ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಲತರಂಗದಿಂದ ಜಾಲತರಂಗಿಣಿಯವರೆಗೆ

By Staff
|
Google Oneindia Kannada News

Dr MS Nataraj
ಅದುವೆಕನ್ನಡ ಬಿಂದು ಕಾಮ್! ಈ ಮುದ್ದಾದ ಹೆಸರನ್ನು ದಟ್ಸ್ ಕನ್ನಡ ಅಂತರ್ಜಾಲ ತಾಣಕ್ಕೆ ದಯಪಾಲಿಸಿದ 'ಜಾಲತರಂಗ' ಅಂಕಣಕಾರರಾದ ಆತ್ಮೀಯ ಡಾ. ಮೈ.ಶ್ರೀ. ನಟರಾಜ್ ಅವರ ಅಕ್ಷರ ಕೊಡುಗೆಯನ್ನು ಅಕ್ಷರಗಳಲ್ಲಿ ಹಿಡಿದಿಡುವುದು ಸಾಧ್ಯವೇ ಇಲ್ಲ. ಸತತ ಆರು ವರ್ಷಗಳ ಕಾಲ ವೈವಿಧ್ಯಮಯ, ಚಿಂತನಶೀಲ ಬರಹಗಳ ಮುಖಾಂತರ ತಮ್ಮ ಅನುಭವಗಳನ್ನು ಓದುಗರೊಡನೆ ಹಂಚಿಕೊಂಡಿದ್ದಾರೆ ಮತ್ತು ದಟ್ಸ್ ಕನ್ನಡವನ್ನು ಶ್ರೀಮಂತಗೊಳಿಸಿದ್ದಾರೆ. ಈಗ ದಣಿದಮನಕ್ಕೆ ವಿಶ್ರಾಂತಿ ಬಯಸಿ ಅಂಕಣಬರಹಕ್ಕೆ ಬಿಡುವುತೆಗೆದುಕೊಳ್ಳುತ್ತಿದ್ದಾರೆ. ಮುಂದೆಯೂ ಅವರ ಬರವಣಿಗೆಯ ಪಯಣ ಮುಂದುವರಿಯಲಿ, ಸ್ಫೂರ್ತಿದಾಯಕವಾದ ಸಮೃದ್ಧ ಬರಹಗಳು ನಮಗೆ ದೊರೆಯಲಿ ಎಂಬ ಸ್ವಾರ್ಥದೊಂದಿಗೆ...

ಡಾ|| ಮೈ.ಶ್ರೀ. ನಟರಾಜ, ಪೊಟೋಮೆಕ್, ಮೇರೀಲ್ಯಾಂಡ್

ದಟ್ಸ್‌ಕನ್ನಡ.ಕಾಮ್' ಜಾಲತಾಣ ಪ್ರಾರಂಭವಾದಾಗಿನಿಂದಲೂ ಅಲ್ಲಿ ಪ್ರಕಟವಾಗುತ್ತಿದ್ದ ಅನೇಕ ಲೇಖನಗಳನ್ನು ಮೊದಲಿನಿಂದಲೂ ಓದುತ್ತಾ ಬಂದವರಲ್ಲಿ ನಾನೂ ಒಬ್ಬ. ಈ ತಾಣಕ್ಕೆ ಅದುವೆಕನ್ನಡ' ಎಂಬ ಹೆಸರನ್ನು ಕೊಟ್ಟವನೂ ನಾನೆ. ಅಷ್ಟೇ ಅಲ್ಲ, ಈ ಜಾಲಪತ್ರಿಕೆಯ ಕವನ-ಸಿಂಚನ' ಪ್ರಾರಂಭವಾದದ್ದು ನನ್ನ ಹ್ಯೂಸ್ಟನ್ ಹುಳೀ ಹೆಂಡ' ಎಂಬ ಕವನದಿಂದ. ಹೊಸ ಸಹಸ್ರಮಾನದ ಹ್ಯೂಸ್ಟನ್ ಕನ್ನಡ ಸಮ್ಮೇಳನದ ಕವಿಗೋಷ್ಠಿಯಲ್ಲಿ ನಾನು ಓದಿದ ಕವನ ಅದು. ಆನಂತರ, ಸುಮಾರು ಆರು ವರ್ಷಗಳಿಂದ ಆಗಿಂದಾಗ್ಗೆ ಅನಿಯತಕಾಲಿಕವಾಗಿ ಜಾಲತರಂಗ' ಎಂಬ ಶಿರೋನಾಮೆಯಲ್ಲಿ ಅಂಕಣ ಬರಹಗಳನ್ನು ಬರೆಯುತ್ತಲೇ ಬಂದಿದ್ದೇನೆ.

