Get Updates
Get notified of breaking news, exclusive insights, and must-see stories!

ಬೆಂಗಳೂರು ಆಡಳಿತ ಬಿಬಿಎಂಪಿಯಿಂದ ಜಿಬಿಎಗೆ: 5 ಪಾಲಿಕೆಗಳ ರಚನೆ, ಹೊಸ ಪ್ರದೇಶಗಳ ಸೇರ್ಪಡೆಯಿಂದ ರಿಯಲ್ ಎಸ್ಟೇಟ್‌ಗೆ ಬಂಪರ್

ಬೆಂಗಳೂರಿನ ಆಡಳಿತದಲ್ಲಿ ಮಹತ್ವದ ಬದಲಾವಣೆ ಆಗಿದೆ. 18 ವರ್ಷಗಳ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧ್ಯಯನವು ಮುಕ್ತಾಯವಾಗಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಐದು ಪಾಲಿಕೆಗಳು ರಚನೆಯಾಗಿದ್ದು, ಇದರ ಮುಖ್ಯ ಉದ್ದೇಶವೇ ಆಡಳಿತ ವಿಕೇಂದ್ರೀಕರಣವಾಗಿದೆ. ಈ ಹಿಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಒಬ್ಬರೇ ಆಯುಕ್ತರಿದ್ದರು. ಇದೀಗ ಐದು ಪಾಲಿಕೆಗಳು ರಚನೆಯಾಗಿದ್ದು, ಹೊಸ ಐದು ಪಾಲಿಕೆ ಆಯುಕ್ತರು ನೇಮಕವಾಗಿದ್ದಾರೆ. ಆದರೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ ಇನ್ನೂ ಕಗ್ಗಂಟಾಗಿಯೇ ಉಳಿದಿದೆ.

ಐದು ಪಾಲಿಕೆಗಳ ರಚನೆಯಿಂದ ಏನೆಲ್ಲಾ ಬದಲಾವಣೆ ಆಗಿದೆ. ಇದು ಬೆಂಗಳೂರು ಆಡಳಿತದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ? ಕನ್ನಡಿಗರಿಗೆ ಇದು ಹೇಗೆ ಸವಾಲು ಹಾಗೂ ಬೆಂಗಳೂರಿಗೆ ಹೊಸ ಪ್ರದೇಶಗಳ ಸೇರ್ಪಡೆಯಿಂದಾಗಿ ರಿಯಲ್ ಎಸ್ಟೇಟ್‌ನ ಮೇಲೆ ಯಾವ ಪರಿಣಾಮವಾಗಲಿದೆ ಎನ್ನುವುದೂ ಸೇರಿದಂತೆ ಬೆಂಗಳೂರು ಆಡಳಿತದ ಸಂಪೂರ್ಣ ಮಾಹಿತಿ ಇಲ್ಲಿದೆ.

786 ಚದರ ಕಿಮೀ ವಿಸ್ತೀರ್ಣದ ಬೆಂಗಳೂರಿನಲ್ಲಿ ಜನಸಂಖ್ಯೆಯು 1.5 ಕೋಟಿ ತಲುಪಿದೆ. ಹೆಚ್ಚುತ್ತಿರುವ ಬೆಂಗಳೂರಿನ ಜನಸಂಖ್ಯೆ ಹಾಗೂ ಆಡಳಿತ ಒತ್ತಡವನ್ನು ತಪ್ಪಿಸುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು (Greater Bengaluru Authority - GBA) ರಚನೆ ಮಾಡಲಾಗಿದೆ. ಐದು ಪಾಲಿಕೆಗಳ ರಚನೆಯಿಂದ ಹೊಸ ಸವಾಲುಗಳು ಶುರುವಾಗಿವೆ.

