ರಷ್ಯಾ ಮತ್ತು ಉಕ್ರೇನ್ ಬಡಿದಾಟ, ಇರಾನ್ ತಲೆನೋವಿನ ಜೊತೆ ಮತ್ತೊಂದು ಸಂಕಷ್ಟ | Ukraine And Russia
ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ದಾಳಿ ಮಾಡುತ್ತಿರುವ ಸಮಯದಲ್ಲಿ ಮಧ್ಯಪ್ರಾಚ್ಯದಲ್ಲಿ ಸೂಕ್ಷ್ಮ ವಾತಾವರಣ ನಿರ್ಮಾಣ ಆಗಿದೆ. ಇನ್ನೊಂದು ಕಡೆ ರಷ್ಯಾ ಮತ್ತು ಉಕ್ರೇನ್ ಬಡಿದಾಟ ಈಗ ಯುರೋಪ್ ದೇಶಗಳ ನಿದ್ದೆ ಹಾರಿ ಹೋಗುವಂತೆ ಮಾಡಿದೆ. ಇಂತಹ ವಾತಾವರಣದಲ್ಲಿ ಈಗ ದಿಢೀರ್ ಅಂತಾ ಉಕ್ರೇನ್ ವಿರುದ್ಧ ರಷ್ಯಾ ಭಾರಿ ಗಂಭೀರ ಆರೋಪ ಮಾಡಿದೆ. ಉಕ್ರೇನ್ ನೌಕಾಪಡೆ ಡ್ರೋನ್‌ಗಳು ರಷ್ಯಾದ ಎಲ್‌ಎನ್‌ಜಿ ಸಾಗಾಣಿಕೆಯ ಹಡಗಿನ ಮೇಲೆ ದಾಳಿ ಮಾಡಿದೆ ಎಂದು ರಷ್ಯಾ ಆರೋಪಿಸಿದೆ. ಈ ಮೂಲಕ ಉಕ್ರೇನ್ ಸೇನೆಯು ನಿಯಮ ಮೀರಿದೆ ಎಂಬ ಆರೋಪ ಮಾಡಲಾಗಿದ್ದು, 'ಆರ್ಕ್ಟಿಕ್ ಮೆಟಾಗಾಜ್' ಮೇಲೆ ನಡೆದ ದಾಳಿ ಸಂಚಲನ ಸೃಷ್ಟಿಸಿದೆ. ಮೆಡಿಟರೇನಿಯನ್ ಸಮುದ್ರದಲ್ಲಿ ಸಂಚಾರ ಮಾಡುವಾಗ ಈ ಘಟನೆ ನಡೆದಿದೆ ಎಂದು ಹೇಳಿದೆ ರಷ್ಯಾ.
ಇರಾನ್ ಯುದ್ಧ, ಗಾಜಾ ಪಟ್ಟಿಯಲ್ಲಿ ಯುದ್ಧ, ರಷ್ಯಾ & ಉಕ್ರೇನ್ ಯುದ್ಧ... ಹೀಗೆ ಪ್ರಪಂಚ ಹಾಳಾಗಿ ಹೋಗಿ ಎಲ್ಲೆಲ್ಲೂ ಬರೀ ಯುದ್ಧದ ಮಾತೇ ಕೇಳಿಬರುತ್ತಿದೆ. ಒಂದೆಡೆ ದಿಢೀರ್ ಅಂತಾ ಶುರುವಾಗಿರುವ ಇರಾನ್ & ಇಸ್ರೇಲ್ ಯುದ್ಧ ಭೀತಿ ಹುಟ್ಟುಹಾಕಿದೆ. ಅಮೆರಿಕ & ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ಕಾರ್ಯಾಚರಣೆ ಶುರು ಮಾಡಿವೆ. ಅತ್ತ ರಷ್ಯಾ ಮತ್ತು ಉಕ್ರೇನ್ ಕಳೆದ 4 ವರ್ಷಗಳಿಂದ ಬಡಿದಾಡುತ್ತಿವೆ. ಇನ್ನೊಂದು ಕಡೆ ಇಸ್ರೇಲ್ ಹಾಗೂ ಗಾಜಾ ನಡುವೆ ಕೂಡ ತಿಕ್ಕಾಟ ನಡೆಯುತ್ತಿದೆ. ಹೀಗಿದ್ದಾಗ 'ಆರ್ಕ್ಟಿಕ್ ಮೆಟಾಗಾಜ್' ಮೇಲೆ ದಾಳಿ ಮಾಡಿದೆ ಉಕ್ರೇನ್ ಎಂದು ರಷ್ಯಾ ಮಾಡಿರುವ ಆರೋಪ ಇನ್ನಷ್ಟು ತಲ್ಲಣ ಎಬ್ಬಿಸಿದೆ. ಹಾಗೇ ಈ ದಾಳಿಗೆ ರಷ್ಯಾ ಮಿಲಿಟರಿ ಪ್ರತಿಕಾರ ತೆಗೆದುಕೊಳ್ಳುವ ಭೀತಿ ಕೂಡ ಆವರಿಸಿದೆ.

ಯುದ್ಧ ನಿಲ್ಲಿಸಲು ಆಗದೆ ಅಮೆರಿಕ ಸುಸ್ತು!