2003ರಿಂದ 2006ರವರೆಗೆ ಪ್ರಕಟವಾದ ಅಂಕಣ ಬರಹಗಳನ್ನು "ಜಾಲತರಂಗ" ಎಂಬ ಹೆಸರಿನಲ್ಲೇ ಪುಸ್ತಕರೂಪದಲ್ಲಿ ಪ್ರಕಟಿಸಿ ಈಗಾಗಲೇ ಹತ್ತಿರ ಹತ್ತಿರ ಮೂರು ವರ್ಷಗಳೇ ಸಂದಿವೆ. ಅದರನಂತರ ಬಂದ ಅಂಕಣ ಬರಹಗಳನ್ನು "ಜಾಲತರಂಗಿಣಿ" ಎಂಬ ಹೆಸರಿನಲ್ಲಿ ಈಗ ಮತ್ತೊಮ್ಮೆ ಪುಸ್ತಕರೂಪದಲ್ಲಿ ಪ್ರಕಟಿಸಲು ಹೊರಟಿದ್ದೇನೆ. ಬೆಂಗಳೂರಿನಲ್ಲಿರುವ ರವಿ ಕುಮಾರ್ ನಡೆಸುತ್ತಿರುವ ಅಭಿನವ' ಮತ್ತು ಲಾಸ್ ಏಂಜಲೀಸಿನ ಡಾ|| ನಾಗ ಐತಾಳರು ನಡೆಸುತ್ತಿರುವ ಸಾಹಿತ್ಯಾಂಜಲಿ' ಇವರಿಬ್ಬರ ಜಂಟಿ ಪ್ರಕಾಶನದಲ್ಲಿ ಈ ಪುಸ್ತಕ ಪ್ರಕಟವಾಗುತ್ತಿದೆ. ಈ ಪ್ರಕಾಶಕದ್ವಯ ಮಹನೀಯರಿಗೂ ನಾನು ಅತ್ಯಂತ ಋಣಿಯಾಗಿದ್ದೇನೆ. ಕನ್ನಡದ ಹೆಸರಾಂತ ವಿಮರ್ಶಕ ಡಾ|| ಸಿ.ಎನ್. ರಾಮಚಂದ್ರನ್ ಅವರು ನನ್ನ ಈ ಪುಸ್ತಕಕ್ಕೆ ಮುನ್ನುಡಿ ಬರೆದಿರುವುದು ಮತ್ತು ನನ್ನ ಹಿರಿಯ ಗೆಳೆಯ ಹಾಗೂ ಕನ್ನಡ ಸಾಹಿತ್ಯ ರಂಗದ ಅಧ್ಯಕ್ಷರೂ ಆದ ಡಾ|| ಎಚ್. ವೈ. ರಾಜಗೋಪಾಲ್ ಅವರು ಬೆನ್ನುಡಿಯನ್ನು ಬರೆದುಕೊಟ್ಟಿರುವುದು ನನಗೆ ತುಂಬಾ ಹರ್ಷವನ್ನುಂಟುಮಾಡಿದೆ. ಇದೆಲ್ಲಕ್ಕೂ ಕಳಶವಿಟ್ಟಂತೆ, ಮೇ 30-31, 2009ರ ದಿನಾಂಕಗಳಲ್ಲಿ ಮೇರೀಲ್ಯಾಂಡಿನ ರಾಕ್‌ವಿಲ್ ನಗರದಲ್ಲಿ, ಕಾವೇರಿ ಕನ್ನಡ ಸಂಘದ ಸಹಯೋಗದೊಂದಿಗೆ ನಡೆಯಲಿರುವ ಕನ್ನಡ ಸಾಹಿತ್ಯ ರಂಗದ ನಾಲ್ಕನೆಯ ವಸಂತ ಸಾಹಿತ್ಯೋತ್ಸವದ ಶುಭಸಂದರ್ಭದಂದು "ಜಾಲತರಂಗಿಣಿ" ಲೋಕಾರ್ಪಣೆಗೊಳ್ಳುತ್ತಿರುವುದು ನನ್ನ ಸಂತಸವನ್ನು ಇಮ್ಮಡಿಸಿದೆ.

