ದೇಶದ ವಿವಿಧೆಡೆ ಚುರುಕಾಗಲಿರುವ ನೈಋತ್ಯ ಮುಂಗಾರು
ನವದೆಹಲಿ ಜು.5: ಭಾರತದ ಮಧ್ಯ ಹಾಗೂ ವಾಯುವ್ಯ ಭಾಗದ ಕೆಲವು ರಾಜ್ಯಗಳಲ್ಲಿ ನೈಋತ್ಯ ಮುಂಗಾರು ತಾತ್ಕಾಲಿಕವಾಗಿ ದುರ್ಬಲಗೊಂಡಿತ್ತು. ಮಂಗಳವಾರದಿಂದ ಆ ಪ್ರದೇಶಗಳಲ್ಲೂ ಚುರುಕಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ದೇಶದ ಪೂರ್ವ ಮತ್ತು ಈಶಾನ್ಯ ರಾಜ್ಯಗಳು ಮಾತ್ರ ಮುಂಗಾರು ಆರಂಭವಾದಾಗಿನಿಂದ ಜೂನ್ ಅಂತ್ಯದ ವೇಳೆಗೆ ವಾಡಿಕೆಗಿಂತ ಅಧಿಕ ಪ್ರಮಾಣದಲ್ಲಿ ಮಳೆ ಸ್ವೀಕರಿಸಿವೆ. ಆದರೆ ಮಧ್ಯ ಹಾಗೂ ವಾಯುವ್ಯ ಭಾಗದ ಕೆಲವು ರಾಜ್ಯಗಳಲ್ಲಿ ಮಳೆ ವಾಡಿಕೆಯಷ್ಟು ಬಂದಿರಲಿಲ್ಲ. ಇದೀಗ ಹವಾಮಾನದಲ್ಲಿನ ಬದಲಾವಣೆಗಳ ಕಾರಣದಿಂದ ಈ ಭಾಗಗಳು ಸೇರಿದಂತೆ ದೇಶಾದ್ಯಂತ ಬಹುತೇಕ ಎಲ್ಲ ಕಡೆಗಳ ಮುಂಗಾರು ತೀವ್ರಗೊಳ್ಳಲಿದೆ ಎನ್ನಲಾಗಿದೆ.
ದೇಶದ ಪೂರ್ವ ಭಾಗದ ಕೆಲವೆಡೆ, ಮಧ್ಯ ಪ್ರದೇಶ, ಚತ್ತೀಸ್ಗಡ, ಕೊಂಕಣ, ಗೋವಾ, ಕರ್ನಾಟಕದ ಕರಾವಳಿ ಜಿಲ್ಲೆಗಳು ಹಾಗೂ ಕೇರಳ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಮಂಗಳವಾರ ಗುಡುಗು ಸಹಿತ ಭಾರಿ ಆಗುವ ನಿರೀಕ್ಷೆ ಇದೆ. ಈ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದಲೂ ಮಳೆ ಸುರಿಯುತ್ತಲೆ ಇದೆ.

ದೇಶಾದ್ಯಂತ ಆವರಿಸಿದ ನೈಋತ್ಯ ಮಾರುತಗಳು
ಕಳೆದ ವಾರಕ್ಕೆ ಹೋಲಿಸಿದರೆ ನೈಋತ್ಯ ಮಾರುತಗಳು ಮಂಗಳವಾರದ ಹೊತ್ತಿಗೆ ದೇಶಾದ್ಯಂತ ಆವರಿಸಿವೆ. ಹೀಗಾಗಿ ಜಮ್ಮು ಮತ್ತು ಕಾಶ್ಮೀರ, ಲೇಹ್ ಹಾಗೂ ಲಡಾಖ್, ಬಾಲ್ಟಿಸ್ತಾನ್, ಮುಜಾಫರಾಬಾದ್, ಪಾಕ್ ಆಕ್ರಮಿತ ಪ್ರದೇಶದ ಕೆಲವೆಡೆ, ಉತ್ತರಾಖಂಡ, ಹಿಮಾಚಲ ಪ್ರದೇಶ ಹಾಗೂ ರಾಜಸ್ಥಾನದ ಪ್ರತ್ಯೇಕ ಸ್ಥಳಗಳಲ್ಲಿ, ಅಂಡಮಾನ್ -ನಿಕೋಬಾರ್ ದ್ವೀಪಗಳು, ಒಡಿಶಾ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಗುಜರಾತ್ ಹಾಗೂ ತ್ರಿಪುರಗಳಲ್ಲಿ ಇಂದಿನಿಂದ ಕೆಲವು ದಿನ ಧಾರಾಕಾರ ಮಳೆ ಬೀಳುವ ನಿರೀಕ್ಷೆ ಇದೆ.

