾರ ಹಿಡಿದಾಗ ಸಿದ್ದರಾಮಯ್ಯ ಅವರ ವಿರುದ್ಧ ಏನೇ ಕೂಗು ಕೇಳಿ ಬಂದರೂ ಅವರು ಐದು ವರ್ಷಗಳ ಕಾಲ ನಿರಾತಂಕವಾಗಿ ಮುಂದುವರಿಯುವಂತೆ ನೋಡಿಕೊಂಡಿದ್ದಾರೆ. ಹೀಗಾಗಿ ಅವರಿಚ್ಛೆಗೆ ವಿರುದ್ಧವಾಗಿ ಹೋಗಲು ಸಿದ್ದರಾಮಯ್ಯ ತಯಾರಿಲ್ಲ.

   ಹಾಗಂತಲೇ ಆಗಸ್ಟ್ ಮೂವತ್ತೊಂದರ ಸಮನ್ವಯ ಸಮಿತಿಯಲ್ಲಿ ತಮ್ಮ ಅಸಮಾಧಾನವನ್ನು ನೇರವಾಗಿ ಹೇಳಲು ನಿರ್ಧರಿಸಿದ್ದ ಸಿದ್ದರಾಮಯ್ಯ ಇದ್ದಕ್ಕಿದ್ದಂತೆ ಉಲ್ಟಾ ಹೊಡೆದಿದ್ದಾರೆ. ನೂರು ದಿನಗಳಲ್ಲಿ ಸರ್ಕಾರ ಮಾಡಿರುವ ಸಾಧನೆಯ ಬಗ್ಗೆ ಬಹಿರಂಗವಾಗಿ ಪ್ರಶಂಸೆ ಮಾಡಿದ್ದಾರೆ.

   ವಾಸ್ತವವಾಗಿ ಇದು ಸಿದ್ದರಾಮಯ್ಯ ಅವರ ಒರಿಜಿನಲ್ ಮುಖವಲ್ಲ. ಯಾಕೆಂದರೆ ಅವರು ತಮ್ಮ ಒರಿಜಿನಲ್ ಮುಖ ತೋರಿಸಲು ಸದ್ಯದ ಸನ್ನಿವೇಶ ಪೂರಕವಾಗಿಲ್ಲ. ಆದರೆ ಕುಮಾರಸ್ವಾಮಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಎದುರು ತಮ್ಮ ಒರಿಜಿನಲ್ ಮುಖ ತೋರಿಸಿದ್ದಾರೆ. ಯಾಕೆಂದರೆ ಸದ್ಯದ ಸನ್ನಿವೇಶ ಅವರ ಪರವಾಗಿದೆ. ಪರಿಣಾಮ? ಮುಖ ಹಾಗೂ ಮುಖವಾಡಗಳ ನಡುವಣ ಜಂಜಾಟದಲ್ಲಿ ಕುಮಾರಸ್ವಾಮಿ ಸರ್ಕಾರ ನಡೆಯುತ್ತಿರುವ ರೀತಿಯೇ ಪವಾಡದಂತೆ ಕಾಣತೊಡಗಿದೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Karnataka Chief Minister H D Kumaraswamy has given super shock to Congress president Rahul Gandhi by complaining against Siddaramaiah. Rahul Gandhi's weakness has become Kumaraswamy's strength. Political analysis by R T Vittal Murthy.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more