ದುಬೈಯಿಂದ ತಾಯ್ನಾಡಿಗೆ ಮರಳಿದ ಕನ್ನಡಿಗರು: ಪಿ.ವಿ ಸಿಂಧು, ಭೋಜೇಗೌಡ ಸೇರಿದಂತೆ ಹಲವರು ಬೆಂಗಳೂರಿಗೆ ವಾಪಾಸ್
ಇಸ್ರೇಲ್ ಮತ್ತು ಇರಾನ್ ನಡುವಿನ ಭೀಕರ ಸಂಘರ್ಷದ ಪರಿಣಾಮವಾಗಿ ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದ ನೂರಾರು ಭಾರತೀಯರು, ಅದರಲ್ಲೂ ವಿಶೇಷವಾಗಿ ಕನ್ನಡಿಗರು ಕೊನೆಗೂ ತಾಯ್ನಾಡಿಗೆ ಸುರಕ್ಷಿತವಾಗಿ ಮರಳಿದ್ದಾರೆ. ಮೂರು ದಿನಗಳ ಕಾಲ ಆತಂಕದಲ್ಲಿಯೇ ದಿನ ದೂಡಿದ್ದ ಪ್ರಯಾಣಿಕರು, ಸೋಮವಾರ ರಾತ್ರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎಬಿ) ಬಂದಿಳಿದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ತಾಯ್ನಾಡಿಗೆ ಮರಳಿದವರಲ್ಲಿ ಕರ್ನಾಟಕದ ವಿಧಾನ ಪರಿಷತ್ ಸದಸ್ಯ (ಎಂಎಲ್ಸಿ) ಭೋಜೇಗೌಡ ಹಾಗೂ ಒಲಿಂಪಿಕ್ ಪದಕ ವಿಜೇತೆ, ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಕೂಡ ಸೇರಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ದಿಢೀರನೆ ಭುಗಿಲೆದ್ದ ಯುದ್ಧದಿಂದಾಗಿ ವಿಮಾನ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತ್ತು. ಇದರಿಂದಾಗಿ ವ್ಯಾಪಾರ, ವಾಣಿಜ್ಯ, ಪ್ರವಾಸ ಹಾಗೂ ಕೆಲಸದ ನಿಮಿತ್ತ ದುಬೈ ಮತ್ತು ಅಬುಧಾಬಿಗೆ ತೆರಳಿದ್ದ ಹಲವರು ಅಲ್ಲಿಯೇ ಬಾಕಿಯಾಗಿದ್ದರು. ಈ ಬಗ್ಗೆ ಮಾಧ್ಯಮಗಳೊಂದಿಗೆ ತಮ್ಮ ಆತಂಕದ ಕ್ಷಣಗಳನ್ನು ಹಂಚಿಕೊಂಡ ಎಂಎಲ್ಸಿ ಭೋಜೇಗೌಡ, ತಾವು ದಕ್ಷಿಣ ಆಫ್ರಿಕಾ ಪ್ರವಾಸ ಮುಗಿಸಿ ದುಬೈ ಮಾರ್ಗವಾಗಿ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಾಗ ಎದುರಿಸಿದ ಸಂಕಷ್ಟಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

"ನಾನು ದುಬೈ ವಿಮಾನ ನಿಲ್ದಾಣ ತಲುಪಿದಾಗಲೇ ಅಲ್ಲಿನ ಗಂಭೀರ ಪರಿಸ್ಥಿತಿ ಅರಿವಿಗೆ ಬಂತು. ಮೊದಲು ವಿಮಾನ ಹೊರಡುವುದು ವಿಳಂಬವಾಗಿದೆ ಎಂದು ತಿಳಿಸಿದರು, ಸ್ವಲ್ಪ ಸಮಯದ ನಂತರ ವಿಮಾನವೇ ರದ್ದಾಗಿದೆ ಎಂಬ ಆಘಾತಕಾರಿ ಮಾಹಿತಿ ನೀಡಿದರು. ವಿಮಾನ ನಿಲ್ದಾಣದಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಜನಸಂದಣಿ ಸೇರಿತ್ತು. ಎಲ್ಲರ ಮುಖದಲ್ಲೂ ಯುದ್ಧದ ಭಯ ಎದ್ದು ಕಾಣುತ್ತಿತ್ತು," ಎಂದು ಅವರು ಆತಂಕದ ಕ್ಷಣಗಳನ್ನು ಮೆಲುಕು ಹಾಕಿದರು.
