ಪತ್ರಕರ್ತರಿಗೆ ಲಕ್ಷಾಂತರ ರೂಪಾಯಿ ಉಡುಗೊರೆ: ತನಿಖೆಗೆ ಸಿದ್ದರಾಮಯ್ಯ ಆಗ್ರಹ
ಬೆಂಗಳೂರು, ಅ.30: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಧ್ಯಮದವರಿಗೆ ಲಕ್ಷಾಂತರ ರೂಪಾಯಿ ಉಡುಗೊರೆ ನೀಡಿರುವ ಬಗ್ಗೆ ಸುಪ್ರೀಂ ಕೋರ್ಟ್ ಹಾಲಿ ನ್ಯಾಯಮೂರ್ತಿಯಿಂದ ತನಿಖೆ ನಡೆಸಬೇಕು, ಮುಖ್ಯಮಂತ್ರಿ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿಗಳು ದೀಪಾವಳಿ ಹಬ್ಬಕ್ಕೆ ನೀಡಿರುವ ಉಡುಗೊರೆಯಲ್ಲಿ 1, 2, 3 ಲಕ್ಷ ಹಾಕಿ ಕಳಿಸಿದ್ದಾರೆ. ಇದು ಯಾವ ದುಡ್ಡು ಗೊತ್ತಾ? ಇದು ಭ್ರಷ್ಟಾಚಾರದ ಹಣ. ತಮ್ಮ ಭ್ರಷ್ಟಾಚಾರವನ್ನು ಬಯಲು ಮಾಡುತ್ತಾರೆ ಎಂದು ಲಂಚ ಕೊಟ್ಟಿರುವುದು. ಈ ಹಿಂದೆ ಪತ್ರಿಕೆಯೊಂದರಲ್ಲಿ ಪೊಲೀಸ್ ಇಲಾಖೆಯಲ್ಲಿ ಯಾವ ಹುದ್ದೆಯ ವರ್ಗಾವಣೆಗೆ ಎಷ್ಟು ಎಂದು ಹೊಟೇಲ್ ಗಳ ತಿಂಡಿ ಮೆನ್ಯುವಿನಂತೆ ಲಂಚ ನಿಗದಿ ಮಾಡಿರುವುದು ಪ್ರಕಟವಾಗಿತ್ತು, ಈ ರೀತಿ ಬರೆಯಬಾರದು ಎಂಬುದು ಅವರ ಉದ್ದೇಶ. ಆಗ ಪ್ರಕಟವಾದ ಸುದ್ದಿ ಈಗ ಎಂಟಿಬಿ ನಾಗರಾಜ್ ಅವರಿಂದ ಸಾಬೀತಾಗಿದೆ ಎಂದು ಅವರು ಶನಿವಾರ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
ಮುಖ್ಯಮಂತ್ರಿಗಳು ಕೊಟ್ಟ ಹಣವನ್ನು ಮಾಧ್ಯಮ ಮಿತ್ರರು ವಾಪಾಸು ಕೊಟ್ಟಿದ್ದೀರ, ಸಂತೋಷ. ಈ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲುವ ಕೆಲಸವನ್ನು ಮಾಧ್ಯಮ ಮಿತ್ರರು ಮಾಡಬೇಕು. ನಾವು ಹೇಳಿದರೆ ಸರ್ಕಾರ ನಮ್ಮ ಬಳಿ ದಾಖಲೆ ಕೇಳುತ್ತದೆ. ತನಿಖೆಯನ್ನು ಮಾಡುವುದಿಲ್ಲ. ಈ ಬಗ್ಗೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ತನಿಖೆ ಆಗಬೇಕು. ನಮ್ಮ ಕಾಲದಲ್ಲೂ ಭ್ರಷ್ಟಾಚಾರ ನಡೆದಿದ್ದರೆ ಅದನ್ನೂ ತನಿಖೆ ನಡೆಸಲಿ ಎಂದರು.
