ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5G : ಸ್ಪೆಕ್ಟ್ರಂ ಎಂದರೇನು? 5ಜಿ ವಿಶೇಷತೆ ಏನು?

|
Google Oneindia Kannada News

ಭಾರತದಲ್ಲಿ 5G ಸ್ಪೆಕ್ಟ್ರಂ ಮಾರಾಟ ಭರ್ಜರಿ ಆರಂಭ ಕಂಡಿದೆ. ಜುಲೈ 26ರಂದು ಹರಾಜು ಪ್ರಕ್ರಿಯೆ ಆರಂಭಗೊಂಡ ಮೊದಲ ದಿನವೇ ಸರಕಾರದ ಬೊಕ್ಕಸಕ್ಕೆ 1.45 ಲಕ್ಷ ಕೋಟಿ ರೂ ಹಣ ಸಿಕ್ಕಿದೆ. ತರಂಗಾಂತರ ಹರಾಜು ಎರಡು ದಿನ ನಡೆಯಲಿದ್ದು, ಇಂದು ಬುಧವಾರ ಕೊನೆಯ ದಿನ ಇನ್ನೂ ಹೆಚ್ಚು ಬಿಡ್‌ಗಳು ಸಲ್ಲಿಕೆಯಾಗುವ ನಿರೀಕ್ಷೆ ಇದೆ.

2015ರಲ್ಲಿ ನಡೆದ ಸ್ಪೆಕ್ಟ್ರಂ ಆಕ್ಷನ್‌ನಲ್ಲಿ 1.1 ಲಕ್ಷ ಕೋಟಿ ರೂ ಸಂಗ್ರಹವಾಗಿ ಹೊಸ ದಾಖಲೆ ಸೃಷ್ಟಿಸಿತ್ತು. ಇದೀಗ ಈ ದಾಖಲೆ ಧೂಳೀಫಟ ಆಗುವ ರೀತಿಯಲ್ಲಿ ತರಂಗಾಂತರ ಹರಾಜು ನಡೆದಿದೆ. ಕೋವಿಡ್‌ನಿಂದ ಆರ್ಥಿಕತೆ ಇನ್ನೂ ಪೂರ್ಣಪ್ರಮಾಣದಲ್ಲಿ ಚೇತರಿಕೆ ಕಂಡಿಲ್ಲ ಎಂಬ ಅನುಮಾನಗಳ ಮಧ್ಯೆ ಸ್ಪೆಕ್ಟ್ರಂ ಹಂಚಿಕೆಯಲ್ಲಿ ಭರ್ಜರಿ ವ್ಯವಹಾರ ನಡೆದಿದೆ. ಸರಕಾರಕ್ಕೂ ಇದು ಅಚ್ಚರಿ ಎನಿಸಿದೆ.

ಭಾರತದಲ್ಲಿ 5ಜಿ ಸೇವೆಗಳು ಪ್ರಾರಂಭವಾಗೋದು ಯಾವಾಗ?ಭಾರತದಲ್ಲಿ 5ಜಿ ಸೇವೆಗಳು ಪ್ರಾರಂಭವಾಗೋದು ಯಾವಾಗ?

"ತರಂಗಾಂತರ ಮಾರಾಟದಿಂದ 80-90 ಸಾವಿರ ಕೋಟಿ ರೂ ಹಣ ಗಳಿಸಬಹುದು ಎಂದು ನಿರೀಕ್ಷಿಸಿದ್ದೆವು. ಆದರೆ, ಈಗ ನಡೆಯುತ್ತಿರುವುದು ನೋಡಿದರೆ ಅಚ್ಚರಿ ಆಗಿದೆ. ಉದ್ಯಮ ತನ್ನ ಸಂಕಷ್ಟ ಕಾಲದಿಂದ ಚೇತರಿಸಿಕೊಂಡಂತೆ ತೋರುತ್ತಿದೆ" ಎಂದು ಕೇಂದ್ರ ಐಟಿ ಸಚಿವ ಅಶ್ವನಿ ವೈಷ್ಣವ್ ತಿಳಿಸಿದ್ದಾರೆ.

ಮುಕೇಶ್ ಅಂಬಾನಿ ಮಾಲಿಕತ್ವದ ರಿಲಾಯನ್ಸ್ ಜಿಯೋ ಅತಿ ಹೆಚ್ಚು ಬಿಡ್ ಮಾಡುವ ಸಾಧ್ಯತೆ ಇದೆ. 14 ಸಾವಿರ ಕೋಟಿ ರೂ ಅನ್ನು ಅವರು ಅರ್ನೆಸ್ಟ್ ಮನಿ ಡೆಪಾಸಿಟ್ (ಇಎಂಡಿ) ಆಗಿ ನೀಡಿರುವುದು ರಿಲಾಯನ್ಸ್‌ನಿಂದ ಭರ್ಜರಿ 4ಜಿ ಬೇಟೆ ಆಗಬಹುದು ಎಂಬುದು ಸುಳಿವು.

