ಡಿಕೆಶಿ ಗಡ್ಡದ ಶಪಥಕ್ಕೆ ಇಂದೇ ಸಿಗುತ್ತಾ ಮುಕ್ತಿ? ಪ್ರಮಾಣವಚನಕ್ಕೆ ಕ್ಲೀನ್ ಶೇವ್ ಲುಕ್‌ನಲ್ಲಿ ಬರ್ತಾರಾ ಕನಕಪುರ ಬಂಡೆ
ಬೆಂಗಳೂರು: ಕರ್ನಾಟಕ ರಾಜಕಾರಣದ 'ಟ್ರಬಲ್ ಶೂಟರ್' ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಜೀವನದ ಬಹುದೊಡ್ಡ ಕನಸು ನನಸಾಗುವ ಕಾಲ ಇಂದು ಕೂಡಿಬಂದಿದೆ. ಅವರು ರಾಜ್ಯದ ಅತ್ಯುನ್ನತ ಮುಖ್ಯಮಂತ್ರಿ ಪೀಠ ಅಲಂಕರಿಸುತ್ತಿದ್ದಾರೆ. ಇದರ ನಡುವೆ ಕಳೆದ ಕೆಲವು ವರ್ಷಗಳಿಂದ ಇಡೀ ರಾಜ್ಯದಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಅವರ 'ಗಡ್ಡದ ರಹಸ್ಯ' ಮತ್ತು ಅದರ ಹಿಂದಿನ ಶಪಥದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ದೊಡ್ಡ ಚರ್ಚೆ ಶುರುವಾಗಿದೆ. ಸದನದ ಒಳಗೂ-ಹೊರಗೂ ಸ್ವಾರಸ್ಯಕರ ಚರ್ಚೆಗಳಿಗೆ ಗ್ರಾಸವಾಗಿದ್ದ ಡಿಕೆಶಿಯವರ ಈ ವಿಭಿನ್ನ ಲುಕ್‌ನ ಹಿನ್ನೆಲೆ ಮತ್ತು ಶಪಥದ ಸಂಪೂರ್ಣ ವಿವರ ಇಲ್ಲಿದೆ.
ಯಾವಾಗಲೂ ಕ್ಲೀನ್ ಶೇವ್ ರೂಪದಲ್ಲೇ ಕಾಣಿಸಿಕೊಳ್ಳುತ್ತಿದ್ದ ಡಿ.ಕೆ.ಶಿವಕುಮಾರ್ ಅವರು 2019ರಲ್ಲಿ ಇಡಿ (ED) ಬಂಧನಕ್ಕೆ ಒಳಗಾಗಿ ತಿಹಾರ್ ಜೈಲು ಸೇರಬೇಕಾಗಿ ಬಂದಾಗ ಗಡ್ಡ ಬಿಡಲು ಆರಂಭಿಸಿದ್ದರು. ಆ ವರ್ಷದ ಅಕ್ಟೋಬರ್ 23ರಂದು ಜೈಲಿನಿಂದ ಹೊರಬಂದ ಅವರು, "ನನ್ನ ಶಪಥ ಈಡೇರುವವರೆಗೂ ನಾನು ಕ್ಲೀನ್ ಶೇವ್ ಮಾಡುವುದಿಲ್ಲ" ಎಂದು ಪಣ ತೊಟ್ಟಿದ್ದರು.

ತಿಹಾರ್ ಜೈಲಿನ ನಂಟು
ತಿಹಾರ್ ಜೈಲಿನಿಂದ ಬಿಡುಗಡೆಯಾದ ದಿನದಿಂದಲೂ ಡಿ.ಕೆ.ಶಿವಕುಮಾರ್ ಅವರು ಗಡ್ಡ ಬಿಡಲು ಆರಂಭಿಸಿದ್ದರು. ಮಾಧ್ಯಮಗಳು ಈ ಬದಲಾದ ಲುಕ್‌ನ ಹಿಂದಿನ ಉದ್ದೇಶದ ಬಗ್ಗೆ ಪ್ರಶ್ನೆ ಮಾಡಿದಾಗಲೆಲ್ಲಾ ಅವರು ಕೇವಲ ಮಂದಹಾಸ ಬೀರಿ ಸುಮ್ಮನಾಗುತ್ತಿದ್ದರೇ ವಿನಃ ಯಾವುದೇ ರಹಸ್ಯ ಬಿಟ್ಟುಕೊಡುತ್ತಿರಲಿಲ್ಲ. ಆದರೆ, ಆಂತರಿಕ ವಲಯದಲ್ಲಿ ಇದು 'ಸಿಎಂ ಗಾದಿ'ಗಾಗಿಯೇ ಮಾಡಿರುವ ಶಪಥ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿದ್ದವು. ಈ ಗಡ್ಡದ ವಿಷಯ ಕೇವಲ ಸಾಮಾಜಿಕ ಜಾಲತಾಣಗಳಿಗಷ್ಟೇ ಸೀಮಿತವಾಗದೆ, ವಿಧಾನಸಭೆಯ ಸದನದ ಒಳಗೂ ಸ್ವಾರಸ್ಯಕರ ಚರ್ಚೆಗಳಿಗೆ ವೇದಿಕೆಯಾಗಿತ್ತು.
