ಪ್ರಧಾನಿ ನರೇಂದ್ರ ಮೋದಿ- ಅಮಿತ್ ಶಾ ಅಚ್ಚುಮೆಚ್ಚಿನ ಹುಡುಗ ಕೆ. ಅಣ್ಣಾಮಲೈ ಏಕಾಏಕಿ ಬಿಜೆಪಿ ವಿರುದ್ಧ ತಿರುಗಿಬಿದ್ದಿದ್ಯಾಕೆ ?

ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ತಮಿಳುನಾಡಿನ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಕೆ ಅಣ್ಣಾಮಲೈ ಕುಪ್ಪುಸ್ವಾಮಿ ಅವರು ಬಿಜೆಪಿ ತೊರೆದಿದ್ದಾರೆ. ಬರೋಬ್ಬರಿ 5 ಪುಟಗಳ ಸುದೀರ್ಘ ರಾಜೀನಾಮೆ ಪತ್ರವನ್ನು ಅಣ್ಣಾಮಲೈ ಅವರು ಗೃಹ ಸಚಿವ ಅಮಿತ್ ಶಾ ಅವರಿಗೆ ಸಲ್ಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಅಚ್ಚುಮೆಚ್ಚಿನ ಹುಡುಗ ಎಂದೇ ಖ್ಯಾತಿ ಗಳಿಸಿದ್ದ ಕೆ. ಅಣ್ಣಾಮಲೈ ಏಕಾಏಕಿ ಬಿಜೆಪಿ ವಿರುದ್ಧ ತಿರುಗಿಬಿದ್ದಿದ್ಯಾಕೆ ಎನ್ನುವ ಬಗ್ಗೆ ಹಿರಿಯ
ಪತ್ರಕರ್ತೆ ಶೋಭಾ ಮಳವಳ್ಳಿ ಅವರ ಬರಹ ಇಲ್ಲಿದೆ.

ಬಿಜೆಪಿ ಫೈರ್ ಬ್ರಾಂಡ್ ಎನಿಸಿಕೊಂಡಿದ್ದ ಅಣ್ಣಾಮಲೈ ಹೊಸ ಪಕ್ಷ‌ ಕಟ್ತಾರಂತೆ? ಬಿಜೆಪಿ ತೊರೆಯುತ್ತಾರಂತೆ.. ಜನಾಂದೋಲನ ಶುರು ಮಾಡ್ತಾರಂತೆ... ಏನೇನೋ ಸುದ್ದಿಗಳು. ಅಷ್ಟಕ್ಕೂ ಮೋದಿ- ಅಮಿತ್ ಶಾ ಅವರ ಅಚ್ಚುಮೆಚ್ಚಿನ ಹುಡುಗ ಅಣ್ಣಾಮಲೈ ಏಕಾಏಕಿ ಬಿಜೆಪಿ ವಿರುದ್ಧ ತಿರುಗಿಬಿದ್ದಿದ್ಯಾಕೆ? ಅಣ್ಣಾಮಲೈರನ್ನು ಬಿಜೆಪಿ ಮೂಲೆಗುಂಪು ಮಾಡಿದ್ಯಾಕೆ. ಯಾವುದೇ ರಾಷ್ಟ್ರೀಯ ಪಕ್ಷ, ಒಬ್ಬ ದಕ್ಷ, ಪ್ರಾಮಾಣಿಕ, ಭವಿಷ್ಯದ ಯುವ ನಾಯಕನನ್ನು ಅಷ್ಟು ಸುಲಭಕ್ಕೆ ಬಿಟ್ಟುಕೊಡುತ್ತಾ? ಅನ್ನೋದಕ್ಕೆ ಸ್ವಲ್ಪ ರಾಜಕೀಯವಾಗಿ ಅಣ್ಣಾಮಲೈ ಸಾಧನೆ ನೋಡ್ಬೇಕು.