ಮೆಟ್ರೋ ನಿಲ್ದಾಣದಲ್ಲಿ 5ಜಿ ನೆಟ್‌ವರ್ಕ್ ಪ್ರಾಯೋಗಿಕ ಪರೀಕ್ಷೆಮೆಟ್ರೋ ನಿಲ್ದಾಣದಲ್ಲಿ 5ಜಿ ನೆಟ್‌ವರ್ಕ್ ಪ್ರಾಯೋಗಿಕ ಪರೀಕ್ಷೆ

ಭಾರ್ತಿ ಏರ್ಟೆಲ್, ವೊಡಾಫೋನ್ ಐಡಿಯಾ ಸಂಸ್ಥೆಗಳೂ ಹೆಚ್ಚು ತರಂಗಾಂತರಗಳನ್ನು ಕೊಳ್ಳಲು ಮುಂದಾಗಬಹುದು. ಅದಾನಿ ಅಖಾಡಕ್ಕೆ ಇಳಿದಾಗ ಅಂಬಾನಿಗೆ ತೀವ್ರ ಪೈಪೋಟಿ ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು. ಅದರೆ, ಅವರು 100 ಕೋಟಿ ರೂ ಮಾತ್ರ ಇಎಂಡಿ ಇಟ್ಟಿದ್ದಾರೆ. ಅವರು ಕೇವಲ ಖಾಸಗಿ ನೆಟ್ವರ್ಕ್‌ಗೆ ಮಾತ್ರ ಬಿಡ್ ಸಲ್ಲಿಸುವ ಸಾಧ್ಯತೆ ಇದೆ. ಇಎಂಡಿ ಕಡಿಮೆ ಇಟ್ಟಾ ಕ್ಷಣ ಬಿಡ್ಡಿಂಗ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದೇನೂ ಅಲ್ಲ.

ಅಷ್ಟಕ್ಕೂ ಸ್ಪೆಕ್ಟ್ರಂ ಎಂದರೇನು? 5ಜಿ ತಂತ್ರಜ್ಞಾನ ಎಂದರೇನು, 2ಜಿಯಿಂದ 5ಜಿ ಬೆಳೆದ ಬಗೆ ಹೇಗೆ? ಯಾವ್ಯಾವ ಸ್ಪೆಕ್ಟ್ರಂ ಬ್ಯಾಂಡ್‌ಗಳು ಹರಾಜಿನಲ್ಲಿವೆ? ಇವೆ ಮುಂತಾದ ಮಾಹಿತಿ ಮುಂದಿದೆ:

 ಸ್ಪೆಕ್ಟ್ರಂ ಎಂದರೇನು?

ಸ್ಪೆಕ್ಟ್ರಂ ಎಂದರೇನು?

ಸ್ಪೆಕ್ಟ್ರಂ ಅಥವಾ ತರಂಗಾಂತರ ಎಂಬುದು ರೇಡಿಯೋ ಫ್ರೀಕ್ವೆನ್ಸಿ. ಅಗೋಚರವಾಗಿರುವ ಈ ರೇಡಿಯೋ ಫ್ರೀಕ್ವೆನ್ಸಿ ಮೂಲಕ ವೈರ್ಲೆಸ್ ಸಿಗ್ನಲ್‌ಗಳು ಸಾಗುತ್ತವೆ. ನಮ್ಮ ಮೊಬೈಲ್‌ನಿಂದ ಕರೆ ಮಾಡಲು, ಗೂಗಲ್ ಮ್ಯಾಪ್ ಬಳಸಲು, ಆನ್‌ಲೈನ್ ಆರ್ಡರ್ ಮಾಡಲು ಇತ್ಯಾದಿ ಯಾವುದೇ ಕೆಲಸವೂ ವಯರ್ಲೆಸ್ ಸಿಗ್ನಲ್ ಮೂಲಕವೇ ಆಗುವುದು.

ಇವೆಲ್ಲವೂ ಎಲೆಕ್ಟ್ರೋಮ್ಯಾಗ್ನೆಟಿಕ್ ಸ್ಪೆಕ್ಟ್ರಂನ ಒಂದು ಭಾಗ. ನಮ್ಮ ಈ ವಯರ್ಲೆಸ್ ಸಿಗ್ನಲ್‌ಗಳಿಗೆ ಬಳಸುವ ರೇಡಿಯೋ ಫ್ರೀಕ್ವೆನ್ಸಿಯು ಎಲೆಕ್ಟ್ರೋಮ್ಯಾಗ್ನೆಟಿಕ್ ಸ್ಪೆಕ್ಟ್ರಂನ ಒಂದು ಸಣ್ಣ ಭಾಗವಷ್ಟೇ.