ಡೊನಾಲ್ಡ್ ಟ್ರಂಪ್ ತಾವು ಅಧಿಕಾರಕ್ಕೆ ಬಂದ 24 ಗಂಟೆ ಒಳಗೆ ರಷ್ಯಾ ಮತ್ತು ಉಕ್ರೇನ್ ಯುದ್ಧವನ್ನ ನಿಲ್ಲಿಸಿಬಿಡ್ತೀನಿ, ಈ ಯುದ್ಧವನ್ನ ನಿಲ್ಲಿಸೋದು ಯಾವ ದೊಡ್ಡ ಮಾತು? ಹಿಂಗೆಲ್ಲಾ ಮಾತನಾಡಿದ್ದರು. ಆದರೆ ಡೊನಾಲ್ಡ್ ಟ್ರಂಪ್ ಅವರು ಅಧಿಕಾರಕ್ಕೆ ಬಂದು ಬರೋಬ್ಬರಿ ಒಂದು ವರ್ಷ ಕಳೆದು ಎರಡನೇ ವರ್ಷಕ್ಕೆ ಕಾಲಿಟ್ಟಿದೆ. ಹೀಗಿದ್ದರೂ ಯುದ್ಧ ನಿಲ್ಲುವುದು ಬಿಡಿ, ಕನಿಷ್ಠ ಶಾಂತಿ ಮಾತುಕತೆಗಳು ಕೂಡ ಯಶಸ್ವಿ ಆಗಿಲ್ಲ. ಹೀಗೆ ಸಾಲು ಸಾಲು ಸೋಲುಗಳ ಪರಿಣಾಮ ಶಾಂತಿ ಮಾತುಕತೆ ಕೂಡ ಅರ್ಧಕ್ಕೇ ನಿಂತು ಹೋಗಿದೆ. ಇದನ್ನೆಲ್ಲಾ ನೋಡುತ್ತಿದ್ದರೆ ರಷ್ಯಾ ಮತ್ತು ಉಕ್ರೇನ್ ಯುದ್ಧ ಇನ್ನೂ ಹಲವು ವರ್ಷ ಇದೇ ರೀತಿಯಾಗಿ ಮುಂದುವರಿಯುವ ಟೆನ್ಷನ್ ಕೂಡ ಹೆಚ್ಚಾಗುತ್ತಿದೆ.
ಕಳ್ಳತನಕ್ಕೆ ಸಮಾನ ಎಂದು ರಷ್ಯಾ ಆರೋಪ
ಎಲ್‌ಎನ್‌ಜಿ ಸಾಗಾಣಿಕೆ ಹಡಗಿನ ಮೇಲೆ ದಾಳಿ ಮಾಡಬಾರದು ಎಂಬ ನಿಯಮ ಇದ್ದರೂ ಉಕ್ರೇನ್‌ನ ಸೇನೆ ಈ ನಿಯಮ ಮೀರಿದೆ ಎಂಬ ಆರೋಪ ಹೊರಿಸಲಾಗಿದೆ. ಮತ್ತೊಂದು ಕಡೆ ಉಕ್ರೇನ್ ಭದ್ರತಾ ವಿಭಾಗದ ಅಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯೆ ನೀಡದೇ ಇರುವುದು ಅನುಮಾನ ಹೆಚ್ಚು ಮಾಡುತ್ತಿದ್ದು, ಈಗ ನಡೆದಿರುವ ಘಟನೆಯು ಅಂತಾರಾಷ್ಟ್ರೀಯ ಭಯೋತ್ಪಾದನೆ ಮತ್ತು ಸಮುದ್ರ ಕಳ್ಳತನಕ್ಕೆ ಸಮಾನ. ಇದು ಅಂತಾರಾಷ್ಟ್ರೀಯ ಸಮುದ್ರ ಕಾನೂನು ಮೂಲ ನಿಯಮಗಳ ಗಂಭೀರವಾದ ಉಲ್ಲಂಘನೆ ಎಂದು ಇದೀಗ ರಷ್ಯಾ ಎಚ್ಚರಿಕೆ ನೀಡಿದೆ. ಅಲ್ಲದೆ ಈ ವಿಚಾರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತಾಪ ಮಾಡುವುದಾಗಿ ಘೋಷಿಸಿದ್ದು, ಉಕ್ರೇನ್‌ಗೆ ಸರಿಯಾದ ಪಾಠ ಕಲಿಸಲು ನಿರ್ಧರಿಸಿದೆ ರಷ್ಯಾ. ಈ ಮೂಲಕ ರಷ್ಯಾ ಮತ್ತು ಉಕ್ರೇನ್ ನಡುವೆ ಭಾರಿ ದೊಡ್ಡ ತಿಕ್ಕಾಟ ಇದೀಗ ಶುರುವಾಗಿದ್ದು, ಭವಿಷ್ಯದಲ್ಲಿ ಮತ್ತೆ ದೊಡ್ಡ ಮಟ್ಟದಲ್ಲಿ ಬಡಿದಾಟ ಶುರುವಾಗುವ ಆತಂಕ ಮೂಡಿಸಿದೆ.












Click it and Unblock the Notifications