ಮಡಿಕೇರಿಯಲ್ಲಿ ಟಿಪ್ಪು ಜಯಂತಿಗೆ ಪೊಲೀಸ್ ಸರ್ಪಗಾವಲು

By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ನವೆಂಬರ್ 10: ಕೊಡಗಿನಲ್ಲಿ ಬಿಗಿ ಪೊಲೀಸ್ ಸರ್ಪಗಾವಲಿನಲ್ಲಿ ಮಡಿಕೇರಿ ಕೋಟೆಯೊಳಗಿನ ಅರಮನೆಯ ಹಳೇ ವಿಧಾನ ಸಭಾಂಗಣದಲ್ಲಿ ಟಿಪ್ಪು ಜಯಂತಿಯನ್ನು ಆಚರಿಸಲು ಜಿಲ್ಲಾಡಳಿತ ಸಜ್ಜಾಗಿದ್ದು, ಹೊರಭಾಗದಲ್ಲಿ ಭಾರೀ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದು ಅರಮನೆಯ ಕಿಟಕಿ, ಬಾಗಿಲುಗಳ ಗಾಜುಗಳಿಗೆ ಹಾನಿಯಾಗಬಾರದು ಎಂಬ ಕಾರಣಕ್ಕೆ ಹಲಗೆಗಳನ್ನು ಮುಚ್ಚಲಾಗಿದೆ. ಒಳಗೆ ಯಾವುದೇ ಕಾರಣಕ್ಕೂ ಪ್ರತಿಭಟನಾಕಾರರು ನುಸುಳದಂತೆ ಬಂದೋಬಸ್ತ್ ಮಾಡಲಾಗಿದೆ.

Madikeri police

ಯಾವುದೇ ಅಹಿತಕರ ಘಟನೆಗಳು ನಡೆಯದಂತೆಯೂ ಬಿಗಿ ಬಂದೋಬಸ್ತ್ ಮಾಡಿದ್ದು, ಮಡಿಕೇರಿಯಲ್ಲೀಗ ಎಲ್ಲಿ ನೋಡಿದರೂ ಗನ್, ಲಾಠಿ ಹಿಡಿದು ನಿಂತ ಪೊಲೀಸರೇ ಕಂಡು ಬರುತ್ತಿದ್ದಾರೆ. ಬುಧವಾರದಿಂದಲೇ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಪಥಸಂಚಲ ನಡೆಸಿದ್ದಾರೆ. ಕಳೆದ ವರ್ಷದ ಅಹಿತಕರ ಘಟನೆ ಬಳಿಕದ ಪರಿಸ್ಥಿತಿಯ ಅರಿವಿರುವುದರಿಂದ ಹೊರಗಿನಿಂದ ಪ್ರವಾಸಿಗರು ಕೊಡಗಿನತ್ತ ಬಂದಿಲ್ಲ.

ಜತೆಗೆ ಜನಸಾಮಾನ್ಯರು ಕೂಡ ಮಡಿಕೇರಿಯತ್ತ ಧಾವಿಸದ ಕಾರಣ ಸ್ವಯಂ ಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ. ಗುರುವಾರ ಕೂಡ ಮಡಿಕೇರಿಯತ್ತ ತೆರಳುವ ಪ್ರಯತ್ನ ಮಾಡುತ್ತಿಲ್ಲ. ಜತೆಗೆ ಸ್ವಯಂಘೋಷಿತ ಬಂದ್ ಗೆ ಟಿಪ್ಪು ಜಯಂತಿ ವಿರೋಧಿ ಸಮಿತಿ ಕರೆ ನೀಡಿರುವ ಹಿನ್ನೆಲೆಯಲ್ಲಿ ಅಂಗಡಿ ತೆರೆಯದೆ ಮಾಲೀಕರು ತೆಪ್ಪಗಾಗಿದ್ದಾರೆ. ವಾಹನ ಸಂಚಾರವೂ ವಿರಳವಾಗಿದೆ.

Madikeri police

ಪೊಲೀಸ್ ವಾಹನಗಳು ಸೈರನ್ ಮಾಡಿಕೊಂಡು ನಗರದ ಬೀದಿಗಳಲ್ಲಿ ಸಾಗುತ್ತಿವೆ. ಜನತೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಪರಿಸ್ಥಿತಿ ಅರಿವು ಇರುವ ಕಾರಣ ಹೊರಗಿನಿಂದ ಜನರೇ ಬರುತ್ತಿಲ್ಲ. ಹೀಗಾಗಿ ಬಸ್ ಗಳು ಕೂಡ ಖಾಲಿ ಖಾಲಿಯಾಗಿ ಸಂಚರಿಸುತ್ತಿವೆ.