Bengaluru Administration Shift

ಬೆಂಗಳೂರಿನ ಆಡಳಿತದಲ್ಲಿ ಮಹತ್ವದ ಬದಲಾವಣೆ ಆಗಿದೆ. ಕರ್ನಾಟಕ ಸರ್ಕಾರವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನಾಗಿ ಬದಲಾಯಿಸಿದೆ. ಬೆಂಗಳೂರಿನ ಆಡಳಿತವು 18 ವರ್ಷಗಳ ನಂತರ ಬದಲಾಗಿದೆ. ಮುಖ್ಯಮಂತ್ರಿ ಅಧ್ಯಕ್ಷತೆಯ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ)ದ ಅಡಿಯಲ್ಲಿ 5 ನಗರ ಪಾಲಿಕೆಗಳು ಕಾರ್ಯ ನಿರ್ವಹಿಸುತ್ತಿವೆ. 2007ರಲ್ಲಿ ನಗರಸಭೆ, ಪುರಸಭೆ ಮತ್ತು 110 ಹಳ್ಳಿಗಳನ್ನು ಸೇರ್ಪಡೆ ಮಾಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ರಚನೆ ಮಾಡಲಾಗಿತ್ತು. ಜಿಬಿಎ ಮತ್ತು ನಗರ ಪಾಲಿಕೆಗಳ ಸ್ಥಾಪನೆಯಿಂದಾಗಿ ಬಿಬಿಎಂಪಿ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಹೊಸ ರೂಪ ಪಡೆದುಕೊಂಡಿದೆ.

ಬೆಂಗಳೂರಿನ ಐದು ಹೊಸ ಪಾಲಿಕೆಗಳು

ಬೆಂಗಳೂರಿನಲ್ಲಿ ಐದು ಹೊಸ ಪಾಲಿಕೆಗಳು ರಚನೆ ಆಗಿವೆ. ಅದರಲ್ಲಿ ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ಪೂರ್ವ, ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಪಶ್ಚಿಮ ನಗರ ಪಾಲಿಕೆಗಳು ಇವೆ. ಯಾವ ಪಾಲಿಕೆ ವ್ಯಾಪ್ತಿಯಲ್ಲಿ ಯಾವ ಪ್ರಮುಖ ಪ್ರದೇಶಗಳು ಸೇರಿವೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರು ನಗರ ಕೇಂದ್ರ: ಶಾಂತಿನಗರ ಸಿ.ವಿ. ರಾಮನ್ ನಗರ, ಶಿವಾಜಿನಗರ, ಚಿಕ್ಕಪೇಟೆ, ಗಾಂಧಿನಗರ ಹಾಗೂ ಚಾಮರಾಜಪೇಟೆ.

ಬೆಂಗಳೂರು ಪೂರ್ವ: ಕೃಷ್ಣರಾಜಪುರ ಹಾಗೂ ಮಹದೇವಪುರ.

ಬೆಂಗಳೂರು ಪಶ್ಚಿಮ: ಯಶವಂತಪುರ, ದಾಸರಹಳ್ಳಿ, ರಾಜರಾಜೇಶ್ವರಿ ನಗರ, ಮಲ್ಲೇಶ್ವರ, ರಾಜಾಜಿನಗರ, ಗೋವಿಂದರಾಜನಗರ, ವಿಜಯನಗರ, ಬಸವನಗುಡಿ, ಪದ್ಮನಾಭ ನಗರದ ಕೆಲವು ಪ್ರದೇಶಗಳು.

ಬೆಂಗಳೂರು ಉತ್ತರ: ಬ್ಯಾಟರಾಯನಪುರ, ಪುಲಕೇಶಿ ನಗರ, ಸರ್ವಜ್ಞ ನಗರ, ದಾಸರಹಳ್ಳಿ ಹಾಗೂ ರಾಜರಾಜೇಶ್ವರಿ ನಗರದ ಕೆಲವು ಭಾಗ, ಹೆಬ್ಬಾಳ ಹಾಗೂ ಯಲಹಂಕ.

ಬೆಂಗಳೂರು ದಕ್ಷಿಣ: ಪದ್ಮನಾಭ ನಗರ, ರಾಜರಾಜೇಶ್ವರಿ ನಗರ ಮತ್ತು ಯಶವಂತಪುರದ ಕೆಲವು ಪ್ರದೇಶಗಳು.

