Lok Sabha Election: ವಿ.ಶ್ರೀನಿವಾಸಪ್ರಸಾದ್ ಬೆಂಬಲಕ್ಕಾಗಿ ಕೈ-ಕಮಲ ನಾಯಕರ ಕಸರತ್ತು!

ಮೈಸೂರು, ಏಪ್ರಿಲ್‌ 18: ಚಾಮರಾಜನಗರ ಮತ್ತು ಮೈಸೂರು ಲೋಕಸಭಾ ಕ್ಷೇತ್ರ ಈ ಬಾರಿ ಪೈಪೋಟಿಯ ಕ್ಷೇತ್ರವಾಗಿ ಮಾರ್ಪಟ್ಟಿದೆ. ಕಳೆದ ಬಾರಿ ಚಾಮರಾಜನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ದಿ.ಆರ್.ಧ್ರುವನಾರಾಯಣ್ ಅವರನ್ನು ಸೋಲಿಸಿ ಸಂಸದರಾಗಿ ಆಯ್ಕೆಯಾದ ವಿ.ಶ್ರೀನಿವಾಸ ಪ್ರಸಾದ್ ಅವರು ಬಿಜೆಪಿಯ ಬಾವುಟ ಹಾರಿಸಿದ್ದರು. ಅದರಂತೆ ಮೈಸೂರು ಕ್ಷೇತ್ರದಲ್ಲಿ ಸಂಸದ ಪ್ರತಾಪ್ ಸಿಂಹ ಕೂಡ ಸುಲಭ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಎರಡು ಕ್ಷೇತ್ರಗಳು ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪಕ್ಷಗಳಿಗೂ ಬಹುಮುಖ್ಯವಾಗಿರುವ ಕಾರಣ ಕಸರತ್ತು, ತಂತ್ರ ಎಲ್ಲವೂ ಇಲ್ಲಿ ಸದ್ದಿಲ್ಲದೆ ನಡೆಯುತ್ತಿದೆ.

ಕಳೆದ ಬಾರಿ ಚಾಮರಾಜನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ನ್ನು ಸೋಲಿಸಿ ಬಿಜೆಪಿ ಗೆಲ್ಲಲು ಹಲವು ಕಾರಣಗಳಿದ್ದವು. ಅದು ಏನೆಂದರೆ ಮೊದಲಿಗೆ ದಲಿತ ಮತ್ತು ಹಿರಿಯ ನಾಯಕ ವಿ.ಶ್ರೀನಿವಾಸ ಪ್ರಸಾದ್ ಅವರು ಸ್ಪರ್ಧಿಸಿದ್ದರು. ಅವರ ಬೆನ್ನಿಗೆ ಮೋದಿ ಅಲೆಯೊಂದಿಗೆ ದಲಿತರು ಮತ್ತು ಸಿದ್ದರಾಮಯ್ಯ ಅವರನ್ನು ವಿರೋಧಿಸುವವರು ನಿಂತಿದ್ದರು. ಹೀಗಾಗಿಯೇ ಘಟಾನುಘಟಿ, ಸಜ್ಜನ ನಾಯಕ ಆರ್ ಧ್ರುವನಾರಾಯಣ್ ಅವರನ್ನು ಸೋಲಿಸಿ ಗೆಲುವು ಕಂಡಿದ್ದರು.

Congress-BJP leaders Competition For Support Of MP V Srinivasa Prasad

ಹಾಗೆನೋಡಿದರೆ ಕಳೆದ ಐದು ವರ್ಷಗಳಲ್ಲಿ ಸಮಯ ಸಿಕ್ಕಾಗಲೆಲ್ಲ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರು ಸಿದ್ದರಾಮಯ್ಯ ಅವರನ್ನು ವಿರೋಧಿಸುತ್ತಲೇ ಬಂದಿದ್ದರು. ಆದರೆ 2024ರ ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ಅದರಲ್ಲೂ ಚಾಮರಾಜನಗರಕ್ಕೆ ಬಿಜೆಪಿ ಅಭ್ಯರ್ಥಿ ಘೋಷಣೆಯಾದ ಬಳಿಕ ವಿ.ಶ್ರೀನಿವಾಸಪ್ರಸಾದ್ ಅಸಮಾಧಾನಗೊಂಡಿದ್ದರು. ಅವರಿಗೂ ತಮ್ಮ ಅಳಿಯಂದಿರ ಪೈಕಿ ಯಾರಿಗಾದರೊಬ್ಬರಿಗೆ ಬಿಜೆಪಿಯಿಂದ ಟಿಕೆಟ್ ನೀಡಬಹುದೆಂದ ವಿಶ್ವಾಸವಿತ್ತು.

ಕಾಂಗ್ರೆಸ್ ನಾಯಕರ ಆಲೋಚನೆಗಳೇನು?

