ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅದೇ ದೋಸೆ ಅದೇ ಮಾಣಿ ಮತ್ತು ಅದೇ ಪ್ರಕಾಶ್ ರೈ!

By * ಮಣಿಕಾಂತ್
|
Google Oneindia Kannada News

Manikanth with actor Prakash Rai
ಕಳೆದ ಭಾನುವಾರ-ಅಂದರೆ, ಏಪ್ರಿಲ್ 26ರಂದು ಯಾವುದೇ ಹೊಸ ಚಿತ್ರದ ಶೂಟಿಂಗ್ ಇರಲಿಲ್ಲ. ಮುಹೂರ್ತವಿರಲಿಲ್ಲ. ನಟ-ನಟಿಯ ಮದುವೆಯೂ ಇರಲಿಲ್ಲ. ಇದ್ದದ್ದು ಅಮ್ಮ ಹೇಳಿದ ಎಂಟು ಸುಳ್ಳುಗಳು' ಪುಸ್ತಕದ ಬಿಡುಗಡೆ ಸಮಾರಂಭ. ಅದೊಂದೇ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಬರುತ್ತೇನೆ; ಅದೂ ಏನು? ಚೆನ್ನೈನಿಂದ ಹೊರಡುವ ಮೊದಲ ವಿಮಾನ ಹತ್ತಿ, ಏರ್‌ಪೋರ್ಟ್‌ನಿಂದ ಸೀದಾ ಸಮಾರಂಭ ನಡೆವ ರವೀಂದ್ರ ಕಲಾಕ್ಷೇತ್ರಕ್ಕೇ ಬರುತ್ತೇನೆ' ಅಂದಿದ್ದರು ನಟ ಪ್ರಕಾಶ್ ರೈ.

ದಿನಕ್ಕೆ ನಾಲ್ಕು ಶೆಡ್ಯೂಲ್‌ಗಳಲ್ಲಿ ದುಡಿಯುವ ಪ್ರಕಾಶ್ ರೈ ಅವರಂಥ ಬಿಜಿ ನಟ ಆಫ್ಟರಾಲ್ ಒಂದು ಪುಸ್ತಕ ಬಿಡುಗಡೆಯ ಕಾರಣಕ್ಕೇ ಬೆಂಗಳೂರಿಗೆ ಬರುತ್ತಾರೆಂಬ ನಿರೀಕ್ಷೆ ಯಾರಿಗೂ ಇರಲಿಲ್ಲ. ಅವರು ಬರುವುದಿಲ್ಲ ಎಂಬ ನಂಬಿಕೆ ಎಲ್ಲರಿಗೂ ಇತ್ತು. ಆದರೆ, ಎಲ್ಲ ನಿರೀಕ್ಷೆಗಳನ್ನು ಸುಳ್ಳು ಮಾಡಿದ ಪ್ರಕಾಶ್ ರೈ ಬೆಳ್ಳಂಬೆಳಗ್ಗೆ 9.40ಕ್ಕೇ ರವೀಂದ್ರ ಕಲಾಕ್ಷೇತ್ರದ ಅಂಗಳಕ್ಕೆ ಬಂದೇ ಬಿಟ್ಟರು! ಕಾರ್ಯಕ್ರಮವಿರುವುದು ಹನ್ನೊಂದು ಗಂಟೆಗೆ ಎಂದು ತಿಳಿದಾಗ ಅಲ್ಲಿನ ಕ್ಯಾಂಟೀನ್ ಕಟ್ಟೆಯ ಮೇಲೆ ಥೇಟ್ ಕಾಲೇಜು ಹುಡುಗನ ಥರಾ ಕೂತುಕೊಂಡರು.

ಹದಿನೈದು ವರ್ಷದ ಹಿಂದೆ, ಇದೇ ಜಾಗದಲ್ಲಿ ಕೂತಿರುತ್ತಿದ್ದೆ. ಆಗ ಜೇಬಲ್ಲಿ ಕಾಸಿರುತ್ತಿರಲಿಲ್ಲ' ಎಂಬುದನ್ನೆಲ್ಲ ನೆನಪು ಮಾಡಿಕೊಳ್ಳುವ ವೇಳೆಗೇ ಅವರ ಹಳೆಯ ಗೆಳೆಯರ ಹಿಂಡು ಬಂದೇ ಬಂತು. ಹಾಗೆ ಬಂದವರೆಲ್ಲ ಪದೇ ಪದೆ ಕಣ್ಣುಜ್ಜಿಕೊಂಡು ತನ್ನನ್ನೇ ಬೆರಗಿನಿಂದ ನೋಡುವುದನ್ನು ಕಂಡ ಪ್ರಕಾಶ್ ರೈ ತುಂಟತನದಿಂದ ಹೇಳಿದರು: ತಡವಾಗಿ ಬಂದ್ರೆ ಕಲಾಕ್ಷೇತ್ರದಲ್ಲಿ ಜಾಗ ಸಿಗಲ್ಲ ಅನ್ನಿಸ್ತು. ಅದಕ್ಕೇ ಬೇಗ ಬಂದುಬಿಟ್ಟೆ...'