ಬೆಂಗಳೂರು ಆಡಳಿತದ ಹಿನ್ನೆಲೆ ಏನು

ಬೆಂಗಳೂರಿನ ಆಡಳಿತವು 2007ರಲ್ಲಿ 7 ನಗರಸಭೆ, ಒಂದು ಪುರಸಭೆ ಹಾಗೂ 110 ಹಳ್ಳಿಗಳನ್ನು ಸೇರಿಸುವುದರೊಂದಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ರಚನೆಯಾಯಿತು. 2010ರಲ್ಲಿ 198 ವಾರ್ಡ್‌ಗಳಿಗೆ ಮೊದಲ ಬಾರಿ ಚುನಾವಣೆ ನಡೆಸಲಾಯಿತು. 2020ರ ಸೆಪ್ಟೆಂಬರ್‌ 10ಕ್ಕೆ ಚುನಾಯಿತ ಕೌನ್ಸಿಲ್‌ ಸದಸ್ಯರ ಅವಧಿ ಅಂತ್ಯವಾಗಿದೆ. ಆದರೆ, ಅಂದಿನಿಂದ ಇಂದಿನ ವರೆಗೆ ಬೆಂಗಳೂರಿನ ಆಡಳಿತಕ್ಕೆ ಚುನಾವಣೆ ನಡೆದಿಲ್ಲ. ಪಾಲಿಕೆಯ ಸದಸ್ಯರು, ಮೇಯರ್ ಹಾಗೂ ಉಪ ಮೇಯರ್ ಇಲ್ಲದೆ 5 ವರ್ಷಗಳೇ ಕಳೆದಿವೆ. ಬೆಂಗಳೂರಿನ ನಿವಾಸಿಗಳು ಇಂದಿಗೂ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದಕ್ಕೆ ಶಾಸಕರನ್ನು ಅವಲಂಬಿಸುವಂತೆ ಆಗಿದೆ. ಇದೀಗ ಗ್ರೇಟರ್ ಬೆಂಗಳೂರು ಆಡಳಿತದ ದೃಷ್ಟಿಯಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ಒಟ್ಟು 369 ವಾರ್ಡ್‌ಗಳನ್ನು ರಚನೆ ಮಾಡಲಾಗಿದೆ.

ಬೆಂಗಳೂರು ಯಾವ ಪಾಲಿಕೆಯಲ್ಲಿ ಎಷ್ಟು ವಾರ್ಡ್‌ಗಳಿವೆ

ಬೆಂಗಳೂರು ಕೇಂದ್ರ: 63

ಬೆಂಗಳೂರು ದಕ್ಷಿಣ: 72

ಬೆಂಗಳೂರು ಉತ್ತರ: 72

ಬೆಂಗಳೂರು ಪಶ್ಚಿಮ: 112

ಬೆಂಗಳೂರು ಪೂರ್ವ: 50

ಆರ್ಥಿಕವಾಗಿ ಹೇಗೆ ಹೊರೆ ?

ಈ ಹಿಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇದ್ದ ಸಂದರ್ಭದಲ್ಲಿ ಖರ್ಚಾಗುತ್ತಿದ್ದ ವೆಚ್ಚಕ್ಕೂ ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ಪಾಲಿಕೆಗಳ ರಚನೆಯ ನಂತರ ಭಾರೀ ವೆಚ್ಚವಾಗಲಿದೆ ಎನ್ನುವ ಆರೋಪವೂ ಕೇಳಿ ಬಂದಿದೆ. 5 ಪಾಲಿಕೆಗಳ ಆದಾಯದ ಮೂಲಗಳು ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯವಿರುವ ಸುಮಾರು 6,300 ಕೋಟಿಗಳಿಗಿಂತ ಕಡಿಮೆ ಇರಲಿದ್ದು, ಆರ್ಥಿಕ ಸಂಕಷ್ಟ ಎದುರಾಗಬಹುದು ಎನ್ನುವುದು ತಜ್ಞರ ಎಚ್ಚರಿಕೆಯಾಗಿದೆ. ಅಲ್ಲದೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಪ್ರಾಧಿಕಾರ ವ್ಯಾಪ್ತಿಯ ಪಾಲಿಕೆಗಳಿಗೆ ಆಸ್ತಿ ತೆರಿಗೆಯಿಂದ ಸಂಗ್ರಹವಾಗುವ ಆದಾಯವು ದೊಡ್ಡದಾಗಿದ್ದು, ಇದೇ ಪ್ರಮುಖ ಆದಾಯ ಮೂಲವಾಗಿದೆ. ಆದರೆ, ಪಾಲಿಕೆಯ ವಿಭಜನೆಯ ನಂತರ ಒಂದೊಂದು ಪಾಲಿಕೆಯ ಆಸ್ತಿ ತೆರಿಗೆ ಸಂಗ್ರಹ ಪ್ರಮಾಣದಲ್ಲೂ ಭಾರೀ ವ್ಯತ್ಯಾಸವಿದೆ. ಐಟಿ - ಬಿಟಿ ಹಾಗೂ ವಾಣಿಜ್ಯ ಕಟ್ಟಡಗಳು ಹೆಚ್ಚಾಗಿ ಇರುವ ಪ್ರದೇಶಗಳ ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚು ಆದಾಯ ಸಂಗ್ರಹವಾಗುತ್ತಿದ್ದರೆ, ಇನ್ನುಳಿದ ಪಾಲಿಕೆಗಳ ವ್ಯಾಪ್ತಿಯಲ್ಲಿ ಕಡಿಮೆ ಆಸ್ತಿ ತೆರಿಗೆ ಸಂಗ್ರಹವಾಗುತ್ತಿದೆ. ಇದು ಸಹ ಆರ್ಥಿಕ ಹೊರೆಗೆ ಕಾರಣವಾಗುವ ಆತಂಕವೂ ಇದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಉದ್ದೇಶವೇನು