ಈ ಸಂದರ್ಭದಲ್ಲಿ, ಈ ನನ್ನ ಅಂಕಣ ಬರಹದ ಸಾಧನೆಗೆ ಕ್ಷೇತ್ರವನ್ನೊದಗಿಸಿ ಅವಕಾಶ ಮತ್ತು ಉತ್ತೇಜನವನ್ನಿತ್ತ ದಟ್ಸ್‌ಕನ್ನಡದ ಸಂಪಾದಕರಾದ ಶಾಮಸುಂದರ್ ಅವರನ್ನು ಕೃತಜ್ಞತಾಪೂರ್ವಕವಾಗಿ ನೆನೆಸಿಕೊಳ್ಳುವುದು ನನ್ನ ಆದ್ಯಕರ್ತವ್ಯ. ಅವರ ಸಿಬ್ಬಂದಿ ವರ್ಗದ ಪ್ರಸಾದ್ ನಾಯಿಕ್ ಅವರಿಗೂ ನನ್ನ ಧನ್ಯವಾದಗಳು ಸಲ್ಲುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ, ಅದುವೆಕನ್ನಡದ ಓದುಗ ಮಹನೀಯರೂ ಮಹಿಳೆಯರೂ ನನ್ನಲ್ಲಿ ಕನ್ನಡ ಬರವಣಿಗೆ ಜೀವಂತವಾಗಿರುವಂತೆ ನೋಡಿಕೊಂಡಿದ್ದಾರೆ. ಉತ್ತಮ ಬರಹ ಪ್ರಕಟವಾದಾಗ ಭೇಷ್ ಎಂದು ಬೆನ್ನುತಟ್ಟಿ, ಲೇಖನ ಕಳೆಗುಂದಿದಾಗ ಬಡಿದೆಚ್ಚರಿಸಿ, ಸತಾರ್ಕಿಕ ವಾದಕ್ಕೆ ಮಣಿದು ತಲೆದೂಗಿ, ತಮಗೆ ಅಸಮರ್ಪಕವೆನಿಸಿದಾಗ ನಿರ್ದಾಕ್ಷಿಣ್ಯವಾಗಿ ಬರೆದು ತಿಳಿಸಿ, ಒಟ್ಟಿನಲ್ಲಿ ನನ್ನ ಚಿಂತನಶೀಲತೆಯನ್ನು ಯಾವಾಗಲೂ ಹರಿತವಾಗಿರುವಂತೆ ನೋಡಿಕೊಂಡಿದ್ದಾರೆ. ಅವರೆಲ್ಲರಿಗೂ ನನ್ನ ಹೃತ್ಪೂರ್ವಕ ನಮನಗಳು.