ಅದಾದ ಬಳಿಕ 2022ರ ಜನವರಿಯಲ್ಲಿ ನಡೆದ ಮೇಕೆದಾಟು ಪಾದಯಾತ್ರೆಯ ಸಂದರ್ಭದಲ್ಲೂ, "ತಿಹಾರ್ ಜೈಲಿನಲ್ಲಿ ಬಿಟ್ಟಿರುವ ಈ ಗಡ್ಡವನ್ನು ನಾನಾಗಿಯೇ ತೆಗೆಯುವುದಿಲ್ಲ, ನೀವು (ಜನರು) ನನಗೆ ಮುಕ್ತಿ ಕೊಡಿಸಬೇಕು" ಎಂದು ಹೇಳುವ ಮೂಲಕ ತಮಗೆ ರಾಜ್ಯದ ಉನ್ನತ ಅಧಿಕಾರ ಸಿಗುವವರೆಗೂ ಗಡ್ಡ ತೆಗೆಯಲ್ಲ ಎಂಬ ಇಂಗಿತವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದರು. ಸದ್ಯ ಮುಖ್ಯಮಂತ್ರಿ ಸ್ಥಾನ ಸಿಗುತ್ತಿರುವುದರಿಂದ ಅವರು ತಮ್ಮ ಗಡ್ಡಕ್ಕೆ ಮುಕ್ತಿ ನೀಡಿ ಹಳೆಯ ರೂಪಕ್ಕೆ ಮರಳುತ್ತಾರಾ ಎಂಬ ಕುತೂಹಲ ಎಲ್ಲರಲ್ಲಿದೆ.
ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಜೀವನದ ಬಹುದೊಡ್ಡ ಕನಸು ನನಸಾಗುವ ಕಾಲ ಹತ್ತಿರ ಬಂದಿದೆ. ಈ ಮಹತ್ವದ ಬೆಳವಣಿಗೆಯ ನಡುವೆ, ಕಳೆದ ಕೆಲವು ವರ್ಷಗಳಿಂದ ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಡಿಕೆಶಿಯವರ ಗಡ್ಡದ ರಹಸ್ಯ ಹಾಗೂ ಅದರ ಶಪಥದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಚರ್ಚೆ ಮುಂಚೂಣಿಗೆ ಬಂದಿದೆ.
ಸದನದಲ್ಲೂ ಚರ್ಚೆ
ಒಮ್ಮೆ ಸದನದಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಡಿಕೆಶಿ ಗಡ್ಡದ ವಿಷಯವನ್ನು ಪ್ರಸ್ತಾಪಿಸಿ, "ಶಿವಕುಮಾರ್ ಅವರು ಶೀಘ್ರದಲ್ಲೇ ಗಡ್ಡ ತೆಗೆಯಲಿದ್ದಾರೆ ಎನ್ನುವ ಮಾಹಿತಿ ನನಗೆ ಸಲೂನ್‌ನವರಿಂದ ಬಂದಿದೆ, ಅವರ ಶಪಥವಾದರೂ ಏನು?" ಎಂದು ಕಾಲೆಳೆದಿದ್ದರು. ಇದಕ್ಕೆ ಆಡಳಿತ ಪಕ್ಷದ ಪರವಾಗಿ ಧ್ವನಿ ಎತ್ತಿದ್ದ ಸಚಿವ ಕೃಷ್ಣ ಬೈರೇಗೌಡರು, "ಅವರು ದೇವಸ್ಥಾನಕ್ಕೆ ಹೋದಾಗ ಗಡ್ಡ ಬಿಡುತ್ತಾರೆ, ಅಜ್ಜಯ್ಯನವರ ಆದೇಶವಾದಾಗ ಅದನ್ನು ತೆಗೆಯುತ್ತಾರೆ" ಎಂದು ತಿರುಗೇಟು ನೀಡಿದ್ದರು. ಸದ್ಯ ಸಿಎಂ ಪಟ್ಟ ಅಲಂಕರಿಸುವುದು ನಿಶ್ಚಿತವಾಗಿರುವುದರಿಂದ, ಪದಗ್ರಹಣದ ದಿನದಂದು ಡಿಕೆಶಿ ತಮ್ಮ ಹಳೆಯ ಕ್ಲೀನ್ ಶೇವ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಎಲ್ಲ ಪ್ರಶ್ನೆಗಳಿಗೂ ಇಂದಿನ ಪ್ರಮಾಣವಚನ ಸಮಾರಂಭದಲ್ಲಿ ಉತ್ತರ ಸಿಗಲಿದೆ.













Click it and Unblock the Notifications