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ರಚನೆಯ ಹಿಂದೆ ಹಲವು ಉದ್ದೇಶಗಳಿವೆ. ಅದರಲ್ಲಿ ಮೊದಲನೆಯದಾಗಿ ಆಡಳಿತ ವಿಕೇಂದ್ರೀಕರಣ, ವಿವಿಧ ಇಲಾಖೆಗಳನ್ನು ಒಂದೇ ಸೂರಿನ ಅಡಿಯಲ್ಲಿ ತರುವುದು ಪ್ರಮುಖವಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ವಿವಿಧ ನಿಗಮಗಳನ್ನು ಇದೀಗ ತರಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಡಳಿತಾವಧಿಯಲ್ಲಿ ಬೆಸ್ಕಾಂ, ಬಿಡ್ಲ್ಯೂಎಸ್‌ಎಸ್‌ಬಿ, ಬಿಎಂಆರ್‌ಸಿಎಲ್ ಹಾಗೂ ಬಿಡಿಎ ಪ್ರತ್ಯೇಕವಾಗಿತ್ತು. ಇದರಿಂದ ಗೊಂದಲಗಳು ಸೃಷ್ಟಿ ಆಗುತ್ತಿದ್ದವು. ಇದನ್ನು ತಪ್ಪಿಸುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ರಚನೆ ಮಾಡಲಾಗಿದ್ದು ವಿವಿಧ ಇಲಾಖೆಗಳನ್ನು ಒಂದೇ ಸೂರಿನಡಿಯಲ್ಲಿ ತರಲಾಗಿದೆ.

ಬೆಂಗಳೂರು ಮೇಯರ್ ಆಡಳಿತ ಅವಧಿ ಹೆಚ್ಚಳ

ಈ ಹಿಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಡಳಿತವಿದ್ದ ಸಂದರ್ಭದಲ್ಲಿ ಮೇಯರ್ ಅಧಿಕಾರ ಅವಧಿಯು ಕೇವಲ 1 ವರ್ಷ ಮಾತ್ರವಿತ್ತು. ಇದೀಗ ಮೇಯರ್ ಆಡಳಿತ ಅವಧಿಯನ್ನು ಹೆಚ್ಚಳ ಮಾಡಲಾಗಿದೆ. ಬೆಂಗಳೂರಿನ ಮೇಯರ್ ಮತ್ತು ಉಪಮೇಯರ್ ಅವರ ಆಡಳಿತ ಅವಧಿಯನ್ನು 1 ವರ್ಷಗಳಿಂದ 30 ತಿಂಗಳುಗಳಿಗೆ (2.5 ವರ್ಷಕ್ಕೆ) ಹೆಚ್ಚಳ ಮಾಡಲಾಗಿದೆ. 'ಬಿಬಿಎಂಪಿ ಕಾಯ್ದೆ 2020' ಜಾರಿಯಾದ ನಂತರ ಈ ಬದಲಾವಣೆ ಆಗಿದೆ. ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್‌ಗೆ ಹೆಚ್ಚು ಸಮಯ ಅಧಿಕಾರ ಸಿಗಲಿದ್ದು, ಇದರಿಂದ ಆಯಾ ಪಾಲಿಕೆ ವ್ಯಾಪ್ತಿಯ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಮಯ ಸಿಗಲಿದೆ. ಅಲ್ಲದೆ ಆಯಾ ಪಾಲಿಕೆಯ ಸಮಸ್ಯೆಗಳಿಗೆ ಪರಿಹಾರ ರೂಪಿಸುವುದಕ್ಕೂ ಸಮಯ ಸಿಗಲಿದೆ ಎನ್ನುವುದು ಇದರ ಉದ್ದೇಶವಾಗಿದೆ.

