ಹೊಸ ಮನೆಯಲ್ಲಿ ರಶ್ಮಿಕಾ-ವಿಜಯ್ ಸತ್ಯನಾರಾಯಣ ಪೂಜೆ: ಹುಟ್ಟೂರಿಗೆ ಬಂದ ನವದಂಪತಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ

ಹೈದರಾಬಾದ್: ದಕ್ಷಿಣ ಭಾರತದ ಖ್ಯಾತ ನಟರಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಮೊದಲ ಬಾರಿಗೆ ವಿಜಯ್ ಅವರ ಹಿರಿಯರ ಊರಾದ ತೆಲಂಗಾಣದ ಮಹಬೂಬ್‌ನಗರ ಜಿಲ್ಲೆಯ ತುಮ್ಮನಪೇಟ್‌ಗೆ ಭೇಟಿ ನೀಡಿದ್ದಾರೆ. ಅಲ್ಲಿರುವ ತಮ್ಮ ನೂತನ ಮನೆಯಲ್ಲಿ ಈ ದಂಪತಿ ಅದ್ಧೂರಿಯಾಗಿ ಸತ್ಯನಾರಾಯಣ ಪೂಜೆ ನೆರವೇರಿಸಿದ್ದಾರೆ.

ತುಮ್ಮನಪೇಟ್‌ಗೆ ಆಗಮಿಸಿದ ನವಜೋಡಿಯನ್ನು ಗ್ರಾಮದ ಹಿರಿಯರು ಸಾಂಪ್ರದಾಯಿಕ ವಿಧಿವಿಧಾನಗಳ ಮೂಲಕ ಬರಮಾಡಿಕೊಂಡರು. ವಿಜಯ್ ತಿಳಿ ಹಸಿರು ಬಣ್ಣದ ಕುರ್ತಾದಲ್ಲಿ ಮಿಂಚಿದರೆ, ರಶ್ಮಿಕಾ ಮಂದಣ್ಣ ಕಡು ನೀಲಿ ಬಣ್ಣದ ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದರು. ಗ್ರಾಮದಾದ್ಯಂತ ಸಂಗೀತ, ನೃತ್ಯ ಮತ್ತು ಪಟಾಕಿಗಳ ಸಂಭ್ರಮ ಮನೆಮಾಡಿತ್ತು. ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರನ್ನು ನೋಡಲು ನೂತನ ಮನೆಯ ಮುಂದೆ ಜಮಾಯಿಸಿದ್ದರು.

Rashmika Mandanna

ಗ್ರಾಮಸ್ಥರಿಂದ ಆರತಿ ಬೆಳಗಿ ಸ್ವಾಗತ

ತೆಲಂಗಾಣದ ವಿಜಯ್ ಅವರ ಹಿರಿಯರ ಊರಾದ ತುಮ್ಮನಪೇಟೆಯಲ್ಲಿ ನಿರ್ಮಿಸಲಾದ ನೂತನ ಮನೆಯಲ್ಲಿ ಈ ನವಜೋಡಿ ಸತ್ಯನಾರಾಯಣ ವ್ರತ ಮತ್ತು ಗೃಹಪ್ರವೇಶ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನೆರವೇರಿಸಿದ್ದಾರೆ. ಹೊಸ ಮನೆಯನ್ನು ಸುಂದರವಾದ ಹೂವುಗಳು ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಹಳ್ಳಿಯ ಸಂಪ್ರದಾಯದಂತೆ ಮನೆಗೆ ಆಗಮಿಸಿದ ನವಜೋಡಿಗೆ ಸುಮಂಗಲೆಯರು ಆರತಿ ಬೆಳಗಿ, ದೃಷ್ಟಿ ತೆಗೆದು ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು. ಈ ಸುಂದರ ಕ್ಷಣಗಳ ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ನವವಿವಾಹಿತರು ಸುಖಿ ಸಂಸಾರಕ್ಕಾಗಿ ದೈವದ ಆಶೀರ್ವಾದ ಪಡೆಯಲು ನಡೆಸುವ ಸತ್ಯನಾರಾಯಣ ಪೂಜೆಯಲ್ಲಿ ರಶ್ಮಿಕಾ ಮತ್ತು ವಿಜಯ್ ಭಕ್ತಿಯಿಂದ ಪಾಲ್ಗೊಂಡಿದ್ದರು. ರಶ್ಮಿಕಾ ಮಂದಣ್ಣ ಅವರು ಬಂಗಾರದ ಆಭರಣಗಳೊಂದಿಗೆ ಸಾಂಪ್ರದಾಯಿಕ ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದರೆ, ವಿಜಯ್ ದೇವರಕೊಂಡ ಅವರು ತಿಳಿ ಬಣ್ಣದ ಕುರ್ತಾದಲ್ಲಿ ಮಿಂಚಿದರು. ಇಬ್ಬರೂ ತಾರೆಯರು ಕೈಕೈ ಹಿಡಿದು ನಗುತ್ತಾ ಮನೆಯೊಳಗೆ ಪ್ರವೇಶಿಸಿದರು. ಗ್ರಾಮದ ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಈ ಜೋಡಿ, ಅತ್ಯಂತ ಸರಳವಾಗಿ ಮತ್ತು ಪ್ರೀತಿಯಿಂದ ಎಲ್ಲರನ್ನೂ ಮಾತನಾಡಿಸಿದ್ದು ವಿಶೇಷವಾಗಿತ್ತು.

ಮಾ.4ಕ್ಕೆ ಆರತಕ್ಷತೆ

ರಶ್ಮಿಕಾ ಮತ್ತು ವಿಜಯ್ ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ಅತ್ಯಂತ ಖಾಸಗಿಯಾಗಿ ವಿವಾಹವಾದರು. ಹೈದರಾಬಾದ್‌ಗೆ ಮರಳಿದ ನಂತರ, ಈ ಜೋಡಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಿ ಮದುವೆಯ ಆರತಕ್ಷತೆಗೆ ಆಹ್ವಾನ ನೀಡಿದ್ದಾರೆ. ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ಇವರ ಅದ್ಧೂರಿ ವಿವಾಹ ಪೂರಕ ಔತಣಕೂಟ ನಡೆಯಲಿದೆ.

ಇನ್ನು ಆರತಕ್ಷತೆ ಹಿನ್ನೆಲೆಯಲ್ಲಿ ಹೆಚ್ಚಿನ ಜನದಟ್ಟಣೆಯನ್ನು ತಪ್ಪಿಸಲು ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಆಮಂತ್ರಣ ಪತ್ರ ಇಲ್ಲದವರು ಸ್ಥಳಕ್ಕೆ ಬರದಂತೆ ದಂಪತಿ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ. ತಮ್ಮ ಮದುವೆಯ ಸಂಭ್ರಮದ ಅಂಗವಾಗಿ ಭಾರತದಾದ್ಯಂತ ವಿವಿಧೆಡೆ ಸಿಹಿ ಮತ್ತು ಉಚಿತ ಆಹಾರವನ್ನು ಈ ಜೋಡಿ ವಿತರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+