K Annamalai

ಬಿಜೆಪಿ‌ ಸೇರಿ‌ ರಾಜಕೀಯಕ್ಕೆ ಎಂಟ್ರಿ‌ ಕೊಟ್ಟ ಮೇಲೆ, ತಮಿಳುನಾಡು‌ ಜನರು, ಅಷ್ಟೇ ಯಾಕೆ ಬಿಜೆಪಿಯ ಸ್ಥಳೀಯ ನಾಯಕರು, ದಿಲ್ಲಿ ಹೈಕಮಾಂಡ್ ವಲಯದಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದರು. ಆದರೆ‌, ಅಣ್ಣಾಮಲೈಗೆ ದ್ರಾವಿಡ ನೆಲದ ರಾಜಕೀಯ ಅಷ್ಟು ಸುಲಭಕ್ಕೆ ಒಗ್ಗಲಿಲ್ಲ. ಜಾತಿ ಬಲವೊಂದೇ ಅಣ್ಣಾಮಲೈಗೆ ಶ್ರೀರಕ್ಷೆಯಾಗಿದ್ದು ಬಿಟ್ಟರೆ ವೈಯಕ್ತಿಕವಾಗಿ ಅಣ್ಣಾಮಲೈ ವರ್ಚಸ್ಸು ಬಿಜೆಪಿಗೆ ಲಾಭ ಮಾಡಿಕೊಡಲಿಲ್ಲ ಅನ್ನೋದು ದಿಲ್ಲಿ ಬಿಜೆಪಿ ನಾಯಕರ ಬೇಸರಕ್ಕೆ ಕಾರಣವಾಯ್ತು. ಆಡಳಿತರೂಢ ಡಿಎಂಕೆ ವಿರುದ್ಧ ತೊಡೆತಟ್ಟಿ ನಿಲ್ಲಬೇಕಿದ್ದ ಖಡಕ್ ಆಫೀಸರ್, ಯಾಕೋ ಸಾಫ್ಟ್‌ ಆಗಿಬಿಟ್ಟರು.

ಡಿಎಂಕೆ‌ ಸಾಲು, ಸಾಲು ವೈಫಲ್ಯಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಬೇಕಿದ್ದ ಅಣ್ಣಾಮಲೈ, ಪಾದಯಾತ್ರೆಗೆ ಇಳಿದಿದ್ದು, ತಮಗೆ ತಾವೇ ಚಾಟಿ ಏಟು ಹೊಡೆದುಕೊಂಡಿದ್ದು ನಗೆಪಾಟಲಿಗೀಡಾಯಿತೇ ವಿನಃ, ರಾಜಕೀಯವಾಗಿ ಯಾವ ಲಾಭವೂ ಆಗಲಿಲ್ಲ. ಕಳೆದ ಲೋಕಸಭೆ ಎಲೆಕ್ಷನ್‌ನಲ್ಲಿ ಅಣ್ಣಾಮಲೈ ‌ಸೋಲು ಬಲು ದೊಡ್ಡ ಹೊಡೆತ ನೀಡಿತು. ಕಳೆದ ಎಲೆಕ್ಷನ್‌ನಲ್ಲಿ ಬಿಜೆಪಿ ಅಭ್ಯರ್ಥಿ ಶೇ. 31.47 ವೋಟ್ ಪಡೆದಿದ್ದರೆ, 2024ರ ಚುನಾವಣೆಯಲ್ಲಿ ಅಣ್ಣಾಮಲೈ, ಶೇ. 32.79 ಮತ ಪಡೆದು ಸೋತಿದ್ದರು. ವೋಟ್ ಶೇರಿಂಗ್‌ನಲ್ಲೂ ದೊಡ್ಡ ಸಾಧನೆ ಇರಲಿಲ್ಲ. ಮೋದಿ ವರ್ಚಸ್ಸು ವೋಟ್ ಗಿಟ್ಟಿಸಿತ್ತು. ಬರೀ ಮಾತು ಅಣ್ಣಾಮಲೈ ಸಾಧನೆ ಎಂಬ ಕುಹಕ ಪಾರ್ಟಿಯೊಳಗೆ ಎದ್ದಿತ್ತು.‌ ಅಣ್ಣಾಮಲೈ ಸಾಮರ್ಥ್ಯವನ್ನು ಅರಿತ ಬಿಜೆಪಿ ಹೈಕಮಾಂಡ್, ಅಣ್ಣಾಮಲೈರನ್ನು ಸೈಲೆಂಟ್ ಆಗಿ ಸೈಡ್ ಲೈನ್ ಮಾಡತೊಡಗಿತ್ತು.

ಅಣ್ಣಾಮಲೈಗೆ ಸಾಮಾಜಿಕ ಜಾಲತಾಣದಲ್ಲಿ ಬೆಂಬಲ ಹೆಚ್ಚಿತ್ತು. ಆದರೆ ವೋಟ್ ಆಗಿ ಕನ್ವರ್ಟ್ ಆಗಲಿಲ್ಲ.‌ ಕೇವಲ ವಾರ್ ರೂಂ ಮೂಲಕ ಎಲೆಕ್ಷನ್ ಗೆಲ್ಲಬಹುದು ಎಂಬ ಅಣ್ಣಾಮಲೈ ಕನಸು ಎರಡು ಬಾರಿ ವಿಫಲವಾಯಿತು. ಇದೆಲ್ಲ ನೋಡಿಯೇ ಎಲೆಕ್ಷನ್ ಹತ್ತಿರವಾಗ್ತಿದ್ದಂತೆ, ಅಣ್ಣಾಮಲೈರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿತು.

