ಒಂದೇ ವರ್ಷದಲ್ಲಿ 800 ಕೋಟಿ ರೂ ಮೌಲ್ಯದ ಕಂಪನಿ ಕಟ್ಟಿದ 23ರ ಹರೆಯದ ಅಂಜಲಿ ಸರ್ದಾನಾ
ಬೆಂಗಳೂರು ಮೂಲದ 23 ವರ್ಷದ ಅಂಜಲಿ ಸರ್ದಾನಾ ಅವರು ಆರಂಭಿಸಿದ 'ಪ್ರಾಂಟೊ' (Pronto) ಸ್ಟಾರ್ಟಪ್ ಕೇವಲ ಒಂದು ವರ್ಷದಲ್ಲಿ ದೊಡ್ಡ ಇತಿಹಾಸ ಸೃಷ್ಟಿಸಿದೆ. ಈ ಕಂಪನಿಯು ಮನೆಗೆಲಸ, ಅಡುಗೆ ಮತ್ತು ಸ್ವಚ್ಛತೆಯಂತಹ ಸೇವೆಗಳನ್ನು ಕೇವಲ 10 ನಿಮಿಷಗಳಲ್ಲಿ ಒದಗಿಸುತ್ತದೆ.
ಇತ್ತೀಚೆಗಷ್ಟೇ 200 ಕೋಟಿ ರೂ. ಬಂಡವಾಳ ಸಂಗ್ರಹಿಸಿರುವ ಈ ಕಂಪನಿಯ ಒಟ್ಟು ಮೌಲ್ಯ ಈಗ ಬರೋಬ್ಬರಿ 830 ಕೋಟಿ ರೂಪಾಯಿ (100 ಮಿಲಿಯನ್ ಡಾಲರ್) ದಾಟಿದೆ. ಭಾರತದಲ್ಲಿ ಗೃಹ ಸೇವೆಗಳಿಗೆ ಇರುವ ಬೇಡಿಕೆಯನ್ನು ಈ ಯಶೋಗಾಥೆ ಸಾಬೀತುಪಡಿಸಿದೆ
ನೆಲದ ಮೇಲೆ ಮಲಗುತ್ತಿದ್ದ ಆ ದಿನಗಳು
ಈ ಅದ್ಭುತ ಯಶಸ್ಸು ಕೇವಲ ಅದೃಷ್ಟದಿಂದ ಬಂದಿದ್ದಲ್ಲ; ಇದರ ಹಿಂದೆ ಅಂಜಲಿ ಮತ್ತು ಅವರ ತಂಡದ ಕಠಿಣ ಪರಿಶ್ರಮವಿದೆ. ಕಂಪನಿಯ ಆರಂಭಿಕ ದಿನಗಳಲ್ಲಿ ಇಡೀ ತಂಡವು ರಾತ್ರಿ ಕಚೇರಿಯ ನೆಲದ ಮೇಲೆಯೇ ಮಲಗಿ ಹಗಲಿರುಳು ಕೆಲಸ ಮಾಡುತ್ತಿದ್ದರು. ಅಮೆರಿಕದಲ್ಲಿ ವ್ಯಾಸಂಗ ಮಾಡಿರುವ ಅಂಜಲಿ ಸರ್ದಾನಾ, ತಮ್ಮ ಸ್ಟಾರ್ಟಪ್ 'ಪ್ರಾಂಟೊ' ಕೇವಲ ಕೆಲವೇ ತಿಂಗಳುಗಳಲ್ಲಿ ಬೆಳೆದ ಹಾದಿಯನ್ನು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಹಂಚಿಕೊಂಡಿದ್ದಾರೆ. ಎಪಿಕ್ ಕ್ಯಾಪಿಟಲ್ ನೇತೃತ್ವದಲ್ಲಿ 25 ಮಿಲಿಯನ್ ಡಾಲರ್ ಹೂಡಿಕೆ ಸಂಗ್ರಹಿಸಿರುವುದಾಗಿ ಅವರು ತಿಳಿಸಿದ್ದು, ಹಳೆಯ ಹೂಡಿಕೆದಾರರಾದ ಗ್ಲೇಡ್ ಬ್ರೂಕ್ ಕ್ಯಾಪಿಟಲ್, ಜನರಲ್ ಕ್ಯಾಟಲಿಸ್ಟ್ ಮತ್ತು ಬೈನ್ ಕ್ಯಾಪಿಟಲ್ ಕೂಡ ಈ ಸ್ಟಾರ್ಟಪ್ ಮೇಲೆ ಮತ್ತೆ ನಂಬಿಕೆ ಇಟ್ಟು ಬಂಡವಾಳ ಹೂಡಿವೆ ಎಂದು ಅವರು ಹೇಳಿದ್ದಾರೆ.