ಹೀಗಾಗಿ, ಸ್ಪೆಕ್ಟ್ರಂ ಎಂಬುದು ಸೀಮಿತವಾಗಿ ಇರುವ ಸಂಪತ್ತು. ಪೆಟ್ರೋಲ್ ಇತ್ಯಾದಿ ನೈಸರ್ಗಿಕ ವಸ್ತುಗಳ ರೀತಿ ಈ ಸ್ಪೆಕ್ಟ್ರಂ ಅನ್ನು ಹೊಸದಾಗಿ ಉತ್ಪಾದಿಸಲು ಆಗುವುದಿಲ್ಲ.

ಎಲೆಕ್ಟ್ರೋಮ್ಯಾಗ್ನೆಟಿಕ್ ಸ್ಪೆಕ್ಟ್ರಂ ಅನ್ನು ವೇವ್‌ಲೆಂತ್‌ಗಳ ಆಧಾರದಲ್ಲಿ ವಿವಿಧ ಬ್ಯಾಂಡ್‌ಗಳಾಗಿ ವರ್ಗೀಕರಿಸಬಹುದು. ಮೂರು ಹರ್ಟ್ಜ್‌ನಿಂದ ಆರಂಭಗೊಂಡು 300 ಇಕ್ಸಾ ಹರ್ಟ್ಜ್‌ವರೆಗೂ ಎಲೆಕ್ಟ್ರೋಮ್ಯಾಗ್ಲೆಟಿಕ್ ಸ್ಟೆಕ್ಟ್ರಂ ವ್ಯಾಪ್ತಿ ಇರುತ್ತದೆ. ನಮ್ಮ ಮೊಬೈಲ್ ಫೋನ್‌ಗಳಿಗೆ ಬೇಕಾದ ಬ್ಯಾಂಡ್‌ಗಳು ಈ ಸ್ಪೆಕ್ಟ್ರಂನಲ್ಲಿ ಬಹಳ ಅತ್ಯಲ್ಪ. ನಮಗೆ 20 ಕಿಲೋ ಹರ್ಟ್ಜ್‌ನಿಂದ 300 ಗಿಗಾ ಹರ್ಟ್ಜ್‌ವರೆಗೆ ಮಾತ್ರ ಸ್ಪೆಕ್ಟ್ರಂ ಬೇಕಾಗಬಹುದು. ಇನ್ನುಳಿದ ಬೇರೆ ತರಂಗಾಂತರಗಳು ಬೇರೆ ಬೇರೆ ಕಾರ್ಯಗಳಿಗೆ ವಿನಿಯೋಗಿತವಾಗುತ್ತವೆ.

ಈಗ ಒಟ್ಟಾರೆ ಸ್ಪೆಕ್ಟ್ರಂನಲ್ಲಿ 72,097.85 ಮೆಗಾ ಹರ್ಟ್ಜ್‌ನ ಹರಾಜು ನಡೆದಿದೆ.

600 ಮೆಗಾಹರ್ಟ್ಜ್
700 ಮೆಗಾಹರ್ಟ್ಜ್
800 ಮೆಗಾಹರ್ಟ್ಜ್
900 ಮೆಗಾಹರ್ಟ್ಜ್
1800 ಮೆಗಾಹರ್ಟ್ಜ್
2100 ಮೆಗಾಹರ್ಟ್ಜ್
2300 ಮೆಗಾಹರ್ಟ್ಜ್
3300 ಮೆಗಾಹರ್ಟ್ಜ್
26 ಗಿಗಾಹರ್ಟ್ಜ್

ಇಲ್ಲಿ ಒಂದು ಸಾವಿರ ಕಿಲೋ ಹರ್ಟ್ಜ್ ಎಂದರೆ ಒಂದು ಮೆಗಾಹರ್ಟ್ಜ್ ಆಗುತ್ತದೆ. ಹಾಗೆಯೇ, ಒಂದು ಸಾವಿರ ಮೆಗಾಹರ್ಟ್ಜ್ ಎಂಬುದು ಒಂದು ಗಿಗಾಹರ್ಟ್ಜ್‌ಗೆ ಸಮ.

 ನಿಸ್ತಂತು ಸಂವಹನಕ್ಕೆ ಸ್ಪೆಕ್ಟ್ರಂ

ನಿಸ್ತಂತು ಸಂವಹನಕ್ಕೆ ಸ್ಪೆಕ್ಟ್ರಂ

ನಮ್ಮ ದೈನಂದಿನ ವೈರ್ಲೆಸ್ ಸಂವಹನಕ್ಕೆ ಬಳಸುವ 20 ಕಿಲೋಹರ್ಟ್ಜ್‌ನಿಂದ 300 ಗಿಗಾಹರ್ಟ್ಜ್ ಸ್ಪೆಕ್ಟ್ರಂ ಅನ್ನೂ ಮೂರು ಭಾಗವಾಗಿ ಮಾಡಬಹುದು.

