• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸುಗ್ಗಿ ಬರೆ, ಹಿಗ್ಗಿ ತಿರೆ, ಸಗ್ಗ ಸುಖವ ತರುತಿದೆ, ಬಂದ ವಸಂತ...

By * ಎಸ್‌.ಕೆ.ಹರಿಹರೇಶ್ವರ, ಮೈಸೂರು
|

ಒಂದು ವರ್ಷದ ಕಾಲಾವಧಿಯನ್ನು ಆರು ಭಾಗಗಳನ್ನಾಗಿ ಮಾಡಿ, ವಸಂತ, ಗ್ರೀಷ್ಮ, ವರ್ಷ, ಶರತ್‌, ಹೇಮಂತ ಮತ್ತು ಶಿಶಿರ- ಹೀಗೆ ಆರು ಋತುಗಳನ್ನಾಗಿ ವಿಂಗಡಿಸುವುದು ವಾಡಿಕೆ. ಚೈತ್ರ ಮತ್ತು ವೈಶಾಖ ಮಾಸಗಳು ಸೇರಿ ವಸಂತ ಋತು. ಸುಮಾರಾಗಿ ಮಾರ್ಚ್‌-ಏಪ್ರಿಲ್‌ನಲ್ಲಿ ಪ್ರಾರಂಭವಾಗಿ ಮೇ-ಜೂನ್‌ವರೆಗೆ ಈ ಋತು ವಿಜೃಂಭಿಸುವುದು ಸಾಮಾನ್ಯ.

ಕನ್ನಡ ನಾಡಿನಲ್ಲಿ , ಭಾರತದ ಹಲವಾರು ಕಡೆ ವಸಂತ ಉತ್ಸವ ನಡೆಸುವುದು ಸಂಪ್ರದಾಯ. ಸ್ನೇಹಿತರು, ಬಂಧುಗಳು, ನೆಂಟರು ಇಷ್ಟರು ಎಲ್ಲ ಒಂದೆಡೆ ಸೇರಿ, ಸಂತೋಷವಾಗಿ, ಹಾಡು, ಹಸೆ, ನೃತ್ಯ, ನಾಟಕ, ಆಟ- ಹೀಗೆ ಬೇರೆ ಬೇರೆ ರೀತಿಗಳಲ್ಲಿ ದಿನ ಕಳೆಯುವುದೇ ಈ ಸುಗ್ಗಿ ಹಬ್ಬದ ವೈಶಿಷ್ಟ್ಯ.

ಋತುಗಳಲ್ಲೆಲ್ಲಾ ಕವಿ ಜನಗಳಿಗೆ ತುಂಬಾ ಹೃದಯ ಆಕರ್ಷಕ ಆಗಿರೋದು ವಸಂತ ಋತು. ನಮ್ಮ ನಾಡಿನ ತತ್ರಾಪಿ ಕನ್ನಡದ ಎಲ್ಲ ಕವಿಗಳೂ ವಸಂತವನ್ನ ಒಂದಲ್ಲಾ ಒಂದು ರೀತಿ ಬಣ್ಣಿಸದೇ ಇಲ್ಲ.

ಪ್ರಕೃತಿಯಲ್ಲಿ ಆಗುವ, ಹಟಾತ್ತನೆ ಆಗುವ ಬದಲಾವಣೆ ; ಅದರಿಂದ ಜನಗಳ ಮೇಲೆ, ಹಕ್ಕಿ- ಪ್ರಾಣಿಗಳ ಮೇಲೆ ಆಗುವ ಪರಿಣಾಮ, ರಮ್ಯ ಜೀವನದ ಸೂಕ್ಷ್ಮ ಅಂಶಗಳನ್ನ ಗುರುತಿಸೋದು- ಇವನ್ನೆಲ್ಲ ನಮ್ಮ ಕವಿಗಳು ಈ ಮಧುಮಾಸದ ವರ್ಣನೆಯಲ್ಲಿ ತುಂಬಿದ್ದಾರೆ.

