ಸರಸ್ವತಿ ದೇವಿಯ ಕೈಯಲ್ಲಿ ಮೊದಲು ವೀಣೆ ಇರಲಿಲ್ಲವೇ? ಚೋಳ-ಪಲ್ಲವ ಶಿಲ್ಪಗಳು ಹೇಳುವ ಅಚ್ಚರಿಯ ಇತಿಹಾಸ
ನಾವೆಲ್ಲ ನೋಡಿರುವಂತೆ, ಸರಸ್ವತಿ ದೇವಿಯ ಶಿಲ್ಪಗಳ ಕೈಯಲ್ಲಿ ವೀಣೆ ಇರುತ್ತದೆ. ರಾಜಾ ರವಿವರ್ಮನ ಚಿತ್ರಗಳಲ್ಲೂ ಆಕೆಯ ಕೈಯಲ್ಲಿ ವೀಣೆ ಹಿಡಿಸಿದ್ದಾನೆ. ನಮ್ಮ ಕಲ್ಪನೆ ಎಂದರೆ, ಸರಸ್ವತಿ ದೇವಿ ವೀಣಾಪಾಣಿ ಎಂದೇ. ಆದರೆ, ಚೋಳರ ಕಾಲದ (ಕ್ರಿಸ್ತಪೂರ್ವ 3ರಿಂದ ಕ್ರಿಸ್ತಶಕ 1ನೇ ಶತಮಾನ) ಹಲವು ಸರಸ್ವತಿ ಶಿಲ್ಪಗಳು ಕುತೂಹಲಕಾರಿ ಸಂಗತಿ ಹೊರಗೆಡಹಿವೆ. ಈಕೆಯ ಕೈಗಳಲ್ಲಿ ವೀಣೆ ಇಲ್ಲ.
ಗಂಗೈಕೊಂಡಚೋಳಪುರಂ ದೇವಾಲಯದ ಗರ್ಭಗುಡಿಯ ಹೊರಭಾಗದಲ್ಲಿರುವ ಅರ್ಥಮಂಟಪದಲ್ಲಿ ಸರಸ್ವತಿ ದೇವಿಯ ಒಂದು ವಿಶೇಷ ಶಿಲ್ಪವಿದೆ. ಈ ಶಿಲ್ಪದ ವಿಶೇಷತೆ ಏನೆಂದರೆ, ಇಂದು ಸರಸ್ವತಿ ದೇವಿಯ ಪ್ರಮುಖ ಗುರುತಾಗಿರುವ ವೀಣೆ ಈ ಮೂರ್ತಿಯಲ್ಲಿ ಇಲ್ಲ.

ಈ ಮೂರ್ತಿಯಲ್ಲಿ ದೇವಿಯು ಪದ್ಮಾಸನದಲ್ಲಿ ಕುಳಿತಿದ್ದು, ನಾಲ್ಕು ಕೈಗಳನ್ನು ಹೊಂದಿದ್ದಾಳೆ. ಒಂದು ಕೈಯಲ್ಲಿ ತಾಳೆಪತ್ರ ಗ್ರಂಥ, ಮತ್ತೊಂದು ಕೈಯಲ್ಲಿ ರುದ್ರಾಕ್ಷಿ ಮಾಲೆ ಇದೆ. ಉಳಿದ ಎರಡು ಕೈಗಳಲ್ಲಿ ಅಂಕುಶ ಮತ್ತು ಪಾಶ ಇವೆ. ಸಾಮಾನ್ಯವಾಗಿ ಸರಸ್ವತಿ ದೇವಿಯ ಮೂರ್ತಿಗಳಲ್ಲಿ ಇಂತಹ ಆಯುಧಗಳು ಕಾಣಿಸುವುದಿಲ್ಲ.
