Namma Metro: ಹಳದಿ ಮಾರ್ಗದ ಸೇವಾ ರೈಲುಗಳ ಸಂಖ್ಯೆ 10ಕ್ಕೆ ಏರಿಕೆ, ಸಂಚಾರ ಸಮಯ ಪರಿಷ್ಕರಣೆ
ಬೆಂಗಳೂರು: ಐಟಿ ಕೇಂದ್ರ ಬೆಂಗಳೂರಿನಲ್ಲಿ ಮೆಟ್ರೋ ಬಳಕೆದಾರರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ನಮ್ಮ ಮೆಟ್ರೋ ಮೂರನೇ ಮಾರ್ಗವಾಗಿ ಆರ್.ವಿ.ರಸ್ತೆ-ಬೊಮ್ಮಸಂದ್ರವರೆಗಿನ ಹಳದಿ ಮಾರ್ಗದಲ್ಲಿ ಹೊಸ ರೈಲುಗಳ ನಿಯೋಜನೆ ವಿಳಂಬವಾಗುತ್ತಿವೆ ಎಂಬ ದೂರುಗಳು ಕೇಳಿ ಬಂದಿದ್ದವು. ಇದೀಗ ಆ ಚಿಂತೆ ದೂರ ಮಾಡಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಇಂದು ಬುಧವಾರದಿಂದ (ಜೂ 3ರಿಂದ) ಹೆಚ್ಚುವರಿಯಾಗಿ 2 ಹೊಸ ಡ್ರೈವರ್‍ಲೆಸ್ ರೈಲುಗಳನ್ನು ಹಳಿದ ಮಾರ್ಗಕ್ಕೆ ಸೇರ್ಪಡೆಗೊಳಿಸಿದೆ. ಅವು ಇಂದಿನಿಂದಲೇ ಸಂಚಾರ ಆರಂಭಿಸಿವೆ.
ಹೌದು, 19.5 ಕಿಲೋ ಮೀಟರ್ ಉದ್ದದ ಆರ್.ವಿ.ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗದಲ್ಲಿ ಈವರೆಗೆ ಒಟ್ಟು 08 ಡ್ರೈವರ್‍ಲೆಸ್ ಮೆಟ್ರೋ ರೈಲುಗಳು ಮಾತ್ರ ಸಂಚಾರ ಮಾಡುತ್ತಿದ್ದವು. ಇದೀಗ ಹೊಸದಾಗಿ ಇನ್ನೆರಡು ಸೇರಿ ಇಂದಿನಿಂದ 10 ಮೆಟ್ರೋ ರೈಲುಗಳು ಸೇವೆಗೆ ನಿಯೋಜನೆಗೊಂಡಂತಾಗಿದೆ. ಹೀಗಾಗಿ ಹಳದಿ ಮಾರ್ಗದಲ್ಲಿಪೀಕ್ ಅವರ್, ಸಾಮಾನ್ಯ ಅವರ್ ಹಾಗೂ ಭಾನುವಾರದ ರೈಲು ಸಂಚಾರ ಸಮಯವನ್ನು ಪರಿಷ್ಕರಣೆ ಮಾಡಿರುವುದಾಗಿ ಬಿಎಂಆರ್ ಸಿಎಲ್ ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿದ್ದಾರೆ.

ನಮ್ಮ ಮೆಟ್ರೋ ಹಳದಿ ಮಾರ್ಗವು 2025 ಆಗಸ್ಟ್ 10ರಂದು ಪ್ರಧಾನ ನರೇಂದ್ರ ಮೋದಿಯವರು ಉದ್ಘಾಟಿಸುವ ಮೂಲಕ ವಾಣಿಜ್ಯ ಸೇವೆ ಆರಂಭಿಸಿತ್ತು. ಮೊದಲ ದಿನವೇ ಸುಮಾರು 30,000 ಮಂದಿ ಪ್ರಯಾಣ ಮಾಡಿದ್ದರು. ಇಂದಿಗೆ ನಿತ್ಯ ಸುಮಾರು 1,00,000 ಮಂದಿ ಸಂಚರಿಸುತ್ತಾರೆ. ಬೆಳಗ್ಗೆ ಮತ್ತು ಸಂಜೆ ಪೀಕ್ ಸಮಯದಲ್ಲಿ ರೈಲುಗಳಿಗೆ ಬೇಡಿಕೆ ಹೆಚ್ಚಿತ್ತು. ರೈಲುಗಳ ಆವರ್ತನ ಸಮಯ 9 ನಿಮಿಷ ಇದ್ದ ಕಾರಣ ಮೆಟ್ರೋ ಪ್ರಯಾಣಿಕರಿಗೆ ತೊಂದರೆ ಆಗುತ್ತಿತ್ತು.