‘ಸರ್ವಂ, ಪ್ರಿಯೇ, ಚಾರುತರಂ ವಸನ್ರೇ’- ಎನ್ನುತ್ತಾನೆ ಕಾಳಿದಾಸ. ಅವನೇ ಎಲ್ಲ ಋತುಗಳ ವರ್ಣನೆಯನ್ನ ಒಂದೆಡೆ ಕಲೆಹಾಕುವ ಪ್ರಯತ್ನದ ತನ್ನ ಮೊದಲ ಕೃತಿಯಲ್ಲಿ ,

‘ದ್ರುಮಾಃ ಸಪುಷ್ಪಾಃ ಸಲಿಲಂ ಸಪದ್ಮಂ,

ಸ್ತ್ರಿಯಃ ಸಕಾಮಃ, ಪವನಃ ಸುಗನ್ಧಿಃ,

ಸುಖಾಃ ಪ್ರದೋಷಾ, ದಿವಸಾಶ್ಚ ರಮ್ಯಾಃ,

ಸರ್ವಂ, ಪ್ರಿಯೇ ಚಾರುತರಂ ವಸನ್ತೇ’

(ಋತು ಸಂಹಾರ 6,2)

‘ಮರಗಳೆಲ್ಲ ಹೂಗಳಿಂದ ತುಂಬಿವೆ; ಜಲಾಶಯಗಳೆಲ್ಲ ಪದ್ಮಗಳಿಂದ ತುಂಬಿವೆ. ಸ್ತ್ರೀಯರು ಸಕಾಮಿಗಳಾಗಿದ್ದಾರೆ. ಗಾಳಿಯು ಸುಗಂಧಪೂರಿತವಾಗಿದೆ. ಮುಂಜಾನೆ ಸುಖಕರವಾಗಿದೆ. ದಿವಸಗಳು ರಮ್ಯವಾಗಿವೆ.- ಪ್ರಿಯೇ ವಸಂತ ಋತುವಿನಲ್ಲಿ ಎಲ್ಲವೂ ಮನೋಹರ! ’

‘ವಸನ್ತೇ ಪುಷ್ಪಸಮಯಃ ಸುರಭಿಃ’ ಎನ್ನುತ್ತದೆ, ಅಮರ (ಅಮರಕೋಶ 1.147) ಈ ಸುಗ್ಗಿಯ ಕಾಲಕ್ಕೆ. ಮರಗಿಡಗಳು ಚಿಗುರುವ, ಹೂಬಿಡುವ, ಹಸಿರುಡುವ ಕಾಲಾವಧಿಗೆ.

ತಮ್ಮ ಕಾವ್ಯದಲ್ಲಿ ವಸಂತ ಬಂದಿತೆಂದರೆ, ಕವಿಗಳಿಗೆ ಸುಗ್ಗಿಯೋ ಸುಗ್ಗಿ! ಮಾವು, ಮಲ್ಲಿಗೆ, ಬೆಳದಿಂಗಳು, ಕೋಗಿಲೆ, ಬಗೆ ಬಗೆಯ ಹೂವುಗಳು, ದುಂಬಿ, ಹಂಸ- ಎಲ್ಲವನ್ನೂ ಯಥೇಷ್ಟ ಕರೆತರುತ್ತಾರೆ! ಚಮತ್ಕಾರವಾಗಿ ಚಿತ್ರಿಸುತ್ತಾರೆ, ಕನ್ನಡದ ಕವಿಗಳು.

ಕುಮಾರವ್ಯಾಸ ಏನು ಹೇಳುತ್ತಾನೆ ಕೇಳಿ :

‘ಪಸರಿಸಿತು ಮಧುಮಾಸ।

ತಾವರೆ ಎಸಳ ದೋಣಿಯ ಮೇಲೆ ಹಾಯ್ದವು,

ಕುಸುಮ ರಸದ ಉಬ್ಬುರದ,

ತೆರೆಯನು ಕೂಡ- ದುಂಬಿಗಳು।

ಒಸರುವ ಮಕರಂದದ, ತುಷಾರದ ಕೆಸರೊಳು,

ಅದ್ದುವು ಕೊಂಬೆಗಳು।

ಹಗಲೆಸೆವ ದಂಪತಿವಕ್ಕಿ, ಸಾರಸ ರಾಜಹಂಸಗಳು’.