ಲೋ ಬ್ಯಾಂಡ್ ಸ್ಪೆಕ್ಟ್ರಂ: 3 ಗಿಗಾ ಹರ್ಟ್ಜ್‌ನೊಳಗಿನ ಸ್ಪೆಕ್ಟ್ರಂ ಇದು. ಬಹಳ ದೂರದವರೆಗೆ ಈ ಸಿಗ್ನಲ್‌ಗಳು ಸಾಗಬಲ್ಲುವು. ನಮ್ಮ ಬಹುತೇಕ ವೈರ್ಲೆಸ್ ನೆಟ್ವರ್ಕ್ ಇರುವುದೇ ಈ ಬ್ಯಾಂಡ್‌ನಲ್ಲಿ.

ಹೈ ಬ್ಯಾಂಡ್ ಸ್ಪೆಕ್ಟ್ರಂ: 24 ಗಿಗಾ ಹರ್ಟ್ಜ್‌ಗಿಂತ ಹೆಚ್ಚಿನದು. ಆದರೆ ಇದರ ಸಿಗ್ನಲ್‌ಗಳು ಹೆಚ್ಚು ದೂರ ಸಾಗುವುದಿಲ್ಲವಾದರೂ ಬಹಳ ವೇಗದ ನೆಟ್ವರ್ಕ್ ಹೊಂದಿರುತ್ತದೆ. ಲೋ ಬ್ಯಾಂಡ್ ಸ್ಪೆಕ್ಟ್ರಂನಲ್ಲಿ ವೈರ್ಲೆಸ್ ಸಿಗ್ನಲ್‌ಗಳು ಕಿಲೋಮೀಟರ್‌ಗಟ್ಟಲೆ ಸಾಗಬಲ್ಲುವುದು. ಆದರೆ, ಹೈ ಬ್ಯಾಂಡ್ ಸ್ಪೆಕ್ಟ್ರಂನಲ್ಲಿ ಇದು ಕೆಲವೇ ಮೀಟರ್ ಮಾತ್ರ ಹೋಗಬಲ್ಲುವು.

ಮಿಡ್ ಬ್ಯಾಂಡ್ ಸ್ಪೆಕ್ಟ್ರಂ: 3 ಗಿಗಾ ಹರ್ಟ್ಜ್‌ನಿಂದ 24 ಗಿಗಾ ಹರ್ಟ್ಜ್‌ವರೆಗಿನ ಸ್ಪೆಕ್ಟ್ರಂ ಇದು.

 ಈಗಿರುವ ಫೋನ್ ಕರೆಗಳು ಹೇಗೆ ಕೆಲಸ ಮಾಡುತ್ತವೆ?

ಈಗಿರುವ ಫೋನ್ ಕರೆಗಳು ಹೇಗೆ ಕೆಲಸ ಮಾಡುತ್ತವೆ?

ನೀವು ಒಬ್ಬರಿಗೆ ಫೋನ್ ಕರೆ ಮಾಡಿದರೆ ಮೊದಲಿಗೆ ನಿಮ್ಮ ಸಮೀಪಕದ ಟವರಿಗೆ ವೈರ್ಲೆಸ್ ಸಿಗ್ನಲ್ ರೂಪದಲ್ಲಿ ಕನೆಕ್ಟ್ ಆಗುತ್ತದೆ. ನೀವು ಕರೆ ಮಾಡಿದ ವ್ಯಕ್ತಿಗೆ ಸಮೀಪ ಇರುವ ಟವರ್‌ಗೆ ಕೇಬಲ್ ಮೂಲಕ ತಲುಪುತ್ತದೆ. ಆ ಟವರ್‌ನಿಂದ ಮತ್ತೆ ವೈರ್ಲೆಸ್ ಸಿಗ್ನಲ್ ಆಗಿ ಆ ವ್ಯಕ್ತಿಯ ಮೊಬೈಲ್ ತಲುಪುತ್ತದೆ. ನೀವು ಹೊರದೇಶಕ್ಕೆ ಕರೆ ಮಾಡಿದಾಗಲೂ ಕೂಡ ಕೇಬಲ್ ಮೂಲಕವೇ ಕನೆಕ್ಟ್ ಆಗುತ್ತದೆ. ಆದರೆ, ನಮ್ಮ ಮೊಬೈಲ್‌ನಿಂದ ಟವರ್‌ಗೆ ಮತ್ತು ಟವರ್‌ನಿಂದ ಮೊಬೈಲ್‌ಗೆ ಸಂವಹನ ಸಾಧಿಸುವ ವೈರ್ಲೆಸ್ ಸಿಗ್ನಲ್‌ಗಳೇ ಎಲೆಕ್ಟ್ರೋ ಮ್ಯಾಗ್ನೆಟಿಕ್ ಸ್ಪೆಕ್ಟ್ರಂ.

