• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪರಮೇಶ್ವರಗೆ 3 ಬಾರಿ ಕೈಕೊಟ್ಟ ಸಿಎಂ ಪಟ್ಟ, ನಿಗೂಢ ಕಾರಣ ಬಹಿರಂಗ

By ಆರ್ ಟಿ ವಿಠ್ಠಲಮೂರ್ತಿ
|
   ಪರಮೇಶ್ವರಗೆ 3 ಬಾರಿ ಕೈಕೊಟ್ಟ ಸಿಎಂ ಪಟ್ಟ, ನಿಗೂಢ ಕಾರಣ ಬಹಿರಂಗ | Oneindia Kannada

   ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶ ತಮಗೆ ಮೂರು ಬಾರಿ ತಪ್ಪಿ ಹೋಯಿತು ಎಂದು ಸಮುದಾಯದ ಸಮಾರಂಭವೊಂದರಲ್ಲಿ ಡಿಸಿಎಂ ಪರಮೇಶ್ವರ್ ಆಡಿದ ಮಾತುಗಳು ಹಲವರಿಗೆ ವೈಯಕ್ತಿಕ ಹಳಹಳಿಕೆಯಂತೆ ಕಾಣುತ್ತಿದೆಯಾದರೂ, ಆಳದಲ್ಲಿ ಕೈ ಪಾಳೆಯದ ಮೇಲಿನ ಹಿಡಿತಕ್ಕಾಗಿ ಸಿದ್ದರಾಮಯ್ಯ ವಿರುದ್ಧ ಪುಟಿದೇಳಲು ಅವರು ಸಜ್ಜಾಗಿದ್ದಾರೆ ಎಂಬುದರ ಸಂಕೇತ.

   ಅಂದ ಹಾಗೆ ತಮಗೆ ಮೂರು ಬಾರಿ ತಮಗೆ ಸಿಎಂ ಹುದ್ದೆ ತಪ್ಪಿ ಹೋಯಿತು ಎಂದು ಕೊರಟಗೆರೆ ಶಾಸಕ ಡಾ. ಜಿ ಪರಮೇಶ್ವರ ಅವರು ದಾವಣಗೆರೆಯಲ್ಲಿ ಬಹಿರಂಗವಾಗಿ ಹೇಳಿದ್ದರಲ್ಲಿ ಯಾವ ಸಂದೇಹವೂ ಇಲ್ಲ. ವಾಸ್ತವವಾಗಿ ಅವರು 2004ರಲ್ಲೇ ಕರ್ನಾಟಕದ ಮುಖ್ಯಮಂತ್ರಿಯಾಗಬೇಕಿತ್ತು.

   ದಲಿತನಾಗಿರುವುದಕ್ಕೆ 3 ಬಾರಿ ಸಿಎಂ ಪಟ್ಟ ಕೈತಪ್ಪಿತು: ಪರಮೇಶ್ವರ್

   ಅವತ್ತು ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿತ್ತು. ಎಪ್ಪತ್ತೊಂಭತ್ತು ಸೀಟುಗಳನ್ನು ಪಡೆಯುವ ಮೂಲಕ ಬಿಜೆಪಿ ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದರೂ, ಮತ್ತು ಜೆಡಿಎಸ್ ಜತೆ ಸೇರಿ ಸರ್ಕಾರ ರಚಿಸಲು ಪ್ರಯತ್ನಿಸಿದರೂ ಮಾಜಿ ಪ್ರಧಾನಿ ದೇವೇಗೌಡರು ಅದನ್ನು ಒಪ್ಪಲಿಲ್ಲ.

   ಅವರೇಕೆ ಒಪ್ಪಲಿಲ್ಲ ಎಂಬುದಕ್ಕೆ ಒಂದು ಕಾರಣ ಬಹಿರಂಗ. ಮತ್ತೊಂದು ಕಾರಣ ಇದುವರೆಗೂ ನಿಗೂಢ. ಬಹಿರಂಗ ಕಾರಣವೆಂದರೆ, ತಾವು ಪ್ರಧಾನಿ ಹುದ್ದೆಯ ಮೇಲೆ ಕೂರಲು ಸಹಕರಿಸಿದ ಕಮ್ಯೂನಿಸ್ಟರ ವಿರೋಧ ಕಟ್ಟಿಕೊಳ್ಳಲು ಅವತ್ತು ದೇವೇಗೌಡರು ತಯಾರಿರಲಿಲ್ಲ.