(ಕರ್ನಾಟಕ ಭಾರತ ಕಥಾಮಂಡರಿ, ಆದಿಪರ್ವ 6-9)

ಈಗ ಹೂವಿನ ಕಂಪು ಒಂದು ನದಿಯಾಗಿದೆ, ಈ ಕುಸುಮ ರಸದ ಉಬ್ಬುರದ ತೊರೆಯನ್ನ , ಹೊನಲನ್ನ , ದುಂಬಿಗಳು ಹೇಗೆ ದಾಟುತ್ತಿವೆ? ತಾವರೆ ಎಸಳ ದೋಣಿ ಮಾಡಿಕೊಂಡು! ಹೂವಿನಿಂದ ಒಸರುವ ಮಕರಂದದಿಂದ ನದಿಯೆಲ್ಲ ಕೆಸರಾಗಿಬಿಟ್ಟಿದೆ. ದಂಪತಿ ವಕ್ಕಿಗಳು- ಎನ್ನುತ್ತಾರಲ್ಲ ಆ ಕ್ರೌಂಚ ಸಾರಸ ಪಕ್ಷಿಗಳು ಈ ಕೆಸರಲ್ಲಿ ಏಳುತ್ತಾ ಇವೆ- ಎನ್ನುತ್ತಾನೆ ನಮ್ಮ ಗದುಗಿನ ನಾರಣಪ್ಪ .

ಅಷ್ಟೆಲ್ಲ ಕವಿ ಸಮಯದ ಅತಿ ಉಪಯೋಗ ಬೇಡ, ಎನ್ನುತ್ತಾ , ‘ರಾಮಾಯಣ ದರ್ಶನ’ ದಲ್ಲಿ ಕುವೆಂಪು ಚಿಕ್ಕದಾಗಿ, ಚೊಕ್ಕದಾಗಿ ಹೇಳುತ್ತಾರೆ:

‘ಟುವ್ವಿ ಮಾಗಿಗೆ ಟುವ್ವಿ

ಸುವ್ವಿ ಸುಗ್ಗಿಗೆ ಸುವ್ವಿ’

(ರಾಮಾಯಣ ದರ್ಶನಂ 2-1)

‘ಮಾಗಿ ಹೋಗಿ, ಮೈದೋರಿದುದು

ಹಕ್ಕಿ- ಹೂಗಳ ಸುಗ್ಗಿ, ಹಿಗ್ಗಿ’

- ಎನ್ನುತ್ತಾರೆ, ‘ಸುಗ್ಗಿ ಬರೆ, ಹಿಗ್ಗಿ ತಿರೆ, ಸಗ್ಗ ಸುಖವ ತರುತಿದೆ’- ಎನ್ನುವುದು (ಅಂದರೆ, ಸುಗ್ಗಿ ಬರಲು, ಭೂಮಿ ಹಿಗ್ಗಿ ಹೋಗಿದೆ. ಇಲ್ಲಿಯೇ ಸ್ವರ್ಗದ ಆನಂದ ಕಾಣುವಂತೆ ಆಗಿದೆ!) ಎಷ್ಟು ಅರ್ಥಪೂರ್ಣ ಅಲ್ಲವೆ? ಇಷ್ಟೇ ಅರ್ಥವ್ಯಾಪ್ತಿಯನ್ನು ಕಾಣುತ್ತೇವೆ, ‘ವಸಂತನೊಬ್ಬನ ಸಹಾಯ ಸಾಕು, ಪಿನಾಕಪಾಣಿಯನ್ನೂ ಗೆದ್ದೇನು’ (‘ಸಹಾಯಂ ಏಕಂ ಮಧುಂ ಏವ ಲಬ್ಧ್ವಾ, ಕುರ್ಯಾಂ ಹರಸ್ಯಾಪಿ ಪಿನಾಕಪಾಣೇ: ಧೈರ್ಯಚ್ಯುತಿಮ್‌!’ ಎಂಬ ಕಾಳಿದಾಸನ ಮನ್ಮಥನ ಮಾತಿಗೆ (ಕುಮಾರಸಂಭವ 3.10)

ಮಾವಿನ ಮರಕ್ಕೆ ಭಾರತೀಯರು ಬೇರೆ ಯಾವ ಕಾರಣಕ್ಕೇ ಪ್ರಾಶಸ್ತ್ಯ ಕೊಟ್ಟಿರಲಿ, ಕವಿಗಳಿಗಂತೂ ವಸಂತ ವರ್ಣನೆಯಲ್ಲಿ ಮಾವಿನ ಮರ ವರ್ಣಿಸದಿದ್ದರೆ ತೃಪ್ತಿಯಿಲ್ಲ .

