ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದಿರಾ ಗಾಂಧಿ ನಂಬಿಕಸ್ಥೆ ಮಾರ್ಗರೇಟ್ ಆಳ್ವ ರಾಜಕೀಯ ಜೀವನದ ಹಾದಿ

|
Google Oneindia Kannada News

ಕರ್ನಾಟಕದ ಅತ್ಯಂತ ಹಿರಿಯ ಕಾಂಗ್ರೆಸ್ಸಿಗರಲ್ಲಿ ಒಬ್ಬರೆನಿಸಿರುವ 80 ವರ್ಷದ ಮಾರ್ಗರೇಟ್ ಆಳ್ವ ಅವರು ಉಪರಾಷ್ಟ್ರಪತಿ ಸ್ಥಾನಕ್ಕೆ ವಿಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿದ್ದಾರೆ. ರಾಜಕೀಯ ಕುಟುಂಬ ಹಿನ್ನೆಲೆಯಿಂದ ಬಂದಿರುವ ಮಾರ್ಗರೇಟ್ ಆಳ್ವ ರಾಷ್ಟ್ರ ರಾಜಕೀಯದಲ್ಲಿ ಪ್ರಭಾವಿ ಮಹಿಳೆ ಎನಿಸಿದ್ದರು. ಇಂದಿರಾ ಗಾಂಧಿಯ ನಂಬಿಕಸ್ಥೆ ಮಹಿಳೆಯರಲ್ಲಿ ಒಬ್ಬರಾಗಿದ್ದವರು.

ಮಾರ್ಗರೇಟ್ ಆಳ್ವ ಸಂಸದೆ, ಕೇಂದ್ರ ಸಚಿವೆ, ರಾಜ್ಯಪಾಲೆಯಾಗಿ ವಿವಿಧ ಹಂತಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಎಐಸಿಸಿಯ ಜಂಟಿ ಕಾರ್ಯದರ್ಶಿಯಾಗಿಯೂ ಅವರು ಕೆಲಸ ಮಾಡಿದ್ದಾರೆ.

ಮಾರ್ಗರೇಟ್ ಆಳ್ವ ವಿರೋಧ ಪಕ್ಷಗಳ ಉಪ ರಾಷ್ಟ್ರಪತಿ ಅಭ್ಯರ್ಥಿಮಾರ್ಗರೇಟ್ ಆಳ್ವ ವಿರೋಧ ಪಕ್ಷಗಳ ಉಪ ರಾಷ್ಟ್ರಪತಿ ಅಭ್ಯರ್ಥಿ

ಮಾರ್ಗರೇಟ್ ಆಳ್ವ ಅಲ್ಪಸಂಖ್ಯಾತ ಕ್ರೈಸ್ತ ಸಮುದಾಯದವರು. 1942, ಏಪ್ರಿಲ್ 14ರಂದು ಮಂಗಳೂರಿನಲ್ಲಿ ಜನಿಸಿದರು. ಇವರ ಜನ್ಮ ಹೆಸರು ಮಾರ್ಗರೇಟ್ ನಜರೆತ್. ಓದಿದ್ದು ಬೆಂಗಳೂರಿನ ಮೌಂಟ್ ಕಾರ್ಮೆಟ್ ಕಾಲೇಜಿನಲ್ಲಿ. ಬೆಂಗಳೂರು ವಿವಿ ಕಾನೂನು ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಇವರ ಸಾಮಾಜಿಕ ಕೈಂಕರ್ಯಗಳಿಗೆ ವಕೀಲಿಕೆ ವೃತ್ತಿ ಪೂರಕವಾಗಿ ನಿಂತಿತು.

ಓದಿನ ದಿನಗಳಿಂದಲೂ ಸಾಮಾಜಿಕ ಚಟುವಟಿಕೆ ಮತ್ತು ಭಾಷಣಗಳಲ್ಲಿ ಅಪರಿಮಿತಿ ಆಸಕ್ತಿ ಮತ್ತು ಚಟುವಟಿಕೆ ಹೊಂದಿದ್ದ ಮಾರ್ಗರೇಟ್ ಆಳ್ವ ಕರುಣಾ ಎಂಬ ಎನ್‌ಜಿಒ ಸಂಸ್ಥೆ ಮೂಲಕ ಮಹಿಳೆ ಮತ್ತು ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳತ್ತ ಗಮನ ಕೊಡುತ್ತಿದ್ದವರು. ಮದುವೆ ಆದ ಬಳಿಕ ಇವರ ಜೀವನಕ್ಕೆ ಇನ್ನೊಂದು ದೊಡ್ಡ ತಿರುವು ಸಿಕ್ಕಿತು. ಇವರ ಸಾಮಾಜಿಕ ಕಾರ್ಯದ ಹಾದಿ ಹೆಚ್ಚು ವಿಸ್ತಾರಗೊಂಡಿತು.

