Tulsi Gowda: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತುಳಸಿ ಗೌಡ ಆರೋಗ್ಯದಲ್ಲಿ ಏರುಪೇರು: ಐಸಿಯುಗೆ ದಾಖಲು
ಕಾರವಾರ, ಏಪ್ರಿಲ್. 23: ವೃಕ್ಷಮಾತೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತುಳಸಿ ಗೌಡ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಅವರನ್ನು ಕಾರವಾರದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ಮನೆಯಲ್ಲಿ ಪದ್ಮಶ್ರೀ ತುಳಸಿ ಗೌಡ ಅವರು ಜಾರಿ ಬಿದ್ದಿದ್ದಾರೆ. ಹೀಗಾಗಿ ಕಾಲಿಗೆ ಪೆಟ್ಟಾಗಿದ್ದು, ಅಸ್ವಸ್ಥರಾಗಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ತುಳಸಿ ಗೌಡ ಅವರು ಹಾಲಕ್ಕಿ ಬುಡಕಟ್ಟು ಜನಾಂಗಕ್ಕೆ ಸೇರಿದ್ದಾರೆ.

ಹಾಲಕ್ಕಿ ಸಮುದಾಯದ ಜಾನಪದ ಕಲಾವಿದೆ, ಪದ್ಮಶ್ರೀ ಸುಕ್ರಿ ಬೊಮ್ಮು ಗೌಡ ಅವರ ಬಳಿಕ ಉತ್ತರ ಕನ್ನಡ ಜಿಲ್ಲೆಯಲ್ಲಿ ತನ್ನದೇ ವಿಶಿಷ್ಠ ಸಾಧನೆಯ ಮೂಲಕ ಗಮನ ಸೆಳೆದ ಮತ್ತೋರ್ವ ಮಹಿಳಾ ಸಾಧಕಿ ಅಂದರೆ ತುಳಸಿ ಗೌಡ ಅವರು. ಶತಮಾನ ಕಂಡ ಪರಿಸರ ಪ್ರೇಮಿಗೆ 2021ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಸರ್ಕಾರ ಗೌರವಿಸಿದೆ. ವರ ಈ ಪರಿಸರ ಪ್ರೇಮ ಮತ್ತು ಪರಿಸರದ ಬಗೆಗಿನ ನಿಷ್ಠೆಯನ್ನು ಪರಿಗಣಿಸಿ ಇತ್ತೀಚೆಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದೆ.
ವೃಕ್ಷಮಾತೆ ಎಂದೆನಿಸಿಕೊಂಡಿರುವ ತುಳಸಿ ಗೌಡ ಬೆಳೆಸಿದ ಮರಗಳು ಒಂದಲ್ಲಾ, ಎರಡಲ್ಲಾ.. ಲಕ್ಷಗಟ್ಟಲೇ. ಇದರೊಂದಿಗೆ ತಾನು ಬೆಳೆಸಿದ ಸಸಿಗಳನ್ನು ಹೊನ್ನಳ್ಳಿ ಭಾಗದ ಅರಣ್ಯ ಪ್ರದೇಶದಲ್ಲಿ, ಸರ್ಕಾರಿ ಕಚೇರಿ, ಶಾಲೆ, ಮನೆಗಳ ಆವರಣ, ರಸ್ತೆಗಳ ಪಕ್ಕದಲ್ಲಿ ನೆಡಲು ಪ್ರಾರಂಭಿಸಿದ್ದರು. ವರ್ಷಕ್ಕೆ ಈಕೆ ಸುಮಾರು 30 ಸಾವಿರ ಸಸಿಗಳನ್ನ ನೆಟ್ಟು ಪೋಷಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ. ಇವರು ನೆಟ್ಟು ಪೋಷಿಸಿದ ಸಸಿಗಳು ಇಂದು ಬೆಳೆದು ಹೆಮ್ಮರವಾಗಿ ಸಾವಿರಾರು ಜನರಿಗೆ ಗಾಳಿ ನೆರಳು ನೀಡುತ್ತಿವೆ.












Click it and Unblock the Notifications