Get Updates
Get notified of breaking news, exclusive insights, and must-see stories!

Dharavi Slum: ಏಷ್ಯಾದ ದೊಡ್ಡ ಕೊಳಗೇರಿ ಧಾರಾವಿಯಲ್ಲಿ ಬಡತನವೂ ಬಂಡವಾಳ, ಧಾರಾವಿ ಸಂಪೂರ್ಣ ವಿವರ ಇಲ್ಲಿದೆ

Dharavi Slum: ಅತ್ಯಂತ ಕಿರಿದಾದ ಮನೆಗಳು, ಅಕ್ಕಪಕ್ಕದಲ್ಲೇ ಕುಡಿಯುವ ನೀರು - ಕೊಳಚೆ ನೀರು ಸಾಗುವ ಪೈಪ್‌ಗಳು, ಸಣ್ಣ ಸೂರ್ಯನ ಕಿರಣಗಳೂ ಬೀಳದ ಜಾಗದಲ್ಲಿ ಸಾಗಬೇಕಾದ ಅನಿವಾರ್ಯತೆ. ಸುತ್ತಲೂ ಕೊಳಚೆ - ಕಸ ಅದರ ನಡುವೆ ಬಡವರ ಬದುಕು ಇದು ಏಷ್ಯಾದಲ್ಲೇ ಅತ್ಯಂತ ದೊಡ್ಡ ಕೊಳಗೇರಿ ಆಗಿರುವ ಮಹಾರಾಷ್ಟ್ರದ ಮುಂಬೈನ ಧಾರಾವಿ ಪ್ರದೇಶದ ಸಣ್ಣ ಚಿತ್ರಣವಷ್ಟೇ. ಧಾರಾವಿ ಸುಮಾರು 2.1 ಚದರ ಕಿಲೋಮೀಟರ್ ಪ್ರದೇಶದಲ್ಲಿ ಹರಡಿಕೊಂಡಿದೆ. ಈ ಪ್ರದೇಶದಲ್ಲಿರುವ ಜನರ ಸಂಖ್ಯೆಯು ಬರೋಬ್ಬರಿ 10 ಲಕ್ಷಕ್ಕೂ ಹೆಚ್ಚು! ಇದು ವಿಶ್ವದ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾಗಿದೆ. ಮಳೆ ಬಂದರೆ ಕೊಳಚೆ ನೀರು ತುಂಬಿಕೊಳ್ಳುವ, ಉಸಿರಾಡುವುದಕ್ಕೂ ತ್ರಾಸವಾಗುವ ಪ್ರದೇಶ ಧಾರಾವಿ. ಈ ಕೊಳಗೇರಿ ಇರುವುದು ಯಾವುದೋ ಹಿಂದುಳಿದ ರಾಜ್ಯದಲ್ಲಿ ಅಲ್ಲ. ಅಭಿವೃದ್ಧಿ ಹೊಂದಿರುವ ಹಾಗೂ ದೇಶದಲ್ಲೇ ಅತ್ಯಂತ ಹೆಚ್ಚು ಆರ್ಥಿಕ ವಹಿವಾಟು ನಡೆಸುವ, ವಾಣಿಜ್ಯ ನಗರಿ ಎಂಬ ಖ್ಯಾತಿ ಗಳಿಸಿರುವ ಮುಂಬೈನಲ್ಲಿ. ಧಾರಾವಿ ಬದಲಾವಣೆಯ ನಿರೀಕ್ಷೆಯಲ್ಲಿದೆ. ದೇಶದ ವಿವಿಧ ಪ್ರದೇಶಗಳಿಂದ ಬಂದು ಈ ಭಾಗದಲ್ಲಿ ಬದುಕು ಕಟ್ಟಿಕೊಳ್ಳಬೇಕು ಎನ್ನುವ ನಿರೀಕ್ಷೆಯಲ್ಲಿರುವ ಲಕ್ಷಾಂತರ ಜನರು ಇಲ್ಲಿದ್ದಾರೆ, ಎಲ್ಲರದ್ದೂ ಇಂದು ಕಳೆದರೆ ಸಾಕು ಎನ್ನುವ ಪರಿಸ್ಥಿತಿ. ಈಗ ಧಾರಾವಿಯಲ್ಲಿ ಬಡತನವೇ ಬಂಡವಾಳವೂ ಆಗಿದೆ. ಧಾರಾವಿಯ ಕರಾಳ ಮುಖದ ಅನಾವರಣ, ಅಲ್ಲಿರುವ ಕನ್ನಡಿಗರ ಪರಿಸ್ಥಿತಿ ಈ ಲೇಖನದಲ್ಲಿದೆ.