   ಪರಮೇಶ್ವರ್ ಅವರನ್ನು ಸಿಎಂ ಆಗದಂತೆ ತಡೆದವರು ಯಾರು? ಯಾವಾಗ?

   ಅದೇ ರೀತಿ ದೇವೇಗೌಡರನ್ನು ದೇಶದ ರಾಷ್ಟ್ರಪತಿ ಹುದ್ದೆಗೆ ತಂದು ಕೂರಿಸಬೇಕು ಎಂಬ ಇರಾದೆ ಕಮ್ಯೂನಿಸ್ಟ್ ನಾಯಕರಿಂದ ಅದಾಗಲೇ ವ್ಯಕ್ತವಾಗಿತ್ತು. ಹೀಗಾಗಿ ಬಿಜೆಪಿ ಜತೆ ಕೈಗೂಡಿಸಿದರೆ ಅದಕ್ಕೆ ಧಕ್ಕೆಯಾಗುವುದು ನಿಶ್ಚಿತವಾಗಿತ್ತು.

   ನಿಗೂಢವಾಗಿ ಉಳಿದ ಮತ್ತೊಂದು ಕಾರಣ

   ನಿಗೂಢವಾಗಿ ಉಳಿದ ಮತ್ತೊಂದು ಕಾರಣ

   ಇದುವರೆಗೆ ನಿಗೂಢವಾಗಿ ಉಳಿದ ಮತ್ತೊಂದು ಕಾರಣವೆಂದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಸರ್ಕಾರ ರಚಿಸಿದರೆ, ಎರಡನೇ ಅವಧಿಯಲ್ಲಿ ತಮ್ಮ ಮಗ ಎಚ್ ಡಿ ರೇವಣ್ಣ ಅವರನ್ನು ಉಪ ಮುಖ್ಯಮಂತ್ರಿ ಹುದ್ದೆಯ ಮೇಲೆ ತಂದು ಕೂರಿಸಬಹುದು ಎಂಬ ಲೆಕ್ಕಾಚಾರ ದೇವೇಗೌಡರಿಗಿತ್ತು.

   ಯಾಕೆಂದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತಮ್ಮ ಹಾಗೂ ರೇವಣ್ಣ ಅವರ ಜಾತಕಗಳು ಪರಸ್ಪರ ಹೊಂದಿಕೆಯಾಗಿವೆ. ಮತ್ತು ಒಬ್ಬರ ಏಳ್ಗತಿಯಲ್ಲಿ ಮತ್ತೊಬ್ಬರ ಏಳ್ಗತಿ ಅಡಗಿದೆ ಎಂಬುದು. ಅರ್ಥಾತ್, ಏಕಕಾಲಕ್ಕೆ ತಮಗೆ ರಾಷ್ಟ್ರಪತಿಯಾಗುವ ಲಕ್ಕು ಕುದುರಿದರೆ ರೇವಣ್ಣ ಅವರಿಗೆ ಡಿಸಿಎಂ ಆಗುವ ಯೋಗ ದಕ್ಕುತ್ತದೆ ಎಂಬುದು ದೇವೇಗೌಡರ ಲೆಕ್ಕಾಚಾರವಾಗಿತ್ತು.

   ಮೊದಲನೇ ಬಾರಿ ಒಲಿದುಬಂದ ಅವಕಾಶ

   ಮೊದಲನೇ ಬಾರಿ ಒಲಿದುಬಂದ ಅವಕಾಶ

   ಹೀಗಾಗಿಯೇ ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರದ ಮೊದಲ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದವರು ಮುಖ್ಯಮಂತ್ರಿಯಾಗುವುದನ್ನು ಒಪ್ಪಿದರು. ಮತ್ತು ಆ ಜಾಗಕ್ಕೆ ದಲಿತ ನಾಯಕ ಡಾ.ಜಿ. ಪರಮೇಶ್ವರ್ ಅವರನ್ನು ತಂದು ಕೂರಿಸಿದರೆ ತಮ್ಮ ಅಭ್ಯಂತರವೇನೂ ಇಲ್ಲ ಎಂದು ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ ಅವರಿಗೂ ಹೇಳಿದ್ದರು.