2 ಹೊಸ ರೈಲುಗಳ ಸೇರ್ಪಡೆ
ಹಳದಿ ಮಾರ್ಗಕ್ಕಾಗಿ ಇತ್ತೀಚೆಗೆ 12ನೇ ಹೊಸ ರೈಲಿನ ಸೆಟ್ ಹೆಬ್ಬಗೋಡಿ ಡಿಪೋಗೆ ಆಗಮಿಸಿದೆ. ಈ ಹಿಂದೆ ಬಂದಿದ್ದ 9 ಮತ್ತು 10ನೇ ರೈಲುಗಳ ಶಾಸನಬದ್ಧ ಪ್ರಾಯೋಗಿಕ ಸಂಚಾರ, ಪರೀಕ್ಷೆ, ಇನ್ನಿತರ ಎಲ್ಲ ತಪಾಸಣೆಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಅವೆರಡನ್ನು ಇಂದಿನಿಂದ ಕಾರ್ಯಾಚರಣೆ ಬಿಡಲು ತೀರ್ಮಾನಿಸಿದ್ದಾಗಿ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ. ಉಳಿದ 11 ಮತ್ತು 12ನೇ ಹೊಸ ಮೆಟ್ರೋ ರೈಲು ಸೆಟ್‌ಗಳ ತಪಾಸಣೆ ಮುಂದುವರಿದಿದೆ. ಪ್ರಾಯೋಗಿಕ ಸಂಚಾರ, ಪರೀಕ್ಷೆಗಳು ಪೂರ್ಣಗೊಳ್ಳುತ್ತಿದ್ದಂತೆ ಅವುಗಳು ಮುಂದಿನ ಜುಲೈ ತಿಂಗಳಲ್ಲಿ ಹಳಿದ ಮಾರ್ಗದಲ್ಲಿ ಸೇವೆಗೆ ನಿಯೋಜನೆಗೊಳಿಸು ನಿರೀಕ್ಷೆಗಳು ಇವೆ ಎನ್ನಲಾಗಿದೆ.
ಹಳದಿ ಮಾರ್ಗ: ಮೆಟ್ರೋ ಸಂಚಾರ ಸಮಯ ಪರಿಷ್ಕರಣೆ
ಈ ಮಾರ್ಗದಲ್ಲಿ ಹೊಸ ರೈಲುಗಳ ಸೇರ್ಪಡೆಯಿಂದ ರೈಲುಗಳ ಸಂಚಾರ ಸಮಯ ಬದಲಾಗಿದೆ. ಈ ಮೊದಲು ಪೀಕ್ ಸಮಯದಲ್ಲಿ ಪ್ರತಿ ರೈಲು 9 ನಿಮಷಕ್ಕೊಂದರಂತೆ ಸಂಚಾರ ಮಾಡುತ್ತಿದ್ದವು. ಅದನ್ನೀಗ 7 ನಿಮಿಷಕ್ಕೆ ಇಳಿಸಲಾಗಿದೆ. ಸಾಮಾನ್ಯ ಸಮಯದಲ್ಲಿ 14 ನಿಮಿಷಗಳಿಗೆ ಒಮ್ಮೆ ಸಂಚರಿಸುತ್ತಿದ್ದ ಮೆಟ್ರೋಗಳು ಇದೀಗ 10 ನಿಮಿಷಕ್ಕೊಮ್ಮೆ ಓಡಾಡುತ್ತಿವೆ. ಇನ್ನು ಭಾನುವಾರ ಒಂದು ದಿನ ಪ್ರತಿ 10 ನಿಮಿಷಕ್ಕೆ ಒಂದರಂತೆ ರೈಲುಗಳು ಸಂಚರಿಸಲಿವೆ. ರೈಲುಗಳ ಆವರ್ತನ ಸಮಯ ಇಳಿಕೆಯಿಂದ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗುತ್ತಿದೆ.
ಹಳದಿ ಮಾರ್ಗವು ಎಲೆಕ್ಟ್ರಾನಿಕ್ ಸಿಟಿಯಂತಹ ಐಟಿ ಕಾರಿಡಾರ್‍ಗೆ ಸಂಪರ್ಕ ಕಲ್ಪಿಸುತ್ತದೆ. ಇಲ್ಲಿಗೆ ಉದ್ಯೋಗಿಗಳು ಸೇರಿದಂತೆ ಸಾರ್ವಜನಿಕರ ನಿತ್ಯ ಓಡಾಟ ಹೆಚ್ಚಿರುತ್ತದೆ. ಪ್ರತಿದಿನ ಹಸಿರು ಮಾರ್ಗ (ರೆಷ್ಮೆ ಸಂಸ್ಥೆ-ಮಾದಾವರ) ಮತ್ತು ನೇರಳೆ ಮಾರ್ಗದ (ಚಲ್ಲಘಟ್ಟ-ವೈಟ್‌ಫಿಲ್ಡ್) ಮೂಲಕ ಎಲೆಕ್ಟ್ರಾನಿಕ್ ಸಿಟಿ ಮಾರ್ಗಕ್ಕೆ ಬರುವವರ ಸಂಖ್ಯೆಯೂ ಏರಿಕೆ ಆಗಿದೆ. ಹೀಗಾಗಿ ಮೂರು ಮಾರ್ಗಗಳ ನಿಲ್ದಾಣಗಳಲ್ಲಿ ಪೀಕ್ ಸಮಯದಲ್ಲಿ ಪ್ರಯಾಣಿಕರ ದಟ್ಟಣೆ ಕಂಡು ಬರುತ್ತಿದೆ. ಈ ದಟ್ಟಣೆ ಇಳಿಕೆಗೆ ಕ್ರಮ ವಹಿಸಬೇಕೆಂದು ಜನ ಮೆಟ್ರೋ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.














Click it and Unblock the Notifications