ಬಿಗಿಭದ್ರತೆಯಲ್ಲಿ ಆಚರಣೆ
ಟಿಪ್ಪು ಜಯಂತಿಯನ್ನು ಜಿಲ್ಲಾಡಳಿತ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಆಚರಿಸುತ್ತಿರುವುದರಿಂದ ಕೋಟೆಗೆ ಪ್ರವೇಶಿಸುವ ಎಲ್ಲ ಮುಖ್ಯ ದ್ವಾರಗಳನ್ನು ಮುಚ್ಚುವುದರೊಂದಿಗೆ ಪೊಲೀಸರ ಸರ್ಪಗಾವಲನ್ನು ನಿಯೋಜಿಸಲಾಗಿದೆ. ನಗರ ಪೊಲೀಸ್ ಠಾಣೆ ಮುಂಭಾಗದಲ್ಲಿರುವ ಕೋಟೆಯನ್ನು ಪ್ರವೇಶಿಸುವ ಮಹಾದ್ವಾರವನ್ನು ಅಥವಾ ಕೋಟೆ ಶ್ರೀ ಗಣಪತಿ ದೇವಾಲಯದ ಬಳಿಯ ದ್ವಾರವನ್ನು ಮರಮುಟ್ಟುಗಳಿಂದ ಮುಚ್ಚಲಾಗಿದೆ.

ಅಲ್ಲದೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕೋಟೆಯನ್ನು ಪ್ರವೇಶಿಸುವ ಮುಖ್ಯದ್ವಾರ ಹೊರತು ಪಡಿಸಿ ಉಳಿದ ಎಲ್ಲ ದ್ವಾರಗಳನ್ನು ಮುಚ್ಚಲಾಗಿದ್ದು, ಅಲ್ಲಿ ಬಂದೂಕು ಹಾಗೂ ಲಾಠಿ ಹಿಡಿದ ಪೊಲೀಸರನ್ನು ನಿಯೋಜಿಸಲಾಗಿದೆ. ಆಹ್ವಾನಿತರು ಮತ್ತು ಅಧಿಕಾರಿ ಸಿಬ್ಬಂದಿ ಹೊರತು ಪಡಿಸಿ ಇತರರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

Madikeri police

ಪುರಾತತ್ವ ಇಲಾಖೆ ಸಿಬ್ಬಂದಿಯಿಂದ ಅಡ್ಡಿ
ಕೋಟೆ ಕಟ್ಟಡದ ಕಿಟಕಿ, ಬಾಗಿಲುಗಳಿಗೆ ಜಿಲ್ಲಾಡಳಿತದಿಂದ ಮರದ ಹಲಗೆಗಳನ್ನು ಅಳವಡಿಸುವ ಕರ್ತವ್ಯಕ್ಕೆ ಪ್ರಾಚೀನ ಪುರಾತತ್ವ ಇಲಾಖೆಯ ಸಿಬ್ಬಂದಿಗಳು ಬುಧವಾರ ಅಡ್ಡಿಪಡಿಸಿದರು.

ಈ ಬಗ್ಗೆ ಜಿಲ್ಲಾಧಿಕಾರಿಯ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರು ಮೈಸೂರಿನಲ್ಲಿರುವ ಪುರಾತತ್ವ ಇಲಾಖೆ ಸಂಬಂಧಪಟ್ಟ ಮೇಲಧಿಕಾರಿಗಳೊಂದಿಗೆ ಪ್ರಸ್ತಾಪಿಸಿ, ತಾತ್ಕಾಲಿಕವಾಗಿ ಮರದ ಹಲಗೆಗಳನ್ನು ಅಳವಡಿಸಲಾಗುವುದು. ನಂತರ ಮರುದಿನವೇ ಅವುಗಳನ್ನು ತೆರವುಗೊಳಿಸುವ ಭರವಸೆ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Tipu jayanti celebration in Madikeri with tight police security on Thursday (November 10).
Please Wait while comments are loading...