ಗಂಗೈಕೊಂಡಚೋಳಪುರಂ ಅಭಿವೃದ್ಧಿ ಮಂಡಳಿ ಟ್ರಸ್ಟ್‌ನ ಅಧ್ಯಕ್ಷ ಆರ್. ಕೋಮಗನ್ ಅವರ ಪ್ರಕಾರ, ಈ ಮೂರ್ತಿ ಚೋಳ ರಾಜರು ಉತ್ತರ ಭಾರತಕ್ಕೆ ನಡೆಸಿದ ಯುದ್ಧದ ನಂತರ ತಂದ ಯುದ್ಧದ ವಿಜಯದ ಸಂಕೇತಗಳಲ್ಲಿ ಒಂದು. ಇದು ಮೂಲತಃ ಪಾಲ ವಂಶದ ಕಾಲಕ್ಕೆ ಸೇರಿದ ಶಿಲ್ಪ ಎಂದು ಅವರು ಹೇಳುತ್ತಾರೆ.
ಇತಿಹಾಸಕಾರ ಕುಡವಾಸಲ್ ಬಾಲಸುಬ್ರಹ್ಮಣಿಯನ್ ಕೂಡ ತಮ್ಮ Rajendra Cholan - Victories, Capital and Temples ಪುಸ್ತಕದಲ್ಲಿ, ಈ ಶಿಲ್ಪವು ಉತ್ತರ ಭಾರತದ ಕಲಾಶೈಲಿಯನ್ನು ಪ್ರತಿನಿಧಿಸುತ್ತದೆ ಎಂದು ಉಲ್ಲೇಖಿಸಿದ್ದಾರೆ. ಈ ಮೂರ್ತಿಯಲ್ಲಿ ದೇವಿಗೆ ಕಿರೀಟ, ಕುಂಡಲಗಳು ಮತ್ತು ಕುತ್ತಿಗೆ, ಎದೆ, ಭುಜ, ಕೈ ಹಾಗೂ ಕಾಲುಗಳಲ್ಲಿ ಆಭರಣಗಳಿವೆ. ತಮಿಳುನಾಡಿನ ಸರಸ್ವತಿ ಶಿಲ್ಪಗಳಿಗಿಂತ ಇದು ಸಂಪೂರ್ಣ ಭಿನ್ನವಾಗಿದ್ದು, ಉತ್ತರ ಭಾರತದ ಶೈಲಿಯನ್ನು ತೋರಿಸುತ್ತದೆ ಎಂದು ಅವರು ವಿವರಿಸಿದ್ದಾರೆ.

ಜ್ಞಾನಸರಸ್ವತಿಗೂ ವೀಣೆ ಇಲ್ಲ
ಗಂಗೈಕೊಂಡಚೋಳಪುರಂ ದೇವಾಲಯದಲ್ಲಿ ಇನ್ನೊಂದು ಪ್ರಸಿದ್ಧ ಜ್ಞಾನಸರಸ್ವತಿ ಶಿಲ್ಪವೂ ಇದೆ. ಇದು ಚೋಳರ ಕಾಲದ ಅತ್ಯುತ್ತಮ ಕಲಾಕೃತಿಗಳಲ್ಲಿ ಒಂದಾಗಿದೆ. ಈ ಶಿಲ್ಪದಲ್ಲೂ ಸರಸ್ವತಿ ದೇವಿಯ ಕೈಯಲ್ಲಿ ವೀಣೆ ಇಲ್ಲ.
ಆಕೆ ಒಂದು ಕೈಯಲ್ಲಿ ಗ್ರಂಥ, ಮತ್ತೊಂದು ಕೈಯಲ್ಲಿ ಅಕ್ಷಮಾಲೆ ಹಿಡಿದಿದ್ದು, ಜ್ಞಾನ ಮತ್ತು ಆಧ್ಯಾತ್ಮಿಕ ಬುದ್ಧಿವಂತಿಕೆಯ ಸಂಕೇತವಾಗಿ ಕಾಣಿಸುತ್ತಾಳೆ. ಉಳಿದ ಎರಡು ಕೈಗಳಲ್ಲಿ ಒಂದರಲ್ಲಿ ಕಮಂಡಲ ಇದ್ದರೆ, ಇನ್ನೊಂದು ಕೈಯಲ್ಲಿ ಅಪರೂಪದ ತರ್ಜನಿ ಮುದ್ರೆ ಇದೆ. ಸರಸ್ವತಿ ದೇವಿಯ ಮೂರ್ತಿಗಳಲ್ಲಿ ಈ ಮುದ್ರೆ ಬಹಳ ವಿರಳವಾಗಿದೆ.
