ಬಿಎಸ್‌ವೈ ಮನವಿಯನ್ನೂ ತಿರಸ್ಕರಿಸಿದ ಶ್ರೀನಿವಾಸ್ ಪ್ರಸಾದ್; ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಗೈರು
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆಹ್ವಾನ ನೀಡಿದರೂ ಚಾಮರಾಜನಗರ ಸಂಸದ ಶ್ರೀನಿವಾಸ ಪ್ರಸಾದ್ ಬಿಜೆಪಿ ಸಮಾವೇಶಕ್ಕೆ ತೆರಳಲಿಲ್ಲ.
ಮೈಸೂರು ನಗರದ ಜಯಲಕ್ಷ್ಮಿಪುರಂನಲ್ಲಿರುವ ವಿ.ಶ್ರೀನಿವಾಸಪ್ರಸಾದ್ ನಿವಾಸಕ್ಕೆ ಯಡಿಯೂರಪ್ಪ ತೆರಳಿ ಆರೋಗ್ಯ ವಿಚಾರಿಸಿ, ಸಮಾವೇಶಕ್ಕೆ ಆಹ್ವಾನಿಸಿದರು. ತಾವು ಹಿರಿಯ ನಾಯಕರಾಗಿದ್ದು, ಬಿಜೆಪಿ ಸಮಾವೇಶದಲ್ಲಿ ನರೇಂದ್ರ ಮೋದಿ ಜತೆ ವೇದಿಕೆ ಹಂಚಿಕೊಳ್ಳುವಂತೆ ಮನವಿ ಮಾಡಿದ್ದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಸಂಸದ ಶ್ರೀನಿವಾಸಪ್ರಸಾದ್ ಹಿರಿಯ ನಾಯಕರು. ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಮನವಿ ಮಾಡಿದ್ದೇನೆ. ಬಿಜೆಪಿಯ ಸಂಸದರಾಗಿ ಐದು ನಿಮಿಷ ಬಂದು ಹೋಗಿ ಎಂದು ಮನವಿ ಮಾಡಿದ್ದು, ಅವರು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.
ಚುನಾವಣೆಯಲ್ಲಿ ಶ್ರೀನಿವಾಸಪ್ರಸಾದ್ ಅವರನ್ನು ತೊಡಗಿಸಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾವು ಯಾವುದೇ ಒತ್ತಾಯ ಮಾಡುವುದಿಲ್ಲ. ಅದು ಅವರಿಗೆ ಬಿಟ್ಟ ವಿಚಾರ ಎಂದು ಹೇಳಿದರು.
ಸಮಾವೇಶಕ್ಕೆ ಗೈರಾದ ಸಂಸದ
ನಂತರ ಮಾತನಾಡಿದ ಸಂಸದ ವಿ.ಶ್ರೀನಿವಾಸಪ್ರಸಾದ್, ಬಿಜೆಪಿ ಸಮಾವೇಶಕ್ಕೆ ಬರುವಂತೆ ಬಿ.ಎಸ್.ಯಡಿಯೂರಪ್ಪ ಆಹ್ವಾನ ಕೊಟ್ಟಿದ್ದಾರೆ. ಖಡಾಖಂಡಿತವಾಗಿ ಬರಲು ಆಗುವುದಿಲ್ಲ ಎಂದು ಹೇಳಲು ಆಗೋದಿಲ್ಲ. ಸೌಜನ್ಯದಿಂದ ಬಂದಾಗ ಪ್ರೀತಿಯಿಂದ ಮಾತನಾಡಿದ್ದೇನೆ. ಕಾರ್ಯಕ್ರಮಕ್ಕೆ ಹೋಗುವುದು ಬಿಡುವುದು ನಮ್ಮ ತೀರ್ಮಾನ ಎಂದರು.
ಬಿಜೆಪಿ ಸಮಾವೇಶಕ್ಕೆ ತಮಗೆ ಆಹ್ವಾನ ಬಂದಿಲ್ಲ ಎಂದು ಚಾಮರಾಜನಗರದ ಬಿಜೆಪಿ ಸಂಸದ ವಿ.ಶ್ರೀನಿವಾಸಪ್ರಸಾದ್ ಹೇಳಿಕೆ ನೀಡಿದ ಬೆನ್ನಲ್ಲೇ ಭಾನುವಾರ ಬೆಳಗ್ಗೆ ಯಡಿಯೂರಪ್ಪ ಭೇಟಿಯಾಗಿ ಮಾತುಕತೆ ನಡೆಸಿದ್ದರು.
ಶನಿವಾರ ಸಿಎಂ ಸಿದ್ದರಾಮಯ್ಯ ಅವರು ವಿ. ಶ್ರೀನಿವಾಸ್ ಪ್ರಸಾದ್ ಅವರ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಇಬ್ಬರ ನಡುವೆ ವೈಮನಸ್ಸು ಇದ್ದರೂ ಇಬ್ಬರೂ ಮರೆತು ನಗು ನಗುತ್ತಲೇ ಮಾತನಾಡಿದ್ದು ಜಿಲ್ಲೆಯ ರಾಜಕೀಯದಲ್ಲಿ ಸಂಚಲನ ಮೂಡಿಸಿತ್ತು.












Click it and Unblock the Notifications