ಅಂಡಮಾನ್ ನಿಕೋಬಾರ್ನಲ್ಲಿ ಜೋರು ಮಳೆ
ಚುರಕುಗೊಂಡ ಮುಂಗಾರು ಮಾರುತಗಳು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕೆಲವು ಪ್ರದೇಶಗಳಲ್ಲಿ ಗುಡುಗು, ಮಿಂಚು ಸಹಿತ ಜೋರು ಮಳೆ ಸುರಿಸಲಿವೆ. ಇಲ್ಲಿ ಗಾಳಿಯ ವೇಳಗೆ ಗಂಟೆಗೆ ಸುಮಾರು 40ಕಿ.ಮೀ. ಗಿಂತ ಹೆಚ್ಚರಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಇದರ ಜತೆಗೆ ಉತ್ತರ ಭಾಗದ ಪಂಜಾಬ್, ಹರಿಯಾಣ, ದೆಹಲಿ, ಉತ್ತರ ಪ್ರದೇಶ ಹಾಗೂ ರಾಜಸ್ಥಾನಗಳಲ್ಲಿ ಸಹ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ದೆಹಲಿಗೆ 'ಆರೆಂಜ್ ಅಲರ್ಟ್'
ಕೆಲವು ದಿನಗಳಿಂದ ಅಷ್ಟಾಗಿ ಮಳೆ ಕಾಣದ ರಾಷ್ಟ್ರ ರಾಜಧಾನಿಯಲ್ಲಿ ದೆಹಲಿಯಲ್ಲಿ ಸೋಮವಾರ ತುಂತುರು ರೂಪದಲ್ಲಿ ಮಳೆ ದಾಖಲಾಗಿದೆ. ಈ ವೇಳೆ ಒಟ್ಟು 36.8 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿತ್ತು. ಇದೀಗ ದೆಹಲಿಯಲ್ಲಿ ಮಂಗಳವಾರ ಹಗುರದಿಂದ ಸಾಧಾರಣವಾಗಿ ಮಳೆ ಸುರಿಯಲಿದ್ದು, ಬುಧವಾರ ಸಾಧಾರಣದಿಂದ ಭಾರಿ ಮಳೆ ಬೀಳುವ ಮುನ್ಸೂಚನೆ ದೊರೆತಿದೆ. ಹೀಗಾಗಿ ಹವಾಮಾನ ಇಲಾಖೆ ದೆಹಲಿ ನಗರಕ್ಕೆ ಎರಡು ದಿನ 'ಆರೆಂಜ್ ಅಲರ್ಟ್' ಘೋಷಿಸಿದೆ.

ಜೂನ್ ಅಂತ್ಯದ ಮಳೆ ಮಾಹಿತಿ
ಮುಂಗಾರು ಋತುವಿನ ನಾಲ್ಕು ತಿಂಗಳಲ್ಲಿ ಆರಂಭದ ತಿಂಗಳಾದ ಜೂನ್ ನಲ್ಲಿ ದೇಶದಲ್ಲಿ ಮುಂಗಾರಿನ ತೀವ್ರತೆ ಅಷ್ಟಾಗಿ ಕಂಡು ಬರಲಿಲ್ಲ. ಜೂನ್ ಅಂತ್ಯದವರೆಗೆ ಮಂದಗತಿಯಲ್ಲಿದ್ದ ಮುಂಗಾರು ಇದೀಗ ದೇಶಾದ್ಯಂತ ಆವರಿಸುತ್ತಿದೆ. ಮಧ್ಯ ಭಾರತ ಸೇರಿದಂತೆ ಕಬ್ಬು, ಸೋಯಾ, ಹತ್ತಿ ಬೆಳೆಯುವ ರಾಜ್ಯಗಳಲ್ಲಿ ಅತಿ ಕಡಿಮ ಆಗಿತ್ತು. ನಿರೀಕ್ಷೆಯಂತೆ ಮಳೆ ಆಗದ ಹಿನ್ನೆಲೆಯಲ್ಲಿ ಜೂನ್ ನಲ್ಲಿ ಭಾರತ ವಾಡಿಕೆಗಿಂತ (165.3ಮಿ.ಮೀ.) ಕಡಿಮೆ ಮಳೆ (152.3ಮಿ.ಮೀ.) ದಾಖಲಾಗಿದೆ. ಈ ಮೂಲಕ ಶೇ.8ರಷ್ಟು ಕಡಿಮೆ ಮಳೆ ಆಗಿತ್ತು. ಪ್ರಸ್ತುತ ಬದಲಾವಣೆಗಳನ್ನು ಗಮನಿಸಿದರೆ ಜಲೈನಲ್ಲಿ ದೇಶಾದ್ಯಂತ ವಾಡಿಕೆಯಷ್ಟು ಮಳೆ ಆಗಲಿದೆ ಎಂದು ತಿಳಿದು ಬಂದಿದೆ.