ಉ.ಕರ್ನಾಟಕ ಪ್ರತ್ಯೇಕ ರಾಜ್ಯ: ಯಡಿಯೂರಪ್ಪ ವಿರೋಧ, ಶ್ರೀರಾಮುಲು ಬೆಂಬಲ?
Recommended Video

ಬೆಂಗಳೂರು, ಜುಲೈ 18: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡಿಕೆ ಬಗ್ಗೆ ಬಿಜೆಪಿಯಲ್ಲಿದ್ದ ಗೊಂದಲವನ್ನು ಯಡಿಯೂರಪ್ಪ ಹೋಗಲಾಡಿಸಿದ್ದಾರೆ. ಪ್ರತ್ಯೇಕ ರಾಜ್ಯ ಬೇಡಿಕೆಗೆ ನಮ್ಮ ಬೆಂಬಲ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗಷ್ಟೆ ಬಜೆಟ್ ಅಧಿವೇಶನದಲ್ಲಿ ಬಿಜೆಪಿಯ ಮೊಳಕಾಲ್ಮೂರು ಕ್ಷೇತ್ರದ ಶಾಸಕ ಶ್ರೀರಾಮುಲು ಅವರು ಉ.ಕರ್ನಾಟಕ ಅಭಿವೃದ್ಧಿ ನಿರ್ಲಕ್ಷಿಸಿದರೆ ಪ್ರತ್ಯೇಕ ರಾಜ್ಯ ಕೂಗಿಗೆ ಬೆಂಬಲ ನೀಡಬೇಕಾಗುತ್ತದೆ ಎಂದು ಸರ್ಕಾರವನ್ನು ಎಚ್ಚರಿಸಿದ್ದರು. ಹಾಗಾಗಿ ಈ ಸೂಕ್ಷ್ಮ ವಿಷಯದ ಬಗ್ಗೆ ಬಿಜೆಪಿ ನಿಲವಿನ ಬಗ್ಗೆ ಗೊಂದಲ ಏರ್ಪಟ್ಟಿತ್ತು.
ಉತ್ತರ ಕರ್ನಾಟಕ ಅಭಿವೃದ್ಧಿ ನಿರ್ಲಕ್ಷಿಸಲಾಗಿದೆ ಎಂಬುದಾದರೆ ಅದರ ಅಭಿವೃದ್ಧಿಗೆ ಒಟ್ಟುಗೂಡಿ ಕಾರ್ಯ ಮಾಡಬೇಕೆ ವಿನಃ ಪ್ರತ್ಯೇಕ ರಾಜ್ಯ ಮಾಡಲು ಹೊರಡುವುದು ಸರಿಯಲ್ಲ ಎಂದು ಇಂದು ಯಡಿಯೂರಪ್ಪ ಹೇಳಿದ್ದಾರೆ.
ಶವಿಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗುವ ಬೇಡಿಕೆಯೇ ತಪ್ಪು ಎಂದಿರುವ ಅವರು ಯಾವುದೇ ರಾಜಕೀಯ ಪಕ್ಷಗಳು ಅದರ ಪರವಾಗಿ ನಿಲ್ಲಕೂಡದು ಎಂದು ಹೇಳಿದ್ದಾರೆ.

ಪ್ರತ್ಯೇಕ ರಾಜ್ಯ ಕೂಗು ಏಕೆ?
ವರ್ಷಾನುಗಟ್ಟಲೆಯಿಂದ ಉತ್ತರ ಕರ್ನಾಟಕದ ಅಭಿವೃದ್ಧಿಯನ್ನು ನಿರ್ಲಕ್ಷಿಸಲಾಗಿದೆ ಎಂಬುದು ಆ ಭಾಗದ ಜನರ ಆಕ್ರೋಶ ಅಲ್ಲದೆ ಈ ಬಾರಿಯ ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ ಕೆಲವು ಉತ್ತರ ಕರ್ನಾಟಕದ ಮುಖಂಡರು ಉತ್ತರ ಕರ್ನಾಟಕವು ಪ್ರತ್ಯೇಕ ರಾಜ್ಯವಾಗಬೇಕು ಎಂದು ಬೇಡಿಕೆ ಇಟ್ಟಿದ್ದರು.

