ಬ್ರಿಟನ್ ಬಳಿಕ ಅಮೆರಿಕಗೆ ಕೈಕೊಟ್ಟ ಸ್ಪೇನ್, ಕುತೂಹಲ ಕೆರಳಿಸಿದ ಸ್ಪೇನ್ ನಡೆ | Operation Roaring Lion
ಇರಾನ್ ಮತ್ತು ಅಮೆರಿಕ ಯುದ್ಧದ ವಿಚಾರದಲ್ಲಿ ಎಲ್ಲಾ ಕಡೆಯೂ ಸಾಲು ಸಾಲು ಚರ್ಚೆಗಳು ಈಗ ನಡೆಯುತ್ತಾ ಇವೆ. ಈ ಯುದ್ಧವನ್ನು ಬೆಂಬಲಿಸುವ ದೇಶಗಳ ಜೊತೆಗೆ, ಯುದ್ಧ ಬೇಡವಾಗಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ದೇಶಗಳು ಕೂಡ ಹೆಚ್ಚಾಗಿವೆ. ಅದರಲ್ಲೂ ಅಮೆರಿಕ ನಂಬಿರುವ & ಅಮೆರಿಕದ ಜೊತೆಗೆ ಶತಮಾನಗಳಿಂದ ಸ್ನೇಹ ಉಳಿಸಿಕೊಂಡು ಬಂದಿರುವ ಯುರೋಪ್ ದೇಶಗಳಲ್ಲೇ ಇದೀಗ ಭಿನ್ನರಾಗ ಶುರುವಾಗಿದೆ. ಕೆಲವು ದಿನಗಳ ಹಿಂದೆ ಬ್ರಿಟನ್ ಕೂಡ ಇರಾನ್ ವಿರುದ್ಧದ ಸೇನಾ ಕಾರ್ಯಾಚರಣೆ ವಿಚಾರವಾಗಿ ಭಿನ್ನರಾಗ ಹಾಡಿತ್ತು, ಇದೀಗ ಸ್ಪೇನ್ ಕೂಡ ಅದೇ ಹಾದಿ ತುಳಿದಿದೆ.
ಅಮೆರಿಕ ಇದೀಗ ವಾಯುದಾಳಿ ಹಾಗೂ ನೌಕಾದಾಳಿ ಮೂಲಕ ಇರಾನ್‌ನ ಎದೆ ನಡುಗಿಸಿದ್ದು, ಇನ್ನು ಕೆಲವೇ ದಿನಗಳಲ್ಲಿ ಭೂದಾಳಿ ಕೂಡ ಆರಂಭ ಆಗುವ ಸಾಧ್ಯತೆ ದಟ್ಟವಾಗಿದೆ. ಈ ಮೂಲಕ ಇಡೀ ಇರಾನ್ ದೇಶವನ್ನು ತನ್ನ ವಶಕ್ಕೆ ಪಡೆಯಲು ಅಮೆರಿಕ ಎಲ್ಲಾ ರೀತಿಯ ತಂತ್ರ ಹೂಡಿದೆಯಾ? ಎಂಬ ಚರ್ಚೆ ಶುರುವಾಗಿದೆ. ಇಂತಹ ಸಮಯದಲ್ಲೇ ಮತ್ತಷ್ಟು ಅಮೆರಿಕ ಸೈನಿಕರು ಇರಾನ್ ಬಳಿಗೆ ಬಂದು ಜಮಾವಣೆ ಆಗಲಿದ್ದು, ಮಧ್ಯಪ್ರಾಚ್ಯ ಭಾಗದ ವಿವಿಧೆಡೆ ಅವರನ್ನು ಕಳುಹಿಸುವ ಯೋಜನೆ ಇದೆ. ಈ ಮೂಲಕ ಇರಾನ್ ಸುತ್ತಲೂ ದೊಡ್ಡ ಕೋಟೆ ನಿರ್ಮಾಣ ಮಾಡುತ್ತಿದೆ ಅಮೆರಿಕ. ಮತ್ತೊಂದು ಕಡೆ ಯುರೋಪ್ ಸೇರಿದಂತೆ ನ್ಯಾಟೋ ಒಕ್ಕೂಟದ ಬೆಂಬಲ ಪಡೆಯಲು ಈಗ ಅಮೆರಿಕ ಪ್ರಯತ್ನ ಮಾಡ್ತಾ ಇದೆ ಎಂಬ ಸುದ್ದಿ ಹಬ್ಬಿದೆ. ಇಂತಹ ಚರ್ಚೆಗಳ ನಡುವೆಯೇ ಬ್ರಿಟನ್ ಈ ಸೇನಾ ಕಾರ್ಯಾಚರಣೆಗೆ ಬೇಸರ ಹೊರಹಾಕಿತ್ತು, ಇದೀಗ ಸ್ಪೇನ್ ಕೂಡ ಅದೇ ಹಾದಿ ತುಳಿದಿದೆ.

