• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಡಿಯೋ: ಚಾಮುಂಡೇಶ್ವರಿ ಮೂರ್ತಿ ಮೆರವಣಿಗೆಯಲ್ಲಿ ಡೋಲು ಬಡಿದು ಕುಣಿದ ಸಚಿವ ಸೋಮಶೇಖರ್

|
Google Oneindia Kannada News

ಮೈಸೂರು, ಅಕ್ಟೋಬರ್ 15: ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಅರಮನೆಗೆ ಬರಮಾಡಿಕೊಳ್ಳುವ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಡೋಲು ಬಡಿದು, ಕಂಸಾಳೆ ಬಾರಿಸಿ, ಕಲಾವಿದರೊಂದಿಗೆ ವೀರಗಾಸೆ ಕುಣಿತ ಮಾಡಿದರು.

ಮೈಸೂರಿನ ಅಂಬಾವಿಲಾಸ ಅರಮನೆ ಆವರಣದಲ್ಲಿ ನೆರೆದಿದ್ದ ಕಲಾತಂಡಗಳ ಜೊತೆ ಕಲಾವಿದರಂತೆಯೇ ಡೋಲು ಬಾರಿಸಿದರು. ವೀರಗಾಸೆ ಕುಣಿತ ಮಾಡುವ ಕಲಾವಿದರನ್ನು ಹುರಿದುಂಬಿಸುವುದರ ಜೊತೆಗೆ ತಮ್ಮಲ್ಲಿನ ಜಾನಪದ ಕಲೆಯನ್ನು ಕೂಡ ಪ್ರದರ್ಶಿಸಿದರು.

ಮೈಸೂರು ದಸರಾ: ಚಾಮುಂಡಿ ಬೆಟ್ಟದಿಂದ ಅರಮನೆಗೆ ಬಂದ ಜಂಬೂಸವಾರಿ ಉತ್ಸವ ಮೂರ್ತಿಮೈಸೂರು ದಸರಾ: ಚಾಮುಂಡಿ ಬೆಟ್ಟದಿಂದ ಅರಮನೆಗೆ ಬಂದ ಜಂಬೂಸವಾರಿ ಉತ್ಸವ ಮೂರ್ತಿ

ಪೂಜಾ ಕುಣಿತ, ಗೊಂಬೆ ಕುಣಿತ ನೋಡಿದ ಸಚಿವರು ಅವರೊಂದಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಸಚಿವರ ಕುಣಿತ, ಡೋಲು ಬಡಿತವನ್ನು ಕಂಡ ಮೈಸೂರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಕೂಡ ತಮಟೆ ಬಾರಿಸಿದರು. ಸಚಿವರೊಂದಿಗೆ ಮುಡಾ ಅಧ್ಯಕ್ಷ ಎಚ್.ವಿ. ರಾಜೀವ್, ಸಚಿವರ ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ, ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಗಳ ಅಧ್ಯಕ್ಷ ಅಪ್ಪಣ್ಣ ಸೇರಿದಂತೆ ಹಲವು ಮುಖಂಡರು ಹೆಜ್ಜೆ ಹಾಕಿದರು.

ಇದೇ ವೇಳೆ ಗ್ರಾಮೀಣ ಕಲಾ ತಂಡಗಳನ್ನು ವೀಕ್ಷಿಸಿ, ಅವರ ಕಲೆಯನ್ನು ಪ್ರೋತ್ಸಾಹಿಸಿದರು. ಬೆಳಗ್ಗೆ 10 ಗಂಟೆಯಿಂದಲೇ ಅರಮನೆ ಆವರಣದಲ್ಲಿ ಸಂಭ್ರಮ ಮನೆ ಮಾಡಿತ್ತು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಸ್.ಟಿ. ಸೋಮಶೇಖರ್, "ಕಲಾವಿದರಿಗೆ ಪ್ರೋತ್ಸಾಹ ನೀಡಬೇಕೆಂದು ಕರೆತರಲಾಗಿದೆ. ಅವರೊಂದಿಗೆ ಹೆಜ್ಜೆ ಹಾಕಲು ಸಾಧ್ಯವಿಲ್ಲ, ಆದರೆ ಅವರನ್ನು ಪ್ರೋತ್ಸಾಹಿಸಿ ಹುರಿದುಂಬಿಸಲು ಕುಣಿತ ಮಾಡಲಾಯಿತು," ಎಂದರು.

"ಚಿನ್ನದ ಅಂಬಾರಿಯಲ್ಲಿ ಮೆರವಣಿಗೆಯಲ್ಲಿ ಸಾಗುವ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಈ ಮೊದಲು ಆಟೋ, ಮೊಬೈಲ್ ವ್ಯಾನ್‌ನಲ್ಲಿ ಕರೆತರಲಾಗುತ್ತಿತ್ತು. ಆದರೆ ಈ ರೀತಿ ದೇವಿಯನ್ನು ಕರೆತರುವುದು ಸರಿಯಲ್ಲ. ಇದೇ ಮೊದಲ ಬಾರಿಗೆ ಉತ್ಸವ ಮೂರ್ತಿಯನ್ನು ಅರಮನೆಗೆ ಮೆರವಣಿಗೆಯಲ್ಲಿ ಕರೆತರುತ್ತಿರುವುದು," ಎಂದು ಹೇಳಿದರು.

"ಐತಿಹಾಸಿಕ ಜಂಬೂಸವಾರಿ ವೀಕ್ಷಣೆಗೆ 500 ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಮುಖ್ಯ ನ್ಯಾಯಮೂರ್ತಿಗಳು, ಮುಖ್ಯಮಂತ್ರಿ ಸೇರಿದಂತೆ ಗಣ್ಯಾತಿಗಣ್ಯರು ಜಂಬೂಸವಾರಿ ವೀಕ್ಷಣೆ ಮಾಡಲಿದ್ದಾರೆ," ಎಂದರು.