"ಜಾಲತರಂಗಿಣಿ"ಗೆ ಬರೆದ ಮುನ್ನುಡಿಯಲ್ಲಿ ರಾಮಚಂದ್ರನ್ ಅವರು ನನ್ನ ಅಂಕಣ ಬರಹದ ಬಗ್ಗೆ ತಮ್ಮ ಮೆಚ್ಚುಗೆಯನ್ನು ಈ ಮುಂದಿನ ಮಾತುಗಳಲ್ಲಿ ಬಣ್ಣಿಸಿದ್ದಾರೆ --"ಸಂಸ್ಕೃತ-ಕನ್ನಡ-ಇಂಗ್ಲೀಷ್ ಭಾಷೆಗಳಲ್ಲಿ ಪಾಂಡಿತ್ಯವನ್ನು ಹೊಂದಿರುವ, ಸಂಗೀತ-ಸಾಹಿತ್ಯಗಳಲ್ಲಿ ಆಸ್ಥೆಯನ್ನು ಉಳಿಸಿಕೊಂಡಿರುವ, ಲಲಿತ ಆದರೆ ಸತಾರ್ಕಿಕ ಶೈಲಿಯನ್ನು ಸಾಧಿಸಿಕೊಂಡಿರುವ, ಡಾ|| ನಟರಾಜ್ ಅವರ ಲೇಖನಗಳನ್ನು ಓದಿ, ಮತ್ತೊಮ್ಮೆ ಓದಿ, ನನಗೆ ಸಂತೋಷವಾಗಿದೆ ಮತ್ತು ನನ್ನ ಅರಿವು ಹೆಚ್ಚಿದೆ. ಇದೇ ಅನುಭವ ಇತರ ಓದುಗರಿಗೂ ಆಗುತ್ತದೆಂಬ ವಿಶ್ವಾಸ ನನಗಿದೆ." ಬೆನ್ನುಡಿ ಬರೆದ ರಾಜಗೋಪಾಲರು ಅತ್ಯಂತ ಅಭಿಮಾನದಿಂದ ಬೆನ್ನು ತಟ್ಟುತ್ತಾ ಈ ರೀತಿ ಉದ್ಗಾರವೆತ್ತಿದ್ದಾರೆ--"ನಟರಾಜರ ಅಂಕಣಗಳನ್ನು ಅವು ಬಂದಂತೆಯೇ ಓದಿದವರೂ ಕೂಡ ಈ ಸಂಗ್ರಹವನ್ನು ಬರಮಾಡಿಕೊಳ್ಳುವುದರಲ್ಲಿ ಸಂದೇಹವಿಲ್ಲ. ಇನ್ನು ಮೊದಲ ಬಾರಿಗೆ ಓದುತ್ತಿರುವವರಿಗಂತೂ ಇಲ್ಲಿ ಸುಗ್ಗಿಯೇ ಕಾದಿದೆ! ಇಲ್ಲಿನ ವಿಷಯವೈವಿಧ್ಯತೆ, ಅವರ ಸೋಗಿಲ್ಲದ ವಿಚಾರಸರಣಿ, ಅದನ್ನು ಹೊರಗೆಡಹುವ ಭಾಷಾ ಸಾಮರ್ಥ್ಯ ಮತ್ತು ಲಾಲಿತ್ಯ, ತಮ್ಮ ಅಭಿಪ್ರಾಯಗಳಿಗೆ ವಿರುದ್ಧ ಪ್ರತಿಕ್ರಿಯೆಗಳನ್ನೂ ಸಾವಧಾನದಿಂದ ಬರಮಾಡಿಕೊಳ್ಳುವ ಸಮಚಿತ್ತತೆ--ಇವೆಲ್ಲ ಈ ಅಂಕಣಗಳನ್ನು ಒಂದು ವಿಶಿಷ್ಟ ಶ್ರೇಣಿಗೆ ಸೇರಿಸುತ್ತವೆ. ಕನ್ನಡ ಸಾಹಿತ್ಯಕ್ಕೆ ಇದೊಂದು ಉತ್ತಮ ಕಾಣಿಕೆ."