ಬ್ರಿಟನ್ ಜೊತೆ ಮೊದಲು ಕಿರಿಕ್
ಇರಾನ್ ವಿರುದ್ಧ ಯುದ್ಧ ಶುರುವಾದ ನಂತರ ಬ್ರಿಟನ್ ಸೇರಿದಂತೆ ನ್ಯಾಟೋ ಒಕ್ಕೂಟದ ದೇಶಗಳೆಲ್ಲಾ ನಮ್ಮ ಜೊತೆಗೆ ನಿಲ್ಲಬಹುದು ಎಂಬ ನಿರೀಕ್ಷೆಗಳು ಅಮೆರಿಕ ನಾಯಕರಲ್ಲಿ ಇತ್ತು. ಅದರಲ್ಲೂ ಇದೇ ಅಮೆರಿಕ ಹಾಗೂ ಬ್ರಿಟನ್ ನೂರಾರು ವರ್ಷಗಳಿಂದ ಕೂಡ ಒಟ್ಟಾಗಿಯೇ ವ್ಯಾಪಾರ & ವ್ಯವಹಾರಗಳನ್ನ ಮಾಡುತ್ತಿವೆ. ಸೇನಾ ಕಾರ್ಯಾಚರಣೆ ವಿಚಾರದಲ್ಲಿ ಇಬ್ಬರೂ ಒಟ್ಟಾಗಿಯೇ ನಿಲ್ಲುತ್ತಾ ಇದ್ದರು. ಆದರೆ ಈಗ ಇಸ್ರೇಲ್ ಜೊತೆ ಸೇರಿಕೊಂಡು ಇರಾನ್ ವಿರುದ್ಧ ಅಮೆರಿಕ ನಡೆಸುತ್ತಿರುವ ದಾಳಿಯ ಬಗ್ಗೆ ಬೇಸರ ಹೊರ ಹಾಕಿದ್ದಾರೆ ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್. ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೂಡ ರೊಚ್ಚಿಗೆದ್ದು ಆಕ್ರೋಶ ಹೊರ ಹಾಕಿದ್ದರು. ಆದರೆ ಫ್ರಾನ್ಸ್ & ಜರ್ಮನಿ ಸೇರಿ ಅಕ್ಕಪಕ್ಕದ ದೇಶಗಳನ್ನು ಹೊಗಳಿ ಗಮನ ಸೆಳೆದಿದ್ದರು. ಇದೀಗ ಸ್ಪೇನ್ ಕೂಡ ಉಲ್ಟಾ ತಿರುಗಿಬಿದ್ದಿದೆ ಅಮೆರಿಕಗೆ.
ಯುದ್ಧ ಬೇಡ ಎಂದು ಹೇಳಿದ ಸ್ಪೇನ್
ಸ್ಪೇನ್ ಪ್ರಧಾನಿ ಪೆಪ್ರೊ ಸ್ಯಾಂಚೆಜ್ ಯುದ್ಧದ ವಿಚಾರದಲ್ಲಿ ಕಡ್ಡಿ ತುಂಡು ಮಾಡಿದಂತೆ ಮಾತನಾಡಿ, ಇರಾನ್ ಮೇಲಿನ ಅಮೆರಿಕ ದಾಳಿಗೆ ನಾವು ಸಹಾಯ ಮಾಡಲ್ಲ ಎಂದಿದ್ದಾರೆ. ಅಲ್ಲದೆ ನಮಗೆ ಯುದ್ಧವು ಬೇಡ ಎಂದು ಸ್ಯಾಂಚೆಜ್ ಸ್ಪಷ್ಟಪಡಿಸಿದ್ದಾರೆ. ಅಷ್ಟಕ್ಕೂ ಇದೀಗ ಇರಾನ್ ಮೇಲಿನ ವಾಯುದಾಳಿಗಾಗಿ ಸ್ಪೇನ್ ದೇಶದ ವಾಯುನೆಲೆ ಬಳಸಿಕೊಳ್ಳಲು ಅಮೆರಿಕ ಆಸೆ ವ್ಯಕ್ತಪಡಿಸಿತ್ತು. ಈ ವಿಚಾರವಾಗಿ ಸ್ಪೇನ್ ತಕ್ಷಣವೇ ಇಲ್ಲ ಎಂಬ ಉತ್ತರ ನೀಡಿತ್ತು, ಹೀಗೆ ಸ್ಪೇನ್ ತಮ್ಮ ಮಾತು ಕೇಳದೇ ಇದ್ದ ಕಾರಣಕ್ಕೆ ಅತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಕ್ರೋಶ ಹೊರ ಹಾಕಿದ್ದರು. ಅಲ್ಲದೆ ಸ್ಪೇನ್ ಜೊತೆಗೆ ಅಮೆರಿಕ ಎಲ್ಲಾ ರೀತಿ ವ್ಯಾಪಾರ ಒಪ್ಪಂದ ರದ್ದುಗೊಳಿಸುತ್ತದೆ ಎಂದು ಎಚ್ಚರಿಸಿದ್ದರು. ಇದಕ್ಕೆಲ್ಲಾ ಈಗ ಉತ್ತರ ನೀಡಿರುವ ಸ್ಪೇನ್ ಪ್ರಧಾನಿ ಪೆಪ್ರೊ ಸ್ಯಾಂಚೆಜ್, ಯುದ್ಧ ಕುರಿತು ಸ್ಪೇನ್ ನಿರ್ಧಾರ ಒಂದೇ ಆಗಿದ್ದು ನಮಗೆ ಯುದ್ಧ ಬೇಡ ಎನ್ನುವುದೇ ನಮ್ಮ ನಿಲುವು ಎಂದಿದ್ದಾರೆ ಸ್ಪೇನ್ ಪ್ರಧಾನಿ ಪೆಪ್ರೊ ಸ್ಯಾಂಚೆಜ್.












Click it and Unblock the Notifications