ಹಿಂದಿನ ಸರ್ಕಾರಗಳ ಬಗ್ಗೆ ತನಿಖೆ ಮಾಡಿಸಿ. ಸತ್ಯ ಗೊತ್ತಾಗಲಿ. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಮತ್ತು ಅವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಇದರ ಜೊತೆಗೆ ಒಂದು ನ್ಯಾಯಾಂಗ ಸಮಿತಿ ರಚನೆ ಮಾಡಿ ಅದರ ಅಡಿಯಲ್ಲಿ ತನಿಖೆಯೂ ಆಗಬೇಕು. ಇವು ನಮ್ಮ ಒತ್ತಾಯಗಳು ಎಂದು ಹೇಳಿದರು.

ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರೇ ನೇರ ಹೊಣೆ.
ಎಂಟಿಬಿ ನಾಗರಾಜ್ ಅವರು ನಂದೀಶ್ ಎಂಬ ಪೊಲೀಸ್ ಸಿಬ್ಬಂದಿಯ ಅಂತಿಮ ದರ್ಶನ ಪಡೆಯಲು ಹೋದ ಸಂದರ್ಭದಲ್ಲಿ ತನ್ನ ಪಕ್ಕದಲ್ಲಿದ್ದ ಪೊಲೀಸರೊಬ್ಬರೊಂದಿಗೆ ಮಾತನಾಡುತ್ತಾ, "70-80 ಲಕ್ಷ ಕೊಟ್ಟು ಕೆ.ಆರ್ ಪುರಂ ಪೊಲೀಸ್ ಠಾಣೆಗೆ ವರ್ಗಾವಣೆ ಪಡೆದು ಬಂದರೆ ಹೃದಯಾಘಾತ ಆಗದೆ ಇರುತ್ತದಾ?" ಎಂದು ಹೇಳಿದ್ದಾರೆ. ಇದು ಸಾಕ್ಷ್ಯ ಅಲ್ಲವಾ? ಇದಕ್ಕಿಂತ ಬೇರೆ ಸಾಕ್ಷಿ ಇನ್ನೇನು ಬೇಕು? ಈಗಿನ ಸರ್ಕಾರದಲ್ಲಿ ನಡೆಯುತ್ತಿರುವುದನ್ನು ಎಂಟಿಬಿ ಹೇಳಿದ್ದಾರೆ. ಈ ಸರ್ಕಾರ ಬಂದಮೇಲೆ ಸಂತೋಷ್ ಪಾಟೀಲ್, ನಂದೀಶ್ ಸತ್ತಿದ್ದಾರೆ. ಇದಕ್ಕೆ ಸರ್ಕಾರವೇ ಹೊಣೆ, ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರೇ ನೇರ ಹೊಣೆ.
ಗೃಹ ಸಚಿವರು ತನ್ನನ್ನು ತಾನು ಆರ್,ಎಸ್,ಎಸ್ ನಿಂದ ಬಂದವರು, ತಮ್ಮ ಇಲಾಖೆಯಲ್ಲಿ ಯಾವ ಹಗರಣ ನಡೆದಿಲ್ಲ ಎನ್ನುತ್ತಾರೆ. ಇವೆಲ್ಲ ಹಗರಣಗಳಲ್ಲವಾ? ಮುಖ್ಯಮಂತ್ರಿಗಳು ಪತ್ರಕರ್ತರಿಗೆ ಲಕ್ಷಾಂತರ ರೂಪಾಯಿ ದೀಪಾವಳಿ ಉಡುಗೊರೆಯಾಗಿ ನೀಡಿದ್ದಾರಲ್ವಾ ಇವರಿಗೆ ಮುಖ್ಯಮಂತ್ರಿಯಾಗಿ ತನ್ನ ಹುದ್ದೆಯಲ್ಲಿ ಮುಂದುವರೆಯುವ ಯಾವ ನೈತಿಕತೆ ಇದೆ? ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಮೇಲೆ ಮೊಕದ್ದಮೆ ಹೂಡಬೇಕು ಮತ್ತು ಈ ಇಬ್ಬರೂ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಸಾಲ ಮಾಡಿ ಲಂಚ ನೀಡಿದ್ದಾರೆ