5ಜಿ ಸ್ಪೆಕ್ಟ್ರಂನಲ್ಲಿ ಫ್ರೀಕ್ವೆನ್ಸಿ ಹೆಚ್ಚಿಸಲಾಗಿದೆ. ಸೆಟಿಲೈಟ್ ಫೋನ್‌ಗಳಿಗೆ ನಿಗದಿ ಮಾಡಿದ್ದ ರೇಡಿಯೋ ಫ್ರೀಕ್ವೆನ್ಸಿಯನ್ನು ಈಗ 5ಜಿಗೆ ವಿಸ್ತರಿಸಲಾಗಿದೆ.

 5ಜಿಗೆ ಹೆಚ್ಚು ಬೇಕು ಟವರ್

5ಜಿಗೆ ಹೆಚ್ಚು ಬೇಕು ಟವರ್

5ಜಿಯಲ್ಲಿ ಹೈ ಫ್ರೀಕ್ವೆನ್ಸಿ ಅಲೆ ಇರುತ್ತದೆ. ಹಿಂದಿನ 3ಜಿ ಇತ್ಯಾದಿಯಲ್ಲಿ ಬಳಕೆಯಾಗುತ್ತಿದ್ದು ಲೋ ಫ್ರೀಕ್ವೆನ್ಸಿ. ಇದು ಯಾವುದೇ ಕಟ್ಟಡ, ಮರ ಇತ್ಯಾದಿ ದಾಟಿ ದೂರದವರೆಗೆ ಸಿಗ್ನಲ್‌ಗಳನ್ನು ಸಾಗಿಸಬಲ್ಲುದು. ಆದರೆ, ಹೈ ಫ್ರೀಕ್ವೆನ್ಸಿಯಲ್ಲಿ ಸಣ್ಣ ಅಡೆತಡೆ ಸಿಕ್ಕರೂ ಸಿಗ್ನಲ್ ನಿಂತು ಬಿಡುತ್ತದೆ. ಹೀಗಾಗಿ, ದೊಡ್ಡ ಟವರ್‌ಗಳ ಜೊತೆ ಅಲ್ಲಲ್ಲಿ ಸಣ್ಣ ಸೆಲ್‌ಗಳನ್ನು ಟವರ್‌ಗಳ ರೀತಿ ಅಳವಡಿಸಲಾಗುತ್ತದೆ. ಯಾವುದಾರೂ ಕಟ್ಟಡಗಳ ಮೇಲೋ, ಲೈಟ್ ಕಂಬಗಳ ಮೇಲೋ, ಎಲ್ಲಿಯಾದರೂ ಸಾಧ್ಯವಾದಷ್ಟೂ ಹೆಚ್ಚು ಸ್ಥಳಗಳಲ್ಲಿ ಇಂಥ ಸಣ್ಣ ಆಂಟೆನಾಗಳನ್ನು ಅಳವಡಿಸಬಹುದು.

5ಜಿ ಸರಿಯಾಗಿ ಕೆಲಸ ಮಾಡಬೇಕೆಂದರೆ ಈ ರೀತಿಯ ಸಣ್ಣ ಸೆಲ್‌ಗಳನ್ನು ಸಾಕಷ್ಟು ಕಡೆ ಅಳವಡಿಸಿರಬೇಕು. ಇಲ್ಲಿದ್ದರೆ ಮತ್ತದಲೇ ನೆಟ್ವರ್ಕ್ ಸಿಗ್ನಲ್ ಸಮಸ್ಯೆ ಎದುರಾಗಬಹುದು. ಎಲ್ಲವೂ ಸಮರ್ಪಕವಾಗಿದ್ದರೆ 5ಜಿ ಎಂಬುದು ಸದ್ಯಕ್ಕೆ ನಮ್ಮ ಪಾಲಿಗೆ ಅದ್ಭುತ ಪ್ರಪಂಚವನ್ನೇ ತೆರೆದಿಡಬಲ್ಲುದು. ನಿಮ್ಮ ಇಂಟರ್ನೆಟ್‌ನ ವೇಗ ಅಸಾಮಾನ್ಯವಾಗಿರುತ್ತದೆ. 20 ಗಿಬಿಪಿಎಸ್‌ವರೆಗೂ ಇದರ ವೇಗ ಇರುತ್ತದೆ. ಕ್ಷಣಮಾತ್ರದಲ್ಲಿ ಜಿಬಿಗಟ್ಟಲೆ ವಿಡಿಯೋಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಹಾಗೆಯೇ, 3ಜಿ, 4ಜಿಯಲ್ಲಿ ಒಂದು ಟವರ್‌ನಲ್ಲಿ ಇಂತಿಷ್ಟು ಸಿಗ್ನಲ್‌ಗಳನ್ನು ಮಾತ್ರ ಸ್ವೀಕರಿಸುವ ಮಿತಿ ಇರುತ್ತದೆ. ಉದಾಹರಣೆ, ಒಂದು ಟವರ್‌ನಲ್ಲಿ ಒಮ್ಮೆಗೇ ಒಂದು ಸಾವಿರ ಮಂದಿ ಕರೆ ಮಾಡಿದರೆ ಅದನ್ನು ನಿಭಾಯಿಸಬಹುದು ಎಂದಿಟ್ಟುಕೊಳ್ಳಿ. ಅದಕ್ಕಿಂತ ಹೆಚ್ಚು ಮಂದಿ ಕರೆ ಮಾಡಿದರೆ ನೆಟ್ವರ್ಕ್ ಬ್ಯುಸಿ ಬರುತ್ತದೆ. ಬೇರೊಬ್ಬ ಕರೆ ಕಟ್ ಆದಾಗ ಇನ್ನೊಬ್ಬರ ಕರೆ ಸಂಪರ್ಕಗೊಳ್ಳುತ್ತದೆ. ಆದರೆ, 5ಜಿಯಲ್ಲಿ ಇದರ ಮಿತಿ ಬಹಳ ಹೆಚ್ಚಿಸಲಾಗಿದೆ. ಹೀಗಾಗಿ, ನೆಟ್ವರ್ಕ್ ಸಮಸ್ಯೆ ಹೆಚ್ಚು ತಲೆದೋರದು.