ಭಾರತದಲ್ಲಿ ಬಡವರು / ಶ್ರೀಮಂತರು ಎನ್ನುವ ಎರಡು ವರ್ಗಗಳ ನಡುವಿನ ಸ್ಪಷ್ಟವಾದ ಚಿತ್ರಣ ಸಿಕ್ಕಿದ್ದು ಕೋವಿಡ್ ಸಮಯದಲ್ಲಿ ಎಂದು ಹೇಳಬಹುದು. ಬಡವರು ತಮ್ಮ ಊರುಗಳಿಗೆ ತೆರಳುವುದಕ್ಕೆ ರೈಲುಗಳು ಸಿಗದೆ, ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದೆ ನಡೆದೇ ಸಾಗಿದರು. ಸಾವಿರಾರು ಜನ ರೈಲು ವ್ಯವಸ್ಥೆ ಇಲ್ಲದೆ ಪರದಾಡಿದ್ದರು. ಶ್ರೀಮಂತರು, ಸ್ವಲ್ಪ ಸ್ಥಿತಿವಂತರು ವಿಮಾನಗಳ ಮೂಲಕ ಅವರ ಮನೆ, ಹೋಟೆಲ್‌ಗಳು ಸೇರಿದರು. ಈ ವಿಷಯ ನೋಡಿದವರಿಗೆ ಧಾರಾವಿ ಸರಳವಾಗಿ ಅರ್ಥವಾಗುತ್ತದೆ. ಧಾರಾವಿ ಇರುವುದು ದೇಶದ ವಾಣಿಜ್ಯ ನಗರಿ ಎನ್ನುವ ಮುಂಬೈ ಮಡಿಲಿನಲ್ಲಿ. ಗಗನಚುಂಬಿ ಕಟ್ಟಡ, ಐಷಾರಾಮಿ ಜೀವನ, ಬಾಲಿವುಡ್‌ನ ನಟ - ನಟಿಯರು, ದೇಶದ ಶ್ರೀಮಂತರು, ಗಣ್ಯರು ಒಂದು ಕಡೆ ಇದ್ದರೆ, ಮತ್ತೊಂದು ಕಡೆ ಧಾರಾವಿ ಕೊಳಗೇರಿ ಪ್ರದೇಶವಿದೆ. ಧಾರಾವಿ ಕೋವಿಡ್ ಸಂದರ್ಭದಲ್ಲಿ ಅನುಭವಿಸಿದ ಕಥೆಗಳು ಒಂದೆರಡಲ್ಲ.