   ಹೀಗವರು ಸೋನಿಯಾ ಗಾಂಧಿ ಮುಂದೆ ಪರಮೇಶ್ವರ್ ಸಿಎಂ ಆದರೆ ನಮ್ಮ ಅಭ್ಯಂತರವಿಲ್ಲ ಎಂದು ಹೇಳುವ ಹೊತ್ತಿಗಾಗಲೇ ಪರಮೇಶ್ವರ್ ಅವರ ಜತೆ ನಿರ್ಣಾಯಕ ಮಾತುಕತೆಯನ್ನು ಮುಗಿಸಿದ್ದರು.

   ಅಂದುಕೊಂಡಂತೆ ಎಲ್ಲವೂ ನಡೆದಿದ್ದರೆ ಅವತ್ತು ಪರಮೇಶ್ವರ್ ಕರ್ನಾಟಕದ ಮುಖ್ಯಮಂತ್ರಿಯಾಗಿರುತ್ತಿದ್ದರು. ಆದರೆ ಅವರು ಮುಖ್ಯಮಂತ್ರಿಯಾಗಲು ಅಡ್ಡೇಟು ಹಾಕಿದವರು ಹಿರಿಯ ನಾಯಕ ಸಿ.ಎಂ. ಇಬ್ರಾಹಿಂ.

   ಕಡೆ ಘಳಿಗೆಯಲ್ಲಿ ಮನಸ್ಸು ಬದಲಾಯಿಸಿದ ಗೌಡ

   ಕಡೆ ಘಳಿಗೆಯಲ್ಲಿ ಮನಸ್ಸು ಬದಲಾಯಿಸಿದ ಗೌಡ

   ಯಾವಾಗ ಪರಮೇಶ್ವರ್ ಸಿಎಂ ಆಗುತ್ತಾರೆ ಎಂಬುದು ನಿಕ್ಕಿಯಾಯಿತೋ? ಆಗ ಇಬ್ರಾಹಿಂ ಅವರು ದೇವೇಗೌಡರನ್ನು ಭೇಟಿ ಮಾಡಿದರು. ಹೀಗೆ ಭೇಟಿ ಮಾಡಿದವರು, ಪರಮೇಶ್ವರ್ ಅವರನ್ನು ಸಿಎಂ ಜಾಗದಲ್ಲಿ ಕೂರಿಸುವುದು ಸುಲಭ. ಆದರೆ ನಾಳೆ ಅವರನ್ನು ಆ ಹುದ್ದೆಯಿಂದ ಇಳಿಸುವುದು ಕಷ್ಟ ಎಂದರು.

   ಅವರ ಮಾತು ಕೇಳಿದ ದೇವೇಗೌಡರ ಮನಸ್ಸು ಬದಲಾಯಿತು. ಹೀಗಾಗಿ ಪರಮೇಶ್ವರ್ ಬದಲಿಗೆ ಆ ಜಾಗಕ್ಕೆ ಯಾರನ್ನು ತಂದು ಕೂರಿಸುವುದು? ಎಂದು ಚರ್ಚಿಸಿದಾಗ ಇಬ್ರಾಹಿಂ ಅವರು ಹೇಳಿದ ಹೆಸರು ಧರ್ಮಸಿಂಗ್.

   ಕಾರಣ? ಮೊದಲನೆಯದಾಗಿ ಧರ್ಮಸಿಂಗ್ ರಜಪೂತರು. ಅವರನ್ನು ಪದಚ್ಯುತಗೊಳಿಸುವ ಸನ್ನಿವೇಶ ಬಂದರೆ ಪ್ರತಿಭಟಿಸುವ ಜಾತಿ ಶಕ್ತಿಗಳು ಇರುವುದಿಲ್ಲ. ಆದರೆ ಪರಮೇಶ್ವರ್ ವಿಷಯ ಹಾಗಲ್ಲ. ನಾಳೆ ಅವರನ್ನು ಪದಚ್ಯುತಗೊಳಿಸಲು ಮುಂದಾದರೆ ದಲಿತ ವಿರೋಧಿ ಎಂಬ ಹಣೆಪಟ್ಟಿ ಹಾಕಿಕೊಳ್ಳಲು ನೀವು ತಯಾರಿರಬೇಕಾಗುತ್ತದೆ ಎಂಬುದು ಇಬ್ರಾಹಿಂ ವಾದಾಗಿತ್ತು.

