RCB ಗೆಲುವು ಈ ತಂಡಗಳಿಗೆ ಆಗುತ್ತೆ ಮಾರಕ: ಎದುರಾಳಿಗಳಿಗೆ ಈಗ ಅಸಲಿ ಚಾಲೆಂಜ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಸಕ್ತ ಐಪಿಎಲ್ ಋತುವಿನಲ್ಲಿ ಸ್ಥಿರ ಪ್ರದರ್ಶನ ನೀಡುವುಲ್ಲಿ ವಿಫಲವಾಗಿದೆ. ಆರ್‌ಸಿಬಿ ಕಪ್ ಗೆಲುವಿನ ಆಸೆ ಈ ವರ್ಷವೂ ಕಮರಿದಂತೆ ಕಾಣುತ್ತಿದೆ. ಫಾಫ್ ಡುಪ್ಲೇಸಿಸ್ ಪಡೆ ಆಡಿರುವ ಎಂಟು ಪಂದ್ಯಗಳಲ್ಲಿ ಒಂದು ಗೆಲುವು ದಾಖಲಿಸಿದೆ. ತಂಡ ಇನ್ನು ಅಧಿಕೃತವಾಗಿ ಪ್ಲೇಆಫ್ ಆಸೆಯನ್ನು ಕೈ ಬಿಟ್ಟಿಲ್ಲ. ಎಲ್ಲವೂ ಬೇರೆ ತಂಡಗಳ ಆಟದ ಮೇಲೆ ಈ ತಂಡದ ಮುಂದಿನ ಹಂತ ತಲುಪುವ ಆಸೆ ನಿಂತಿದೆ.
ಆರ್‌ಸಿಬಿ ಸದ್ಯಕ್ಕೆ ನೋಡಿದರೆ ಐಪಿಎಲ್‌ನಿಂದ ಒಂದು ಕಾಲು ಹೊರಗಡೆ ಇಟ್ಟು ಆಗಿದೆ. ಇನ್ನು ಉಳಿದ ಪಂದ್ಯಗಳಲ್ಲಿ ಆರ್‌ಸಿಬಿ ಯಾವ ರೀತಿಯ ಪ್ರದರ್ಶನ ನೀಡುತ್ತದೆ ಎಂಬುದರ ಮೇಲೆ ಅವರ ಭವಿಷ್ಯ ನಿಂತಿದೆ. ಆರ್‌ಸಿಬಿ ಈ ಬಾರಿ ತನ್ನ ಭವಿಷ್ಯ ಅಷ್ಟೇ ಅಲ್ಲ ಬೇರೆಯವ ಭವಿಷ್ಯವನ್ನು ನಿರ್ಧರಿಸಲಿದೆ. ಅದು ಹೇಗೆ ಎಂಬ ಕುತೂಹಲ ಇದ್ದೇ ಇರುತ್ತದೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ.

ಮುಂದಿನ ಪಂದ್ಯಗಳ ಕಥೆ ಏನು?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಮುಂದಿನ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಏಪ್ರಿಲ್ 25 ರಂದು ಹೈದರಾಬಾದ್‌ನಲ್ಲಿ ಕಾದಾಟ ನಡೆಸಲಿದೆ. ಈ ಪಂದ್ಯದ ಮೇಲೂ ಎಲ್ಲರ ಚಿತ್ತ ನೆಟ್ಟಿದೆ. ಪ್ರಸಕ್ತ ವರ್ಷ ಎಸ್‌ಆರ್‌ಎಚ್ ಆಡುತ್ತಿರುವ ಧಾಟಿಯನ್ನು ನೋಡಿದರೆ, ಪ್ಲೇ ಆಫ್ ಪ್ರವೇಶಿಸುವ ನಾಲ್ಕು ತಂಡಗಳಿಗೆ ಇದಕ್ಕೂ ಸ್ಥಾನ ಇದ್ದಂತೆ ಕಾಣುತ್ತಿದೆ.
ಯಾವ ತಂಡಗಳ ಭವಿಷ್ಯ ನಿರ್ಧರಿಸಲಿದೆ ಆರ್‌ಸಿಬಿ?
ಗುಜರಾತ್ ಟೈಟಾನ್ಸ್ ಮತ್ತು ಆರ್‌ಸಿಬಿ ನಡುವೆ ಇನ್ನೂ ಎರಡು ಪಂದ್ಯಗಳು ಆಡುವುದು ಬಾಕಿ ಇದೆ. ಈ ಪಂದ್ಯಗಳನ್ನು ಒಂದರ ಹಿಂದೆ ಒಂದರಂತೆ ಆಡಿಸಲಾಗುತ್ತಿದೆ. ಈ ಎರಡು ತಂಡಗಳು ಏಪ್ರಿಲ್ 28 ರಂದು ಅಹಮದಾಬಾದ್‌ನಲ್ಲಿ ಈ ಬಾರಿಯ ಐಪಿಎಲ್ ಮೊದಲ ಬಾರಿಗೆ ಮುಖಾಮುಖಿಯಾಗಲಿವೆ. ಇನ್ನು ಮೇ 4 ರಂದು ಮತ್ತೆ ಉಭಯ ತಂಡಗಳು ಕಾದಾಟ ನಡೆಸಲಿವೆ. ಮೇ 4ರ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ. ಈ ಪಂದ್ಯಗಳಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದರೆ, ಗುಜರಾತ್ ಟೈಟನ್ಸ್ ಮುಂದಿನ ಹಂತ ಪ್ರವೇಶಿಸುವ ಆಸೆಗೆ ಪೆಟ್ಟು ಬೀಳಲಿದೆ.

