Karnataka Rain Alert: ಕರಾವಳಿಯಲ್ಲಿ ಮೋಡ ಮುಸುಕಿದ ವಾತಾವರಣ: ಇಂದು ಭರ್ಜರಿ ಮಳೆ ಸಾಧ್ಯತೆ
ಉಡುಪಿ, ಏಪ್ರಿಲ್ 22: ಕರಾವಳಿಯ ಉಡುಪಿ ಜಿಲ್ಲೆಯ ಹಲವು ಭಾಗಗಳಲ್ಲಿ ಬೆಳ್ಳಂಬೆಳಗ್ಗೆ ಮೋಡ ಮುಸುಕಿದ ವಾತಾವರಣವಿದ್ದು, ಇಂದು ಕೂಡ ಭರ್ಜರಿ ಮಳೆಯಾಗುವ ಸಾಧ್ಯತೆ ಇದೆ. ಉರಿ ಬಿಸಿಲಿನಿಂದ ಬಸವಳಿದಿದ್ದ ಉಡುಪಿ ಜನತೆಗೆ ವರುಣ ಕೃಪೆ ತೋರಿದ್ದು, ಕಳೆದ ಎರಡು-ಮೂರು ದಿನಗಳಿಂದ ಮಳೆಯಾಗುತ್ತಿದೆ.
ಕಳೆ ಶುಕ್ರವಾರ ರಾತ್ರಿ ಉಡುಪಿ ಜಿಲ್ಲೆಯ ಹಲವು ಭಾಗಗಳಲ್ಲಿ ಗುಡುಗು ಸಿಡಿಲು ಸಹಿತ ಭರ್ಜರಿ ಮಳೆಯಾಗಿದೆ. ಐದಾರು ಗಂಟೆಗಳ ಕಾಲ ನಿರಂತರ ಮಳೆಯಾಗಿದ್ದು ಕಾದ ಕಾವಲಿಯಾದಂತಾಗಿದ್ದ ಭೂಮಿ ತಂಪಾಗಿದೆ. ಭಾನುವಾರ ಜಿಲ್ಲೆಯ ಕೆಲವು ಭಾಗಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಿದೆ. ಇನ್ನು ಇಂದು ಮುಂಜಾನೆಯಿಂದಲೇ ಮೋಡ ಮುಸುಕಿದ ವಾತಾವರಣವಿದ್ದು, ಸಂಜೆ ವೇಳೆ ಜೋರು ಮಳೆಯಾಗುವ ಸಾಧ್ಯತೆ ಹೆಚ್ಚಿದೆ.

ಇನ್ನು ಕರ್ನಾಟಕದ ಅನೇಕ ಭಾಗಗಳಲ್ಲಿ ಮಳೆಯಾಗುತ್ತಿದ್ದು, ಜನರು ಸಂತಸಗೊಂಡಿದ್ದಾರೆ. ಮುಂದಿನ ಮೂರು ದಿನ ಕರ್ನಾಟಕದ ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ. ಬೀದರ್, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇನ್ನು ರಾಜ್ಯದಲ್ಲಿ ಮೊದಲ ಮಳೆಗಳಿಂದ ಕೆಲವು ಅವಾಂತರಗಳು ಕೂಡ ಸಂಭವಿಸುತ್ತಿದ್ದು, ಜನ ಎಚ್ಚರಿಕೆಯಿಂದ ಇರಬೇಕಾಗಿದೆ. ಹಲವೆಡೆ ಏಕಾಏಕಾಗಿ ಗುಡುಗು ಸಿಡಿಲು ಸಹಿತ ಭಾರಿಯಾಗುತ್ತಿದ್ದರೆ, ಇನ್ನು ಕೆಲ ಭಾಗಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗುತ್ತಿದೆ. ಹೀಗಾಗಿ ಈ ಸಮಯದಲ್ಲಿ ಜನರು ಆದಷ್ಟು ಎಚ್ಚರ ವಹಿಸಬೇಕಾಗಿದೆ.












Click it and Unblock the Notifications