ನಂದೀಶ್ ಅವರು 70-80 ಲಕ್ಷ ಸಾಲ ಮಾಡಿ ಲಂಚ ನೀಡಿದ್ದಾರೆ. ಈ ಹಣವನ್ನು ಯಾರಿಗೆ ಕೊಟ್ಟಿದ್ದಾರೆ ಎಂಬುದು ಗೊತ್ತಾಗಬೇಕೋ? ಬೇಡ್ವೋ? ಈ ಹಣ ಮುಖ್ಯಮಂತ್ರಿಗಳಿಗೆ ಹೋಗಿದಿಯಾ? ಗೃಹ ಸಚಿವರಿಗೆ ಹೋಗಿದೆಯಾ? ಅಥವಾ ಸ್ಥಳೀಯ ಶಾಸಕರಿಗೆ ನೀಡಿದ್ದಾರೆ ಎಂಬುದು ಗೊತ್ತಾಗಬೇಕು ತಾನೆ? ಸಾಲ ಮಾಡಿ ಲಂಚ ನೀಡಿದ್ದಾರೆ, ಇನ್ನೊಂದು ಕಡೆ ಕೆಲಸದಿಂದ ಅಮಾನತು ಮಾಡಿದ್ದಾರೆ, ಇದರಿಂದ ಹೃದಯಾಘಾತ ಆಗಿದೆ. ಎಂಟಿಬಿ ನಾಗರಾಜ್ ಅವರಿಗೆ ನಂದೀಶ ಅವರು ಚೆನ್ನಾಗಿ ಪರಿಚಯವಿರಬೇಕು ಅನ್ನಿಸುತ್ತೆ, ಇಲ್ಲದಿದ್ದರೆ ಅವರೇಕೆ ಅಂತಿಮ ದರ್ಶನಕ್ಕೆ ಹೋಗುತ್ತಿದ್ದರು? ಎಂಟಿಬಿ ನಾಗರಾಜ್ ಅವರ ಬಳಿ ತಾನು 70-80 ಲಕ್ಷ ಕೊಟ್ಟು ಕೆ,ಆರ್ ಪುರಂ ಠಾಣೆಗೆ ಬಂದಿದ್ದೀನಿ ಎಂದು ಹೇಳಿರಬಹುದು. ಇದನ್ನು ಎಂಟಿಬಿ ಬಾಯಿ ಬಿಟ್ಟಿದ್ದಾರೆ. ಇದು ಪ್ರಬಲವಾದ ಸಾಕ್ಷಿ ಕೂಡ ಹೌದು.

ದಯಾಮರಣಕ್ಕೆ ಪತ್ರ
20-10-2022ರಲ್ಲಿ ಬಸವರಾಜ್ ಅಮರಗೋಳ ಎಂಬ ಗುತ್ತಿಗೆದಾರ ರಾಷ್ಟ್ರಪತಿಗಳಿಗೆ ದಯಾಮರಣಕ್ಕೆ ಪತ್ರ ಬರೆದಿದ್ದಾರೆ. ಕೊರೊನಾ ಮೊದಲ ಅಲೆ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಸೇರಿದಂತೆ ಹಲವು ಕಡೆ ಉಪಕರಣಗಳನ್ನು ನೀಡಿದ್ದಾರೆ. ಇದರಲ್ಲಿ 20% ಮಾತ್ರ ಬಿಲ್ ಅನ್ನು ನೀಡಿದ್ದಾರೆ. ಈ ಬಗ್ಗೆ ಅವರು ಪ್ರಧಾನಿಗಳಿಗೆ ಪತ್ರ ಬರೆದಿದ್ದಾರೆ, ಎರಡು ಬಾರಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದಾರೆ, ಗ್ರಾಮೀಣಾಭಿವೃದ್ಧಿ ಇಲಾಖೆ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿದ್ದಾರೆ, ಇದರಿಂದ ಯಾವ ಉಪಯೋಗವೂ ಆಗಿಲ್ಲ. ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಇವರ ಬಳಿ 30 - 40% ಲಂಚ ಇದ್ದರೆ ಮಾತ್ರ ಬಿಲ್ ಕೊಡಲು ಸಾಧ್ಯ ಎಂದು ಹೇಳಿದ್ದಾರೆ. ಪಾಪ ಇಂಥವರನ್ನು ಆತ್ಮಹತ್ಯೆ ಮಾಡಿಕೊಳ್ಳುವಂತ ಪರಿಸ್ಥಿತಿಗೆ ತಂದಿದ್ದಾರೆ. ನಂತರ ಮುಖ್ಯಮಂತ್ರಿಗಳೇ ಕರೆ ಮಾಡಿ ಈ ದೂರಿಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಳ್ಳಬೇಡಿ ಎಂದು ಪೊಲೀಸರಿಗೆ ಹೇಳಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಬಸವರಾಜ ಅಮರಗೋಳ ಅವರು ಪತ್ರದಲ್ಲಿ ಬರೆದುಕೊಂಡಿದ್ದಾರೆ. ಇಂಥಾ ಭ್ರಷ್ಟ ಸರ್ಕಾರ ಯಾವಾಗಲಾದರೂ ಬಂದಿತ್ತಾ? ಎಂದು ಪ್ರಶ್ನಿಸಿದರು.