5ಜಿಯಲ್ಲಿ ಸ್ಪೆಕ್ಟ್ರಂ ವಿಸ್ತರಣೆ ಮಾಡಿರುವುದು ವಿಶೇಷ ಬಲ ಕೊಟ್ಟಿದೆ. ಮಿಲಿಮೀಟರ್ ವೇವ್‌ನಂತಹ ಬ್ಯಾಂಡ್‌ಗಳನ್ನು ಒಳಗೊಂಡಿರುವ 5ಜಿಯಲ್ಲಿ ಇಂಟರ್ನೆಟ್ ಮಹಾವೇಗದ ಜೊತೆಗೆ ನೆಟ್ವರ್ಕ್ ಕನೆಕ್ಟಿವಿಟಿಯೂ ಅಮೋಘವಾಗಿರುತ್ತದೆ.

 ಯಾವ್ಯಾವ ದೇಶದಲ್ಲಿದೆ 5ಜಿ?

ಯಾವ್ಯಾವ ದೇಶದಲ್ಲಿದೆ 5ಜಿ?

ಭಾರತದಲ್ಲಿ ಈಗಾಗಲೇ ಕೆಲ ಸ್ಥಳಗಳಲ್ಲಿ 5ಜಿ ಪ್ರಯೋಗ ಮಾಡಲಾಗಿದೆ. ಈಗ ತರಂತಾಂತರ ಹಂಚಿಕೆ ಪೂರ್ಣಗೊಂಡ ಬಳಿಕ ಈ ವರ್ಷದೊಳಗೆ ಎಲ್ಲೆಡೆ ಇದು ಅಳವಡಿತವಾಗುತ್ತದೆ.

ಅಮೆರಿಕವೂ ಸೇರಿದಂತೆ ಈವರೆಗೆ 60ಕ್ಕೂ ಹೆಚ್ಚು ದೇಶಗಳಲ್ಲಿ 5ಜಿ ತಂತ್ರಜ್ಞಾನ ಅಳವಡಿಸಲಾಗಿದೆ. 3ಜಿ ಮತ್ತು 4ಜಿ ಅನ್ನು ಅಳವಡಿಸಿಕೊಳ್ಳಲು ಬಹಳ ಸಮಯ ಬೇಕಾಯಿತು. ಆದರೆ, 5ಜಿ ಬಹಳ ವೇಗವಾಗಿ ಅಳವಡಿಕೆಯಾಗುತ್ತಿದೆ. ಭಾರತದಲ್ಲೂ ಕೆಲವೇ ತಿಂಗಳಲ್ಲಿ ಇದು ಎಲ್ಲೆಡೆ ಲಭ್ಯ ಇರಲಿದೆ.

ವಿಶ್ವದ ಇತರ ಭಾಗಗಳಿಗೆ ಹೋಲಿಸಿದರೆ ಭಾರತದಲ್ಲಿ ಇಂಟರ್ನೆಟ್ ದರ ಸದ್ಯ ಕಡಿಮೆಯೇ. 5ಜಿ ಬಂದಾಗಲೂ ಇದರಲ್ಲಿ ಅಷ್ಟೇನೂ ವ್ಯತ್ಯಾಸವಾಗದು. 4ಜಿಯ ಡೇಟಾ ಪ್ಯಾಕೇಜ್‌ಗಿಂತಲೂ ಶೇ. 20ರಷ್ಟು ಹೆಚ್ಚು ದುಬಾರಿಯಾಗಬಹುದು ಅಷ್ಟೇ ಎಂಬ ಅಂದಾಜಿದೆ.