ಇದು ಅಣ್ಣಾಮಲೈಗೆ ರಾಜಕೀಯವಾಗಿ ದೊಡ್ಡ ‌ಆಘಾತವನ್ನೇ ನೀಡಿತು. ಆದರೆ ಹೈಕಮಾಂಡ್ ಎದುರು ಉಸಿರೆತ್ತಲಾಗದೇ ಕೈ ಕಟ್ಟಿ ನಿಂತರೂ, ಬೇರೆ ಸ್ಥಾನ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದರು. ಆದರೆ, ಅದು ಈಡೇರಲಿಲ್ಲ. ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸಿದ ಎಂಟು ತಿಂಗಳಾದರೂ ಯಾವುದೇ ಸ್ಥಾನಮಾನ ನೀಡಿಲ್ಲ.
ಇದಕ್ಕೆ ಕಾರಣ ಅಣ್ಣಾಮಲೈ ವಿರುದ್ಧ ಅನೇಕ ದೂರುಗಳು ಮೋದಿ- ಅಮಿತ್ ಶಾ ಅವರಿ ತಲುಪಿತ್ತು.

ಇದರ ಮಧ್ಯೆ ಅಣ್ಣಾಮಲೈ ಡಿಎಂಕೆ ಜೊತೆ ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ ,‌ ಹೈಕಮಾಂಡ್ ಕಣ್ಣು ಕೆಂಪಾಗಿಸಿತ್ತು. ಅಣ್ಣಾಮಲೈ ಡಿಎಂಕೆ ಜತೆ ಹೊಂದಾಣಿಕೆ ಮಾಡಿಕೊಂಡಿದ್ದು, ಅನೇಕ ಮಂತ್ರಿಗಳ ಭ್ರಷ್ಟಾಚಾರಗಳನ್ನು ಮುಚ್ಚುವುದಕ್ಕೆ ಪ್ರಯತ್ನ ಮಾಡಿದ್ರು ಅನ್ನೋ ಆರೋಪ ಹೈಕಮಾಂಡ್ ಕಿವಿ ತಲುಪಿತ್ತು. ಅದಲ್ಲದೆ ಬಹಳ ದೊಡ್ಡ ಮಟ್ಟದಲ್ಲಿ ಹಣ ಪಡೆದುಕೊಂಡು ಬೆಂಗಳೂರು, ಹೊಸೂರು, ಕೊಯಂಬತ್ತೂರು ಭಾಗದಲ್ಲಿ, ತಮ್ಮ ಸಂಬಂಧಿಗಳ ಹೆಸರಿನಲ್ಲಿ ದೊಡ್ಡ, ದೊಡ್ಡ ರಿಯಲ್ ಎಸ್ಟೇಟ್ ಉದ್ಯಮ ಆರಂಭಿಸಿದ್ದರು.‌ ಇದರ ತನಿಖಾ ವರದಿಯೂ ಮೋದಿ-ಶಾ ಕೈಸೇರಿತ್ತು.

ಬೆಂಗಳೂರು ಹೊರವಲಯದಲ್ಲಿ ದೊಡ್ಡ ರಿಯಲ್ ಎಸ್ಟೇಟ್ ಮತ್ತು ಕಟ್ಟಡ ನಿರ್ಮಾಣ ಸಂಸ್ಥೆ ಅಣ್ಣಾಮಲೈ ಬೇನಾಮಿಯಾಗಿ ನಡೆಸುತ್ತಿದ್ದಾರೆ ಎಂಬ ದೂರು, ಈ ಸಂಸ್ಥೆಗೆ ಅನೇಕ ಡಿಎಂಕೆ ನಾಯಕರು ಕಪ್ಪು ಹಣ ನೀಡಿದ್ದರೆಂಬ ಮಾಹಿತಿಯೂ ದಿಲ್ಲಿ ತಲುಪಿತ್ತು. ತಮಿಳುನಾಡು ಮಾಧ್ಯಮಗಳಲ್ಲಿ ‌ತಮ್ಮ ವಿರುದ್ಧ ಯಾವುದೇ ವರದಿ ಬಾರದಂತೆ ಅಣ್ಣಾಮಲೈ ನೋಡಿಕೊಂಡರೂ, ಹೈಕಮಾಂಡ್ ಕಿವಿಮುಚ್ಚಲಾಗಲಿಲ್ಲ. ಅಣ್ಣಾಮಲೈ, ಸ್ಥಳೀಯ ಬಿಜೆಪಿಯ ಹಿರಿಯ ನಾಯಕರ ಜತೆ ಹೊಂದಾಣಿಕೆ ಬಿಟ್ಟು, ಬರೀ ಸೋಷಿಯಲ್ ಮೀಡಿಯಾದಲ್ಲೇ ಮಿಂಚುತ್ತಿದ್ದಾರೆಂಬ ರಿಪೋರ್ಟ್ ಕಾರ್ಡ್ ಹೋಗಿತ್ತು. ಈಗ ತಮ್ಮ ಅಸ್ತಿತ್ವ ಉಳಿಸಿಕೊಳ್ಳು ಅಣ್ಣಾಮಲೈ ಹೊಸ ನಾಟಕ ಶುರು ಮಾಡಿದ್ದಾರೆ ಎಂಬುದು ತಮಿಳುನಾಡು ಬಿಜೆಪಿ ನಾಯಕರ ಸಿಟ್ಟು.

