ಸುಂದರಿ ಜತೆ ಡೇಟಿಂಗ್ ಆಸೆಗೆ ಬಿದ್ದು 20 ಲಕ್ಷ ರೂ ಕಳೆದುಕೊಂಡ ಸರ್ಕಾರಿ ಅಧಿಕಾರಿ, ಮೋಸ ಹೋಗಿದ್ದೇಗೆ
ಊಟಿ: ಭಾರತದಲ್ಲಿ ಡೇಟಿಂಗ್ ಆಪ್‌ಗಳ ಜನಪ್ರಿಯತೆ ಹೆಚ್ಚುತ್ತಿವೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ವಂಚಕರು ನಕಲಿ ಡೇಟಿಂಗ್ ಆಪ್ ಮೂಲಕ ಅಥವಾ ಅಸಲಿ ಡೇಟಿಂಗ್ ಆಪ್‌ಗಳಲ್ಲಿ ವಂಚಕ ಯುವತಿ/ಮಹಿಳೆಯರಿಂದ ಬಲೆ ಬೀಸಿ ಹಣವಂತರಿಂದ ಲಕ್ಷ ಲಕ್ಷ ಹಣ ಲಪಟಾಯಿಸುತ್ತಿದ್ದಾರೆ. ಮೊದಲು ಆತ್ಮೀಯವಾಗಿ, ಸುಳ್ಳು ವೈಯಕ್ತಿಕ ಮಾಹಿತಿ ಹಂಚಿಕೊಂಡು ಮರಳು ಮಾಡಿ ನಂಬಿಸಿ ಕೊನೆಗೆ ಹಣ ಎಗರಿಸಿ ನಾಪತ್ತೆ ಆಗುತ್ತಾರೆ. ಆಮೇಲೆ ಮೊಬೈಲ್ ಕರೆಗೂ ಸಿಗುವುದಿಲ್ಲ. ನೀಡಿದ ಮಾಹಿತಿ ಸಹ ಸುಳ್ಳಾಗಿರುತ್ತದೆ. ಇಂತದ್ದೇ ಒಂದು ಘಟನೆ ನಡೆದಿದ್ದು, ತಮಿಳುನಾಡಿನ ನೀಲಗಿರಿ ಜಿಲ್ಲೆಯ ಸರ್ಕಾರಿ ಅಧಿಕಾರಿಯೊಬ್ಬರು 20 ಲಕ್ಷ ರೂ ಕಳೆದುಕೊಂಡಿದ್ದಾರೆ. ಅಧಿಕಾರಿ ವಂಚನೆಗೆ ಒಳಗಾದ ರೋಚಕ ಮಾಹಿತಿ ಇಲ್ಲಿದೆ.
ಡೇಟಿಂಗ್ ಅಪ್ಲಿಕೇಶನ್ ಬಳಸಿದ್ದ ನೀಲಗಿರಿ ಜಿಲ್ಲೆಯ ಸರ್ಕಾರಿ ಅಧಿಕಾರಿ ತನ್ನೆಲ್ಲ ಮಾಹಿತಿ ಆಪ್‌ನಲ್ಲಿ ನೀಡಿ ಮಹಿಳೆಯೊಂದಿಗೆ ಡೇಟಿಂಗ್‌ಗೆ ಪ್ರಯತ್ನಿಸಿದ್ದರು. ಆದರೆ ಅವರು ಅಂದುಕೊಂಡಿದ್ದೇ ಒಂದು, ಆಗಿದ್ದೆ ಮತ್ತೊಂದು. ಡೇಟಿಂಗ್ ಮಾಡಲು ಒಪ್ಪಿದ ಮಹಿಳೆಯ ವಂಚನೆಯ ಜಾಲಕ್ಕೆ ಸಿಲುಕಿದ ಅಧಿಕಾರಿ ಆರ್ಥಿಕ ಭಾರೀ ನಷ್ಟ ಅನುಭವಿಸುವಂತಾಗಿದೆ.

ಈ ಡೇಟಿಂಗ್ ಆಪ್‌ಗಳಲ್ಲಿ ಮಹಿಳೆ/ ಯುವತಿಯರ ಚೆಂದದ ಫೋಟೋಗಳನ್ನು ಅಪ್ಲೋಡ್ ಮಾಡಲಾಗುತ್ತದೆ. ಈ ಅಪ್ಲಿಕೇಶನ್‌ಗಳಲ್ಲಿ ಇರುವವರು ಎಲ್ಲರು ಪ್ರಮಾಣಿಕರೇ ಅಂತ ಹೇಳಲು ಆಗುವುದಿಲ್ಲ. ವಂಚಕರು ಆಪ್‌ನಲ್ಲಿ ತಮ್ಮ ಮಾಹಿತಿ ಹಾಕಿ ಹಣ ಹೊಡೆಯಲು ಸಂಚು ರೂಪಿಸುತ್ತಾರೆ. ಅಂಥದ್ದೆ ಸಂಚಿಗೆ ಒಳಗಾದ ಸರ್ಕಾರಿ ಅಧಿಕಾರಿ ಹೂಡಿಕೆ ಮಾಡಿ ಹೆಚ್ಚು ಲಾಭ ಪಡೆಯಲು ಹೋಗಿ ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದಾರೆ. ಸ್ಥಳೀಯ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಷ್ಟಕ್ಕೂ ಆಗಿದ್ದೇನು?