‘ಮತ್ತ- ದ್ವಿರೇಫ-ಪರಿಚುಂಬಿತ ಚಾರುಪುಷ್ಪಾ,

ಮಂದಾನಿಲ-ಆಕುಲಿತ-ನಮ್ರ ಮೃದು ಪ್ರವಾಲಾಃ’

(ಋತು ಸಂಹಾರ, 6.17)

ಹೂವುಗಳ ಮಕರಂದ ಕುಡಿದು ಮತ್ತರಾದ ದುಂಬಿಗಳು ಹೂಗಳನ್ನೇ ಮತ್ತೆ ಮತ್ತೆ ಮುತ್ತಿಡುತ್ತಿವೆ ; ಮಂದ ಮಂದವಾಗಿ ಬೀಸುವ ಗಾಳಿ ನವಿರಾದ ಚಿಗುರುಗಳನ್ನ ನೃತ್ಯವಾಡಿಸುತ್ತಿದೆ- ಎನ್ನುತ್ತಾನೆ, ಕಾಳಿದಾಸ.

ಕನ್ನಡದ ಆದಿಕವಿ ಪಂಪ. ‘ಮತ್ತೆ ಹುಟ್ಟಿದರೆ, ಕನ್ನಡ ನಾಡಿನಲ್ಲಿಯೇ, ಬನವಾಸಿಯಲ್ಲಿಯೇ ಹುಟ್ಟಬೇಕು’ - ಎನ್ನುವ ಇವನಿಗೆ ಇನ್ನೊಂದು ಹುಚ್ಚು - ಮಾವಿನ ಮರ.

(ಎಲೈ ಮಾವಿನ ಮರವೇ),

ತಳಿರೋಳ್‌ ನೀನೇ ಬೆಡಂಗನಯ್‌ (ಸೊಗಸುಗಾರನು),

ನನೆಗಳೋಳ್‌ ನೀಂ ನೀರನೈ,

(ಮೊಗ್ಗುಗಳಲ್ಲಿ ನೀನೇ ಕಾಂತಿಯುಳ್ಳವನು)

ಪುಷ್ಪ ಸಕುಂಳದೊಳ್‌ (ಹೂವುಗಳ ಗುಂಪಿನಲ್ಲಿ )

ನೀನೇ ವಿಲಾಸಿಯೈ,

ಮಿಡಿಗಳೊಳ್‌ (ಚಿಕ್ಕ ಪುಟಾಣಿ ಕಾಯಿಯಿದ್ದಾಗಲೂ),

ನೀ ಚೆಲ್ವನೈ ;

ಪಣ್ತ (ಅಂದರೆ ಹಣ್ಣಾದ)

ಪಣ್ಗಳಿನೋವೋ (ಹಣ್ಣುಗಳಲ್ಲಿ )

ಪೆರತೇನೊ ನೀನೇ ಭುವನಕ್ಕೆ ಆರಾಧ್ಯನೈ,

(ಹಣ್ಣುಗಳಲ್ಲಿ ರಾಜ ಸಮಾನವಾಗಿದ್ದು , ಆರಾಧಿಸಲು

ಅರ್ಹ ಎಂದರೆ ಮಾವಿನ ಹಣ್ಣು ಅಲ್ಲವೇ,)

ಭೃಂಗ (ಅಂದರೆ ದುಂಬಿ), ಕೋಕಿಳ,

ಕೀರ (ಅಂದರೆ ಹಂಸ, ಇವುಗಳೆಲ್ಲದರ)

ಪ್ರಿಯ, ಚೂತರಾಜ (ಮಾವಿನ ಮರವೇ)

ತರುಗಳ್‌ (ಬೇರೆ ಬೇರೆ ಮರಗಳು)

ನಿನ್ನಂತೆ ಚೆನ್ನಂಗಳೇ? (ನಿನ್ನ ಮುಂದೆ ಅವು ಎಷ್ಟರವು?)

(ಆದಿ ಪುರಾಣ 11-98)

ಪಂಪ ಹೇಳುವುದೂ ಸರಿ. ಮಾವಿನ ಮರಕ್ಕೆ ಸಾಟಿಯಿಲ್ಲ .

‘ನಾಸಿರುವ ಕಾಡಿನಲ್ಲಿ ಬೇರೆ ಏನನ್ನ ನೋಡ ಹೊರಟಿರುವೆ? ಇನ್ನೆಲ್ಲೂ ಹೋಗುವುದು ಬೇಡ, ಈ ಕಡೆ ದಯಮಾಡಿಸಬೇಕು’ ಎಂಬಂತೆ, ಕೆಂಪಡರಿದ, ಚಿಗುರು ಹಿಡಿದ, ಮಾವಿನ ಮರವೇ ಕೋಗಿಲೆಯ ದನಿಯಿಂದ ಕೂಗಿದಂತೆ,

‘ಆನಿರ್ದ ಬನದೊಳ್‌,

ಉಳಿದುವನ್‌ ಏನಂ ನೋಳ್ಪೆ?