ಬೆಂಗಳೂರಿಗೆ ಹೊಸ ಪ್ರದೇಶ: ರಿಯಲ್ ಎಸ್ಟೇಟ್‌ಗೆ ಹೇಗೆ ಲಾಭ ?

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ರಚನೆಯೊಂದಿಗೆ ಬೆಂಗಳೂರಿಗೆ ಹೊಸ ಪ್ರದೇಶಗಳ ಸೇರ್ಪಡೆಗೂ ಅವಕಾಶ ಸಿಕ್ಕಿದೆ. ಇದರಿಂದ ಬೆಂಗಳೂರಿನ ಬ್ರ್ಯಾಂಡ್ ವ್ಯಾಲ್ಯೂ ಮೂಲಕ ವಿವಿಧ ಪ್ರದೇಶಗಳ ಪ್ರಾಪರ್ಟಿ ಬೆಲೆಯೂ ಸಹ ಹೆಚ್ಚಳವಾಗಿದೆ. ಬೆಂಗಳೂರಿಗೆ ಹೊಸ ಪ್ರದೇಶಗಳು ಸೇರ್ಪಡೆ ಆಗುವ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮಾಹಿತಿ ನೀಡಿದ್ದರು. ಬೆಂಗಳೂರು ವ್ಯಾಪ್ತಿಗೆ 329.99 ಹೆಕ್ಟೇರ್‌ನಷ್ಟು ಹೊಸ ಪ್ರದೇಶ ಸೇರ್ಪಡೆ ಆಗಿದೆ. ಬೆಂಗಳೂರು ದಕ್ಷಿಣ ತಾಲ್ಲೂಕಿನ ಉತ್ತರಹಳ್ಳಿ ಹೋಬಳಿಯ ಮಲ್ಲಸಂದ್ರ, ಮನವರ್ತೆ ಕಾವಲ್, ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿಯ ಲಕ್ಷ್ಮೀಪುರ, ಕಾನ್ಶಿರಾಮನಗರ, ಲಕ್ಷ್ಮೀಪುರ ಗ್ರಾಮದ ಎಲ್ಲಾ ಬಡಾವಣೆಗಳು ಸೇರಿದಂತೆ 329.99 ಹೆಕ್ಟೇರ್ ಪ್ರದೇಶ ಸೇರ್ಪಡೆ ಆದಂತೆ ಆಗಿದೆ.

ಐದು ಪಾಲಿಕೆ ಕನ್ನಡಿಗರ ಆತಂಕವೇನು

ಬೆಂಗಳೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಭಾಷಾ ಸಮಸ್ಯೆ ಹೆಚ್ಚಾಗಿದೆ. ಅದರಲ್ಲೂ ಆಡಳಿತದಲ್ಲಿ ಅನ್ಯಭಾಷಿಕರು ಬಂದರೆ, ಮೇಯರ್ - ಉಪ ಮೇಯರ್ ಅನ್ಯಭಾಷಿಕರು ಆಯ್ಕೆಯಾದರೆ ಕನ್ನಡಿಗರಿಗೆ ಸಮಸ್ಯೆ ಆಗಬಹುದು ಎನ್ನುವ ಆತಂಕ ವ್ಯಕ್ತವಾಗಿದೆ. ಬೆಂಗಳೂರು ವಿಭಜನೆಯಿಂದಾಗಿ ಆಡಳಿತದಲ್ಲಿ ಕನ್ನಡಿಗರ ಹಿಡಿತ ತಪ್ಪಿಲಿದೆ ಎನ್ನುವ ಆತಂಕವು ಕನ್ನಡಿಗರಲ್ಲಿ ಇದ್ದೇ ಇದೆ. ಇದೇ ಕಾರಣಕ್ಕೆ ಕನ್ನಡಿಗರು ಬೆಂಗಳೂರು ವಿಭಜನೆಯನ್ನು ಮೊದಲಿನಿಂದಲೂ ವಿರೋಧಿಸಿದ್ದರು. ಆದರೆ, ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಕನ್ನಡಿಗರ ವಿರೋಧವನ್ನು ಪರಿಗಣಿಸದೆ ಬೆಂಗಳೂರು ಪಾಲಿಕೆಯನ್ನು ಐದು ಭಾಗಗಳನ್ನಾಗಿ ವಿಭಜನೆ ಮಾಡಿದೆ.