ಮದುವೆ ಬಳಿಕ ರಾಜಕೀಯ ಪ್ರವೇಶ

ವಕೀಲಿಕೆ ಓದಿದ ಮಾರ್ಗರೇಟ್ ಆಳ್ವ ರಾಜಕೀಯಕ್ಕೆ ಬಂದದ್ದು ಮದುವೆ ಬಳಿಕ. ಇವರ ಪತಿ ನಿರಂಜನ್ ಆಳ್ವ ರಾಜಕೀಯ ಕುಟುಂಬಕ್ಕೆ ಸೇರಿದವರು. ನಿರಂಜನ್ ತಂದೆ ಜೋಚಿಮ್ ಆಳ್ವ ಮತ್ತು ತಾಯಿ ವಯಲೆಟ್ ಆಳ್ವ ಇಬ್ಬರೂ ಕಾಂಗ್ರೆಸ್ ಸಂಸದರಾಗಿದ್ದವರು. ವಯಲೆಟ್ ಆಳ್ವ ರಾಜ್ಯಸಭಾ ಸ್ಪೀಕರ್ ಕೂಡ ಆಗಿದ್ದರು. ಜೋಚಿಮ್ ಆಳ್ವ ಪ್ರಭಾವದಿಂದ 1969ರಲ್ಲಿ ಮಾರ್ಗರೆಟ್ ಆಳ್ವ ರಾಜಕೀಯ ಪ್ರವೇಶಿಸಿದರು.

ಮಾರ್ಗರೇಟ್ ಪತಿ ನಿರಂಜನ್ ಆಳ್ವ ಉದ್ಯಮಿಯೂ ಹೌದು. ರಫ್ತು ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದ ಮಾರ್ಗರೇಟ್ ಆಳ್ವ ಅವರು ಪೂರ್ಣ ರೀತಿಯಲ್ಲಿ ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿದೆ.

ಕಾಂಗ್ರೆಸ್ ಪಥ

ಕಾಂಗ್ರೆಸ್ ಪಥ

ಮಾರ್ಗರೇಟ್ ಆಳ್ವ ಪತಿಯ ಕುಟುಂಬದವರು ಅಪ್ಪಟ ಕಾಂಗ್ರೆಸ್ಸಿಗರಾಗಿದ್ದವರು. ಮಾರ್ಗರೇಟ್ ಕೂಡ ಸಹಜವಾಗಿ ಕಾಂಗ್ರೆಸ್ ಮೂಲಕ ರಾಜಕೀಯಕ್ಕೆ ಅಡಿ ಇಟ್ಟರು. 1969ರಿಂದಲೂ ಅದೇ ಪಕ್ಷಕ್ಕೆ ನಿಷ್ಠರಾಗಿ ಉಳಿದಿದ್ದಾರೆ. ಎಪ್ಪತ್ತರ ದಶಕದಲ್ಲಿ ಕಾಂಗ್ರೆಸ್ ಇಬ್ಭಾಗವಾದಾಗ ಇಂದಿರಾ ಗಾಂಧಿ ಬಣ ಸೇರಿದ್ದ ಮಾರ್ಗರೆಟ್ ಆಳ್ವ, ಕರ್ನಾಟಕದಲ್ಲಿ ಕಾಂಗ್ರೆಸ್ ಐ ಬೆಳೆಸಲು ಶ್ರಮಿಸಿದರು.

ತುರ್ತುಪರಿಸ್ಥಿತಿ ಇದ್ದ 1975-1977ರಲ್ಲಿ ಎಐಸಿಸಿಯ ಜಂಟಿ ಕಾರ್ಯದರ್ಶಿಯಾಗಿದ್ದರು. 1978-80ರವರೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಮಾರ್ಗರೇಟ್ ಆಳ್ವ ಕಾರ್ಯನಿರ್ವಹಿಸಿದರು. 2004-2009ರಲ್ಲಿ ಎಐಸಿಸಿಯಲ್ಲಿ ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು.

ಸಂಸದೆ ಮತ್ತು ಸಚಿವೆ

ಸಂಸದೆ ಮತ್ತು ಸಚಿವೆ

ಮಾರ್ಗರೇಟ್ ಆಳ್ವ ಐದು ಬಾರಿ ಸಂಸದೆಯಾಗಿದ್ದವರು. ನಾಲ್ಕು ಬಾರಿ ರಾಜ್ಯಸಭಾ ಸದಸ್ಯೆ ಮತ್ತು ಒಮ್ಮೆ ಲೋಕಸಭಾ ಸದಸ್ಯೆಯಾಗಿದ್ದರು. 1974, 1980, 1986 ಮತ್ತು 1992ರಲ್ಲಿ ರಾಜ್ಯಸಭಾ ಸದಸ್ಯೆಯಾಗಿದ್ದರು. 1999ರಲ್ಲಿ ಉತ್ತರ ಕನ್ನಡ ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಅನಂತಕುಮಾರ್ ಹೆಗಡೆಯನ್ನು ಸೋಲಿಸಿದರು. ಮುಂದಿನ ಚುನಾವಣೆಯಲ್ಲಿ ಹೆಗಡೆ ವಿರುದ್ಧ ಆಳ್ವ ಸೋಲನುಭವಿಸಿದರು.