‘ಬರ್ಪುದು’, ಎಂಬಂದದಿಂ,

ಪಿಕ-ಮಧುರ-ಧ್ವಾನದಿಂ

ಆರಕ್ತ ಕೋರಕಂ ಸಹಕಾರಂ’

ಮಲ್ಲಿನಾಥ ಕಾವ್ಯದಲ್ಲಿ (ಮಲ್ಲಿನಾಥ ಪುರಾಣ 8-21) ಕವಿ ನಾಗಚಂದ್ರನಿಗೆ ಭಾಸವಾಗುತ್ತದೆ.

‘ತುಂ ತುಂ ತುಂ ತುಂ ತುಂಬಿ ಬಂದಿತ್ತ ’- ಎಂಬ ಗುಂಜಾರವದಿಂದ ನಮಗೆಲ್ಲ ಪರಿಚಿತರಾದ ಬೇಂದ್ರೆ ಹೇಳುತ್ತಾರೆ:

‘ಚೈತ್ರ ರಥದಲಿ ವಸಂತನ ಬರವು ಎಂದಿಗೂ,

ಮಾಂದಳಿರು ತೋರಣದ

ಮುಂದೆ ಮಾಮಿಡಿ ಗುಡಿಯು,

ಚಂದಿರಗು ಶುಕ-ಪಿಕಗು ಮಾಗಧಗು ಬಂದಿಗೂ

ಕಾಮದ ಅನಿರ್‌ ವಾಚ್ಯ ಪ್ರೇಮ ಧ್ವನಿಸುವ ನುಡಿಯು’

(‘ ಹೊಲಸು’, ನಾಕುತಂತಿ)

ಇನ್ನು ನಾವೆಲ್ಲ ಚಿಕ್ಕಂದಿನಲ್ಲಿ ಬಾಯಿ ಪಾಠ ಮಾಡಿದ ಬಿ.ಎಂ. ಶ್ರೀ ಅವರ ಕವನ ನೆನಪಿಸಿಕೊಳ್ಳೋಣ;

‘ ವಸಂತ ಬಂದ,

ಋತುಗಳ ರಾಜ ತಾ ಬಂದ,

ಚಿಗುರನು ತಂದ,

ಹೆಣ್ಗಳ ಕುಣಿಸುತ ನಿಂದ,

ಚಳಿಯನು ಕೊಂದ,

ಹಕ್ಕಿಗಳ ಉಲಿಗಳೇ ಚೆಂದ.

ಕುರಿ ನೆಗೆದಾಟ, ಕುರುಬರ ಕೊಳಲಿನೂದಾಟ,

ಇನಿಯರ ಬೇಟ, ಬನದಲಿ ಬೆಳದಿಂಗಳ ಊಟ,

ಹೊಸ ಹೊಸ ನೋಟ, ಹಕ್ಕಿಗೆ ನಲಿವಿನ ಪಾಠ।।

ಮಾವಿನ ಸೊಂಪು, ಮಲ್ಲಿಗೆ ಬಯಲೆಲ್ಲ ಕಂಪು

ಗಾಳಿಯ ಕಂಪು, ಜನಗಳ ಜಾತ್ರೆಯ ಗುಂಪು

ಕಿವಿಗಳಿಗೆ ಇಂಪು, ಹಕ್ಕಿಗಳ ಉಲುಹಿನ ಪೆಂಪು

ಕುಹೂ, ಜಗ್‌ ಜಗ್‌, ಪುವ್ವೀ, ಟೂವಿಟ್ಟವೂ ।।

(ಇಂಗ್ಲಿಷ್‌ ಗೀತೆಗಳು)

ಎಲ್ಲೆಲ್ಲೂ ಸೌಂದರ್ಯವನ್ನು ಕಾಣುತ್ತಾ , ಸತ್ಯವಾದುದಕ್ಕೆ, ಶಿವವಾದುದಕ್ಕೆ ಚೆಲುವನ್ನು ಆರೋಪಿಸುವ ಅರಸುವ ಮನೋಭಾವದವರಿಗೆ ವಸಂತ ಒಂದು ಅಪೂರ್ವ ನಿಧಿಯಿದ್ದಂತೆ. ‘ ಕಣ್ಣುಗಳು ತಂಗುವ ಸೊಗಸಿನ ರೇವು’ ಎನ್ನುವುದನ್ನ ಕಾಣುವ ರಸ ಸರಸ್ವತಿಯ ಆರಾಧಕ ಪು.ತಿ. ನರಸಿಂಹಾಚಾರ್ಯರು ಹೇಳುವಂತೆ- ಸೌಂದರ್ಯ ಎಂಬುದು ನಲಿವಿನ ಒಂದು ವಿಶೇಷ ಅನುಭವ. ಹೇಳುತ್ತಾರೆ :