ಬಿಬಿಎಂಪಿ - ಜಿಬಿಎ ಬಗ್ಗೆ ಜನ ಹೆಚ್ಚಾಗಿ ಕೇಳುವ ಎಂಟು ಪ್ರಶ್ನೆಗಳು

1. ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಎಂದರೇನು?
ಬಿಬಿಎಂಪಿಯನ್ನು ವಿಭಜಿಸಿ ಆಡಳಿತ ವಿಕೇಂದ್ರೀಕರಣದ ಉದ್ದೇಶದಿಂದ ರಚಿಸಲಾದ ಹೊಸ ಆಡಳಿತಾತ್ಮಕ ವ್ಯವಸ್ಥೆಯೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ.

2. ಬಿಬಿಎಂಪಿ ಏಕೆ ವಿಭಜನೆ ಮಾಡಲಾಯಿತು
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ಆಡಳಿತ ಹೊರೆಯನ್ನು ತಪ್ಪಿಸುವ ಉದ್ದೇಶದಿಂದ ಬಿಬಿಎಂಪಿಯನ್ನು ಐದು ಭಾಗವಾಗಿ ವಿಭಜನೆ ಮಾಡಲಾಗಿದೆ.

3. ಬೆಂಗಳೂರಿನಲ್ಲಿ ಎಷ್ಟು ಹೊಸ ಪಾಲಿಕೆಗಳು ರಚನೆಯಾಗಿವೆ?
ಬೆಂಗಳೂರಿನಲ್ಲಿ ಒಟ್ಟು ಐದು ಪಾಲಿಕೆಗಳು ರಚನೆ ಆಗಿವೆ. ಬೆಂಗಳೂರು ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಹಾಗೂ ಬೆಂಗಳೂರು ಕೇಂದ್ರ ಪಾಲಿಕೆಗಳು ರಚನೆಯಾಗಿವೆ.

4. ಒಟ್ಟು ಎಷ್ಟು ವಾರ್ಡ್‌ಗಳನ್ನು ರಚಿಸಲಾಗಿದೆ ?
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಒಟ್ಟು 369 ವಾರ್ಡ್‌ಗಳನ್ನು ರಚಿಸಲಾಗಿದೆ.

5. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಯ ಸ್ಥಿತಿ ಏನು ?
ಹೊಸ ವ್ಯವಸ್ಥೆ ಜಾರಿಯಾದರೂ ಇನ್ನೂ ಚುನಾವಣೆ ನಡೆದಿಲ್ಲ; ಚುನಾವಣೆ ಪ್ರಕ್ರಿಯೆ ಕಗ್ಗಂಟಾಗಿಯೇ ಉಳಿದಿದೆ.

6. ಪಾಲಿಕೆಗಳ ವಿಭಜನೆಯಿಂದ ಆರ್ಥಿಕ ಹೊರೆ ಹೆಚ್ಚಾಗುತ್ತದೆಯೇ ?
ತಜ್ಞರ ಪ್ರಕಾರ 6,300 ಕೋಟಿ ರೂಪಾಯಿಗಿಂತ ಹೆಚ್ಚು ಅಭಿವೃದ್ಧಿ ವೆಚ್ಚ ಬೇಕಾಗಬಹುದು; ಆಸ್ತಿ ತೆರಿಗೆ ಮುಖ್ಯ ಆದಾಯ ಮೂಲವಾಗಿದೆ.

7. ಮೇಯರ್ ಅಧಿಕಾರ ಅವಧಿಯಲ್ಲಿ ವಿಷಯದಲ್ಲಿ ಏನು ಬದಲಾವಣೆ ಆಗಿದೆ ?
ಹಿಂದೆ 1 ವರ್ಷ ಇದ್ದ ಅಧಿಕಾರ ಅವಧಿಯನ್ನು ಇದೀಗ 30 ತಿಂಗಳುಗಳಿಗೆ (2.5 ವರ್ಷ) ಹೆಚ್ಚಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+