Lok Sabha Election: ರಾಘವೇಂದ್ರ ಗೆಲುವಿಗೆ ಪಣತೊಟ್ಟ ಕಾರ್ಯರ್ತರು, 1 ಲಕ್ಷ ಲೀಡ್‌ಗೆ ಶತಪ್ರಯತ್ನ
ಶಿವಮೊಗ್ಗ, ಏಪ್ರಿಲ್ 11: ರಾಜ್ಯದಾದ್ಯಂತ ಲೋಕಸಭಾ ಚುನಾವಣೆಯ ಬಿಸಿ ದಿನೇ ದಿನೇ ಏರುತ್ತಿದೆ. ಅದರಲ್ಲೂ ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ವ್ಯಾಪ್ತಿಯಲ್ಲಿ ಹೊಸ ಸಂಕಲ್ಪಕ್ಕೆ ಬಿಜೆಪಿ ಕಾರ್ಯಕರ್ತರು ಅಣಿಯಾಗಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಬೈಂದೂರು ಬಿಜೆಪಿ ಕಾರ್ಯಕರ್ತರು ಶತಾಯಗತಾಯ ಈ ಬಾರಿ ಒಂದು ಲಕ್ಷ ನೀಡುವ ಕಾಯಕದಲ್ಲಿ ನಿರತರಾಗಿದ್ದಾರೆ.
ಉಡುಪಿ ಜಿಲ್ಲೆಯ ಗಡಿಭಾಗದಲ್ಲಿರುವ ಬೈಂದೂರು ವಿಧಾನಸಭಾ ಕ್ಷೇತ್ರ ತನ್ನ ಭೌಗೋಳಿಕ ವಿಶಿಷ್ಟತೆಯ ಮೂಲಕವೇ ಜಿಲ್ಲೆಯಲ್ಲಿ ಗುರುತಿಸಿಕೊಂಡಿದೆ. ಸಮುದ್ರ ತೀರ, ಅರೆ ಮಲೆನಾಡು ಸುಂದರ ಪ್ರೇಕ್ಷಣೀಯ ಸ್ಥಳಗಳನ್ನ ಹೊಂದಿರುವ ಬೈಂದೂರು ವಿಧಾನಸಭಾ ಕ್ಷೇತ್ರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಪ್ರದೇಶ. ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬಿ.ವೈ ರಾಘವೇಂದ್ರ ಕಣಕ್ಕಿಳಿದಿದ್ದಾರೆ.

ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಜಯಭೇರಿ ಬಾರಿಸುವ ಮೂಲಕ ಬಿಜೆಪಿ ಅಭ್ಯರ್ಥಿ ಗುರುರಾಜಶೆಟ್ಟಿ ಹೊಳೆ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಲಾಗಿತ್ತು. ಈ ಬಾರಿ ಒಂದು ಲಕ್ಷ ಲೀಡ್‌ನಲ್ಲಿ ಬಿ.ವೈ ರಾಘವೇಂದ್ರ ಅವರನ್ನು ಗೆಲ್ಲಿಸಬೇಕು ಎನ್ನುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು ಸಂಕಲ್ಪ ಮಾಡಿದ್ದಾರೆ.
ಬೈಂದೂರು ವ್ಯಾಪ್ತಿಯಲ್ಲಿ ಬರುವ ದಕ್ಷಿಣ ಭಾರತದ ಅತ್ಯಂತ ದೊಡ್ಡ ಶಕ್ತಿ ಪೀಠಗಳಲ್ಲಿ ಒಂದಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ನರೇಂದ್ರ ಮೋದಿಯವರನ್ನು ಕರೆಸಿಕೊಳ್ಳಬೇಕು ಎನ್ನುವುದು ಬಿಜೆಪಿ ಕಾರ್ಯಕರ್ತರ ಉದ್ದೇಶ. ಹೀಗಾಗಿ ಕಾರ್ಯಕರ್ತರು ಈ ಅದ್ಭುತ ಜಯದ ಮೂಲಕ ನರೇಂದ್ರ ಮೋದಿ ಅವರನ್ನು ಕೊಲ್ಲೂರಿಗೆ ಕರೆಸಿಕೊಳ್ಳಬೇಕು ಎನ್ನುವ ಸಂಕಲ್ಪ ಕೈಗೊಂಡಿದ್ದಾರೆ.

