RCB: ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐದು ಪಂದ್ಯಗಳ ಆಯೋಜನೆಗೆ ಆರ್‌ಸಿಬಿ ಒಪ್ಪಿಗೆ
RCB: ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಮುಂಬರುವ ಸರಣಿಯ ಐದು ಪಂದ್ಯಗಳನ್ನು ಬೆಂಗಳೂರು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದೆ. ಕಳೆದ ಬಾರಿ ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಸಂಭವಿಸಿದ ಹಿನ್ನೆಲೆ ಈ ಕ್ರೀಡಾಂಗಣದಲ್ಲಿ ಯಾವುದೇ ಪಂದ್ಯಗಳನ್ನ ಆಡಿಸದಂತೆ ಆದೇಶ ಹೊರಡಿಸಲಾಗಿತ್ತು.
ಹೌದು.. 2025ರ ಐಪಿಎಲ್ ಫೈನಲ್ ಪಂದ್ಯವನ್ನು ಅಹಮದಾಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಟ್ಟುಕೊಳ್ಳಲಾಗಿತ್ತು. ಈ ವೇಳೆ ಆರ್‌ಸಿಬಿ ಬಲಿಷ್ಠ ಪಂಜಾಬ್ ಕಿಂಗ್ಸ್ ಮಣಿಸಿ ಚೊಚ್ಚಲ ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿತ್ತು. ಈ ಹಿನ್ನೆಲೆ ಮಾರನೇ ದಿನ ಬೆಂಗಳೂರಿನಲ್ಲಿ ವಿಜಯೋತ್ಸವ ಕಾರ್ಯಕ್ರಮವನ್ನು ಇಟ್ಟುಕೊಳ್ಳಲಾಗಿದ್ದು, ಈ ವೇಳೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಜನ ಮೃತಪಟ್ಟಿದ್ದರು. ಆಗಿನಿಂದ ಈ ಮೈದಾನಲ್ಲಿ ಯಾವುದೇ ಪಂದ್ಯಗಳನ್ನು ಆಡಿಸಿರಲಿಲ್ಲ.

ಆದರೆ, ಇದೀಗ ಆರ್‌ಸಿಬಿ ಇದೀಗ ಇಲ್ಲಿ ಐದು ಪಂದ್ಯಗಳನ್ನು ಆಡಿಸಲು ಒಪ್ಪಿಗೆ ಸೂಚಿಸಿದೆ. ಬೆಂಗಳೂರು ತಂಡದ ಉದ್ಘಾಟನಾ ಪಂದ್ಯ ಕೂಡ ಇಲ್ಲೇ ನಡೆಯಲಿದ್ದು, ತವರು ನೆಲದಲ್ಲಿ ಪಂದ್ಯಗಳು ನಡೆಯುತ್ತಿರುವುದು ತಂಡಕ್ಕೆ ಹೆಚ್ಚಿನ ಬಲ ಸಿಗಲಿದೆ. ಆರ್‌ಸಿಬಿ ಫ್ರಾಂಚೈಸಿಯು ಈ ಕುರಿತು ಕೆಎಸ್‌ಸಿಎ ಜೊತೆ ಮಾತುಕತೆ ನಡೆಸಿ ಅಧಿಕೃತ ಒಪ್ಪಿಗೆ ನೀಡಿದೆ ಎಂದು ತಿಳಿದುಬಂದಿದೆ.