 ಈಗಿರುವ ಮೊಬೈಲ್ ಸಾಕಾ?

ಈಗಿರುವ ಮೊಬೈಲ್ ಸಾಕಾ?

5ಜಿಯಲ್ಲಿ ಪ್ರಮುಖ ಮಿತಿ ಎಂದರೆ ಇದಕ್ಕೆ 5ಜಿ ಬೆಂಬಲಿತ ಮೊಬೈಲ್ ಫೋನ್ ಅಥವಾ ಸಾಧನವೇ ಆಗಬೇಕು. 4ಜಿ ಮೊಬೈಲ್‌ನಲ್ಲಿ ನೀವು 5ಜಿ ಸೇವೆಗಳನ್ನು ಪಡೆಯಲು ಆಗುವುದಿಲ್ಲ. ಹೀಗಾಗಿ, ಹೊಸ ಮೊಬೈಲ್ ಫೋನ್ ಪಡೆಯುವುದು ಅನಿವಾರ್ಯ. ಈಗ ಮೊಬೈಲ್ ಫೋನ್ ದರ ಅಷ್ಟೇನೂ ದುಬಾರಿ ಇಲ್ಲದ ಕಾರಣ ಇದು ದೊಡ್ಡ ತೊಡಕಾಗಿ ಕಾಣುವ ಸಾಧ್ಯತೆ ಇಲ್ಲ.

 ವಿವಿಧ ಜಿಗಳ ನಡುವೆ ವ್ಯತ್ಯಾಸ ಏನು?

ವಿವಿಧ ಜಿಗಳ ನಡುವೆ ವ್ಯತ್ಯಾಸ ಏನು?

ಇಲ್ಲಿ ಜಿ ಎಂಬುದು ಒಂದೊಂದು ಹಂತದ ತಂತ್ರಜ್ಞಾನ ಸುಧಾರಣೆ. ಜನರೇಶನ್ ಎಂಬುದನ್ನು ಜಿ ಎನ್ನುವುದು. ತಂತ್ರಜ್ಞಾನ ಹಂತ ಹಂತವಾಗಿ ಸುಧಾರಣೆ ಆಗುತ್ತಾ ಹೋಗಿ 1ಜಿ, 2ಜಿ, 3ಜಿ ಇತ್ಯಾದಿ ಬೆಳವಣಿಗೆ ಆಗುತ್ತಾ ಹೋಗುತ್ತಿದೆ.

ಮೊದಲಿಗೆ ಫೋನ್‌ನಿಂದ ಫೋನ್‌ಗೆ ಸಂಭಾಷಣೆ ಮಾಡಲು ಸಾಧ್ಯವಾಗಿತ್ತು. ಅದು 1ಜಿ ಕಾಲ. ಇಲ್ಲಿ ನಮ್ಮ ಸಂಭಾಷಣೆ ಅನಲಾಗ್ ಸಿಗ್ನಲ್ ಆಗಿ ಹೋಗುತ್ತಿತ್ತು. ನಂತರ ಎಸ್ಸೆಮ್ಮೆಸ್ ಕಳುಹಿಸುವ ಮಟ್ಟಕ್ಕೆ ತಂತ್ರಜ್ಞಾನ ಬೆಳೆಯಿತು. ಅದು 2ಜಿ ಕಾಲ. ಇಲ್ಲಿ ಡಿಜಿಟಲ್ ಸಿಗ್ನಲ್ ಆಗಿ ಪರಿವರ್ತನೆ ಆಯಿತು.

ನಂತರ ವಿಶ್ವಾದ್ಯಂತ ತಂತ್ರಜ್ಞರು ಸೇರಿಕೊಂಡು ಜಿಎಸ್‌ಎಂ (ಗ್ಲೋಬಲ್ ಸಿಸ್ಟಂ ಫಾರ್ ಮೊಬೈಲ್ ಕಮ್ಯೂನಿಕೇಶನ್) ಎಂಬ ಡಿಜಿಟಲ್ ಮೊಬೈಲ್ ನೆಟ್ವರ್ಕ್ ಜಾರಿಗೆ ತಂದರು. ಇದೊಂದು ರೀತಿ ಪ್ರೋಟೋಕಾಲ್ ಇದ್ದಂತೆ. ಒಂದು ಫೋನ್‌ನಿಂದ ಇನ್ನೊಂದು ಫೋನಿಗೆ ಯಾವ ರೂಪದಲ್ಲಿ ಡೇಟಾ ರವಾನೆಯಾಗಬೇಕು ಎಂಬ ನಿಯಮವೇ ಪ್ರೋಟೋಕಾಲ್. ಈ ಪ್ರೊಟೊಕಾಲ್ ಆಧಾರದಲ್ಲಿ ಜಿಎಸ್‌ಎಂ ನೆಟ್ವರ್ಕ್ ರೂಪುಗೊಂಡಿತು.

