ಕಾಲದ ಅಳತೆ ಯಾವುದು? ಹರಿಕಥಾಮೃತಸಾರ ಓದಿ

By: ವಸಂತ ಕುಲಕರ್ಣಿ, ಸಿಂಗಪುರ
Subscribe to Oneindia Kannada

"ಕಾಲದ ಅತಿ ದೊಡ್ಡ ಮಾನ ಯಾವುದು ಅಪ್ಪಾ?" ಎಂದು ನನ್ನ ಮಗ ಕೇಳಿದ.

ನಾನು ಸ್ವಲ್ಪವೂ ವಿಚಾರ ಮಾಡದೇ "ಒಂದು Light Year (ಜ್ಯೋತಿರ್ವರ್ಷ) ಅಲ್ಲವೇ?" ಎಂದು ಕೇಳಿದೆ.

ಅವನು ತಟ್ಟನೇ "ಅಲ್ಲ, ಅದು ದೂರದ ಮಾನ, ಒಂದು ವರ್ಷದಲ್ಲಿ ಬೆಳಕು ಕ್ರಮಿಸುವ ದೂರ ಅದು." ಎಂದು ಹೇಳಿದ.

ಅದೆಷ್ಟೇ ಹಣ ಕೊಟ್ಟರೂ ಭಾರತ ಬಿಟ್ಟು ಹೋಗಲ್ಲ: ಪ್ರೊ ಸಿಎನ್ ಆರ್ ರಾವ್

"ಹೌದಲ್ಲ? ಹಾಗಾದರೆ ಕಾಲದ ಅತಿ ದೊಡ್ಡ ಮಾನ, ಒಂದು ವರ್ಷ ಅಲ್ಲಲ್ಲ, ಒಂದು ಮಿಲೇನಿಯಂ (1000 ವರ್ಷಗಳು) ಇರಬಹುದು ಅಲ್ಲವೇ?" ಎಂದೆ.

ಖಗೋಳ ವಿಜ್ಞಾನವನ್ನು ತನ್ನ ಐಚ್ಛಿಕ ವಿಷಯವಾಗಿ ಓದುತ್ತಿರುವ ಅವನು ಸ್ವಲ್ಪ ವಿಚಾರ ಮಾಡಿ "ಖಗೋಳದ ದೃಷ್ಟಿಯಿಂದ ಒಂದು Light Year ದೂರದ ದೊಡ್ಡ ಮಾನವಾದರೆ, ಕಾಲದ ಮಾನವಾಗಿ ಒಂದು ಮಿಲೇನಿಯಂ ಅತಿ ಚಿಕ್ಕದಾಗುವುದಿಲ್ಲವೇ?" ಎಂದು ಕೇಳಿದ. ಹೌದೆನಿಸಿತು.

ಇಬ್ಬರೂ ಕೂಡಿ ಅಂತರ್ಜಾಲದಲ್ಲಿ ಹುಡುಕಿದಾಗ ನಮಗೆ ಸಿಕ್ಕ ಮಾನಗಳೆಂದರೆ "Galactic year", "Aeon" ಮತ್ತು "Yotta second" ಮುಂತಾದವುಗಳು. ಒಂದು "Galactic year" ಎಂದರೆ ನಮ್ಮ ಸೌರವ್ಯೂಹ ಆಕಾಶಗಂಗೆಯನ್ನು ಒಂದು ಪ್ರರಿಭ್ರಮಣ ಮಾಡುವ ಸಮಯ. ಸುಮಾರು 230 ಮಿಲಿಯನ್ ವರ್ಷಗಳು!