ಚಿನ್ನಸ್ವಾಮಿಯಲ್ಲಿ ಐದು ಪಂದ್ಯಗಳು
2026ರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡದ ಐದು ಪಂದ್ಯಗಳು ತವರು ಮೈದಾನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಇನ್ನುಳಿದ ಎರಡು ಪಂದ್ಯಗಳನ್ನು ಆರ್‌ಸಿಬಿ ರಾಯ್ಪುರದ ಶಾಹೀದ್ ವೀರ್ ನಾರಾಯನ್ ಸಿಂಗ್ ಸ್ಟೇಡಿಯಂನಲ್ಲಿ ಆಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
"ಎಂ.ಚಿನ್ನಸ್ವಾಮಿ ಕ್ರೀಡಾಂಗಣ ನಮ್ಮ ತವರು ಅಂಗಣಕ್ಕಿಂತ ಹೆಚ್ಚಾಗಿದೆ. ಅದು ತಂಡವಾಗಿ ನಮ್ಮ ಗುರುತು ಜೀವಂತವಾಗುವ ಸ್ಥಳವಾಗಿದೆ. ಬೆಂಗಳೂರಿಗೆ ನಮ್ಮ ಅಭಿಮಾನಿಗಳು ತರುವ ಉತ್ಸಾಹವು ಸದಾ ಆಟಗಾರರಿಗೆ ಪ್ರತಿಯೊಂದು ಹಂತದಲ್ಲೂ ಪ್ರೇರಣೆಯಾಗಿದೆ. ನಮ್ಮ ಅಭಿಮಾನಿಗಳು ನಿರಂತರವಾಗಿ ಬೆಂಬಲಕ್ಕೆ ನಿಂತಿದ್ದಾರೆ ಮತ್ತು ತಮ್ಮ ತಂಡವನ್ನು ತವರು ಮೈದಾನದಲ್ಲಿ ಸ್ಪರ್ಧಿಸುವುದನ್ನು ನೋಡುವ ಅವಕಾಶ ಅವರಿಗೆ ಸಿಗಬೇಕಾಗಿದೆ," ಎಂದು ಆರ್‌ಸಿಬಿ ಸಿಇಒ ರಾಜೇಶ್ ಮೆನನ್ ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ಸಾಧನೆ
ಆರ್‌ಸಿಬಿ ತಂಡ 2025ರ ಐಪಿಎಲ್ ಟೂರ್ನಿಯಲ್ಲಿ ರಜತ್ ಪಾಟಿದಾರ್ ಅವರ ನಾಯಕತ್ವದಲ್ಲಿ ಚೊಚ್ಚಲ ಟ್ರೋಪಿಗೆ ಮುತ್ತಿಟ್ಟಿತ್ತು. 2008ರಿಂದಲೇ ವಿರಾಟ್ ಕೊಹ್ಲಿ ಆರ್‌ಸಿಬಿಯ ಪ್ರಮುಖ ಆಟಗಾರರಾಗಿದ್ದಾರೆ. ಒಂದೇ ತಂಡದ ಪರ 9,000ಕ್ಕೂ ಹೆಚ್ಚು ಐಪಿಎಲ್ ರನ್‌ಗಳನ್ನು ಸಿಡಿಸಿದ್ದಾರೆ. ಅದರಲ್ಲಿಯೂ 8 ಶತಕಗಳನ್ನು ಸಿಡಿಸಿ, ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ರನ್ ಗಳಿಸಿದ ಆಟಗಾರ ಎಂಬ ದಾಖಲೆಯನ್ನು ಹೊಂದಿದ್ದಾರೆ. ಬಲಿಷ್ಠ ತಂಡ ಕಟ್ಟಿರುವ ಆರ್‌ಸಿಬಿ ಈ ಬಾರಿ ಕೂಡ ಟ್ರೋಫಿ ಗೆಲ್ಲುವ ಭರವಸೆಯನ್ನು ಹುಟ್ಟುಹಾಕಿದೆ. ಕಳೆದ ಬಾರಿ ಕೊನೆವರೆಗೂ ಬ್ಯಾಟಿಂಗ್, ಬೌಲಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರಿ ಬಲಿಷ್ಠ ತಂಡಗಳನ್ನು ಬಗ್ಗು ಬಡಿದು ಫೈನಲ್ ಪ್ರವೇಶ ಮಾಡಿತು. ಫೈನಲ್‌ನಲ್ಲಿ ಬಲಿಷ್ಠ ಪಂಜಾಬ್ ಕಿಂಗ್ಸ್ ಮಣಿಸುವ ಮೂಲಕ ಚೊಚ್ಚೆಲ ಟ್ರೋಫಿಗೆ ಮುತ್ತಿಟ್ಟಿತು.












Click it and Unblock the Notifications