Dharavi Slum

ಕೋವಿಡ್ ವ್ಯಾಪಕವಾಗಿ ವ್ಯಾಪಿಸಿದ ಸಂದರ್ಭದಲ್ಲಿ ಈ ಭಾಗದ ಜನ ತಲ್ಲಣಿಸಿ ಹೋಗಿದ್ದರು. ಕೋವಿಡ್ ಸಾಂಕ್ರಾಮಿಕ ರೋಗ ವ್ಯಾಪಿಸಿದ ಸಂದರ್ಭದಲ್ಲಿ ಅಂತರ ಕಾಪಾಡಿಕೊಳ್ಳುವುದು ಹಾಗೂ ಕೋವಿಡ್ ಸೋಂಕು ವ್ಯಾಪಿಸಿದವರು ಪ್ರತ್ಯೇಕವಾಗಿ ಅಥವಾ ಕ್ವಾರಂಟೈನ್ ಇರುವುದೇ ಕೋವಿಡ್ ತಡೆಯುವುದಕ್ಕೆ ಮೂಲ ಮಂತ್ರವಾಗಿತ್ತು. ಆದರೆ ಕಿರಿದಾದ ಜಾಗದಲ್ಲಿ ಜನ ಈ ನಿಯಮಗಳನ್ನೆಲ್ಲ ಪಾಲಿಸುವುದಾದರೂ ಹೇಗೆ. ಕೋವಿಡ್‌ನಿಂದ ಧಾರಾವಿ ಪ್ರದೇಶವೊಂದರಲ್ಲೇ ಮೃತಪಟ್ಟವರ ಸಂಖ್ಯೆ 419. ಇದು ಸರ್ಕಾರದ ಅಧಿಕೃತ ದಾಖಲೆಯ ಪ್ರಕಾರ ಮಾತ್ರ. ಇನ್ನು ಧಾರಾವಿಯಲ್ಲಿ 8,233 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಧಾರಾವಿಯಲ್ಲಿ ಕೋವಿಡ್ ಸೋಂಕು ನಿಯಂತ್ರಿಸುವುದಕ್ಕೆಂದು ಇನ್ನುಳಿದ ಪ್ರದೇಶಗಳಿಗಿಂತಲೂ ಹೊಸ ಮಾದರಿಗಳನ್ನೇ ಈ ಭಾಗದಲ್ಲಿ ಅಳವಡಿಸಿಕೊಳ್ಳಬೇಕಾಯಿತು. ಪತ್ತೆಹಚ್ಚುವುದು, ಪತ್ತೆಹಚ್ಚುವುದು, ಪರೀಕ್ಷಿಸುವುದು ಮತ್ತು ಚಿಕಿತ್ಸೆ ನೀಡುವುದು. ಈ ವಿಧಾನವು ಇವುಗಳನ್ನು ಒಳಗೊಂಡಿತ್ತು. ಇದಕ್ಕೆ 4-T Strategy ಎಂದು ಕರೆಯಲಾಗಿತ್ತು. ಅಂದಿನ ಬೃಹನ್‌ ಮುಂಬೈ (ಬೃಹನ್ಮುಂಬೈ) ಮಹಾನಗರ ಪಾಲಿಕೆಯ ಆಯುಕ್ತರಾಗಿದ್ದ ಐಎಸ್ ಚಾಹಲ್ ಅವರ ತುರ್ತು ಕ್ರಮಗಳಿಂದಾಗಿ ಈ ಭಾಗದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ಕ್ರಮೇಣ ಇಳಿಕೆಯಾಗಿತ್ತು.

ಧಾರಾವಿಯಲ್ಲಿಗ ಬಡತನವೇ ಬಂಡವಾಳ

ದೇಶದಲ್ಲಿ ಬಡತನವೂ ಬಂಡವಾಳವಾಗುತ್ತಿರುವುದು ಹೊಸ ವಿಷಯವೇನಲ್ಲ. ಅದಕ್ಕೆ ಧಾರಾವಿಯೂ ಹೊಸ ಸೇರ್ಪಡೆಯಾಗಿದೆ. ಭಾರತದಲ್ಲಿ ಈಗಾಗಲೇ ಕೆಲವು ಟಿವಿ ರಿಯಾಲಿಟಿ ಶೋಗಳು ಹಾಗೂ ರೀಲ್ಸ್‌ - ವೀವ್ಸ್‌ಗಳಿಗಾಗಿ ಬಡತನವನ್ನು ಬಂಡವಾಳ ಮಾಡಿಕೊಂಡಿರುವುದು ಇದೆ. ಧಾರಾವಿಯಲ್ಲೂ ಇದೀಗ ಬಡತನವೇ ಬಂಡವಾಳವಾಗಿದೆ. ಆದರೆ, ಇದು ತಪ್ಪು ಎನ್ನುವಂತೂ ಇಲ್ಲ. ಯಾಕೆಂದರೆ ಈ ಬಡತನವನ್ನು ಬಂಡವಾಳ ಮಾಡಿಕೊಂಡಿರುವವರು ಹೊರಗಿನವರೇನು ಅಲ್ಲ. ಧಾರಾವಿಗರೇ.

