BREAKING: ರಾಜ್ಯ ಸಚಿವ ಸಂಪುಟ ಸಭೆ ಆರಂಭ: ಅಸಮಾಧಾನಿತ ಸಚಿವರು ಗೈರು!
ಬೆಂಗಳೂರು, ಜ. 21: ಖಾತೆ ಹಂಚಿಕೆಯಿಂದ ಅಸಮಾಧಾನಕ್ಕೆ ಒಳಗಾಗಿರುವ ಹಲವು ಸಚಿವರು ರಾಜ್ಯ ಸಚಿವ ಸಂಪುಟ ಸಭೆಗೆ ಗೈರು ಹಾಜರಾಗಿದ್ದಾರೆ. ಪ್ರಮುಖವಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಎಲ್ಲ ಸಂಪುಟ ಸಭೆಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡುತ್ತಿದ್ದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಗೈರಾಗುವ ಮೂಲಕ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.
ತಮ್ಮಲ್ಲಿನ ಸಣ್ಣ ನೀರಾವರಿ ಹಾಗೂ ಕಾನೂನು ಮತ್ತು ಸಂಸದೀಯ ಖಾತೆಗಳನ್ನು ಮುಖ್ಯಮಂತ್ರಿ ವಾಪಾಸ್ ಪಡೆದಿದ್ದಕ್ಕೆ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ತೀವ್ರ ಅಸಮಾಧಾನ ಗೊಂಡಿದ್ದಾರೆ ಎಂಬ ಮಾಹಿತಿಯಿದೆ.
ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ತಲುಪಿಸುವಂತೆ ಆಪ್ತ ಸಹಾಯಕನಿಗೆ ಕೊಟ್ಟಿರುವ, ಸಚಿವ ಮಾಧುಸ್ವಾಮಿ ಅವರು ಸಿಎಂ ಸೇರಿದಂತೆ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಅವರೊಂದಿಗೆ ಮೂಲಕ ಬಿಜೆಪಿಯ ಸಚಿವರಾದ ಎಸ್. ಸುರೇಶ್ ಕುಮಾರ್ ಹಾಗೂ ವಿ. ಸೋಮಣ್ಣ ಅವರೂ ಸಂಪುಟ ಸಭೆಗೆ ಗೈರಾಗಿದ್ದಾರೆ.
ಬಿ.ಎಸ್ ಯಡಿಯೂರಪ್ಪ ಸಚಿವ ಸಂಪುಟ: ಯಾರಿಗೆ ಯಾವ ಖಾತೆ? ಸಮಗ್ರ ಪಟ್ಟಿ
ಜೊತೆಗೆ ವಲಸಿಗ ಸಚಿವರಾದ ಡಾ. ಕೆ. ಸುಧಾಕರ್, ಎಂ.ಟಿ.ಬಿ. ನಾಗರಾಜ್ ಹಾಗೂ ಕೆ. ಗೋಪಾಲಯ್ಯ ಅವರು ಸಂಪುಟ ಸಭೆಗೆ ಗೈರಾಗುವ ಮೂಲಕ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಬೆಳಗ್ಗೆಯಿಂದ ಬೆಂಗಳೂರಿನಲ್ಲಿದ್ದರೂ ಈ ಮೂವರು ಸಚಿವರು ಸಂಪುಟ ಸಭೆಯಲ್ಲಿ ಭಾಗವಹಿಸಿಲ್ಲ. ಅದರ ಬದಲು ಡಾ. ಸುಧಾಕರ್ ಅವರ ನಿವಾಸದಲ್ಲಿ ಬೆಳಗ್ಗೆಯಿಂದ ನಿರಂತರ ಸಭೆ ಮಾಡಿ ಮುಗಿಸಿದ್ದಾರೆ. ಮಾತು ಕೊಟ್ಟಂತೆ ಸಿಎಂ ಯಡಿಯೂರಪ್ಪ ಅವರು ಖಾತೆ ಹಂಚಿಕೆ ಮಾಡಿಲ್ಲ ಎಂಬುದು ವಲಸಿಗ ಸಚಿವರ ಅಸಮಾಧಾನ.
ಒಟ್ಟಾರೆ ಮೂಲ ಬಿಜೆಪಿಯ ಮೂವರು ಹಾಗೂ ಬಿಜೆಪಿಗೆ ವಲಸೆ ಬಂದಿರುವ ಮೂವರು ಸಚಿವರು ಸಂಪುಟ ಸಭೆಗೆ ಗೈರಾಗಿದ್ದಾರೆ. ಆ ಮೂಲಕ ಗಮನೆ ಸೆಳೆದಿದ್ದಾರೆ. ಖಾತೆ ಮರು ಹಂಚಿಕೆ ಅಸಮಾಧಾನ ಎಲ್ಲಿಗೆ ಬಂದು ನಿಲ್ಲುತ್ತದೆ ಎಂಬುದು ಕುತೂಹಲ ಮೂಡಿಸಿದೆ.