"Aeon" ಎಂದರೆ ಒಂದು ಬಿಲಿಯನ್ ವರ್ಷಗಳು ಮತ್ತು ಒಂದು "Yotta second" ಎಂದರೆ 31.7 X 10‍15 ವರ್ಷಗಳು. ಬಾಹ್ಯಾಕಾಶದ ದೃಷ್ಟಿಕೋನದಿಂದ ಈ ಮಾನಗಳು ಸರಿ ಎನಿಸುತ್ತವೆ. ಅಲ್ಲದೇ ಅಂತರಿಕ್ಷದ ಪರಿಧಿಯ ಆಗಾಧತೆಯ ಕಿಂಚಿತ್ ಅರಿವು ಮೂಡಿಸಲು ಈ ಅಳತೆಗಳು ಸಹಾಯ ಮಾಡುತ್ತವೆ.

How is time measured?

ವಿಜ್ಞಾನ ಓದುವವರೇ ಆಗಲಿ, ತತ್ವಜ್ಞಾನ ಓದುವವರೇ ಆಗಲಿ ಅಥವಾ ಆಧ್ಯಾತ್ಮದ ಅನ್ವೇಷಕರೇ ಆಗಲಿ, ಅವರಲ್ಲಿ ಕಾಲದ ಬಗ್ಗೆ ಒಂದು ವಿಚಿತ್ರ ಕುತೂಹಲ ಇದ್ದೇ ಇರುತ್ತದೆ. ಶತಮಾನಗಳಿಂದ ಕಾಲ ಎಲ್ಲ ವಿಜ್ಞಾನಿಗಳ, ತತ್ವಜ್ಞಾನಿಗಳ ಮತ್ತು ಆಧ್ಯಾತ್ಮದ ಅಭ್ಯಾಸಿಗಳ ಮನಸ್ಸನ್ನು ತಟ್ಟಿ ಅವರ ಅಧ್ಯಯನದ ಆಕರ್ಷಣೆಯಾಗಿದೆ. ಪುರಾತನ ಗ್ರೀಕರು ಸಮಯ ಅನಂತವಾಗಿದ್ದು, ಅದಕ್ಕೆ ಆದಿಯೂ ಇಲ್ಲ ಮತ್ತು ಅಂತ್ಯವೂ ಇಲ್ಲ ಎಂದು ನಂಬಿದ್ದರು. ನಂತರದ ಗ್ರೀಕರಲ್ಲಿ ಕೆಲವರಿಗೆ ಕಾಲ ಒಂದು ಮಾಯೆಯಾಗಿ ಕಂಡರೆ ಮತ್ತೆ ಕೆಲವರಿಗೆ ಕಾಲ ಏಕಮುಖ ಪ್ರವಾಹದ ಒಂದು ನಿರಂತರ ಸತ್ಯವಾಗಿ ಕಂಡಿದೆ. ಆಧುನಿಕ ಭೌತ ವಿಜ್ಞಾನಿಗಳ ಪ್ರಕಾರ ಸಮಯ ಸೃಷ್ಟಿಯ ಆರಂಭವಾದ "Big Bang"ನೊಂದಿಗೆ ಆರಂಭವಾಯಿತು ಮತ್ತು ಬಹುಶಃ ಅದಕ್ಕೊಂದು ಅಂತ್ಯ ಕೂಡ ಇರಬೇಕು.

ಸ್ವಾತಂತ್ರ್ಯ ವೀರರು ಕಂಡ ಕನಸಿನ ಭಾರತ ಇದೇನಾ?