ಈ ಜ್ಞಾನಸರಸ್ವತಿ ಕಮಲದ ಮೇಲೆ ಆಸೀನಳಾಗಿದ್ದು, ಜಟಾಮಕುಟ, ಸುಂದರ ಆಭರಣಗಳು ಮತ್ತು ಮಕರಕುಂಡಲಗಳಿಂದ ಅಲಂಕರಿಸಲಾಗಿದೆ. ಕೆಲವರ ಅಭಿಪ್ರಾಯದಲ್ಲಿ, ಪಾಲ ವಂಶದ ಸರಸ್ವತಿ ಮೂರ್ತಿಯೇ ಚೋಳರ ಜ್ಞಾನಸರಸ್ವತಿ ಶಿಲ್ಪಕ್ಕೆ ಸ್ಫೂರ್ತಿಯಾಗಿರಬಹುದು. ಆದರೆ ಇದನ್ನು ಖಚಿತಪಡಿಸುವ ಶಾಸನ ಅಥವಾ ಪುರಾತತ್ವದ ಸಾಕ್ಷ್ಯ ಇನ್ನೂ ಲಭ್ಯವಾಗಿಲ್ಲ.
ವೀಣೆ ನಂತರದ ಕಾಲದಲ್ಲಿ ಸೇರಿರಬಹುದು
ಇತಿಹಾಸ ಸಂಶೋಧಕ ಡಾ. ಆರ್. ಕಳೈಕೊವನ್ ಅವರ ಪ್ರಕಾರ, ಕಾಂಚೀಪುರದ ಕೈಲಾಸನಾಥ ದೇವಾಲಯ, ತಂಜಾವೂರಿನ ಬೃಹದೀಶ್ವರ ದೇವಾಲಯ ಹಾಗೂ ತಿರುವಳಂಚುಳಿ ಸದೈಮುದಿನಾಥ ದೇವಾಲಯಗಳಲ್ಲಿರುವ ಸರಸ್ವತಿ ಶಿಲ್ಪಗಳಲ್ಲೂ ವೀಣೆ ಕಾಣಿಸುವುದಿಲ್ಲ.
ಅವರ ಪ್ರಕಾರ, ಅಕ್ಷಮಾಲೆ ಮತ್ತು ಕಮಂಡಲವು ಸಾಮಾನ್ಯವಾಗಿ ಬ್ರಹ್ಮದೇವನ ಸಂಕೇತಗಳು. ಸರಸ್ವತಿ ಬ್ರಹ್ಮನ ಪತ್ನಿಯಾಗಿರುವ ಕಾರಣ, ಈ ವಸ್ತುಗಳನ್ನು ಹಿಡಿದಿರುವ ರೂಪದಲ್ಲಿ ಅವಳನ್ನು ಚಿತ್ರಿಸಲಾಗಿದೆ.
ಗಂಗೈಕೊಂಡಚೋಳಪುರಂನ ಜ್ಞಾನಸರಸ್ವತಿಯ ತರ್ಜನಿ ಮುದ್ರೆ ಸರಸ್ವತಿ ಮೂರ್ತಿಗಳಲ್ಲಿ ಅತ್ಯಂತ ಅಪರೂಪದ ಮತ್ತು ವಿಶೇಷ ಲಕ್ಷಣವಾಗಿದೆ ಎಂದು ಅವರು ಹೇಳಿದ್ದಾರೆ.
