ಜೈಲಲ್ಲಿರುವ ಪವಿತ್ರಾ ಗೌಡಗೆ ಮನೆ ಊಟ ವ್ಯವಸ್ಥೆಗೆ ಬ್ರೇಕ್ ಹಾಕಿದ ಹೈಕೋರ್ಟ್
ಬೆಂಗಳೂರು: ಹತ್ಯೆ ಪ್ರಕರಣದಲ್ಲಿ ಜೈಲಿನಲ್ಲಿರುವ ಎ1 ಆರೋಪಿ ಪವಿತ್ರಾ ಗೌಡ ಸೇರಿ ಮೂವರು ಆರೋಪಿಗಳಿಗೆ ಮನೆ ಊಟಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಈ ಮೂಲಕ ಪವಿತ್ರಾ ಗೌಡಗೆ ಹಿನ್ನಡೆ ಆಗಿದೆ. ವಾರಕ್ಕೊಮ್ಮೆ ಹಾಗೂ ವೈದ್ಯಕೀಯ ಕಾರಣಗಳಿಂದ ಮನೆ ಊಟ ತರಿಸಿಕೊಳ್ಳಬಹುದೆಂಬ ಕೆಳ ಹಂತದ ನ್ಯಾಯಾಲಯದ ಅದೇಶ ಮೇರೆಗೆ ಮನೆ ಊಟ ತರಿಸಿಕೊಳ್ಳುತ್ತಿದ್ದರು. ಇಂದು ಬುಧವಾರ (ಮಾ.4) ಈ ಆದೇಶವನ್ನು ರದ್ದುಪಡಿಸಿದ ಹೈಕೋರ್ಟ್ ಮನೆ ಊಟ ನೀಡುವಂತಿಲ್ಲ ಎಂದು ಆದೇಶಿಸಿತು.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ಪವಿತ್ರಾಗೌಡ ಸೇರಿ ಕೆಲವು ಆರೋಪಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಟ್ರಯಲ್ ಕೋರ್ಟ್‌ಗೆ ಅರ್ಜಿ ಹಾಕಿದ್ದ ಪವಿತ್ರಾಗೌಡ, ನಾಗರಾಜು ಮತ್ತು ಲಕ್ಷ್ಮಣ್‌ಗೆ ಮನೆ ಊಟ ಬರುತ್ತಿತ್ತು. ವೈದ್ಯಕೀಯ ಕಾರಣ ಹಾಗೂ ವಾರಕ್ಕೊಮ್ಮೆ ಮನೆ ಊಟ ತರಿಸಿಕೊಳ್ಳಬಹುದೆಂದು ಟ್ರಯಲ್ ಕೋರ್ಟ್ ಆದೇಶಿಸಿತ್ತು. ಅದರಂತೆ ಈ ಮೂರು ಆರೋಪಿಗಳು ಮನೆ ಊಟ ಸೌಲಭ್ಯ ಪಡೆಯುತ್ತಿದ್ದರು. ಇದನ್ನು ವಿರೋಧಿಸಿದ್ದ ಜೈಲಾಧಿಕಾರಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಜೈಲಾಧಿಕಾರಿಗಳ ಮನವಿಗೆ ಪುರಸ್ಕಾರ, ಊಟಕ್ಕೆ ಬ್ರೇಕ್
ಜೈಲಿನಲ್ಲಿನ ಆಹಾರ ಶುಚಿಯಿಂದ ಕೂಡಿದೆ. ಆರೋಗ್ಯಕರ ಆಹಾರ ಇದಾಗಿದೆ. ಗುಣಮಟ್ಟದಿಂದ ಕೂಡಿದೆ ಎಂದು ಎಫ್‌ಎಸ್‌ಎಸ್‌ಎಐ ಪ್ರಮಾಣೀಕರಿಸಿದೆ. ಜೈಲಿನಲ್ಲಿರುವ ಇತರ ಎಲ್ಲ ಖೈದಿಗಳಿಗೆ ಅದೇ ಊಟ ಮಾಡುವಾಗ ಈ ಆರೋಪಿಗಳಿಗೆ ಯಾಕೆ ಮನೆಯೂಟ ಎಂದು ಜೈಲಾಧಿಕಾರಿಗಳು ಮೊದಲಿನಿಂದಲೂ ಆಕ್ಷೇಪ ವ್ಯಕ್ತಪಡಿಸಿದ್ದರು. ಲಕ್ಷ್ಮಣ್, ನಾಗರಾಜು ಮತ್ತು