‘ನಲವೇ ನನ್ನ ಕಿರಣವು

ನರರ ಎದೆಯ ಕರಣವು

ಎಲ್ಲದರೊಳು ಎಲ್ಲೆಲ್ಲಿಯು

ಕಾಂಬ ಚೆಲುವೆ ವಿವರಣವು...’

ಸೌಂದರ್ಯ ಸಮೀಕ್ಷಕ ಜಿ.ಎಸ್‌. ಶಿವರುದ್ರಪ್ಪನವರು, ಈ ಚೆಲುವಿನ ಸಮರ್ಥ ಪ್ರತಿನಿಧಿಯಾದ

‘ ಹರಿವ ಮನವನು ಹಿಡಿದು

ಒಂದೆಡೆ ನಿಲಿಸಿ ತೊಳೆದಿದೆ ಹೂವಿದು’

(ಚೆಲುವು- ಒಲವು)

ಎನ್ನುವುದನ್ನು ವ್ಯಾಖ್ಯಾನಿಸುತ್ತ, ‘ ಹರಿಯುವ ಮನಸ್ಸನ್ನು ಹಿಡಿಯುವುದು ಮಾತ್ರವಲ್ಲ, ನಮ್ಮ ಮನಸ್ಸನ್ನೂ ತೊಳೆದು ಸಂಸ್ಕಾರಗೊಳಿಸುತ್ತದೆ, ಒಂದು ಬಗೆಯ ಕ್ಷಣ ರಸ-ವಿಸ್ಮೃತಿಯಲ್ಲಿ ಅದ್ದುತ್ತದೆ’- ಎನ್ನುತ್ತಾರೆ. (ಸೌಂದರ್ಯ ಸಮೀಕ್ಷೆ ಪುಟ 287).

ಸುಗ್ಗಿಯ ಕಾಲದಲ್ಲಿ, ಲೋಕದ ಎಲ್ಲ ಚೆಲವು, ಕ್ಷಣಕಾಲ ಒಂದೆಡೆ ಸೇರಿ, ಮತ್ತೆ ಅದೃಶ್ಯವಾಗುವುದನ್ನ, ಗೋಪಾಲಕೃಷ್ಣ ಅಡಿಗರ ಈ ಮಾತುಗಳಲ್ಲಿ ಗುರುತಿಸಬಹುದು;

‘ ಅದೃಶ್ಯ ಲೋಕದ, ಅಸೂಹ್ಯ ರೂಪದ

ಅನಂತ ಕಾಲದ ಯಾತ್ರಿಕರೇ,

ಮಣ್ಣಿನ ಮನದಲಿ, ಹೊನ್ನನೆ ಬೆಳೆಯುವ

ಅಪೂರ್ವ ತೇಜದ ಮಾಂತ್ರಿಕರೇ

ಅತಿಥಿಗಳಹ ನೀವೆಲ್ಲರು ಇಲ್ಲಿಗೆ

ನೆಲಸಲು ಬಂದವರಲ್ಲ

ಒಂದೆ ಗಳಿಗೆಗೆ ಆಮೋದಕೆ ಬರುವಿರಿ.

ಬಂದ ಅರಗಳಿಗೆಯಾಳಗೇ ಮೈಗರೆವಿರಿ....’

(ಕಟ್ಟುವೆವು ನಾವು, ಪುಟ 64)

ಒಟ್ಟಿನಲ್ಲಿ,

‘ಮಧುಮಾಸ ಬಂದಿಹುದು,

ಮಧುಕರಿಗಳೇ ಬನ್ನಿ

ಮಧುರಸದ ಗೀತಗಳಿಂ ನಾವು ನಲಿವಾ....’

ಎನ್ನುತ್ತದೆ ಕವಿವಾಣಿ.

ಬಂದ ವಸಂತ - ಭಾಗ 2

English summary
S.K.Harihareshwara, California writes about vasanta(spring) according to kannada poets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X