ನಾವು ಭಾರತೀಯರಿಗೆ ಕಾಲ ಒಂದು ಚಕ್ರವಾಗಿ ಕಂಡಿದೆ. ನಮಗೆಲ್ಲರಿಗೂ ತಿಳಿದಂತೆ ಕಾಲ ಸತ್ಯಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗಗಳೆಂಬ ಯುಗಗಳಲ್ಲಿ ವಿಭಜಿಸಲ್ಪಟ್ಟಿದೆ ಮತ್ತು ಕಲಿಯುಗದ ಅಂತ್ಯದಲ್ಲಿ ಪ್ರಳಯವಾಗಿ ಮತ್ತೆ ಸತ್ಯಯುಗದ ಆರಂಭವಾಗುತ್ತದೆ. ವೇದಗಳ ಪ್ರಕಾರ ಸತ್ಯಯುಗದ ಸಮಯ 1,728,000 ಮಾನವ ವರ್ಷಗಳು. ತ್ರೇತಾಯುಗದ ಸಮಯ 1,296,000 ಮಾನವ ವರ್ಷಗಳು. ದ್ವಾಪರಯುಗ 864,000 ಮಾನವ ವರ್ಷಗಳು. ಕಲಿಯುಗದ ಮಾನ ಇದರರ್ಧ ಎಂದರೆ 432,000 ಮಾನವ ವರ್ಷಗಳು.

ಮಾನವರ 360 ವರ್ಷಗಳೆಂದರೆ ದೇವತೆಗಳ ಒಂದು ವರ್ಷ. ಈ ನಾಲ್ಕು ಯುಗಗಳು ಸೇರಿದಾಗ ಒಂದು ಮಹಾಯುಗವಾಗುತ್ತದೆ. ನಮ್ಮ ಭಾರತದ ತತ್ವಜ್ಞಾನದ ಪ್ರಕಾರ, ಕಾಲದ ದೊಡ್ಡ ಅಳತೆಯೆಂದರೆ ಒಂದು ಬ್ರಹ್ಮ ಕಲ್ಪ. ಈ ಬ್ರಹ್ಮ ಕಲ್ಪವೆಂದರೆ ಬ್ರಹ್ಮನ ಒಂದು ಹಗಲು. ಈ ಹಗಲಿನಲ್ಲಿ ಒಂದು ಸಾವಿರ ಮಹಾಯುಗಗಳು. ಒಂದು ಮಹಾಯುಗವೆಂದರೆ 12000 ದೇವತಾ ವರ್ಷಗಳು ಅಥವಾ 432 ಕೋಟಿ ಮಾನವ ವರ್ಷಗಳು! ಒಂದು ಬಿಲಿಯನ್‍ ಎಂದರೆ ಸುಮಾರು ನೂರು ಕೋಟಿ. ಎಂದರೆ ನಾವು ಭಾರತೀಯರ ಒಂದು ಕಲ್ಪ ಎಂಬ ಮಾನದಲ್ಲಿ 4.32 "Aeon"ಗಳಿವೆ!

ಚಿಕ್ಕಂದಿನಲ್ಲಿ ನನ್ನ ತಾಯಿ ಜಗನ್ನಾಥದಾಸರ ಹರಿಕಥಾಮೃತಸಾರದಲ್ಲಿ ಬರುವ ಕಾಲದ ಲೆಕ್ಕವನ್ನು ಹೇಳುತ್ತಿದ್ದುದು ನನಗೆ ನೆನಪಿತ್ತು. ಅದೃಷ್ಟವಶಾತ್ ಈಗ ಅವರೂ ಸಿಂಗಪುರದಲ್ಲಿದ್ದಾರೆ. ಅವರಿಗೆ ಕೇಳಿದಾಗ ಅವರು ಅದರ 23ನೇ ಸಂಧಿಯಾದ ಕಲ್ಪಸಾಧನ ಸಂಧಿಯಲ್ಲಿ ಇದೇ ವಿಷಯವನ್ನು ಸವಿಸ್ತಾರವಾಗಿ ವರ್ಣಿಸಿದ್ದಾರೆ ಎಂದು ಹೇಳಿದರು. ಭಾಮಿನಿ ಷಟ್ಪದಿಯಲ್ಲಿರುವ ಹರಿಕಥಾಮೃತಸಾರದ ಕಲ್ಪಸಾಧನ ಸಂಧಿಯ 57ರಿಂದ 60ನೆಯ ನುಡಿಗಳು ಇಂತಿವೆ:

ಈ ದಿವಾರಾತ್ರಿಗಳೆರಡು ಹದಿ|
ನೈದು ಪಕ್ಷಗಳೆರಡು ಮಾಸಗ|
ಳಾದಪುವು ಮಾಸದ್ವಯವೆ ಋತು ಋತುತ್ರಯಗಳಯನ||
ಐದುವುವು ಅಯನದ್ವಯಾಬ್ದಕೃ
ತಾದಿಯುಗಗಳು ದೇವಮಾನದಿ|
ದ್ವಾದಶಸ್ಸಾಹಸ್ರ ವರುಷಗಳದನು ಪೇಳುವೆನು||

ಚತುರಸಾವಿರದೆಂಟುನೂರವು|
ಕೃತಯುಗಕೆ ತ್ರಿಸಹಸ್ರ ಸಲೆ ಷಟ್|
ಶತವು ತ್ರೇತೆಗೆ ದ್ವಾಪರಕೆ ದ್ವಿಸಹಸ್ರ ನಾನ್ನೂರು||
ದಿತಿಜಪತಿ ಕಲಿಯುಗಕೆ ಸಾವಿರ|
ಶತಗಳದ್ವಯಕೂಡಿ ಈ ದೇ|
ವತೆಗಳಿಗೆ ಹನ್ನೆರಡು ಸಾವಿರವಹವು ವರುಷಗಳು||

ಪ್ರಥಮಯುಗ ಕೇಳಧಿಕವರೆವಿಂ|
ಶತಿಸುಲಕ್ಷಾಷ್ಟೋತ್ತರಶತವಿಂ|
ಶತಿಸಹಸ್ರಮನುಷ್ಯ ಮಾನಾಬ್ದ ಗಳು ಷಣ್ಣವತಿ||
ಮಿತಸಹಸ್ರದ ಲಕ್ಷದ್ವಾದಶ|
ದ್ವಿತೀಯ ತೃತೀಯಕೆ ಎಂಟು ಲಕ್ಷದ|
ಚತುರಷಷ್ಠಿ ಸಹಸ್ರ ಕಲಿಗಿದರರ್ಧ ಚಿಂತಿಪುದು||

ಮೂರಧಿಕ ನಾಲ್ವತ್ತು ಲಕ್ಷದ|
ಲಾರುಮೂರೆರಡಧಿಕ ಸಾವಿರ|
ವೀರೆರಡು ಯುಗ ವರುಷ ಸಂಖ್ಯೆಯು ಗೈಯಲೆನಿತಿಹುದೊ||
ಸೂರಿಪೆಚ್ಚಿಸೆ ಸಾವಿರದ ನಾ
ನ್ನೂರು ಮೂವತ್ತೆರಡು ಕೋಟಿ ಸ|
ರೋರುಹಾಸಗಿದು ದಿವಸವೆಂಬರು ವಿಪಶ್ಚಿತರು||

ನಾನು ಮೇಲೆ ಚರ್ಚಿಸಿದ ವಿಷಯವನ್ನು ಮೂರು ಶತಮಾನಗಳ ಹಿಂದೆ ಜಗನ್ನಾಥದಾಸರು ಅತ್ಯಂತ ಸುಂದರವಾಗಿ ಕೇವಲ ನಾಲ್ಕು ನುಡಿಗಳಲ್ಲಿ ಸೆರೆಹಿಡಿದಿದ್ದಾರೆ. ಇದನ್ನು ಓದಿದ ಮೇಲೆ ಹರಿಕಥಾಮೃತಸಾರದಂತಹ ಗಹನ ಕೃತಿಗಳ ಗಂಭೀರ ಅಧ್ಯಯನ ಮಾಡಬೇಕು ಎಂದೆನಿಸಿತು. ಇಂತಹ ಕೃತಿಗಳನ್ನು ಅಲಕ್ಷಿಸಿ ನಾವು ಏನೇನು ಕಳೆದುಕೊಂಡಿದ್ದೇವೆಯೋ ಎಂದು ಭಾವನೆ ಮೂಡಿತು.