   ದೇವೇಗೌಡರಿಗೂ ಇದು ಹೌದು ಎನ್ನಿಸತು. ಅದುವರೆಗೂ ಸಿಎಂ ಹುದ್ದೆಯ ರೇಸಿನಲ್ಲಿ ಮುಂಚೂಣಿಯಲ್ಲಿದ್ದ ಪರಮೇಶ್ವರ್ ಕ್ರಮೇಣ ಹಿಂದೆ ಸರಿದು, ಧರ್ಮಸಿಂಗ್ ಮುಂದೆ ಬಂದಿದ್ದು ಹೀಗೆ.

   ಕಾಂಗ್ರೆಸ್ಸನ್ನು ಬಚಾವ್ ಮಾಡಿದ್ದು ಪರಮೇಶ್ವರ

   ಕಾಂಗ್ರೆಸ್ಸನ್ನು ಬಚಾವ್ ಮಾಡಿದ್ದು ಪರಮೇಶ್ವರ

   ಆನಂತರದ ದಿನಗಳಲ್ಲಿ ಜೆಡಿಎಸ್-ಬಿಜೆಪಿ ಸರ್ಕಾರ ರಚನೆಯಾಯಿತು. ಅದಾದ ಮೇಲೆ ಬಿಜೆಪಿ ಸರ್ಕಾರ ಬಂತು. ಈ ಅವಧಿಯಲ್ಲಿ ಕಾಂಗ್ರೆಸ್ ನಿರ್ಜಲೀಕರಣಕ್ಕೆ ಒಳಗಾಗಿ ಸುಸ್ತಾಗಿ ಹೋಗಿತ್ತು. ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಅದನ್ನು ಡಿ ಹೈಡ್ರೇಷನ್ ಸಮಸ್ಯೆಯಿಂದ ಬಚಾವು ಮಾಡಿದವರು ಪರಮೇಶ್ವರ್.

   ಯಾಕೆಂದರೆ ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಅವರು ರಾಜ್ಯ ಕಾಂಗ್ರೆಸ್ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿಸುವುದರ ಜತೆಗೆ, ಕೈ ಸೈನ್ಯದ ಶಕ್ತಿಯನ್ನು ಎಲ್ಲ ವಿಭಾಗಗಳಲ್ಲಿ ಹೆಚ್ಚಿಸಿದರು. ಹಾಗೆಯೇ ದಲಿತ ನಾಯಕರೊಬ್ಬರು ಕೆಪಿಸಿಸಿ ಮುಂಚೂಣಿಯಲ್ಲಿರುವುದರಿಂದ 2014ರ ಚುನಾವಣೆಯ ನಂತರ ಪರಮೇಶ್ವರ್ ಸಿಎಂ ಆಗಬಹುದು ಎಂಬ ಲೆಕ್ಕಾಚಾರ ದಲಿತ ಸಮುದಾಯದಲ್ಲಿತ್ತು.

   2ನೇ ಬಾರಿ ಪಟ್ಟ ಕಳೆದುಕೊಂಡ ಪರಂ

   2ನೇ ಬಾರಿ ಪಟ್ಟ ಕಳೆದುಕೊಂಡ ಪರಂ

   ಅಷ್ಟೊತ್ತಿಗೆ ಹೇಗೂ ಬಿಜೆಪಿ ಒಡೆದು ಮೂರು ಹೋಳುಗಳಾಗಿದ್ದರಿಂದ ದಲಿತ ವರ್ಗದ ಎಡಗೈ ಸಮುದಾಯ ಕೂಡಾ ಕಾಂಗ್ರೆಸ್ ಪಕ್ಷದ ಬೆನ್ನಿಗೆ ನಿಂತುಕೊಂಡಿತು. ಹೇಗಾದರೂ ಮಾಡಿ ದಲಿತ ನಾಯಕರೊಬ್ಬರು ರಾಜ್ಯದ ಮುಖ್ಯಮಂತ್ರಿ ಹುದ್ದೆಯ ಮೇಲೆ ಕೂರುವಂತೆ ಮಾಡಬೇಕು ಎಂಬುದು ಸಮುದಾಯದ ಲೆಕ್ಕಾಚಾರವಾಗಿತ್ತು.