***
ಹದಿನೈದು ವರ್ಷಗಳ ಹಿಂದೆ ಕಲಾಕ್ಷೇತ್ರಕ್ಕೇ ಅಪರಿಚಿತ'ರಾಗಿದ್ದರಲ್ಲ ರೈ? ಆಗಲೂ ಇವರ ಸವಾರಿ ಟೌನ್‌ಹಾಲ್ ಸಮೀಪದ ಕಾಮತ್ ಹೋಟೆಲ್‌ಗೆ ಹೋಗುತ್ತಿತ್ತು. ಜತೆಗೆ ಗೆಳೆಯರಿರುತ್ತಿದ್ದರು. ಹಾಗೆ ಹೋದವರು, ಒಂದು ಮೂಲೆ ಟೇಬಲ್‌ನಲ್ಲಿ ಕೂತು ಸಿಗರೇಟು ಹಚ್ಚುತ್ತಿದ್ದರು. ಆ ಟೇಬಲ್‌ಗೆ ಸರ್ವ್ ಮಾಡುತ್ತಿದ್ದ ಮಾಣಿಗೆ, ರೈ ಸಾಹೇಬರ ಮೇಲೆ ಅದೇನೋ ಅಕ್ಕರೆ, ಪ್ರೀತಿ, ಮಮಕಾರ. ಇವರ ಪಟ್ಟಾಂಗವೆಲ್ಲ ಮುಗಿದ ನಂತರ ಆತ ಬೈಟು ಕಾಫಿ ತಂದಿಡುತ್ತಿದ್ದ.

ಮೊನ್ನೆ ಕಲಾಕ್ಷೇತ್ರದ ಎದುರು ಕೂತಾಗ ಕಾಮತ್ ಹೋಟೆಲಿನ ತಿಂಡಿ ನೆನಪಾಯಿತು. ತಕ್ಷಣವೇ ಹಳೆಯ ಗೆಳತಿಯ ಮನೆ ಹುಡುಕುವ ಹುಡುಗನಂತೆ ಪ್ರಕಾಶ್ ರೈ ಸಾಹೇಬರು, ಗೆಳೆಯ ಬಿ. ಸುರೇಶ್‌ರನ್ನೂ ಜತೆಗಿಟ್ಟುಕೊಂಡು ಕಾಮತ್ ಹೋಟೆಲ್‌ಗೆ ಹೋಗಿಯೇಬಿಟ್ಟರು. ಅದೇ ಹಳೆಯ ಟೇಬಲ್‌ನ ಮೂಲೆಯಲ್ಲಿ ಕೂತು ಮಸಾಲೆ ದೋಸೆಗೆ ಆರ್ಡರ್ ಮಾಡಿದರು. ನಂತರ ಸಹಜ ಕುತೂಹಲದಿಂದ, ತನ್ನ ಗೆಳೆಯನಂತಿದ್ದ ಹಳೆಯ ಮಾಣಿಯ ಬಗ್ಗೆ ವಿಚಾರಿಸಿದರು. ಆತ ಈಗಲೂ ಇಲ್ಲೇ ಇದ್ದರೆ, ಸ್ವಲ್ಪ ಕರೀತೀರಾ? ನಾನು ನೋಡ್ಬೇಕು' ಎಂದೂ ಕೇಳಿಕೊಂಡರು.

ಆ ಮಾಣಿ ಬೆರಗಿನಿಂದ ಬಂದವನೇ- ಓ ಪ್ರಕಾಶ್ ರೈ ಸಾರ್... ನೀವು ಈಗಲೂ ಹಾಗೇ ಇದೀರ. ಏನೇನೂ ಬದಲಾಗಿಲ್ಲ ನೋಡಿ, ಸ್ವಲ್ಪ ದಪ್ಪ ಆಗಿದೀರ ಅಷ್ಟೆ, ಅಂದ!'

ಹೌದಪ್ಪಾ ಹೌದು. ನಾನೂ ಹಾಗೇ ಇದೀನಿ. ನೀನೂ ಹಾಗೇ ಇದೀಯ. ನಾನು ಮೊದಲು ಕೂರ್‍ತಾ ಇದ್ದೆನಲ್ಲ? ಅದೇ ಜಾಗದಲ್ಲಿ ಈಗಲೂ ಕೂತಿದ್ದೀನಿ. ಎಲ್ಲಿ, ಬೇಗ ಮಸಾಲೆ ದೋಸೆ ಕೊಡು. ಹಸಿವಾಗ್ತಿದೆ' ಅಂದರು ರೈ.

ತಕ್ಷಣವೇ ಕರೆಕ್ಷನ್ ಹಾಕಿದ ಆತ- ದೋಸೆ ತಂದುಕೊಡ್ತೇನೆ. ಆದ್ರೆ ನೀವು ಟೇಬಲ್‌ನ ಈ ಕಡೆ ಕೂರ್‍ತಾ ಇರಲಿಲ್ಲ. ಆ ಕಡೆ ಕೂರ್‍ತಾ ಇದ್ರಿ' ಅಂದನಂತೆ! ತಕ್ಷಣವೇ ಆತ ತೋರಿಸಿದ ಜಾಗಕ್ಕೇ ಹೋಗಿ ಕೂತ ರೈ, ಪಟ್ಟಾಗಿ ಎರಡು ಮಸಾಲೆ ದೋಸೆ ಬಾರಿಸಿದರಂತೆ...

***
ಏಪ್ರಿಲ್ 26ರ ಸಂಜೆ ಇದಿಷ್ಟನ್ನೂ ಖುಷಿಯಿಂದ ಹೇಳಿಕೊಂಡರು ಪ್ರಕಾಶ್ ರೈ. ಅವರ ಕಂಗಳಲ್ಲಿ ಹಸುಳೆಗೆ ಆಗುವಂಥ ಆನಂದವಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X