ಬೈಂದೂರು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಈ ಬಾರಿ ಶಾಸಕರಾದ ಬಳಿಕ ಕೊಲ್ಲೂರಿಗೆ ನರೇಂದ್ರ ಮೋದಿ ಅವರನ್ನು ಕರೆಸಿಕೊಳ್ಳಬೇಕು ಎನ್ನುವ ಮಹಾದಾಸೆಯನ್ನ ಹೊಂದಿದ್ದರು. ಉತ್ತರ ಭಾರತದಲ್ಲಿ ಹೇಗೆ ಕಾಶಿ ವಿಶ್ವನಾಥನ ಸನ್ನಿಧಿಯ ಕಾರಿಡಾರ್ ನಿರ್ಮಾಣವಾಗಿದೆಯೋ ಅದೇ ರೀತಿ ದಕ್ಷಿಣ ಭಾರತದ ಅತ್ಯಂತ ದೊಡ್ಡ ಶಕ್ತಿಪೀಠ ವಾಗಿರುವ ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲೂ ಕೂಡ ಕಾರಿಡಾರ್ ನಿರ್ಮಾಣವಾಗಬೇಕು ಎನ್ನುವ ಕನಸು ಗಂಟಿಹೊಳೆಯವರದ್ದು.
ಹೀಗಾಗಿ ಶತಾಯಗತಾಯ ಈ ಬಾರಿ ನರೇಂದ್ರ ಮೋದಿ ಅವರನ್ನು ಕೊಲ್ಲೂರಿಗೆ ಕರೆಸಿಕೊಳ್ಳಬೇಕು ಎನ್ನುವ ನಿರ್ಧಾರವನ್ನ ಗಂಟಿಹೊಳೆ ತಮ್ಮ ಕಾರ್ಯಕರ್ತರಲ್ಲಿ ತಿಳಿಸಿ ಪ್ರತಿ ಬೂತ್ ಮಠದಲ್ಲೂ ಕೂಡ ಕೊಲ್ಲೂರು ಸಂಕಲ್ಪ ಮಾಡುತ್ತಿದ್ದಾರೆ.

ಇನ್ನು ಕೊಲ್ಲೂರು ಸಂಕಲ್ಪದ ವಿಚಾರಕ್ಕೆ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ಕೂಡ ಪ್ರತಿಕ್ರಿಯೆ ಮಾಡಿದ್ದು ಈ ಬಾರಿ ಬೈಂದೂರಿನಲ್ಲಿ ತನಗೆ ಒಂದು ಲಕ್ಷ ಲೀಡ್ ನೀಡಿದರೆ ನರೇಂದ್ರ ಮೋದಿಯವರನ್ನು ಕೊಲ್ಲೂರು ಕರೆಯಿಸಿಕೊಳ್ಳಲಾಗುವುದು ಎಂದು ತಿಳಿಸಿರುವುದು ಬಿಜೆಪಿ ಕಾರ್ಯಕರ್ತರ ಹುಮ್ಮಸ್ಸಿಗೆ ಕಾರಣವಾಗಿದೆ.
ಇನ್ನು ಈ ವಿಚಾರವನ್ನು ಶಾಸಕ ಗುರುರಾಜ ಗಂಟಿಹೊಳೆ ಅವರು ನಮೋ ಆಪ್ ಮೂಲಕ ಪ್ರಧಾನಿ ಕಚೇರಿಗೆ ಮಾಹಿತಿ ನೀಡಿದ್ದಾರೆ. ಕಾಶಿವಿಶ್ವನಾಥ ಕಾರಿಡಾರ್ ನಂತೆ ಕೊಲ್ಲೂರು ಅಭಿವೃದ್ಧಿಗಾಗಿ ಕೊಲ್ಲೂರ ಪ್ರಾಧಿಕಾರ ಮಾಡುವ ಮನವಿಯನ್ನ ನಮೋ ಆಪ್ ಮೂಲಕ ಗಂಟಿಹೊಳೆ ಸಲ್ಲಿಸಿದ್ದಾರೆ.
ಒಟ್ಟಾರೆಯಾಗಿ ಬೈಂದೂರು ಬಿಜೆಪಿ ಕಾರ್ಯಕರ್ತರ ಕೊಲ್ಲೂರು ಸಂಕಲ್ಪಕ್ಕೆ ಪ್ರಧಾನಮಂತ್ರಿ ಕಚೇರಿಯಿಂದಲೂ ಕೂಡ ಪ್ರತಿಕ್ರಿಯೆ ಬಂದಿದೆ. ಹೀಗಾಗಿ ಬಿಜೆಪಿ ಕಾರ್ಯಕರ್ತರು ಇನ್ನಷ್ಟು ಉತ್ಸಾಹದಿಂದ ಕೊಲ್ಲೂರು ಸಂಕಲ್ಪದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಬಿಜೆಪಿ ಅಭ್ಯರ್ಥಿಗೆ ಅಭೂತಪೂರ್ವ ಗೆಲುವನ್ನು ದೊರಕಿಸಿ ಕೊಡುವ ನಿಟ್ಟಿನಲ್ಲಿ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.












Click it and Unblock the Notifications