   ಅಲ್ಲಿಗೆ ವೇದಿಕೆಯೇನೂ ನಿರ್ಮಾಣವಾಯಿತು. ಆದರೆ ಪರಮೇಶ್ವರ್ ಅವರನ್ನು ಕಾಂಗ್ರೆಸ್ ಪಕ್ಷದವರೇ ಚುನಾವಣೆಯಲ್ಲಿ ಸೋಲಿಸಿದರು. ಆ ಮೂಲಕ ಸಿಎಂ ಹುದ್ದೆಯ ರೇಸಿನಿಂದ ಹೊರಬೀಳುವಂತೆ ಮಾಡಿದರು.

   ಮುಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ನಂತರದ ಐದು ವರ್ಷಗಳ ಕಾಲ ಪರಮೇಶ್ವರ್ ಅವರದು ನಿಜವಾದ ಅಜ್ಞಾತವಾದ. ಯಾಕೆಂದರೆ ಅವರು ಬಯಸಿದರೂ ಡಿಸಿಎಂ ಹುದ್ದೆ ಸಿಗಲಿಲ್ಲ. ಅವರ ಮಾತನ್ನು ಯಾವ ಕಾಲದಲ್ಲೂ ಸಿದ್ದರಾಮಯ್ಯ ಕೇಳುತ್ತಿರಲಿಲ್ಲ.

   ದಲಿತನಾಗಿರುವುದಕ್ಕೆ ಸಿಎಂ ಆಗಲಿಲ್ಲ, ಪರಂ ಹೇಳಿಕೆಗೆ ಸಿದ್ದು ಏನಂದ್ರು?

   3ನೇ ಬಾರಿ ಅವಕಾಶ ವಂಚಿತ ಪರಮೇಶ್ವರ

   3ನೇ ಬಾರಿ ಅವಕಾಶ ವಂಚಿತ ಪರಮೇಶ್ವರ

   ಹೀಗಾಗಿ ಪರಮೇಶ್ವರ್ ಪಾಲಿಗೆ ಅದು ಅಜ್ಞಾತ ವಾಸವೇ. ಅದೇ ರೀತಿ 2018ರ ವಿಧಾನಸಭಾ ಚುನಾವಣೆಯ ನಂತರವೂ ಸಿಎಂ ಹುದ್ದೆಯ ರೇಸಿನಲ್ಲಿ ಪರಮೇಶ್ವರ್ ಇದ್ದರು. ಬಿಜೆಪಿಯ ಸೀಟುಗಳ ಸಂಖ್ಯೆ ನೂರು ದಾಟದೆ ಹೋಗಿದ್ದರೆ ಸರ್ಕಾರ ರಚಿಸಲು ಕಾಂಗ್ರೆಸ್ ಹಾಗೂ ಜೆಡಿಎಸ್ ನಿರುಮ್ಮಳ ಮನಸ್ಸಿನಿಂದ ಕೂತು ಮಾತುಕತೆ ನಡೆಸಬಹುದಿತ್ತು.

   ಆದರೆ ಬಿಜೆಪಿಗೆ ನೂರಾ ನಾಲ್ಕು ಸೀಟು ಬಂದಿದ್ದರಿಂದ ಗಾಬರಿಗೊಂಡ ಕಾಂಗ್ರೆಸ್ ಪಕ್ಷ ತರಾತುರಿಯಲ್ಲಿ ಜೆಡಿಎಸ್ ಗೆ ಬೆಂಬಲ ಸೂಚಿಸಿ ಕುಮಾರಸ್ವಾಮಿ ಸಿಎಂ ಆದರೂ ಓಕೆ ಎಂದುಬಿಟ್ಟಿತು. ಅದಾಗದೆ ಮಾತುಕತೆಯೇ ನಡೆದಿದ್ದರೆ ದಲಿತ ನಾಯಕರೊಬ್ಬರನ್ನು ಸಿಎಂ ಹುದ್ದೆಗೆ ತಂದು ಕೂರಿಸುವ ವಿಷಯದಲ್ಲಿ ದೇವೇಗೌಡರಿಗೂ ಉತ್ಸುಕತೆಯಿತ್ತು.