ಹೊಯ್ಸಳರ ಕಾಲದಲ್ಲಿ ವೀಣೆ ಬಂತು
ವೀಣೆ ಯಾವಾಗ ಸರಸ್ವತಿ ದೇವಿಯ ಪ್ರಮುಖ ಗುರುತಾಯಿತು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಹೊಯ್ಸಳರ ಕಾಲದ ದೇವಾಲಯಗಳ ಶಿಲ್ಪಗಳಲ್ಲಿ ಸರಸ್ವತಿ ದೇವಿಯನ್ನು ವೀಣೆ ಹಿಡಿದಿರುವ ರೂಪದಲ್ಲಿ ಹೆಚ್ಚಾಗಿ ಕಾಣಬಹುದು. ಸಂಸ್ಕೃತ ಸಾಹಿತ್ಯದಲ್ಲಿಯೂ ವೀಣೆ ಹಿಡಿದ ಸರಸ್ವತಿಯ ಉಲ್ಲೇಖಗಳಿವೆ. ಚಿತ್ರಕಲಾವಿದ ರಾಜಾ ರವಿವರ್ಮ ಅವರ ಚಿತ್ರಗಳಲ್ಲಿಯೂ ಸರಸ್ವತಿ ಮತ್ತು ವೀಣೆ ಒಂದಕ್ಕೊಂದು ಬೇರ್ಪಡಿಸಲಾಗದಂತೆ ಚಿತ್ರಿಸಲಾಗಿದೆ.
ಭಾರತದಲ್ಲಿ ಸರಸ್ವತಿ ದೇವಿಗೆ ಮಾತ್ರ ಮೀಸಲಾಗಿರುವ ಅಪರೂಪದ ದೇವಾಲಯಗಳಲ್ಲಿ ಒಂದಾದ ಕೂತ್ತನೂರು ಸರಸ್ವತಿ ದೇವಾಲಯದ ಮೂಲ ವಿಗ್ರಹದಲ್ಲೂ ವೀಣೆ ಇಲ್ಲ.
ದೇವಾಲಯದ ಅರ್ಚಕ ಸುಂದರ ಗುರುಕ್ಕಳ್ ಅವರ ಪ್ರಕಾರ, ದೇವಿಯು ಕಮಲದ ಮೇಲೆ ಆಸೀನಳಾಗಿ ಮುದ್ರೆ, ಗ್ರಂಥ, ಅಕ್ಷಮಾಲೆ ಮತ್ತು ಕಮಂಡಲ ಹಿಡಿದಿದ್ದಾಳೆ. ದೇವಾಲಯಗಳ ಗೋಡೆಗಳ ಮೇಲೆ ವೀಣೆ ಹಿಡಿದಿರುವ ಸರಸ್ವತಿ ಮೂರ್ತಿಗಳು ನಂತರದ ಕಾಲದಲ್ಲಿ ರೂಪುಗೊಂಡ ಸಂಗೀತ ಸ್ವರೂಪದ ಪ್ರತಿರೂಪಗಳಾಗಿವೆ.
ಜ್ಞಾನದ ದೇವಿಯಾಗಿ ಆರಂಭವಾದ ರೂಪ
ಕಾಂಚೀಪುರ, ತಂಜಾವೂರು, ಗಂಗೈಕೊಂಡಚೋಳಪುರಂ, ದಾರಾಸುರಂ, ತಿರುವಳಂಚುಳಿ ಮತ್ತು ಕೂತ್ತನೂರಿನ ಶಿಲ್ಪಗಳನ್ನು ಒಟ್ಟಾಗಿ ನೋಡಿದರೆ, ದಕ್ಷಿಣ ಭಾರತದ ಆರಂಭಿಕ ಸರಸ್ವತಿ ಮೂರ್ತಿಗಳು ʼಜ್ಞಾನ, ವಿದ್ಯೆ ಮತ್ತು ಆಧ್ಯಾತ್ಮಿಕ ಬುದ್ಧಿವಂತಿಕೆಯ ದೇವಿʼ ಎಂಬ ಅಂಶವನ್ನೇ ಹೆಚ್ಚು ಒತ್ತಿ ಹೇಳುತ್ತವೆ.
(ಬರಹ: ಭವಾನಿ ಭಟ್)














Click it and Unblock the Notifications