Dwarakish: ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ದ್ವಾರಕೀಶ್ ಪಡೆದಿದ್ದ ಮತಗಳೆಷ್ಟು?
ಕನ್ನಡ ಚಿತ್ರರಂಗ ಕಂಡ ಅಪ್ರತಿಮ ಪ್ರತಿಭೆ, ಕರುನಾಡ ಕುಳ್ಳ ಎಂದೇ ಖ್ಯಾತರಾದ ಹಿರಿಯ ನಟ ದ್ವಾರಕೀಶ್ ನಿಧನರಾಗಿದ್ದು, ಕನ್ನಡ ಚಿತ್ರರಂಗದ ಮೇರು ಪ್ರತಿಭೆಯೊಂದನ್ನು ಕಳೆದುಕೊಂಡಿದೆ. ದ್ವಾರಕೀಶ್ ಮೈಸೂರಿನ ಪ್ರತಿಭೆ ಎಂಬುದೇ ಹೆಮ್ಮೆಯ ಸಂಗತಿಯಾಗಿದೆ.
ದ್ವಾರಕೀಶ್ ಅವರು ಮೈಸೂರಿನ ಇಟ್ಟಿಗೂಡಿನಲ್ಲಿ ವಾಸವಿದ್ದರು. ಹುಣಸೂರಿನಲ್ಲಿ 1942ರ ಆಗಸ್ಟ್ 19ರಂದು ಶಾಮರಾವ್-ಜಯಮ್ಮ ದಂಪತಿಗೆ ಮಗನಾಗಿ ದ್ವಾರಕೀಶ್ ಜನಿಸಿದರು. ಮೈಸೂರಿನ ಬನುಮಯ್ಯ ಮತ್ತು ಶಾರದಾ ವಿಲಾಸ ಶಾಲೆಯಲ್ಲಿ ದ್ವಾರಕೀಶ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪೂರ್ಣಗೊಳಿಸಿದರು.

ಬಳಿಕ ಸಿಪಿಸಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಡಿಪ್ಲೊಮಾ ಕೋರ್ಸ್ ಪೂರೈಸಿದರು. ನಗರದ ಪ್ರಭಾ ಟಾಕೀಸ್ ಬಳಿ ದ್ವಾರಕೀಶ್ ಅವರ ಅಣ್ಣ ಭಾರತ್ ಆಟೋ ಸ್ಪೇರ್ ಸ್ಟೋರ್ ಪ್ರಾರಂಭಿಸಿದ್ದರು. ಅದರಲ್ಲಿ ದ್ವಾರಕೀಶ್ ಕೂಡ ಕೆಲಸ ಮಾಡಿದ್ದಾರೆ.
ಬಾಲ್ಯದಿಂದಲೂ ದ್ವಾರಕೀಶ್ ಅವರಲ್ಲಿ ಸಿನಿಮಾ ಆಸಕ್ತಿ ಹೆಚ್ಚಿತ್ತು. ಸೋದರಮಾವ ಹುಣಸೂರು ಕೃಷ್ಣಮೂರ್ತಿ ಅವರಿಗೆ ಚಿತ್ರರಂಗಕ್ಕೆ ಹೋಗಲು ಸಹಕರಿಸುವಂತೆ ದುಂಬಾಲು ಬಿದ್ದರು. ಮುಂದೆ ಅವರು ಸಿ.ವಿ.ಶಂಕರ್ ನಿರ್ದೇಶನದಲ್ಲಿ 'ವೀರಸಂಕಲ್ಪ' ಚಿತ್ರದಲ್ಲಿ ದ್ವಾರಕೀಶ್ ಅವರಿಗೆ ಮೊದಲ ಅವಕಾಶ ಒಲಿಯುವಂತೆ ಮಾಡಿದರು.
ಚುನಾವಣೆಯಲ್ಲಿ ಸೋಲು
ರಾಜಕೀಯದ ಬಗ್ಗೆಯೂ ಆಸಕ್ತಿ ಹೊಂದಿದ್ದ ದ್ವಾರಕೀಶ್, 2004ರಲ್ಲಿ ವಿಜಯ ಸಂಕೇಶ್ವರ ಅವರು ಕಟ್ಟಿದ್ದ 'ಕನ್ನಡ ನಾಡು' ಪಾರ್ಟಿಯ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. 2004ರ ವಿಧಾನಸಭಾ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಕನ್ನಡ ನಾಡು ಪಾರ್ಟಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ, ಜೆಡಿಎಸ್‌ನ ಜಿ.ಟಿ.ದೇವೇಗೌಡ ಅವರು 60,258 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ದ್ವಾರಕೀಶ್ 2,265 ಮತಗಳನ್ನು ಪಡೆದು ಸೋಲು ಕಂಡಿದ್ದರು.
ದ್ವಾರಕೀಶ್ ಅವರ ಬಾಲ್ಯದ ಸ್ನೇಹಿತ, ಹಿರಿಯ ರಂಗಕರ್ಮಿ ರಾಜಶೇಖರ ಕದಂಬ ಅವರು ದ್ವಾರಕೀಶ್ ಅವರೊಂದಿಗಿನ ಒಡನಾಟವನ್ನು ಹಂಚಿಕೊಂಡಿದ್ದಾರೆ. "ಶಾಲಾ, ಕಾಲೇಜು ದಿನಗಳಲ್ಲಿ ದ್ವಾರಕೀಶ್ ರಂಗಭೂಮಿಯೊಂದಿಗೆ ನಂಟು ಬೆಳೆಸಿಕೊಳ್ಳದೆ ಇದ್ದರೂ ಅವರಲ್ಲಿ ಅದ್ಭುತವಾದ ನಟ ಇದ್ದ. ನಾನು ದ್ವಾರಕೀಶ್ ಬಾಲ್ಯದ ಸ್ನೇಹಿತರು. ಸಿಪಿಸಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮಾ ಓದುವಾಗ ದ್ವಾರಕೀಶ್ ನನಗಿಂತ ಒಂದು ವರ್ಷ ಹಿರಿಯ ವಿದ್ಯಾರ್ಥಿಯಾಗಿದ್ದರು," ಎಂದು ನೆನಪಿಸಿಕೊಂಡರು.












Click it and Unblock the Notifications