ಶ್ರೀಮದ್ ಭಗವದ್‍ಗೀತೆ ಸಹ ತನ್ನ 8ನೇ ಅಧ್ಯಾಯದ 17ನೇ ಶ್ಲೋಕದಲ್ಲಿ ಹೀಗೆ ಹೇಳುತ್ತದೆ:

ಸಹಸ್ರಯುಗಪರ್ಯಂತಂಹರ್ಯದ್ ಬ್ರಹ್ಮಣೋ ವಿದುಃ
ರಾತ್ರಿಂ ಯುಗಸಹಸ್ರಾಂತಾಂ ತೇ ಹೋರಾತ್ರ ವಿದೋ ಜನಃ||

ಇದರರ್ಥ ಬ್ರಹ್ಮನ ಒಂದು ದಿನ ಎಂದರೆ ನಾಲ್ಕು ಯುಗಗಳ ಒಂದು ಸಾವಿರ ಚಕ್ರಗಳು. ಬ್ರಹ್ಮನ ರಾತ್ರಿ ಕೂಡಾ ಇದೇ ಕಾಲಮಾನ. ಯಾರಿಗೆ ಈ ಕಾಲಮಾನದ ವಾಸ್ತವ ಅರ್ಥವಾಗುತ್ತದೋ ಅವರೇ ಕಾಲವನ್ನು ತಿಳಿದವರು. ನಿಜವಾಗಿಯೂ ಕಾಲದ ಮಹಿಮೆ ಆದಿ ಕಾಲದಿಂದ ಜನ ಕುತೂಹಲಕ್ಕೆ ಪಾತ್ರವಾಗಿದೆ.

ಇನ್ನೇನು ಹೇಳಲಿ? ಇಂದಿನ ವ್ಯೋಮಯುಗದಲ್ಲಿ ನಾವು ಉಪಯೋಗಿಸುತ್ತಿರುವ ಮಾನಗಳಿಗೆ ಸರಿಸಮಾನವಾದ ಮಾನಗಳು ನಮ್ಮ ಪುರಾತನ ಕೃತಿಗಳಲ್ಲಿದ್ದುದ್ದಕ್ಕೆ ಅಭಿಮಾನಪಡಲೋ ಅಥವಾ ಅವುಗಳನ್ನೆಲ್ಲಾ ಮರೆತು ಹೋಗಿ ಕಡೆಗಾಣಿಸುತ್ತಿರುವ ನಮ್ಮ ಬಗೆಯೇ ಜಿಗುಪ್ಸೆ ಪಡಲೋ? ನಮ್ಮ ಸುತ್ತಲಿನ ಪ್ರಕೃತಿಯ ಆಳಕ್ಕೆ ಮತ್ತು ಆಗಾಧತೆಗೆ ಮಾರುಹೋಗಿ ಅದರ ಅಲೌಕಕ ಅಭ್ಯಾಸದಲ್ಲಿ ಮಗ್ನಗೊಳ್ಳಲೋ ಅಥವಾ ನಾವು ನಿತ್ಯವೂ ಹೊಡೆದಾಡುತ್ತಿರುವ ಪೆದ್ದು ಮತ್ತು ಅವಿವೇಕದ ಲೌಕಿಕ ಸಮಸ್ಯೆಗಳಲ್ಲಿ ಮುಳುಗಿಹೋಗಲೋ? ಈ ದ್ವಂದ್ವದ ಪರಿಹಾರವನ್ನು ಕೂಡ ಕಾಲಕ್ಕೇ ಬಿಡಬೇಕು ಅಲ್ಲವೇ?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
How is time measured? Time is the indefinite continued progress of existence and events that occur in apparently irreversible succession from the past through the present to the future. An article on time measurement by Vasant Kulkarni.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