ಉಪ ರಾಷ್ಟ್ರಪತಿ ಕಣದ ಎನ್‌ಡಿಎ ಅಭ್ಯರ್ಥಿ ಜಗದೀಪ್ ಧಂಖರ್ ಬದುಕಿನ ಹಾದಿಉಪ ರಾಷ್ಟ್ರಪತಿ ಕಣದ ಎನ್‌ಡಿಎ ಅಭ್ಯರ್ಥಿ ಜಗದೀಪ್ ಧಂಖರ್ ಬದುಕಿನ ಹಾದಿ

ರಾಜೀವ್ ಗಾಂಧಿ ನೇತೃತ್ವದ ಸರಕಾರದಲ್ಲಿ ಮಾರ್ಗರೇಟ್ ಆಳ್ವ ಸಂಸದೀಯ ವ್ಯವಹಾರ ಹಾಗೂ ಯುವಜನ ಕ್ರೀಡೆ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಖಾತೆಗಳ ರಾಜ್ಯ ಸಚಿವೆಯಾಗಿದ್ದರು.

ಹಲವು ಸಂಸದೀಯ ಸಮಿತಿಗಳ ಸದಸ್ಯೆಯಾಗಿ ಕೆಲಸ ಮಾಡಿದ್ದಾರೆ. ಮಾನವ ಸಂಪನ್ಮೂಲ ಖಾತೆಯಲ್ಲಿ ಮಹಿಳೆ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಅವರು ವಹಿಸಿದ ಶ್ರಮ ಮೆಚ್ಚುಗೆಗೆ ಪಾತ್ರವಾಗಿದೆ.

ನಾಲ್ಕು ಬಾರಿ ರಾಜ್ಯಪಾಲೆ

ನಾಲ್ಕು ಬಾರಿ ರಾಜ್ಯಪಾಲೆ

ಮಾರ್ಗರೇಟ್ ಆಳ್ವ ನಾಲ್ಕು ರಾಜ್ಯಗಳಿಗೆ ರಾಜ್ಯಪಾಲೆಯಾಗಿ ಕಾರ್ಯನಿರ್ವಹಿಸಿದ್ಧಾರೆ. 2009ರಲ್ಲಿ ಉತ್ತರಾಖಂಡ್, 2012ರಲ್ಲಿ ರಾಜಸ್ಥಾನ, 2014ರಲ್ಲಿ ಗುಜರಾತ್ ಮತ್ತು 2014ರಲ್ಲಿ ಗೋವಾ ರಾಜ್ಯಗಳ ಗವರ್ನರ್ ಆಗಿದ್ದರು. ಉತ್ತರಾಖಂಡ್ ರಾಜ್ಯಕ್ಕೆ ರಾಜ್ಯಪಾಲರಾದ ಮೊದಲ ಮಹಿಳೆ ಎಂಬ ದಾಖಲೆ ಅವರದ್ದಾಗಿದೆ.

ಇದೇ ವೇಳೆ, ಮಾರ್ಗರೇಟ್ ಆಳ್ವ 12 ವರ್ಷಗಳ ಹಿಂದೆ ಕರ್ನಾಟಕ ಕಾಂಗ್ರೆಸ್ ಪಕ್ಷದ ಕಾರ್ಯನಿರ್ವಹಣೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಕರ್ನಾಟಕದಲ್ಲಿ ಅರ್ಹರಿಗೆ ಟಿಕೆಟ್ ಕೊಡುತ್ತಿಲ್ಲ ಎಂದು ಅಲವತ್ತುಕೊಂಡಿದ್ದರು.

ಇನ್ನು, ಮಾರ್ಗರೇಟ್ ಆಳ್ವ ಆತ್ಮಚರಿತ್ರೆ ಬರೆಯುತ್ತಿದ್ದಾರೆಂಬ ಸುದ್ದಿ ಕೂಡ ಇದೆ. ಬಹುಶಃ ರಾಜಕೀಯದಿಂದ ಸಂಪೂರ್ಣವಾಗಿ ನೇಪಥ್ಯಕ್ಕೆ ಸರಿದ ಬಳಿಕ ಅವರ ಆತ್ಮಚರಿತ್ರೆ ಪ್ರಕಟಗೊಳ್ಳುವ ನಿರೀಕ್ಷೆ ಇದೆ.

(ಒನ್ಇಂಡಿಯಾ ಸುದ್ದಿ)

English summary
Mangalore born Margaret Alva has vast political experience in several decades. Started as lawyer she entered politics in 1969. She became MP, Central minister and governor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X