Mysuru: Minister ST Somashekhar Danced During Chamundeshwari Idol Procession

"ಈ ಬಾರಿ 6 ಸ್ತಬ್ಧಚಿತ್ರಗಳು ಸಾಗಲಿವೆ. ಜಂಬೂಸವಾರಿಯನ್ನು ದೂರದರ್ಶನ ನೇರಪ್ರಸಾರ ಮಾಡಲಿದೆ. ಇದರ ಜೊತೆಗೆ ಫೇಸ್‌ಬುಕ್, ಯೂಟ್ಯೂಬ್, ವರ್ಚ್ಯುವಲ್ ಮೂಲಕ ಕೂಡ ಸಾರ್ವಜನಿಕರು ವೀಕ್ಷಿಸಬಹುದಾಗಿದೆ," ಎಂದು ಹೇಳಿದರು.

"ಕೋವಿಡ್ ನಿಯಮ ಉಲ್ಲಂಘನೆ ಮಾಡದೆ ಸರಳ, ಸಾಂಪ್ರದಾಯಿಕವಾಗಿ ದಸರಾ ಆಚರಣೆ ಮಾಡಲಾಗಿದೆ. ರಾಜ್ಯದಲ್ಲಿ ಉತ್ತಮ ಮಳೆ ಬೆಳೆಯಾಗಲಿ, ನಾಡು ಸಮೃದ್ಧವಾಗಲಿ ಎಂದು ವಿಜಯದಶಮಿಯ ಈ ದಿನದಂದು ತಾಯಿ ಚಾಮುಂಡೇಶ್ವರಿಯನ್ನು ಪ್ರಾರ್ಥಿಸುತ್ತೇನೆ," ಎಂದರು.

ಅರಮನೆಗೆ ಬಂದ ಚಾಮುಂಡೇಶ್ವರಿ ವಿಗ್ರಹ
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಮಹೋತ್ಸವದ ಸಂಭ್ರಮ ಮನೆಮಾಡಿದೆ. ದಸರೆಯ ಜಂಬೂಸವಾರಿ ಮೆರವಣಿಗೆಗೆ ಕೊನೆ ಕ್ಷಣದ ಸಿದ್ಧತೆಗಳು ನಡೆಯುತ್ತಿವೆ.

ಈ ನಡುವೆ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಮೇಲೆ ವಿರಾಜಮಾನವಾಗಿ ಸಾಗುವ ಶ್ರೀಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಚಾಮುಂಡಿ ಬೆಟ್ಟದಿಂದ ಅಲಂಕೃತ ವಾಹನದಲ್ಲಿ ನಾದಸ್ವರ ವಿವಿಧ ಕಲಾತಂಡಗಳ ಜೊತೆಗೆ ಅರಮನೆಗೆ ತರಲಾಯಿತು.

ಇದೇ ಮೊದಲ ಬಾರಿಗೆ ಚಾಮುಂಡಿ ಬೆಟ್ಟದಿಂದ ಅರಮನೆಗೆ ನಾದಸ್ವರ, ಕಲಾತಂಡದೊಂದಿಗೆ ಅಂಬಾರಿ ಉತ್ಸವ ಮೂರ್ತಿಯನ್ನು ತರಲಾಗಿದ್ದು, ಚಾಮುಂಡಿ ಬೆಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹಾಗೂ ಇತರ ಗಣ್ಯರು, ದೇವಿಯ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.

ಶ್ರೀಚಾಮುಂಡೇಶ್ವರಿ ಉತ್ಸವ ಮೂರ್ತಿ ತರುವ ಅಲಂಕೃತ ವಾಹನದೊಂದಿಗೆ ನಾದಸ್ವರ ತಂಡ, ಪೊಲೀಸ್ ಬ್ಯಾಂಡ್, ಅಶ್ವದಳ, ಭಜನಾ ತಂಡ, ವೇದಘೋಷ, ಚಂಡೆ, ನವದುರ್ಗೆಯರು ಸಾಗುವರು. ತಾವರಕಟ್ಟೆ, ಇಟ್ಟಿಗೆಗೂಡು, ಹಾರ್ಡಿಂಚ್ ವೃತ್ತದ ಮೂಲಕ ಅರಮನೆ ಪ್ರವೇಶಿಸಿತು.

ಇದಕ್ಕೂ ಮುನ್ನ ಚಾಮುಂಡಿ ಬೆಟ್ಟದ ದೇವಸ್ಥಾನದಿಂದ ಹೊರಟ ಚಾಮುಂಡಿ ತಾಯಿಯ ಮೂರ್ತಿ ಮೆರವಣಿಗೆಯನ್ನು ನೂರಾರು ಭಕ್ತರು ಕಣ್ತುಂಬಿಕೊಂಡರು, ಚಾಮುಂಡಿ ಬೆಟ್ಟದಿಂದ ತಾವರೆಕಟ್ಟೆ ಗ್ರಾಮಕ್ಕೆ ಚಾಮುಂಡೇಶ್ವರಿ ವಿಗ್ರಹದ ಮೆರವಣಿಗೆ ಬರುತ್ತಿದ್ದಂತೆಯೇ ಸ್ಥಳೀಯರು, ಪಟಾಕಿ ಸಿಡಿಸಿ ಸಂಭ್ರಮದಿಂದ ಬರಮಾಡಿಕೊಂಡರು.

English summary
Mysuru Incharge Minister ST Somashekhar Danced During Chamundeshwari Idol Procession in Palace Premises.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X