ಒಂಬತ್ತು ತಿಂಗಳ ಹಿಂದೆ ಕೇವಲ 170 ಬುಕ್ಕಿಂಗ್
"ಕೇವಲ ಒಂಬತ್ತು ತಿಂಗಳ ಹಿಂದೆ ಗುರ್ಗಾಂವ್‌ನ ಸೆಕ್ಟರ್ 56 ರಲ್ಲಿ ನಮ್ಮದೊಂದು ಸಣ್ಣ ಹಬ್ ಇತ್ತು. ಬುಕ್ಕಿಂಗ್ ಮಾಡಿದ ಗ್ರಾಹಕರಿಗೆ ವಿಶ್ವಾಸಾರ್ಹ ಸೇವೆ ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ಕಚೇರಿಯಲ್ಲಿಯೇ ಉಳಿಯುತ್ತಿದ್ದೇವು. ಆಗ ನಾವು ದಿನಕ್ಕೆ ಕೇವಲ 170 ಬುಕ್ಕಿಂಗ್‌ಗಳನ್ನು ಪಡೆಯುತ್ತಿದ್ದೆವು. ಆದರೆ ಇಂದು ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ 3,000ಕ್ಕೂ ಕಾರ್ಮಿಕರಿದ್ದಾರೆ. ನಾವು ಪ್ರತಿದಿನ 18,000ಕ್ಕೂ ಹೆಚ್ಚು ಬುಕ್ಕಿಂಗ್‌ಗಳನ್ನು ಪಡೆಯುತ್ತಿದ್ದೇವೆ" ಎಂದು ಅಂಜಲಿ ತಮ್ಮ ಕಷ್ಟದ ದಿನಗಳನ್ನು ಸ್ಮರಿಸಿಕೊಂಡಿದ್ದಾರೆ. ವಿಶೇಷವೆಂದರೆ, ಪ್ರಸ್ತುತ ಕಂಪನಿಯ ಒಟ್ಟು ಬೇಡಿಕೆಯ ಐದನೇ ಒಂದು ಭಾಗ ಕೇವಲ ಬೆಂಗಳೂರು ನಗರದಿಂದಲೇ ಬರುತ್ತಿದೆ.
Excited to announce that Pronto, our instant house help platform, has just raised million in a new round led by Epiq Capital. Existing backers Glade Brook Capital Partners LLC, General Catalyst and Bain Capital Ventures (BCV) have doubled down.
— Anjali Sardana (@anjalisardana) March 3, 2026
Nine months ago we had one hub… pic.twitter.com/tMX53Nwsqf
ಏನಿದು ಪ್ರಾಂಟೊ (Pronto)? :
ಪ್ರಾಂಟೊ ಎನ್ನುವುದು ತರಬೇತಿ ಪಡೆದ ಮನೆಗೆಲಸದವರು ಮತ್ತು ಗ್ರಾಹಕರನ್ನು ಬೆಸೆಯುವ ಒಂದು ಡಿಜಿಟಲ್ ವೇದಿಕೆಯಾಗಿದೆ. ಬಳಕೆದಾರರು ಈ ಆ್ಯಪ್ ಮೂಲಕ ಕಸ ಗುಡಿಸುವುದು, ಪಾತ್ರೆ ತೊಳೆಯುವುದು, ಅಡುಗೆಮನೆ ಹಾಗೂ ಸ್ನಾನಗೃಹ ಸ್ವಚ್ಛತೆ, ಬಟ್ಟೆ ಒಗೆಯುವಂತಹ ದಿನನಿತ್ಯದ ಕೆಲಸಗಳಿಗೆ ತಕ್ಷಣವೇ ಸಹಾಯಕರನ್ನು ಬುಕ್ ಮಾಡಬಹುದು. ಪ್ರಸ್ತುತ ಬೆಂಗಳೂರು, ದೆಹಲಿ, ಮುಂಬೈ ಮತ್ತು ಚೆನ್ನೈ ಸೇರಿದಂತೆ ದೇಶದ 10ಕ್ಕೂ ಹೆಚ್ಚು ಪ್ರಮುಖ ನಗರಗಳಲ್ಲಿ ಈ ಸೇವೆ ಲಭ್ಯವಿದ್ದು, ನಗರವಾಸಿಗಳಿಗೆ ಇದು ವರದಾನವಾಗಿದೆ.
ಯಾರಿವರು ಅಂಜಲಿ ಸರ್ದಾನಾ?
ಪ್ರಾಂಟೊ ಕಂಪನಿಯ ಸ್ಥಾಪಕಿ ಮತ್ತು ಸಿಇಒ ಆಗಿರುವ 23 ವರ್ಷದ ಅಂಜಲಿ ಸರ್ದಾನಾ, 2024ರಲ್ಲಿ ಅಮೆರಿಕದ ಜಾರ್ಜ್‌ಟೌನ್ ವಿಶ್ವವಿದ್ಯಾಲಯದಿಂದ ಜೀವಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಈ ಮೊದಲು ಬೈನ್ ಕ್ಯಾಪಿಟಲ್‌ನಂತಹ ದೊಡ್ಡ ಸಂಸ್ಥೆಗಳಲ್ಲಿ ಹೂಡಿಕೆದಾರರಾಗಿ ಕೆಲಸ ಮಾಡಿದ ಅನುಭವ ಅವರಿಗಿದೆ. 2025ರ ಏಪ್ರಿಲ್‌ನಲ್ಲಿ ಅವರು 'ಪ್ರಾಂಟೊ' ಆರಂಭಿಸಿದರು. ಪ್ರಸ್ತುತ ಕಂಪನಿಯಲ್ಲಿ ಅಂಜಲಿ ಅವರು ಶೇ. 40 ರಷ್ಟು ಷೇರುಗಳನ್ನು ಹೊಂದಿದ್ದರೆ, ಗ್ಲೇಡ್ ಬ್ರೂಕ್ ಸಂಸ್ಥೆಯು ಶೇ. 15 ರಷ್ಟು ಪಾಲು ಹೊಂದಿದೆ. ಅತ್ಯಂತ ಕಡಿಮೆ ವಯಸ್ಸಿನಲ್ಲಿ ಅವರು ಮಾಡಿರುವ ಈ ಸಾಧನೆ ಇಂದು ಸಾವಿರಾರು ಯುವ ಉದ್ಯಮಿಗಳಿಗೆ ದೊಡ್ಡ ಸ್ಫೂರ್ತಿಯಾಗಿದೆ.












Click it and Unblock the Notifications