ಪಂಜಾಬ್ ವಿರುದ್ಧ ಆರ್‌ಸಿಬಿ ಮೇ 9ರಂದು ಧರ್ಮಶಾಲಾದಲ್ಲಿ ಕಾದಾಟ ನಡೆಸಲಿದೆ. ಪಂಜಾಬ್ ಈ ಬಾರಿಯೂ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಆದರೆ ಎರಡು ಗೆಲುವನ್ನು ದಾಖಲಿಸಿದ್ದು ಕೊನೆಯಿಂದ ಎರಡನೇ ಸ್ಥಾನದಲ್ಲಿದೆ. ಈ ಪಂದ್ಯಕ್ಕೆ ಮಹತ್ವ ಬರ ಬೇಕಾದಲ್ಲಿ ಪಂಜಾಬ್ ಇನ್ನು ಎಲ್ಲ ಪಂದ್ಯಗಳನ್ನು ಗೆದ್ದು ಪ್ಲೇ ಆಫ್ ಆಸೆಯನ್ನು ಜೀವಂತವಾಗಿ ಉಳಿಸಿಕೊಂಡಾಗ ಮಾತ್ರ ಆರ್‌ಸಿಬಿ ವಿರುದ್ಧದ ಪಂದ್ಯಕ್ಕೂ ಮಹತ್ವ ಸಿಗುತ್ತದೆ.
ಸಂಘಟಿತ ಆಟದ ಪ್ರದರ್ಶನ ನೀಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ತಾನಾಡಿರುವ 8 ಪಂದ್ಯಗಳಲ್ಲಿ ಮೂರರಲ್ಲಿ ಜಯ ಸಾಧಿಸಿದೆ. ಉಳಿದ ಎಲ್ಲ ಪಂದ್ಯಗಳೂ ಡೆಲ್ಲಿ ತಂಡಕ್ಕೆ ಮಾಡು ಇಲ್ಲವೇ ಮಡಿ ಇದ್ದಂತೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮೇ 12ರಂದು ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ಜಯ ಸಾಧಿಸಿದರೆ, ಡೆಲ್ಲಿ ಕ್ಯಾಪಿಟಲ್ಸ್ ಆಸೆಗೆ ಪೆಟ್ಟು ಬೀಳಲಿದೆ.
ಆರ್‌ಸಿಬಿಯ ಕೊನೆಯ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮೇ 18 ರಂದು ಬೆಂಗಳೂರಿನಲ್ಲಿ ಆಡಲಿದೆ. ಹಾಗೆ ನೋಡಿದರೆ ಆರ್‌ಸಿಬಿಯ ಎಲ್ಲಾ ಪಂದ್ಯಗಳು ಪ್ಲೇಆಫ್ ತಲುಪಲು ಸ್ಪರ್ಧಿಗಳಾಗಿರುವ ತಂಡಗಳ ವಿರುದ್ಧವೇ ಆಗಿದೆ. ಚೆನ್ನೈ ಸಹ ಈ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಿದೆ. ತವರಿನಲ್ಲಿ ಅಬ್ಬರಿಸುವ ಸಿಎಸ್‌ಕೆ ಎದುರಾಳಿ ನೆಲದಲ್ಲಿ ಮಕಾಡೆ ಮಲಗುತ್ತಿದೆ. ಸದ್ಯ ಐದನೇ ಸ್ಥಾನದಲ್ಲಿರುವ ಚೆನ್ನೈಗೆ ಕೊನೆಯ ಪಂದ್ಯದಲ್ಲಿ ಜಯ ಸಾಧಿಸುವುದು ಸಹ ಅನಿವಾರ್ಯ.
ಆರ್‌ಸಿಬಿ ಇನ್ನು ಬೇರೆ ತಂಡಗಳ ಲೆಕ್ಕಾಚಾರ ಉಲ್ಟಾ ಮಾಡಬಹುದು. ಬೇರೆ ತಂಡಗಳು ಆರ್‌ಸಿಬಿ ತಂಡವನ್ನು ಲಘುವಾಗಿ ಪರಿಗಣಿಸದೆ ಆಡಿದರೆ ಒಳ್ಳೆಯದು.












Click it and Unblock the Notifications