ಧಾರಾವಿ ಎಂದರೆ ಕೆಲವರಿಗೆ ಅಚ್ಚರಿ, ಕುತೂಹಲ. ಏಷ್ಯಾದಲ್ಲೇ ದೊಡ್ಡ ಕೊಳಗೇರಿ ಎನ್ನುವ ಕುಖ್ಯಾತಿ ಗಳಿಸಿರುವ ಪ್ರದೇಶವನ್ನು ಸುತ್ತಿನೋಡುವುದಕ್ಕೆ ವಿದೇಶಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಈ ರೀತಿ ಧಾರಾವಿಯನ್ನು ನೋಡುವುದಕ್ಕೆ ಬರುವವರಿಂದ ಹಣ / ಶುಲ್ಕ ಎಂದು ಇಲ್ಲಿನ ಕೆಲವರು ನಿಗದಿ ಮಾಡಿ ಹಣ ಪಡೆದುಕೊಳ್ಳುತ್ತಿದ್ದಾರೆ. ಅದೂ ಸಹ ಸಣ್ಣ ಮೊತ್ತವೇನಲ್ಲ. ಒಬ್ಬ ವಿದೇಶಿಗ ವ್ಯಕ್ತಿ ಧಾರಾವಿ ಪ್ರದೇಶವನ್ನು ನೋಡಬೇಕು ಎಂದಾದರೆ ಬರೋಬ್ಬರಿ 15,000 ರೂ. ಪಾವತಿ ಮಾಡಬೇಕು. ಕನಸಿನ ನಗರ ಎಂದೇ ಖ್ಯಾತಿ ಗಳಿಸಿರುವ ಮುಂಬೈನ ಧಾರಾವಿ ಪ್ರದೇಶವು ಈ ರೀತಿಯ ಅಚ್ಚರಿಗಳಿಗೂ ಕಾರಣವಾಗಿದೆ.

Dharavi Slum

ಭಾರತದಲ್ಲಿ ಬಡತವು ಒಂದು ಸರಕಾಗಿ ಬದಲಾಗುತ್ತಿದೆ ಎನ್ನುವುದಕ್ಕೆ ಧಾರಾವಿ ಮತ್ತೊಂದು ಬದಲಾವಣೆ ಆಗಿದೆ. ಕೆಲವು ವಿದೇಶಿಗರು ಅಧ್ಯಯನ, ವಿಡಿಯೋ ಹಾಗೂ ಬೇರೆ ಬೇರೆ ಕಾರಣಗಳಿಗೆ ಧಾರಾವಿ ಪ್ರದೇಶಕ್ಕೆ ಭೇಟಿ ನೀಡುವುದು ಇದೆ. ಈ ರೀತಿ ಭೇಟಿ ನೀಡುವವರಿಂದ ಧಾರಾವಿಗರು ಧಾರಾವಿ ಪ್ರದೇಶ ಹಾಗೂ ಅವರ ಮನೆಗಳನ್ನು ತೋರಿಸುವುದಕ್ಕೆ ಒಬ್ಬರಿಗೆ 15,000 ಸಾವಿರ ರೂಪಾಯಿ ನಿಗದಿ ಮಾಡುತ್ತಿದ್ದಾರೆ. ಮುಂಬೈಗೆ ಭೇಟಿ ನೀಡುವ ವಿದೇಶಿಯರು ಹೆಚ್ಚಾಗಿ ಧಾರಾವಿಯಲ್ಲಿರುವ ಚರ್ಮದ ಮಾರುಕಟ್ಟೆ ಬೀದಿಗೆ ಬರುತ್ತಾರೆ. ಆದರೆ ಈ ಪ್ರದೇಶವು ಹೊರಗಿನಿಂದ ನೋಡುವಂತೆ ಇಲ್ಲ ಒಳ ಪ್ರದೇಶಗಳಿಗೆ ಹೋಗಬೇಕೆಂದರೆ ನೀವು ಸಣ್ಣ ಕಾಲುದಾರಿಗಳಲ್ಲೇ ಹೋಗಬೇಕು. ಇದರ ಒಳಗೆ ಹೋಗಿ ಬರುವುದು ಚಕ್ರವ್ಯೂಹದಂತೆಯೂ ಹೌದು ಇದೇ ಕಾರಣಕ್ಕೆ ವಿದೇಶಿಗರು ಧಾರಾವಿಯಲ್ಲಿ ಇರುವ ಗೈಡ್‌ಗಳ ಮೇಲೆ ಅವಲಂಬಿತರಾಗುತ್ತಾರೆ. ವಿದೇಶಿಗರು ತಮ್ಮ ಜೀವನದಲ್ಲೇ ಮೊದಲ ಬಾರಿ ಈ ರೀತಿಯ ಕೊಳಗೇರಿಗಳನ್ನು ನೋಡುವುದರಿಂದ ಹೆಚ್ಚಾಗಿ ಹಣದ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ. ಕೊಳೆಗೇರಿ ಸುತ್ತಿ ನೋಡಬೇಕು ಎಂದು ಬಯಸುವ ಭಾರತೀಯರಿಗೂ ಇಲ್ಲಿ ಬೆಲೆ ನಿಗದಿಯಾಗಿದೆ. 1,500 ರೂಪಾಯಿಯಿಂದ 7,000 ರೂಪಾಯಿಯ ರವರೆಗೆ ಕೆಲವರಿಂದ ಪಡೆಯುವುದು ಇದೆ.