ಇದೇ ಕಠಿಣ ಸಮಯದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ದೂರವಾಣಿ ಮೂಲಕ ಸಂಪರ್ಕಿಸಿ ಧೈರ್ಯ ತುಂಬಿದ್ದಲ್ಲದೆ, ದುಬೈನಲ್ಲಿ ಸುರಕ್ಷಿತ ಹೋಟೆಲ್ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಸಿದ್ದರು. ಆದಾಗ್ಯೂ ಭದ್ರತೆಯ ಆತಂಕ ನಮ್ಮನ್ನ ಕಾಡುತ್ತಲೇ ಇತ್ತು ಎಂದು ಭೋಜೇಗೌಡರು ತಿಳಿಸಿದರು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಕೃಷ್ಣ ಭೈರೇಗೌಡ ಹಾಗೂ ಎಚ್.ಕೆ. ಪಾಟೀಲ್ ಕೂಡ ಕರೆ ಮಾಡಿ ಪರಿಸ್ಥಿತಿಯ ಮಾಹಿತಿ ಪಡೆದುಕೊಂಡರು.
"ಸಚಿವ ಕೃಷ್ಣ ಭೈರೇಗೌಡ ಅವರ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದಾಗಲೇ ದೊಡ್ಡದೊಂದು ಬಾಂಬ್ ಸ್ಫೋಟದ ಶಬ್ದ ಕೇಳಿಸಿತು. ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಪಕ್ಕದಲ್ಲೇ ಬಾಂಬ್ ಬಿದ್ದಿದೆ ಎಂಬ ಮಾಹಿತಿ ಹಬ್ಬಿ ಆತಂಕ ಇಮ್ಮಡಿಯಾಗಿತ್ತು. ಆದರೆ, ಅದು ಅಷ್ಟೊಂದು ಪರಿಣಾಮಕಾರಿಯಾಗಿ ಸ್ಫೋಟಗೊಂಡಿರಲಿಲ್ಲ ಎಂದು ಬಳಿಕ ತಿಳಿಯಿತು. ದುಬೈ ಸರ್ಕಾರ ನಮ್ಮ ನೆರವಿಗೆ ಬಂದು ಅತ್ಯುತ್ತಮ ವ್ಯವಸ್ಥೆ ಕಲ್ಪಿಸಿತ್ತು. ಇಷ್ಟು ಬೇಗ ನಾವು ಸ್ವದೇಶಕ್ಕೆ ವಾಪಸ್ಸಾಗುತ್ತೇವೆ ಎಂದು ಊಹಿಸಿರಲಿಲ್ಲ," ಎಂದು ಭೋಜೇಗೌಡ ಅವರು ವಿವರಿಸಿದ್ದಾರೆ.
ಮತ್ತೊಂದೆಡೆ, ಸೋಮವಾರ ಮುಂಜಾನೆ 4:30ಕ್ಕೆ ಬೆಂಗಳೂರಿನಿಂದ ದುಬೈಗೆ ಹೊರಟಿದ್ದ ಎಮಿರೇಟ್ಸ್ ವಿಮಾನ ಕೂಡ ಅರ್ಧ ದಾರಿಯಿಂದಲೇ ಹಿಂದಿರುಗಿದೆ. 113 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಈ ವಿಮಾನ ಭಾರತದ ಗಡಿ ದಾಟುವಷ್ಟರಲ್ಲಿ ದುಬೈ ವಾಯುನೆಲೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಹೀಗಾಗಿ ಬೇರೆ ದಾರಿ ಕಾಣದೆ ವಿಮಾನ ಮರಳಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಒಟ್ಟಿನಲ್ಲಿ ಯುದ್ಧದ ಕಾರ್ಮೋಡದ ನಡುವೆ ಸಿಲುಕಿದ್ದ ಕನ್ನಡಿಗರು ಸುರಕ್ಷಿತವಾಗಿ ಮರಳಿ ತಾಯ್ನಾಡಿನ ಮಡಿಲು ಸೇರಿರುವುದು ಅವರ ಕುಟುಂಬಸ್ಥರಲ್ಲಿ ಅಪಾರ ನೆಮ್ಮದಿ ತಂದಿದೆ.












Click it and Unblock the Notifications