ನಂತರ ಜಿಪಿಆರ್‌ಎಸ್ ಫೋನ್‌ಗಳು ಬಂದವು. ಮೊಬೈಲ್‌ನಲ್ಲಿ ಇಂಟರ್ನೆಟ್ ಪ್ರಪಂಚ ತೆರೆದುಕೊಳ್ಳಲು ಆರಂಭವಾಯಿತು. ಇದಾದ ಬಳಿಕ 3ಜಿ ಆಗಮಿಸಿತು. ಇಂಟರ್ನೆಟ್ ಒಳ್ಳೆಯ ವೇಗದಲ್ಲಿ ಸಿಗತೊಡಗಿತು. ಟಚ್ ಸ್ಕ್ರೀನ್ ಮೊಬೈಲ್‌ಗಳು ಬರತೊಡಗಿದವು. ಸ್ಮಾರ್ಟ್‌ಫೋನ್‌ಗಳು ಬಂದವು.

ನಂತರ ಬಂದದ್ದೇ 4ಜಿ. ಇದು ಅಗಿನ ಮಟ್ಟಕ್ಕೆ ಕ್ರಾಂತಿಯೇ. ನಾವು ಈಗ ಬಳಸುತ್ತಿರುವುದೂ 4ಜಿಯೇ. ಲೈವ್ ಟಿವಿಗಳನ್ನು ನೋಡಬಲ್ಲೆವು. ಒಮ್ಮೆಗೇ ಹಲವು ಆಪ್‌ಗಳನ್ನು ಬಳಸಬಲ್ಲೆವು.

ಈಗ 5ಜಿಯಿಂದ ಸಾಧ್ಯತೆಯ ಮಿತಿ ಹೆಚ್ಚೇ ಇದೆ. ಬಹಳ ವೇಗವಾಗಿ ವಿಡಿಯೋ ಡೌನ್‌ಲೋಡ್ ಮಾಡಬಹುದು. ಹೆಚ್ಚು ಅಡಚಣೆ ಇಲ್ಲದೇ ವಿಡಿಯೋ ವೀಕ್ಷಿಸಬಹುದು. ಥ್ರೀಡಿ ಕಾಲ್ ತರಹದ ತಂತ್ರಜ್ಞಾನ ಬಂದರೂ ಅಚ್ಚರಿ ಇಲ್ಲ.

ನಮ್ಮ ಪ್ರಪಂಚ 5ಜಿಗೆ ಮಾತ್ರ ನಿಂತುಹೋಗುವುದಿಲ್ಲ. ನಮ್ಮ ತಜ್ಞರು ಹೊಸ ಹೊಸ ತಂತ್ರಜ್ಞಾನ ಸಾಧ್ಯತೆಗಳನ್ನು ಸದಾ ಕಾಲ ಅನ್ವೇಷಿಸುತ್ತಲೇ ಇರುತ್ತಾರೆ. ಅವೆಲ್ಲವೂ ಮುಂಬರುವ ದಿನಗಳಲ್ಲಿ 6ಜಿ, 7ಜಿ ಇತ್ಯಾದಿಯಾಗಿ ತಂತ್ರಜ್ಞಾನ ಅಪ್‌ಡೇಟ್ ಆಗುತ್ತಾ ಹೋಗುತ್ತದೆ.

2030ರೊಳಗೆ 6ಜಿ ನೆಟ್‌ವರ್ಕ್ ಲಭ್ಯ ಎಂದು ಈಗಾಗಲೇ ಕೆಲ ತಜ್ಞರು ಅಂದಾಜಿಸಿದ್ದಾರೆ. 5ಜಿ ಬ್ರಹ್ಮಾಂಡ ಅರ್ಥ ಮಾಡಿಕೊಂಡು ಸಾಗುವಷ್ಟರಲ್ಲಿ 6ಜಿ ಎದುರಾಗಿರುತ್ತದೆ. ಬದಲಾವಣೆ ಎಂಬುದು ಜಗದ ನಿಯಮ. ಹೊಸ ಹೊಸ ತಂತ್ರಜ್ಞಾನವನ್ನು ನಾವು ಅಪ್ಪಿಕೊಳ್ಳದೇ ಬೇರೆ ವಿಧಿ ಇಲ್ಲ. ಫಲಾನುಭವಿಗಳು ನಾವೇ ಅಲ್ಲವೇ?

(ಒನ್ಇಂಡಿಯಾ ಸುದ್ದಿ)

Recommended Video

5G ಭಾರತದಲ್ಲಿ ಬರ್ತಾ ಇದೆ , ಹಕ್ಕುಗಳಿಗಾಗಿ ಇಂದು ದೊಡ್ಡ ಮಟ್ಟದಲ್ಲಿ ಹರಾಜು | *India | OneIndia Kannada

English summary
Know about spectrum and how it is used. Know the limits of spectrum, specialities of 5g. Different bands in spectrum etc details in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X