ಧಾರಾವಿಯ ಹಿನ್ನೆಲೆ ಏನು

ಏಷ್ಯಾದಲ್ಲೇ ದೊಡ್ಡ ಕೊಳಗೇರಿ ಪ್ರದೇಶವಾಗಿರುವ ಧಾರಾವಿಯು ಒಂದು ಕಾಲದಲ್ಲಿ ಮೀನುಗಾರರಿಗೆ ಮಾತ್ರ ಸೀಮಿತವಾಗಿತ್ತು. 1884ರಲ್ಲಿ ಬ್ರಿಟಿಷ್ ವಸಾಹತುಶಾಹಿ ಕಾಲದಲ್ಲಿ ಸ್ಥಾಪಿತವಾದ ಈ ಪ್ರದೇಶವು ಆರಂಭದಲ್ಲಿ ಮೀನುಗಾರರ ಹಳ್ಳಿಯಾಗಿತ್ತು. ನಂತರ ದೇಶದ ವಿವಿಧ ಭಾಗಗಳಿಂದ ಜನರು ಕೆಲಸ ಹುಡುಕಿಕೊಂಡು ಬಂದು ಇಲ್ಲಿ ನೆಲೆಸುವುದಕ್ಕೆ ಪ್ರಾರಂಭಿಸಿದರು. ಇಂದು ಕನ್ನಡಿಗರು ಸೇರಿದಂತೆ ದೇಶದ ವಿವಿಧ ಭಾಗದ ಜನರು ಧಾರಾವಿಯಲ್ಲಿ ನೆಲೆ ಕಂಡುಕೊಂಡಿದ್ದಾರೆ.

ಧಾರಾವಿ ಆರ್ಥಿಕ ಶಕ್ತಿ ಕೇಂದ್ರವೂ ಹೌದು

ಸಮಸ್ಯೆಗಳನ್ನೇ ಹೊದ್ದು ನಿಂತಿರುವಂತೆ ಕಾಣುವ ಧಾರಾವಿಯು ಲಕ್ಷಾಂತರ ಜನರಿಗೆ ಬದುಕು ಕೊಟ್ಟಿದೆ. ಮುಂಬೈನಂತಹ ಮಹಾನಗರಕ್ಕೆ ಆರ್ಥಿಕ ಜೀವಾಳವೂ ಆಗಿದೆ ಎಂದರೆ ನಂಬುತ್ತೀರಾ. ಹೌದು, ಧಾರಾವಿಯಲ್ಲಿ ಬಡವರಿದ್ದಾರೆ ಆದರೆ ಧಾರಾವಿಯಿಂದ ಬಡತನವಿಲ್ಲ! ಧಾರಾವಿಯು ಒಂದು ಬಿಲಿಯನ್ ಡಾಲರ್‌ಗಿಂತಲೂ ಹೆಚ್ಚಿನ ವಾರ್ಷಿಕ ವಹಿವಾಟು ಹೊಂದಿರುವ ಬೃಹತ್ ಅನೌಪಚಾರಿಕ ಆರ್ಥಿಕ ಕೇಂದ್ರವಾಗಿದೆ. ಇಲ್ಲಿ ಚರ್ಮದ ಉತ್ಪನ್ನಗಳು, ಕುಂಬಾರಿಕೆ, ಜವಳಿ ಮತ್ತು ಪ್ಲಾಸ್ಟಿಕ್ ಮರುಬಳಕೆಯಂತಹ ಸಾವಿರಾರು ಸಣ್ಣ ಕೈಗಾರಿಕೆಗಳಿವೆ. ಈ ಕೈಗಾರಿಕೆಗಳಲ್ಲಿ ಲಕ್ಷಾಂತರ ಜನ ದುಡಿಯುತ್ತಿದ್ದಾರೆ. ವಾಣಿಜ್ಯ ನಗರಿ ಮುಂಬೈನ ಆರ್ಥಿಕ ವಿಷಯದಲ್ಲಿ ಧಾರಾವಿಯ ಕೊಡುಗೆಯೂ ದೊಡ್ಡದು.

