ಅಡುಗೆ ವಿಚಾರಕ್ಕೆ ಅತ್ತೆ-ಸೊಸೆ ನಡುವೆ ಜಗಳ: ಬೆಂಗಳೂರಿನಲ್ಲಿ ಮಹಿಳಾ ಟೆಕ್ಕಿ ಆತ್ಮಹತ್ಯೆ, ಪತಿ ಬಂಧನ
ಬೆಂಗಳೂರು: ನಗರದ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೌಟುಂಬಿಕ ಕಲಹಕ್ಕೆ ಸಾಫ್ಟ್‌ವೇರ್ ಇಂಜಿನಿಯರ್ ಮಹಿಳೆ ಸಾವನ್ನಪ್ಪಿರುವ ಆರೋಪ ಕೇಳಿಬಂದಿದೆ. ಮೃತ ಮಹಿಳೆಯನ್ನು 35 ವರ್ಷದ ಸುಷ್ಮಾ ಎಂದು ಗುರುತಿಸಲಾಗಿದೆ. ಅಡುಗೆ ಮಾಡುವ ವಿಚಾರಕ್ಕೆ ಅತ್ತೆಯೊಂದಿಗೆ ಗಲಾಟೆ ನಡೆದಿರುವುದು ಇದಕ್ಕೆ ಕಾರಣ ಎಂದು ವರದಿಯಾಗಿದೆ.
ಸುಷ್ಮಾ ಅವರು ಅಮೆರಿಕ ಮೂಲದ ಪ್ರತಿಷ್ಠಿತ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಐದು ವರ್ಷಗಳ ಹಿಂದೆ ಪುನೀತ್ ಕುಮಾರ್ ಎಂಬುವವರ ಜೊತೆ ಇವರ ಮದುವೆಯಾಗಿತ್ತು. ದಂಪತಿಗೆ ನಾಲ್ಕು ವರ್ಷದ ಮಗನಿದ್ದಾನೆ. ಆದರೆ, ಕಳೆದ ಕೆಲವು ಸಮಯದಿಂದ ಸುಷ್ಮಾ ಮತ್ತು ಅವರ ಅತ್ತೆ ಕಲ್ಪನಾ ಅವರ ನಡುವೆ ಸಣ್ಣಪುಟ್ಟ ವಿಷಯಗಳಿಗೆ ಪದೇ ಪದೇ ಜಗಳವಾಗುತ್ತಿತ್ತು ಎನ್ನಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಕಳೆದ ಮಂಗಳವಾರ ಸುಷ್ಮಾ ಮತ್ತು ಅತ್ತೆ ಕಲ್ಪನಾ ನಡುವೆ ಅಡುಗೆ ಮಾಡುವ ವಿಚಾರವಾಗಿ ದೊಡ್ಡ ಗಲಾಟೆ ನಡೆದಿದೆ. ಸುಷ್ಮಾ ಅವರಿಗೆ ಅಡುಗೆ ಮನೆಗೆ ಪ್ರವೇಶ ನೀಡದೆ ಅತ್ತೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಈ ನಿರಂತರ ಮಾನಸಿಕ ಹಿಂಸೆಯಿಂದ ಬೇಸತ್ತ ಸುಷ್ಮಾ, ಮಂಗಳವಾರ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ವರದಕ್ಷಿಣೆ ಕಿರುಕುಳ ಆರೋಪ
ಮೃತ ಸುಷ್ಮಾ ಅವರ ಪೋಷಕರು ಅಳಿಯ ಪುನೀತ್ ಕುಮಾರ್ ಮತ್ತು ಅತ್ತೆ ಕಲ್ಪನಾ ವಿರುದ್ಧ ಗಂಭೀರ ದೂರು ನೀಡಿದ್ದಾರೆ. ಸುಷ್ಮಾಗೆ ವರದಕ್ಷಿಣೆಗಾಗಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಲಾಗುತ್ತಿತ್ತು ಎಂದು ಅವರು ದೂರಿದ್ದಾರೆ. ದೂರಿನ ಆಧಾರದ ಮೇಲೆ ಸೋಲದೇವನಹಳ್ಳಿ ಪೊಲೀಸರು ಸುಷ್ಮಾ ಅವರ ಪತಿ ಪುನೀತ್ ಕುಮಾರ್‌ನನ್ನು ವರದಕ್ಷಿಣೆ ಕಿರುಕುಳದ ಆರೋಪದಡಿ ಬಂಧಿಸಿದ್ದಾರೆ.
ಘಟನೆಯ ನಂತರ ತಲೆಮರೆಸಿಕೊಂಡಿರುವ ಅತ್ತೆ ಕಲ್ಪನಾ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.
ಬೆಂಗಳೂರಿನಲ್ಲಿ ಕೇವಲ ಒಂದು ವಾರದ ಅಂತರದಲ್ಲಿ ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್‌ಗಳು ಆತ್ಮಹತ್ಯೆಗೆ ಶರಣಾಗಿರುವುದು ನಗರದ ಜನತೆಯಲ್ಲಿ, ವಿಶೇಷವಾಗಿ ಐಟಿ ವಲಯದಲ್ಲಿ ಕೆಲಸ ಮಾಡುವವರಲ್ಲಿ ತೀವ್ರ ಆತಂಕ ಮೂಡಿಸಿದೆ. ಸುಷ್ಮಾ ಅವರ ಈ ಘಟನೆಯು ಬೆಂಗಳೂರಿಗರನ್ನು ಕಾಡುತ್ತಿದೆ.
ಸುಷ್ಮಾ ಅವರಿಗೆ 4 ವರ್ಷದ ಪುಟ್ಟ ಮಗನಿದ್ದಾನೆ. ತಾಯಿ ಸಾವು, ತಂದೆ ಜೈಲು ಮತ್ತು ಅತ್ತೆ ತಲೆಮರೆಸಿಕೊಂಡಿರುವ ಈ ಸ್ಥಿತಿಯಲ್ಲಿ ಮಗುವಿನ ಭವಿಷ್ಯ ಏನಾಗಬಹುದು ಎಂಬುದು ನಾಗರಿಕರನ್ನು ಕಾಡುತ್ತಿರುವ ಮತ್ತೊಂದು ನೋವಿನ ಸಂಗತಿಯಾಗಿದೆ. ಸಣ್ಣ ಜಗಳ ಒಂದು ಮಗುವಿನ ಬದುಕನ್ನು ಅತಂತ್ರ ಸ್ಥಿತಿಗೆ ತಲುಪಿಸಬಲ್ಲದು ಎಂಬುದಕ್ಕೆ ಈ ಘಟನೆ ನಿದರ್ಶನವಾಗಿದೆ. ಮತ್ತೊಂದೆಡೆ ವರದಕ್ಷಿಣೆ ವಿರೋಧಿ ಕಾನೂನುಗಳು ಇಷ್ಟೊಂದು ಬಿಗಿಯಾಗಿದ್ದರೂ ಕಿರುಕುಳ ನಿಲ್ಲುತ್ತಿಲ್ಲವೇಕೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.












Click it and Unblock the Notifications