   ಯಾಕೆಂದರೆ ಅವರಿಗೆ ಒಂದು ಸಲ ರೇವಣ್ಣ ಅವರನ್ನು ಡಿಸಿಎಂ ಹುದ್ದೆಗೆ ತಂದು ಕೂರಿಸುವ, ಆ ಮೂಲಕ ಸರ್ಕಾರದ ಎರಡನೇ ಅವಧಿಯಲ್ಲಿ ಸಿಎಂ ಹುದ್ದೆಗೆ ತಂದು ಕೂರಿಸುವ ಇರಾದೆಯಿತ್ತು. ಆದರೆ ಎಲ್ಲ ಲೆಕ್ಕಾಚಾರಗಳು ಉಲ್ಟಾ ಆಗಿ ಕುಮಾರಸ್ವಾಮಿ ಸಿಎಂ ಆದರು. ಪರಮೇಶ್ವರ್ ಮತ್ತೊಮ್ಮೆ ಸಿಎಂ ಹುದ್ದೆಯ ಮೇಲೆ ಕೂರುವ ಅವಕಾಶದಿಂದ ವಂಚಿತರಾದರು.

   ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್

   ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್

   ಹೀಗೆ ವಂಚಿತರಾದರೂ ಅವರಿಗೆ ಡಿಸಿಎಂ ಹುದ್ದೆಯೇನೂ ದಕ್ಕಿತು. ಆದರೆ ಕೆಲವೇ ಕಾಲದಲ್ಲಿ ರಾಜ್ಯ ಕಾಂಗ್ರೆಸ್ ಗೆ ನಾನೇ ನಿರ್ವಿವಾದ ನಾಯಕ ಎಂದು ತೋರಿಸಲು ಸಿದ್ದರಾಮಯ್ಯ ಮುಂದಾದ ಪರಿಣಾಮವಾಗಿ ಕೈ ಪಾಳೆಯ ದೊಡ್ಡ ಮಟ್ಟದಲ್ಲಿ ತಲ್ಲಣಿಸಿತು.

   ಹೀಗೆ ಕೈ ಪಾಳೆಯ ತಲ್ಲಣಿಸುತ್ತಿದ್ದ ಕಾಲದಲ್ಲೇ ಸಿದ್ದರಾಮಯ್ಯ ಒಂದು ಮಾಸ್ಡರ್ ಪ್ಲಾನ್ ಮಾಡಿದರು. ಅದೆಂದರೆ, ಹೇಗಿದ್ದರೂ ಕಳೆದ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ಸಾಲಿಡ್ಡು ಬೆಂಬಲ ನೀಡಿದೆ. ರಾಜ್ಯದ ಜನಸಂಖ್ಯೆಯ ಪೈಕಿ ಶೇಕಡಾ ಹದಿನಾರರಷ್ಟಿರುವ ಮುಸ್ಲಿಮರಿಗೆ ಡಿಸಿಎಂ ಹುದ್ದೆ ಕೊಡಿಸಿದರೆ ಒಂದೇ ಏಟಿಗೆ ಎರಡು ಕಲ್ಲು ಹೊಡೆದಂತಾಗುತ್ತದೆ ಎಂಬುದು ಈ ಮಾಸ್ಟರ್ ಪ್ಲಾನು.

   ಡಿಸಿಎಂ ಹುದ್ದೆಯಿಂದ ಪರಮೇಶ್ವರ ಪದಚ್ಯುತಿ

   ಡಿಸಿಎಂ ಹುದ್ದೆಯಿಂದ ಪರಮೇಶ್ವರ ಪದಚ್ಯುತಿ

   ಅದೆಂದರೆ, ಮೊದಲನೆಯದಾಗಿ ತಮ್ಮ ಕಟ್ಟಾ ಬೆಂಬಲಿಗ ಸಿ.ಎಂ. ಇಬ್ರಾಹಿಂ ಅವರನ್ನು ಉಪ ಮುಖ್ಯಮಂತ್ರಿ ಹುದ್ದೆಯ ಮೇಲೆ ತಂದು ಕೂರಿಸುವುದು ಮತ್ತು ಎರಡನೆಯದಾಗಿ, ಆ ಹುದ್ದೆಯಲ್ಲಿರುವ ಪರಮೇಶ್ವರ್ ಅವರನ್ನು ಪದಚ್ಯುತಗೊಳಿಸುವುದು. ಇದು ಸಿದ್ದರಾಮಯ್ಯ ಅವರ ಪ್ಲಾನು.