ಬಿಜೆಪಿಯ ಶ್ರೀರಾಮುಲು ಬೆಂಬಲ
ಇತ್ತೀಚೆಗಷ್ಟೆ ಬಜೆಟ್ ಅಧಿವೇಶನದಲ್ಲಿ ಮಾತನಾಡಿದ್ದ ಬಿಜೆಪಿ ಶಾಸಕ ಶ್ರೀರಾಮುಲು, ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿದರೆ ಪ್ರತ್ಯೇಕ ರಾಜ್ಯ ಹೋರಾಟಕ್ಕೆ ಬೆಂಬಲ ನೀಡಬೇಕಾಗುತ್ತದೆ ಎಂದು ಸರ್ಕಾರವನ್ನು ಎಚ್ಚರಿಸಿದ್ದರು.

ಸಾಹಿತಿ ಪಾಟೀಲ ಪುಟ್ಟಪ್ಪ ಬೆಂಬಲ
ನಾಡಿನ ಹಿರಿಯ ಸಾಹಿತಿ ಪಾಟೀಲ ಪುಟ್ಟಪ್ಪ ಅವರು ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಬೇಕೆಂದು ಒತ್ತಾಯಿಸಿದ್ದರು. ಹಲವು ವರ್ಷಗಳಿಂದಲೂ ಸರ್ಕಾರಗಳು ಉ.ಕರ್ನಾಟಕವನ್ನು ನಿರ್ಲಕ್ಷಿಸಿದ್ದು, ಈಗಿರುವ ಸರ್ಕಾರ ಸಹ ಹಳೆ ಮೈಸೂರು ಸರ್ಕಾರ ಹಾಗಾಗಿ ನಮ್ಮ ಅಭಿವೃಧ್ಧಿಯನ್ನು ನಾವೇ ಮಾಡಿಕೊಳ್ಳಲು ಪ್ರತ್ಯೇಕ ರಾಜ್ಯ ಅವಶ್ಯಕತೆ ಇದೆ ಎಂದು ಅವರು ಪ್ರತಿಪಾದಿಸಿದ್ದರು.

ಮಹದಾಯಿ ಹೋರಾಟದ ಅವಧಿಯ ಕೂಗು
ಮಹದಾಯಿ ಹೋರಾಟ ಪ್ರಾರಂಭವಾದ ಸಮಯದಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂಬ ಕೂಗಿಗೆ ಧನಿ ಬರಲು ಪ್ರಾರಂಭವಾಯಿತು. ಇತ್ತೀಚಿಗೆ ಕುಮಾರಸ್ವಾಮಿ ಬಜೆಟ್ ಮಂಡಿಸಿದ ನಂತರ ಈ ಕೂಗಿಗೆ ಇನ್ನಷ್ಟು ಬಲ ಬಂದಿದ್ದು, ಹಲವು ಮುಖಂಡರುಗಳು ಪ್ರತ್ಯೇಕ ರಾಜ್ಯಕ್ಕೆ ಬೆಂಬಲ ನೀಡುತ್ತಿದ್ದಾರೆ.

ಎಲ್ಲಾ ರಾಜಕೀಯ ಪಕ್ಷಗಳ ವಿರೋಧ
ರಾಜ್ಯದ ಬಹುತೇಕ ಎಲ್ಲ ರಾಜಕೀಯ ಪಕ್ಷಗಳು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆಂಬ ಬೇಡಿಕೆಗೆ ವಿರೋಧ ವ್ಯಕ್ತಪಡಿಸಿವೆ. ಕಾಂಗ್ರೆಸ್ ಸಹ ಇದೊಂದು ತಪ್ಪಾದ ಬೇಡಿಕೆ ಎಂದಿತ್ತು. ಜೆಡಿಎಸ್‌ನ ವರಿಷ್ಠ ದೇವೇಗೌಡರು ಸಹ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಸುಬ್ರಹ್ಮಣ್ಯಸ್ವಾಮಿ ಬೆಂಬಲ
ಕೊಡವರೂ ಸಹ ಹಲವು ವರ್ಷಗಳಿಂದ ಪ್ರತ್ಯೇಕ ಕೊಡವನಾಡು ಬೇಡಿಕೆಯನ್ನು ಇಡುತ್ತಲೇ ಬಂದಿದ್ದಾರೆ. ಕೆಲವು ತಿಂಗಳುಗಳ ಹಿಂದೆಯಷ್ಟೆ, ನೇರ ಮತ್ತು ನಿಷ್ಠುರ ಮಾತುಗಾರಿಕೆಯ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಈ ಬೇಡಿಕೆಗೆ ಬೆಂಬಲ ನೀಡಿ ಬಿಜೆಪಿಗರಲ್ಲಿ ಮುಜುಗರ ಉಂಟು ಮಾಡಿದ್ದರು.











Click it and Unblock the Notifications