ನನ್ನ ವಿರುದ್ಧವೂ ತನಿಖೆಯಾಗಲಿ
ವಿವೇಕಾನಂದ ಎಂಬುವರ ಬಳಿ ಸಿದ್ದರಾಮಯ್ಯ ಚೆಕ್ ಮೂಲಕ ಲಂಚ ಪಡೆದಿದ್ದಾರೆ ಎಂಬ ಬಿಜೆಪಿ ನಾಯಕ ಎನ್. ಆರ್. ರಮೇಶ್ ಕುಮಾರ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, "ನಾನು ವಿವೇಕ ಅವರ ಬಳಿ ಒಂದೂವರೆ ಕೋಟಿ ಸಾಲ ಪಡೆದಿದ್ದು ನಿಜ. ಅದನ್ನು ಇನ್ನೂ ತೀರಿಸಿಲ್ಲ. ಅವರು ನನ್ನ 40 ವರ್ಷಗಳ ಗೆಳೆಯ. ನಿವೇಶನ ಖರೀದಿಗೆ ಸಾಲ ಮಾಡುವುದು ತಪ್ಪಾ? ಅವರನ್ನು ಪಿಟಿಸಿ ಸದಸ್ಯನನ್ನಾಗಿ ಮಾಡಿದ್ದು ಕೂಡ ನಿಜ. ಆದರೆ, ಸಾಲ ಪಡೆದದ್ದಕ್ಕೂ ನೇಮಕ ಮಾಡಿದ್ದಕ್ಕೂ ಸಂಬಂಧ ಇಲ್ಲ. ಇದನ್ನು ಲೋಕಾಯುಕ್ತ ತನಿಖೆಗೆ ವಹಿಸುವುದಾದರೆ ನನ್ನ ವಿರೋಧ ಇಲ್ಲ. ತನಿಖೆ ಮಾಡಲಿ. ನಾನೇನು ಬಸವರಾಜ ಬೊಮ್ಮಾಯಿ ಅವರ ರೀತಿ ದಾಖಲೆ ಕೊಡಿ ಎಂದು ಕೇಳಲ್ಲ. ರಾಜ್ಯದಲ್ಲಿ ಸರ್ಕಾರದ ಭ್ರಷ್ಟಾಚಾರದಿಂದ ಜನ ಸಾಯುತ್ತಿದ್ದಾರೆ, ಇದರ ಬಗ್ಗೆ ತನಿಖೆ ಮಾಡಿಸಿ ಎಂದರೆ ಸಿದ್ದರಾಮಯ್ಯ ಸಾಲ ಪಡೆದಿದ್ದು ತನಿಖೆ ಮಾಡಿಸುತ್ತೇವೆ ಎನ್ನುತ್ತಾರೆ. ಸಾಲ ಮಾಡುವುದು ಅಪರಾಧವಾ? ಎಂದು ಪ್ರಶ್ನಿಸಿದರು.











Click it and Unblock the Notifications