ಕನ್ನಡಿಗರು ಸೇರಿ ದಕ್ಷಿಣ ಭಾರತೀಯರ ಪ್ರಾಬಲ್ಯ

ಧಾರಾವಿಯಲ್ಲಿ ಕನ್ನಡಿಗರೂ ಸೇರಿದಂತೆ ದಕ್ಷಿಣ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಭಾಗದಲ್ಲಿ ತಮಿಳಿಗರ ಪ್ರಭಾವವೂ ಹೆಚ್ಚಾಗಿದೆ. ಈಚೆಗೆ ಬೃಹನ್‌ ಮುಂಬೈ ಮಹಾನಗರ ಪಾಲಿಕೆಯ ಚುನಾವಣೆಯ ಸಂದರ್ಭದಲ್ಲಿ ಧಾರಾವಿಯಲ್ಲಿರುವ ತಮಿಳಗರ ವಿಷಯವೂ ಭಾರೀ ಚರ್ಚೆಗೆ ಕಾರಣವಾಗಿತ್ತು. ಧಾರಾವಿಯಲ್ಲಿ ದಕ್ಷಿಣ ಭಾರತೀಯರು (ತಮಿಳು, ತೆಲುಗು ಮತ್ತು ಕನ್ನಡಿಗರು) ಗಣನೀಯ ಪ್ರಮಾಣದಲ್ಲಿದ್ದಾರೆ. ಕೆಲವು ವಾರ್ಡ್‌ಗಳಲ್ಲಿ ದಕ್ಷಿಣ ಭಾರತೀಯ ಮತದಾರರ ಪ್ರಮಾಣ ಸುಮಾರು ಶೇ 26% ವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ.

ಧಾರಾವಿ ಅಭಿವೃದ್ಧಿ ಯೋಜನೆ ಚರ್ಚೆ

ಇನ್ನು ಇತ್ತೀಚಿನ ದಿನಗಳಲ್ಲಿ ಧಾರಾವಿ ಅಭಿವೃದ್ಧಿಯ ಬಗ್ಗೆಯೂ ಹೆಚ್ಚು ಚರ್ಚೆ ನಡೆಯುತ್ತಿದೆ. ಧಾರಾವಿ ಅಭಿವೃದ್ಧಿ ಯೋಜನೆ (DRP) ಮುಂಬೈನ ಏಷ್ಯಾದ ಅತಿದೊಡ್ಡ ಕೊಳಗೇರಿಯನ್ನು 2032ರ ವೇಳೆಗೆ ಆಧುನಿಕ ನಗರ ಕೇಂದ್ರವಾಗಿ ಪರಿವರ್ತಿಸುವ ಬೃಹತ್ ಯೋಜನೆಯಾಗಿದೆ. ಅದಾನಿ ಗ್ರೂಪ್‌ನ ಈ ಯೋಜನೆ ಇದಾಗಿದೆ. ಈ ಯೋಜನೆ 1 ಮಿಲಿಯನ್ (10 ಲಕ್ಷ) ನಿವಾಸಿಗಳಿಗೆ, ಮುಖ್ಯವಾಗಿ 350 ಚದರ ಅಡಿ ವಿಸ್ತೀರ್ಣದ ಮನೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಸ್ಥಳೀಯ ಕೈಗಾರಿಕೆಗಳನ್ನು ಸಂರಕ್ಷಿಸಿ, ಉತ್ತಮ ಮೂಲಸೌಕರ್ಯ, ಉದ್ಯೋಗ ಮತ್ತು ಸುಸ್ಥಿರ ಪರಿಸರವನ್ನು ನಿರ್ಮಾಣ ಮಾಡುವ ಗುರಿಯನ್ನು ಒಳಗೊಂಡಿದೆ.