ಸದರಿ ಸಂತ್ರಸ್ತ ಸರ್ಕಾರಿ ಅಧಿಕಾರಿ ಡೇಟಿಂಗ್ ಆಪ್‌ನಲ್ಲಿ ತನ್ನೆಲ್ಲ ಮಾಹಿತಿ ನೀಡಿ ಮಹಿಳೆಯೊಂದಿಗೆ ಡೇಟಿಂಗ್ ಮಾಡಲು ಮುಂದಾಗಿದ್ದರು. ಅಲ್ಲಿ ಪರಿಚಯವಾದ ಮಹಿಳೆಯು ತಾನು ವಂಚಕಿ ಎಂದು ಚೂರು ಗೊತ್ತಾಗದಂತೆ ನಟಿಸಿದ್ದಾಳೆ. ಪರಿಚಯವಾದ ಕೆಲ ದಿನಗಳಲ್ಲೇ ಆಪ್ತವಾಗಿದ್ದಾಳೆ. ಇಬ್ಬರೂ ವೈಯಕ್ತಿಕ ಮಾಹಿತಿ ಹಂಚಿಕೊಂಡು ಹತ್ತಿರವಾಗಿದ್ದಾರೆ. ತಾನು ಬೆಂಗಳೂರಿನಲ್ಲಿ ಬ್ಯೂಟಿ ಸಲೂನ್ ನಡೆಸುತ್ತಿದ್ದೇನೆ ಎಂದಿದ್ದಾಳೆ. ತಾನು ಆನ್‌ಲೈನ್‌ನಲ್ಲಿ ಹೂಡಿಕೆ ಮಾಡಿ ಅಪಾರ ಹಣ ಗಳಿಸುತ್ತಿರುವುದಾಗಿಯೂ ಅಧಿಕಾರಿಯನ್ನು ಆಕೆ ನಂಬಿಸಿದ್ದಾಳೆ. ನೀವು ಹೂಡಿಕೆ ಮಾಡಿದರೆ ಭರ್ಜರಿ ಲಾಭ ಪಡೆಯುಬಹುದು ಪುಸಲಾಯಿಸಿದ್ದಾಳೆ.
43 ಸಾವಿರ ರೂ.ಗೆ ಲಾಭ, 20 ಲಕ್ಷ ರೂ.ಗೆ ಪಂಗನಾಮ
ಆಪ್ತವಾಗಿ ತನ್ನೆಲ್ಲ ಮಾಹಿತಿ ನೀಡಿದ್ದಾಳೆ ಎಂದು ಅವಳ ಮರಳು ಮಾತು ನಂಬಿದ ಅಧಿಕಾರಿಯು ಆಕೆ ನೀಡಿದ ವೆಬ್‌ಸೈಟ್ ವಿಳಾಸಕ್ಕೆ ಹೋಗಿ ಆರಂಭದಲ್ಲಿ ಸಮಾರು 43 ಸಾವಿರ ರೂಪಾಯಿ ಆನ್‌ಲೈನ್ ಹೂಡಿಕೆ ಮಾಡಿದ್ದರು. ಅದಕ್ಕೆ ಅವರಿಗೆ ಒಂದಷ್ಟು ಲಾಭ ಬಂದಿತ್ತು. ಆಸೆಗೆ ಬಿದ್ದ ಅಧಿಕಾರಿ ಮಹಿಳೆಯ ಮಾತು ಕೇಳಿ ನಂತರದ ಹಂತದಲ್ಲಿ ಸುಮಾರು 20 ಲಕ್ಷ ರೂಪಾಯಿ ಹಣ ಹೂಡಿಕೆ ಮಾಡಿದ್ದಾರೆ. ಹಣ ಹೂಡಿಕೆ ಆಗಿದ್ದು ಖಚಿತವಾಗುತ್ತಿದಂತೆ ವಂಚಕರ ಹಣ ಎಗರಿಸಿದ್ದಾರೆ. ಹೂಡಿಕೆಗೆ ಲಾಭವು ಆಗಲಿಲ್ಲ. ಹಣದ ಸ್ಟೇಟಸ್ ಮಾಹಿತಿಯೂ ಸಿಗದಿದ್ದಾಗ ಅಧಿಕಾರಿ ತನ್ನ ಹೂಡಿಕೆ ಹಣ ಹಿಂಪಡೆಯಲು ಪ್ರಯತ್ನಿಸಿದ್ದಾರೆ. ಅದು ಸಹ ಮರಳಿ ಬಾರದಿದ್ದಾಗ, ಡೇಟಿಂಗ್ ಮಹಿಳೆಯನ್ನು ಸಂಪರ್ಕಿಸಿದರೂ ಅದು ಸಾಧ್ಯವಾಗಿಲ್ಲ. ಆಗ ತಾನು ಮೋಸ ಹೋಗಿದ್ದು ಗೊತ್ತಾಗಿದೆ. ಕೂಡಲೇ ಸೈಬರ್ ಕ್ರೈಮ್ ಪೋಲೀಸರಿಗೆ ದೂರು ದಾಖಲಿಸಿದ್ದಾರೆ. ಈ ಪ್ರಕರಣ ತಮಿಳುನಾಡು ಸೇರಿದಂತೆ ಕರ್ನಾಟಕದಲ್ಲೂ ಸಂಚಲನ ಮೂಡಿಸಿದೆ. ಪ್ರಕರಣದ ತನಿಖೆ ನಡೆಯುತ್ತಿದೆ.












Click it and Unblock the Notifications