ಈ ಎರಡೂ ಬದಿಯ ಪ್ರೀತಿಯ ಮಾತುಗಳು ನನಗೆ ಮೆತ್ತನೆಯ ಉಪಸ್ತರಣ ಮತ್ತು ಬೆಚ್ಚಗಿನ ಅಪಿಧಾನದಂತೆ ಆಗಿ ಅವೆರಡರ ನಡುವೆ ಒಂದಿಷ್ಟು ಸಮಯ ವಿರಮಿಸುವ ಮನಸ್ಸಾಗಿದೆ. ಮನಸ್ಸಿಗೂ ಬುದ್ಧಿಗೂ ಒಂದಿಷ್ಟು ವಿಶ್ರಾಂತಿ ಬೇಕು ಎನಿಸಿದೆ. ಹಾಗಾಗಿ, ಈ ಲೇಖನದೊಂದಿಗೆ, ನಾನು ಜಾಲತರಂಗ' ಎಂಬ ಶೀರ್ಷಿಕೆಯ ಅಂಕಣ ಮಾಲೆಗೆ ಮಂಗಳ ಹಾಡಬಯಸುತ್ತೇನೆ. ಹಾಗೆಂದ ಮಾತ್ರಕ್ಕೆ ಬರವಣಿಗೆಯನ್ನು ನಿಲ್ಲಿಸುತ್ತಿದ್ದೇನೆಂದಲ್ಲ, ಮನಸ್ಸಿಗೂ ಮಿದಿಳಿಗೂ ಒಂದಷ್ಟು ವಿರಾಮವನ್ನು ಬಯಸುತ್ತಿದ್ದೇನೆ ಎಂದಷ್ಟೇ ಅರ್ಥ. ನಡೆದ ಜಾಡಿನಲ್ಲೇ ನಡೆಯುತ್ತಿದ್ದರೆ ಹೊಸ ಮಾರ್ಗ ತೋಚದೇ ಹೋಗಬಹುದಲ್ಲವೇ? ಬರವಣಿಗೆಯ ಮುಂದಿನ ಮಾರ್ಗವನ್ನು ಕಂಡುಹಿಡಿದುಕೊಳ್ಳಲು ಸಿದ್ಧನಾಗುತ್ತಿದ್ದೇನೆ. ದೂರದ ಪಯಣಕ್ಕೆ ಕಾಲ್ನಡಿಗೆಯಲ್ಲಿ ಹೊರಟಾಗ, ಅಲ್ಲಲ್ಲಿ, ತಂಪಿರುವ ಸ್ಥಳದಲ್ಲಿ, ನೀರಿರುವ ಸ್ಥಳದಲ್ಲಿ, ಕುಳಿತೋ ಮಲಗಿಯೋ ಮುಂದೆ ಸಾಗುವಂತೆ, ಬರವಣಿಗೆಯ ಪಯಣದಲ್ಲೂ ಆಗುತ್ತಿರಬೇಕು. ಸ್ಫೂರ್ತಿಯನ್ನು ಪಡೆದುಕೊಳ್ಳಲು ಆಗಾಗ್ಗೆ ಒಂದಿಷ್ಟು ಹಿನ್ನೋಟವೂ ಬೇಕು ಎನ್ನಿಸಿತು. ಹಲವಾರು ಯೋಜನೆಗಳು ಮನಸ್ಸಿನಲ್ಲಿ ಮನೆಮಾಡಿವೆಯಾದರೂ, ಯಾವುದನ್ನು ಯಾವಾಗ ಕಾರ್ಯರೂಪಕ್ಕೆ ತರುವುದು ಸಾಧ್ಯವೋ ಹೇಳಲಾಗುವುದಿಲ್ಲ. ಆಗಿಂದಾಗ್ಗೆ ಬಿಡುವಾದಾಗ ಒಂದಿಲ್ಲ ಒಂದು ಕಾರಣದಿಂದ ಅದುವೆಕನ್ನಡದಲ್ಲಿ ನಾನು ಪ್ರತ್ಯಕ್ಷನಾಗುವುದು ಖಂಡಿತ! ಸಹೃದಯೀ ಓದುಗರ ಅಭಿಮಾನ ಏಕರೀತಿಯಾಗಿರಲಿ. ಮತ್ತೊಮ್ಮೆ ಭೇಟಿಯಾಗುವವರೆಗೂ ವಿರಮಿಸುವೆ ನಿಮ್ಮೆಲ್ಲರ ಪ್ರೀತಿಯ ನೆಳಲಿನಲಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X