ಧಾರಾವಿಯ ಬಗ್ಗೆ ಜನರು ಹೆಚ್ಚಾಗಿ ಕೇಳುವ ಪ್ರಶ್ನೆಗಳು

1. ಧಾರಾವಿ ಪ್ರದೇಶವು ಯಾವುದಕ್ಕೆ ಖ್ಯಾತಿ ಗಳಿಸಿದೆ ?

ಮುಂಬೈನ ಧಾರಾವಿ ಪ್ರದೇಶವು ಏಷ್ಯಾದ ಅತಿದೊಡ್ಡ ಕೊಳಗೇರಿ ಪ್ರದೇಶವಾಗಿದೆ. ಇಲ್ಲಿನ ಜನಸಂಖ್ಯೆ ಮತ್ತು ಸಣ್ಣ ಕೈಗಾರಿಕೆಗಳ ಆರ್ಥಿಕ ಚಟುವಟಿಕೆಗಳಿಗೂ ಪ್ರಸಿದ್ಧವಾಗಿದೆ.

2. ಧಾರಾವಿ ಭೂಮಿ / ಪ್ರದೇಶ ಮಾಲೀಕರು ಯಾರು ?

ಧಾರಾವಿ ಭೂ ಮಾಲೀಕತ್ವ ವಿಷಯವು ಸಂಕೀರ್ಣವಾಗಿದೆ. ಪ್ರಾಥಮಿಕವಾಗಿ ಮಹಾರಾಷ್ಟ್ರ ರಾಜ್ಯ ಸರ್ಕಾರ, ಬಿಎಂಸಿ, ಕೇಂದ್ರ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳ ಒಡೆತನದಲ್ಲಿದೆ.

3. ಧಾರಾವಿ ಕೊಳೆಗೇರಿಗೆ ಪ್ರದೇಶಕ್ಕೆ ಭೇಟಿ ನೀಡುವುದು ಸುರಕ್ಷಿತವೇ ?

ಹೌದು, ನೀವು ಒಬ್ಬಂಟಿಯಾಗಿ ಧಾರಾವಿಗೆ ಭೇಟಿ ನೀಡಬಹುದು. ಆದಾಗ್ಯೂ ಸ್ಥಳೀಯ ಪರಿಚಿತರು, ಮಾರ್ಗದರ್ಶಕರೊಂದಿಗೆ ಈ ಪ್ರದೇಶಕ್ಕೆ ಭೇಟಿ ನೀಡುವುದು ಉತ್ತಮ.

4. ಧಾರಾವಿ ಶಾಸಕಿ ಯಾರು

ಧಾರಾವಿ ಶಾಸಕಿ ಜ್ಯೋತಿ ಗಾಯಕ್ವಾಡ್. ಜ್ಯೋತಿ ಏಕನಾಥ್ ಗಾಯಕವಾಡ್ ಅವರು ಮಹಾರಾಷ್ಟ್ರದ ರಾಜಕಾರಣಿಯಾಗಿದ್ದಾರೆ.

5. ಧಾರಾವಿ ಎಲ್ಲಿದೆ

ಧಾರಾವಿ ಮಹಾರಾಷ್ಟ್ರದ ಮುಂಬೈ ನಗರದಲ್ಲಿ ಇದೆ. ಇದು ನಗರದ ಮಧ್ಯಭಾಗದ ಸಮೀಪದಲ್ಲಿರುವ ದೊಡ್ಡ ಕೊಳಗೇರಿ ಪ್ರದೇಶವಾಗಿದೆ.

6. ಧಾರಾವಿ ಅಭಿವೃದ್ಧಿ ಯೋಜನೆ (DRP) ಏನು?

2032ರೊಳಗೆ ಧಾರಾವಿಯನ್ನು ಆಧುನಿಕ ನಗರ ಕೇಂದ್ರವನ್ನಾಗಿ ರೂಪಿಸುವ ಪುನರ್ವಿಕಾಸ ಯೋಜನೆ ಇದಾಗಿದೆ. ಸುಮಾರು 10 ಲಕ್ಷ ಜನರಿಗೆ ಮನೆಗಳ ವ್ಯವಸ್ಥೆ ಕಲ್ಪಿಸುವ ಗುರಿ ಹೊಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+