ಯಾವಾಗ ಶ್ರೀನಿವಾಸಪ್ರಸಾದ್ ಅವರ ಅಳಿಯಂದಿರಿಗೆ ಬಿಜೆಪಿ ಟಿಕೆಟ್ ನೀಡದೆ ಬಾಲರಾಜ್ ಅವರಿಗೆ ಟಿಕೆಟ್ ನೀಡಿತೋ ಕಾಂಗ್ರೆಸ್ ನಾಯಕರು ಅಲರ್ಟ್ ಆಗಿದ್ದರು. ಬಿಜೆಪಿ ಮೇಲಿನ ಶ್ರೀನಿವಾಸ ಪ್ರಸಾದ್ ಅವರ ಅಸಮಾಧಾನದ ಲಾಭಪಡೆಯಲು ಮುಂದಾದರು. ಹೀಗಾಗಿಯೇ ಚಾಮರಾಜನಗರ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಅವರ ಪರವಾಗಿ ಅವರ ತಂದೆ ಸಚಿವ ಹೆಚ್.ಸಿ.ಮಹದೇವಪ್ಪ ಅವರು ಶ್ರೀನಿವಾಸಪ್ರಸಾದ್ ಅವರ ಮನೆ ಬಾಗಿಲು ತಟ್ಟಿದ್ದರು. ಅದಕ್ಕೂ ಮುನ್ನವೇ ಅವರ ಅಳಿಯಂದಿರನ್ನು ಕಾಂಗ್ರೆಸ್ ಗೆ ಸೆಳೆಯಲಾಗಿತ್ತು. ಆದರೆ ಅವರ ಒಬ್ಬ ಅಳಿಯ ನಂಜನಗೂಡು ಮಾಜಿ ಶಾಸಕ ಹರ್ಷವರ್ಧನ್ ಮಾತ್ರ ಇನ್ನೂ ಬಿಜೆಪಿಯಲ್ಲಿ ಉಳಿದಿದ್ದಾರೆ.

Congress-BJP leaders Competition For Support Of MP V Srinivasa Prasad

ನಿಜ ಹೇಳಬೇಕೆಂದರೆ ವಿ.ಶ್ರೀನಿವಾಸಪ್ರಸಾದ್ ಅವರು ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಕ್ಕೂ ಬಹುಮುಖ್ಯವಾಗಿದ್ದಾರೆ. ಅದರಲ್ಲೂ ಅವರನ್ನು ಒಲಿಸಿಕೊಂಡರೆ ಗೆಲುವಿಗೆ ಸುಲಭವಾಗಬಹುದು ಎಂಬುದು ಕಾಂಗ್ರೆಸ್ ನ ಲೆಕ್ಕಾಚಾರವಾಗಿದೆ. ಅವರು ದಲಿತ ನಾಯಕರಾಗಿದ್ದು, ಅವರ ಬೆಂಬಲ ಪಡೆದುಕೊಂಡರೆ ಮೈಸೂರು ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ದಲಿತ ಮತಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆದುಕೊಳ್ಳಬಹುದು ಎಂಬುದು ಕೈನಾಯಕರ ಆಲೋಚನೆಯಾಗಿದೆ. ಸದ್ಯಕ್ಕೆ ಮೇಲ್ನೋಟಕ್ಕೆ ಶ್ರೀನಿವಾಸಪ್ರಸಾದ್ ಯಾವುದೇ ಪಕ್ಷಕ್ಕೆ ಬೆಂಬಲ ಸೂಚಿಸಿಲ್ಲವಾದರೂ ಅವರ ಒಲವು ಪಡೆದವರಿಗೆ ಲಾಭವಾಗುವುದಂತು ನಿಜ.

ನಮ್ಮ ಜೊತೆಗಿದ್ದಾರೆಂದು ತೋರಿಸುವ ತಂತ್ರ

ಈಗಿನ ಪರಿಸ್ಥಿತಿಯಲ್ಲಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ರಾಜಕೀಯದಿಂದ ದೂರ ಸರಿದಿದ್ದಾರೆ ಆದರೆ ರಾಜಕೀಯ ನಾಯಕರು ಇವರನ್ನು ಬಿಡುತ್ತಿಲ್ಲ. ಕಾರಣ ಇವರಿಂದ ದೂರವಾದರೆ ಚುನಾವಣೆಯಲ್ಲಿ ಒಂದಷ್ಟು ನಷ್ಟವಾಗಬಹುದು ಎಂಬ ಭಯ ಎರಡು ಪಕ್ಷಗಳ ನಾಯಕರನ್ನು ಕಾಡುತ್ತಿದೆ. ಈಗಾಗಲೇ ರಾಜಕೀಯ ಸಾಕು ನೆಮ್ಮದಿಯಾಗಿರೋಣ ಎಂದು ಬಯಸುತ್ತಿರುವ ಸಮಯದಲ್ಲಿಯೇ ಒಂದು ಕಾಲದ ರಾಜಕೀಯ ಶತ್ರು ಸಿದ್ದರಾಮಯ್ಯ ಅವರೇ ಅವರ ಮನೆಗೆ ತೆರಳಿದ್ದಾರೆ. ಅವರು ತೆರಳಿದ ಬೆನ್ನಲ್ಲೇ ಬಿಜೆಪಿಯ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ತೆರಳಿ ಮಾತುಕತೆ ನಡೆಸಿದ್ದಾರೆ.

ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಾಯಕರು ಶ್ರೀನಿವಾಸಪ್ರಸಾದ್ ಅವರು ನಮ್ಮಿಂದ ದೂರವಾಗಿಲ್ಲ ನಮ್ಮೊಂದಿಗೆ ಇದ್ದಾರೆ ಎಂಬ ಸಂದೇಶವನ್ನು ರವಾನಿಸುವ ಸಲುವಾಗಿಯೇ ಕಸರತ್ತು ಮಾಡುತ್ತಿದ್ದಾರೆ. ಕಳೆದ ಬಾರಿ ಶ್ರೀನಿವಾಸಪ್ರಸಾದ್ ಅವರು ಸಿದ್ದರಾಮಯ್ಯ ಅವರ ವಿರುದ್ಧ ಸಮರ ಸಾರಿ ಗೆಲುವು ಪಡೆದಿದ್ದರು. ಆದರೀಗ ಚಾಮರಾಜನಗರ ಮತ್ತು ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದರೆ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜಕೀಯವಾಗಿ ಲಾಭವಾಗಲಿದೆ. ಹೀಗಾಗಿಯೇ ದ್ವೇಷ ಮರೆತು ಅವರ ಗೆಳೆತನಕ್ಕೆ ಮುಂದಾಗಿರುವುದು ಎದ್ದು ಕಾಣಿಸುತ್ತಿದೆ.

ಶ್ರೀನಿವಾಸಪ್ರಸಾದ್ ಬೆಂಬಲ ಕೈಗೋ ಕಮಲಕ್ಕೋ?

ಇದೆಲ್ಲದರ ನಡುವೆ ಶ್ರೀನಿವಾಸಪ್ರಸಾದ್ ಅವರು ನಾನು ಯಾವುದೇ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಳ್ಳಲ್ಲ. ರಾಜಕೀಯ ಮಾಡಲ್ಲ, ಸಭೆ, ಸಮಾರಂಭಗಳಲ್ಲಿ ಭಾಗವಹಿಸಲ್ಲವೆಂದು ಭಾವುಕತೆಯಿಂದ ನುಡಿದ್ದಾರೆ. ಆದರೆ ಎಲ್ಲೋ ಒಂದು ಕಡೆ ತಮ್ಮ ಅಳಿಯಂದಿರಿಗೆ ರಾಜಕೀಯ ಸ್ಥಾನಮಾನ ಸಿಗಬೇಕೆಂದು ಬಯಸಿದ್ದಾರೆ ಎಂಬುದನ್ನು ತಳ್ಳಿಹಾಕುವಂತಿಲ್ಲ. ಇದನ್ನು ಅರಿತು ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಇಬ್ಬರು ಅಳಿಯಂದಿರನ್ನು ಪಕ್ಷಕ್ಕೆ ಸೇರಿಸಿಕೊಂಡಿದೆ. ಮುಂದೆ ಯಾವ ರೀತಿಯ ಸ್ಥಾನಮಾನ ಕೊಡುತ್ತಾರೋ ಗೊತ್ತಿಲ್ಲ.

ಅದು ಏನೇ ಇರಲಿ ಮೈಸೂರು ಮತ್ತು ಚಾಮರಾಜನಗರ ಭಾಗದಲ್ಲಿ ಹಿರಿಯ ದಲಿತ ನಾಯಕ ವಿ.ಶ್ರೀನಿವಾಸಪ್ರಸಾದ್ ಅವರ ಬೆಂಬಲ ಸಿಕ್ಕಿದ ಅಭ್ಯರ್ಥಿಗೆ ಒಂದಷ್ಟು ಲಾಭವಾಗಲಿದೆ. ಹೀಗಾಗಿ ತಮ್ಮ ಪಕ್ಷದತ್ತ ಅವರ ಬೆಂಬಲವಿದೆ ಎಂಬುದನ್ನು ಅವರ ಬೆಂಬಲಿಗರಿಗೆ ತಿಳಿಸಲೆಂದೇ ಎರಡು ಪಕ್ಷಗಳ ನಾಯಕರು ಅವರ ಮನೆ ಬಾಗಿಲು ತಟ್ಟಿದ್ದಾರೆ. ಆದರೆ ಶ್ರೀನಿವಾಸಪ್ರಸಾದ್ ಅವರು ಯಾರಿಗೆ ಯಾವ ರೀತಿಯಲ್ಲಿ ಬೆಂಬಲ ನೀಡುತ್ತಾರೆ ಎಂಬುದು ಮಾತ್ರ ರಹಸ್ಯವಾಗಿ ಉಳಿದಿದೆ ಮುಂದೇನು ಎಂಬುದನ್ನು ಕಾದುನೋಡೋಣ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+