ಪವಿತ್ರಾಗೌಡ ಸೌಲಭ್ಯ ನೀಡಿದ್ದ ಕೆಳ ಹಂತದ ನ್ಯಾಯಾಲಯ ಆದೇಶವನ್ನು ಜೈಲಾಧಿಕಾರಿಗಳು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಈ ರಿಟ್ ಅರ್ಜಿಯ ಸಂಪೂರ್ಣ ವಾದ ವಿವಾದವು ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠದಲ್ಲಿ ನಡೆದಿದೆ. ವಾದ ವಿವಾದ ಆಲಿಸಿದ ಹೈಕೋರ್ಟ್ ಮನೆ ಊಟಕ್ಕೆ ಬ್ರೇಕ್ ನೀಡಿದ್ದಲ್ಲದೇ ಕೆಳ ಹಂತದ ನ್ಯಾಯಾಲಯದ ಆದೇಶ ರದ್ದು ಪಡಿಸಿದೆ. ಈ ಮೂಲಕ ಮೂವರು ಆರೋಪಿಗಳಿಗೆ ಆಘಾತ ನೀಡಿದೆ. ಜೊತೆಗೆ ವೈದ್ಯಕೀಯ ಕಾರಣಗಳಿದ್ದರೆ ಮಾತ್ರವೇ ಮನೆ ಊಟ ತರಿಸಿಕೊಳ್ಳಲು ಅವಕಾಶ ಇದೆ ಎಂದು ಉಲ್ಲೇಖಿಸಿದೆ. ಸದ್ಯ ಎಲ್ಲರೂ ಆರೋಗ್ಯವಾಗಿದ್ದು, ಜೈಲಿನ ಊಟ ಮಾಡಬೇಕಿದೆ.
ನಿತ್ಯ ವಿಚಾರಣೆ ನಡೆಸುವಂತಿಲ್ಲ
ಇನ್ನೂ 57ಸಿಸಿಎಚ್ ನ್ಯಾಯಾಲಯದಲ್ಲಿ ನಿತ್ಯವು ವಿಚಾರಣೆ ನಡೆಸುವಂತೆ ಆರೋಪಿ ನಟ ದರ್ಶನ್ ತೂಗುದೀಪ ಪರ ವಕೀಲರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ ನಿತ್ಯವು ವಿಚಾರಣೆ ನಡೆಸುವಂತಿಲ್ಲ ಎಂದು ತಿಳಿಸಿದ್ದನ್ನು ಎಸ್‌ಪಿಪಿ ಅವರು ಗಮನಕ್ಕೆ ತಂದರು. ಇದೇ ನ್ಯಾಯಾಲಯದಲ್ಲಿ ರೇಣುಕಾಸ್ವಾಮಿ ಪ್ರಕರಣ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಯೊಬ್ಬರನ್ನು ಆರೋಪಿಯಾಗಿ ಮಾಡಲು ಆರೋಪಿಗಳ ಪರ ವಕೀಲರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ತನಿಖಾಧಿಕಾರಿ ಕೇಸಿನಲ್ಲಿ ಸುಳ್ಳು ಸಾಕ್ಷ್ಯಾಧಾರ ಸೃಷ್ಟಿಸಿದ್ದರೆ ಆ ಬಗ್ಗೆ ಅವರೇ ಉತ್ತರ ನೀಡುತ್ತಾರೆ ಎಂದಿರುವ ಕೋರ್ಟ್ ಈ ಅರ್ಜಿ ಹಾಸ್ಯಾಸ್ಪದ ಎಂದು ಹೇಳಿತು. ಈ ಮೇಲಿನ ಎಲ್ಲ ಅಂಶಗಳನ್ನು ಗಮನಿಸಿದಾಗ ನಟ ದರ್ಶನ್, ಪವಿತ್ರಾ ಗೌಡ, ಲಕ್ಷ್ಮಣ್ ಮತ್ತು ನಾಗರಾಜುಗೆ ಹಿನ್ನಡೆ ಎದುರಿಸಿದ್ದಾರೆ.












Click it and Unblock the Notifications