ಅಣ್ಣಾಮಲೈಗೆ ಪಕ್ಷದೊಳಗೆ ಅಧಿಕಾರದ ಯಾವುದೇ ಆಸೆ ಈಡೇರಲಿಲ್ಲ. ಇದ್ದ ಅಧ್ಯಕ್ಷ ಸ್ಥಾನ ಹೋಯ್ತು, ಮತ್ತೆ ಹೊಸ ಸ್ಥಾನವೂ ಸಿಗಲಿಲ್ಲ. ಹಾಗಾಗಿ ರಾಜೀನಾಮೆ ಅಂತ ಹೇಳಿದರೆ ರಾಜ್ಯಸಭಾ ಸೀಟ್ ಸಿಗಬಹುದು ಅನ್ನೋ‌ ಲೆಕ್ಕಾಚಾರದಲ್ಲಿದ್ದಾರೆ.‌ ಅದಕ್ಕಾಗಿಯೇ ರಜನಿಕಾಂತ್ಜತೆ ಮೀಟಿಂಗ್, ಹೊಸ ಪಕ್ಷ ಕಟ್ಟುವ ಊಹಾಪೋಹ‌ ಸೃಷ್ಟಿ ಅಂತಿದ್ದಾರೆ ತಮಿಳುನಾಡು ರಾಜಕೀಯ ವಿಶ್ಲೇಷಕರು. ಭಾರೀ ಭರವಸೆಯೊಂದಿಗೆ ರಾಜಕೀಯ ಪ್ರವೇಶಿಸಿದ್ದ ಅಣ್ಣಾಮಲೈ, ತಮಿಳುನಾಡು ರಾಜಕೀಯ,‌ ತಮಿಳರ ಮನಸ್ಥಿತಿ ಅರಿಯುವಲ್ಲಿ ಆರಂಭದಲ್ಲೇ ಎಡವಿದರು. ಹಿಂದಿ ಪರ ದನಿ, ಕ್ಷೇತ್ರ ಪುನರ್ ವಿಂಗಡಣೆ, SIR ಪರ ಮಾತು ತಮಿಳರನ್ನು ಕೆಣಕಿತ್ತು.

ಅಣ್ಣಾಮಲೈ ಯೂತ್ ಐಕಾನ್ ಎನಿಸಿಕೊಂಡರೂ, ದ್ರಾವಿಡರ‌ ವೋಟ್ ಪಡೆಯಲು ಬೇಕಾದ ಸಿದ್ಧತೆ ಮಾಡಿಕೊಳ್ಳಲಿಲ್ಲ, ಪ್ರಬಲ ನಾಯಕನಾಗಿಯೂ ಜನರ ಮಧ್ಯೆ ‌ಬೆಳೆಯಲಿಲ್ಲ ಅನ್ನೋದು ಸುಳ್ಳಲ್ಲ. ಟಿವಿಕೆ‌ ನಾಯಕ ಜೋಸೆಫ್ ವಿಜಯ್ ಅಬ್ಬರದ ಎದುರು ದ್ರಾವಿಡ ಪಕ್ಷಗಳೇ ನೆಲಕಚ್ಚಿರುವಾಗ, ಅಣ್ಣಾಮಲೈ ಬಿಜೆಪಿ ಬಿಟ್ಟು ಹೊಸ ಪಾರ್ಟಿ ಕಟ್ಟಲು ಹೊರಟಿರುವುದು Too late.. ಈಗ ಏನೇ ಮಾಡಿದರೂ ಅದು ಬಿಜೆಪಿ ವಿರುದ್ಧ, ದ್ರಾವಿಡರ ಪರ ನಿಲ್ಲಬೇಕಾಗುತ್ತದೆ. ಆರೋಪಗಳ ಸುಳಿಯಲ್ಲಿ ಸಿಲುಕಿರೊ ಅಣ್ಣಾಮಲೈ ಎಷ್ಟು ಸುಲಭಕ್ಕೆ ಬಿಜೆಪಿಯನ್ನು ಎದುರು ಹಾಕಿಕೊಳ್ಳುವ. ಧೈರ್ಯ ಮಾಡಲಾರರು..

ಬರಹ: ಶೋಭಾಮಳವಳ್ಳಿ, ಹಿರಿಯ ಪತ್ರಕರ್ತೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+