   ಹಾಗೆ ಮಾಡಿದರೆ ಏನಾಗುತ್ತದೆ? ದಲಿತ ವರ್ಗದ ಬಲಗೈ ಸಮುದಾಯ ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಜತೆ ನಿಂತಿರುವುರಿಂದ ಅದು ಪರಮೇಶ್ವರ್ ಪದಚ್ಯುತಿಗಾಗಿ ಚಿಂತಿಸುವುದಿಲ್ಲ. ಹಾಗೆಯೇ ಇಬ್ರಾಹಿಂ ಆವರನ್ನು ಡಿಸಿಎಂ ಹುದ್ದೆಯ ಮೇಲೆ ತಂದು ಕೂರಿಸಿದರೆ ಬಿಜೆಪಿ ವಿರೋಧಿ ಮತಗಳನ್ನು ಕಾನ್ ಸಂಟ್ರೇಟ್ ಮಾಡಿ ತಮ್ಮ ಶಕ್ತಿಯನ್ನು ಹಿಗ್ಗಿಸಿಕೊಳ್ಳಬಹುದು ಎಂಬುದು ಸಿದ್ದರಾಮಯ್ಯ ಅವರ ಲೆಕ್ಕಾಚಾರ.

   ಕಾಂಗ್ರೆಸ್ಸಲ್ಲಿ ಮತ್ತೊಂದು ಆಂತರಿಕ ಕಲಹ?

   ಕಾಂಗ್ರೆಸ್ಸಲ್ಲಿ ಮತ್ತೊಂದು ಆಂತರಿಕ ಕಲಹ?

   ಯಾವಾಗ ಇದು ಅರ್ಥವಾಯಿತೋ? ಅದಾದ ನಂತರ ಪರಮೇಶ್ವರ್ ಕುದಿಯತೊಡಗಿದರು. ಅದೇ ರೀತಿ ಮೊದಲ ಬಾರಿ ತಮಗೆ ಸಿಎಂ ಹುದ್ದೆ ತಪ್ಪಿಸಿದ ಸಿ.ಎಂ. ಇಬ್ರಾಹಿಂ ಅವರ ಹೆಸರು ಈ ಬಾರಿ ತಮ್ಮ ಪದಚ್ಯುತಿಯ ಉದ್ದೇಶದೊಂದಿಗೆ ಮೇಲೆ ಬರುತ್ತಿದೆ ಎಂಬುದು ಅವರಿಗೆ ಸಹಿಸಲಸಾಧ್ಯವಾದ ಸಂಗತಿಯಾಗಿ ಪರಿಣಮಿಸಿತು.

   ಹಾಗಂತಲೇ ಅವರೀಗ ದಲಿತ ಸಮುದಾಯದ ಒಗ್ಗಟ್ಟನ್ನು ಬಯಸುತ್ತಿದ್ದಾರೆ. ಸಮುದಾಯ ಒಗ್ಗಟ್ಟಾಗದಿದ್ದರೆ ದಲಿತರು ಸಿಎಂ ಆಗಲು ಸಾಧ್ಯವಿಲ್ಲ ಎಂಬ ಮೆಸೇಜನ್ನು ಸ್ಪಷ್ಟವಾಗಿ ನೀಡಿದ್ದಾರೆ. ಪರಿಣಾಮ? ರಾಜ್ಯ ಕಾಂಗ್ರೆಸ್, ಮತ್ತೊಂದು ಆಂತರಿಕ ಕಲಹಕ್ಕೆ ಸಜ್ಜಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.

   English summary
   Deputy CM Dr G Parameshwara missed opportunity to become chief minister of Karnataka not just once, but thrice. Deve Gowda, CM Ibrahim and Siddaramaiah have played big role in denying opportunity to G Parameshwara. Political analysis by R T Vittal Murthy.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more