Karnataka Weather: ಇಂದಿನಿಂದ ರಾಜ್ಯದಲ್ಲಿ ತಗ್ಗಲಿದೆ ಮಳೆ, ಒಣಹವೆ ಮುಂದುವರಿಕೆ
ಬೆಂಗಳೂರು, ಏಪ್ರಿಲ್. 22: ಬರಗಾಲದಿಂದ ತತ್ತರಿಸಿದ್ದ ರಾಜ್ಯದಲ್ಲಿ ಕಳೆದೆರಡು ದಿನಗಳಿಂದ ಉತ್ತಮ ಮಳೆಯಾಗಿದೆ. ಒಂದು ವಾರದಿಂದಲೂ ಅಲ್ಲಲ್ಲಿ ಕಾಣಿಸುತ್ತಿದ್ದ ಮಳೆ ನೀರಿನ ಬಿಕ್ಕಟ್ಟು ಎದುರಿಸುತ್ತಿದ್ದ ಉದ್ಯಾನ ನಗರಿ ಬೆಂಗಳೂರಿಗೂ ಕಾಲಿಟ್ಟು ತಂಪೆರೆದಿದೆ. ಇದರ ಬೆನ್ನಲ್ಲೆ ರಾಜ್ಯದಲ್ಲಿ ಮಳೆ ಕಡಿಮೆಯಾಗಲಿದೆ.
ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಸೋಮವಾರದಿಂದ (ಏಪ್ರಿಲ್ 22) ಕ್ಷೀಣವಾಗಲಿದ್ದು, ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮುಂದಿನ 24 ಗಂಟೆ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ನಂತರ ಒಣಹವೆ ಮುಂದುವರೆಯಲಿದೆ.

ಭಾನುವಾರ (ಏಪ್ರಿಲ್ 21) ಕಲಬುರಗಿಯ ಅಫಜಲಪುರ, ಆಳಂದ, ಕೊಪ್ಪಳದ ಕುಕನೂರು, ಉತ್ತರ ಕನ್ನಡದ ಕಿರವತ್ತಿ, ಗೋಕರ್ಣ, ಕಾರವಾರ ವೀಕ್ಷಣಾಲಯ, ಚಾಮರಾಜನಗರದ ಬಿ.ಆರ್. ಹಿಲ್ಸ್ ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಇಂದು ಕೂಡ ಕಲಬುರಗಿ, ಬೀದರ್, ಮೈಸೂರು, ದಕ್ಷಿಣ ಕನ್ನಡ, ವಿಜಯಪುರ, ಕೊಪ್ಪಳದಲ್ಲಿ ಮಳೆಯಾಗುವ ಸಾಧ್ಯತೆಯಿದೆ.
ಉಡುಪಿ, ದಕ್ಷಿಣ ಕನ್ನಡ, ಬಾಗಲಕೋಟೆ, ಬೀದರ್, ಮೈಸೂರು, ಕೊಡಗು, ಚಿಕ್ಕಮಗಳೂರು, ಚಿತ್ರದುರ್ಗ ಹಾಸನದಲ್ಲಿ ಮುಂದಿನ ಎರಡು ದಿನ ಸಾಧಾರಣ ಮಳೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಕರಾವಳಿ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಏಪ್ರಿಲ್.22ರಿಂದ ಗರಿಷ್ಠ ತಾಪಮಾನದಲ್ಲಿ 2-3 ಡಿ.ಸೆ. ಉಷ್ಣಾಂಶ ಹೆಚ್ಚಳವಾಗುವ ಸಾಧ್ಯತೆ ಇದೆ.
ದೇಶದಲ್ಲಿ ಹೆಚ್ಚಾದ ಉಷ್ಣಾಂಶ
ಮುಂದಿನ ಐದು ದಿನಗಳಲ್ಲಿ ಗಂಗಾನದಿ ಪಶ್ಚಿಮ ಬಂಗಾಳದ ವಿವಿಧ ಭಾಗಗಳಲ್ಲಿ ಶಾಖದ ಅಲೆಯ ಪರಿಸ್ಥಿತಿ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಒಡಿಶಾದಲ್ಲಿ ಏಪ್ರಿಲ್ 21 ಮತ್ತು 22 ರಂದು ಶಾಖದ ಅಲೆಗಳನ್ನು ಅನುಭವಿಸುವ ಸಾಧ್ಯತೆಯಿದೆ.

ಪೂರ್ವ ಉತ್ತರ ಪ್ರದೇಶ ಮತ್ತು ಬಿಹಾರದ ಕೆಲಸ ಭಾಗಗಳಲ್ಲಿ ಕೂಡ ಅದೇ ಅವಧಿಯಲ್ಲಿ ಶಾಖದ ಅಲೆಗಳು ಹೆಚ್ಚಾಗಲಿವೆ. ಪಶ್ಚಿಮ ಬಂಗಾಳವು ಏಪ್ರಿಲ್ 22, 24 ಮತ್ತು 25 ರಂದು ಉಷ್ಣಾಂಶ ಅನುಭವಿಸಲಿದೆ. ಜಾರ್ಖಂಡ್‌ನಲ್ಲಿ ಏಪ್ರಿಲ್ 22 ಮತ್ತು 25 ರಂದು ತೀವ್ರ ಉಷ್ಣಾಂಶ ಇರಲಿದೆ.












Click it and Unblock the Notifications