ಮದರ್ ತೆರೆಸಾ ಸಂತಳಾಗಿದ್ದು ಹೇಗೆ? ಪವಾಡಗಳೇನು?

Posted By:
Subscribe to Oneindia Kannada

ವ್ಯಾಟಿಕನ್ ಸಿಟಿ, ಸೆಪ್ಟೆಂಬರ್ 04 : "ಇತರರಿಗಾಗಿ ಬದುಕದ ಬದುಕು ಬದುಕೇ ಅಲ್ಲ. ನೀವು ಹೋದಲ್ಲೆಲ್ಲ ಪ್ರೀತಿಯನ್ನು ಪಸರಿಸಿ. ನಿಮ್ಮ ಬಳಿ ಬಂದವರು ಸಂತಸಪಡದೆ ಹೋಗಬಾರದು" ಎಂಬ ಸ್ಫೂರ್ತಿದಾಯಕ ಮಾತುಗಳಿಂದ ಇಡೀ ಮನುಕುಲವನ್ನೇ ಗೆದ್ದಿದ್ದ ಭಾರತದ 'ಅಮ್ಮ' ಮದರ್ ತೆರೆಸಾ ಗೌರಿ ಹಬ್ಬದಂದು ಸಂತ ಪದವಿಗೇರಿದ್ದಾರೆ.

ವ್ಯಾಟಿಕನ್ ಸಿಟಿಯ ಸೇಂಟ್ ಪೀಟರ್ ಸ್ಕ್ವೇರ್ ನಲ್ಲಿ ನೆರೆದಿದ್ದ ಸಹಸ್ರಾರು ಅಭಿಮಾನಿಗಳ ಹರ್ಷೋದ್ಘಾರಗಳ ನಡುವೆ ಪೋಪ್ ಫ್ರಾನ್ಸಿಸ್ ಅವರು, ಭಾರತದ ಬಡವರಿಗಾಗಿಯೇ ತನ್ನ ಜೀವವನ್ನು ತೇದ ದಾದಿ ಮದರ್ ತೆರೆಸಾರನ್ನು 'ಸಂತ' ಎಂದು ಭಾನುವಾರ ಘೋಷಣೆ ಮಾಡಿದರು. ಸೆಪ್ಟೆಂಬರ್ 5 ಅವರ ಪುಣ್ಯತಿಥಿ.

Oneindia Explainer : How Mother Teresa became Saint and her miracles

ಇಲ್ಲಿಯವರೆಗೆ ಐವರು ಭಾರತೀಯ ಕ್ರೈಸ್ತ ಸಮುದಾಯದವರು 'ಸಂತ' ಪದವಿಗೇರಿದ್ದಾರೆ. ಅವರು, ಸಂತ ಗೋನ್ಸಾಲೋ ಗಾರ್ಸಿಯಾ (1862), ಸಂತ ಜೋಸೆಫ್ ವಾಜ್ (2015), ಸಂತ ಅಲ್ಫೋನ್ಸಾ (1986), ಸಂತ ಕುರಿಯಾಕೋಸ್ ಎಲಿಯಾಸ್ ಚಾವರಾ (2014) ಮತ್ತು ಸಂತ ಯುಫ್ರಾಸಿಯಾ ಎಲುವತಿಂಗಳ್ (2014). ಈಗ ಇವರ ಸಾಲಿಗೆ ಮದರ್ ತೆರೆಸಾ ಸೇರಿದ್ದಾರೆ.

ರೋಮನ್ ಕ್ಯಾಥೊಲಿಕ್ ಚರ್ಚ್‌ನ ಸಂತ ಎಂದು ಮದರ್ ತೆರೆಸಾ ಅವರನ್ನು ಘೋಷಿಸುವುದಾಗಿ ಪೋಪ್ ಫ್ರಾನ್ಸಿಸ್ ಅವರು ಇದೇ ವರ್ಷದ ಮಾರ್ಚ್ ನಲ್ಲಿಯೇ ಹೇಳಿದ್ದರು. ಕೋಲ್ಕತಾದಲ್ಲಿ ನೆಲೆಸಿ 45 ವರ್ಷಗಳಿಗೂ ಹೆಚ್ಚುಕಾಲ ಬಡಬಗ್ಗರ ನಿಸ್ವಾರ್ಥ ಸೇವೆ ಮಾಡಿದ, ಶಾಂತಿ ನೋಬೆಲ್ ಪ್ರಶಸ್ತಿ ವಿಜೇತ ಮದರ್ ತೆರೆಸಾ ಕಡೆಗೂ ಸಂತ ಪದವಿಗೇರಿದ್ದಾರೆ.

1910ರ ಆಗಸ್ಟ್ 26ರಂದು ಯುರೋಪ್‌ನ ಮಸಿಡೋನಿಯಾದಲ್ಲಿ ಜನಿಸಿದ ಮದರ್ ತೆರೆಸಾ 1997ರ ಸೆಪ್ಟೆಂಬರ್ 5ರಂದು ಪಶ್ಚಿಮ ಬಂಗಾಳದ ಕೊಲ್ಕತಾದಲ್ಲಿ ತಮ್ಮ 87ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಮಸಿಡೋನಿಯಾ ತೊರೆದ ನಂತರ ಹಲವಾರು ದೇಶ ಸುತ್ತಿದರೂ ಕೊನೆಗೆ ನೆಲೆಯೂರಿದ್ದು ಭಾರತದಲ್ಲಿ.

Oneindia Explainer : How Mother Teresa became Saint and her miracles

ಯಾರು ಸಂತನಾಗಬಹುದು?

ಈ ಪ್ರಕ್ರಿಯೆ ಸುದೀರ್ಘವಾದದ್ದಾಗಿದೆ. ಆ ವ್ಯಕ್ತಿ ಸೇವೆ ಸಲ್ಲಿಸಿದ ಸ್ಥಳೀಯ ಚರ್ಚ್‌ನ ಆಡಳಿತದಲ್ಲಿ ಬರುವ ಜಿಲ್ಲೆಯಲ್ಲಿ ಈ ಪ್ರಕ್ರಿಯೆ ಆರಂಭವಾಗುತ್ತದೆ. ಈ ಡಯೋಸೀಸ್‌ನಿಂದ ನಿಯೋಜಿತ ವ್ಯಕ್ತಿ ಸಂತ ಪದವಿಗೇರಬಯಸುವ ವ್ಯಕ್ತಿಯ ಕುರಿತು ದಾಖಲೆಗಳನ್ನು ಕಲೆಹಾಕುತ್ತಾರೆ. ನಂತರ ವರದಿಯನ್ನು ವ್ಯಾಟಿಕನ್ ಸಿಟಿಯಲ್ಲಿನ ಮಂಡಳಿಕೆ ಸಲ್ಲಿಸುತ್ತಾರೆ. ಆ ಮಂಡಳಿ ಒಪ್ಪಿದರೆ ಪೋಪ್ ಸಹಿ ಹಾಕುತ್ತಾರೆ.

ಇದರ ಹೊರತಾಗಿ, ಸಂತ ಪದವಿಗೇರುವ ವ್ಯಕ್ತಿಯ ಜೀವಿತಾವಧಿಯಲ್ಲಿ ಅಥವಾ ಮರಣಾನಂತರ, ಅವರ ಪ್ರಭಾವದಿಂದಾಗಿ ಕನಿಷ್ಠಪಕ್ಷ ಎರಡು ಅಧಿಕೃತವಾಗಿ ಒಪ್ಪಿಗೆಯಾದ ಪವಾಡಗಳು ಸಂಭವಿಸಿರಬೇಕು. ಅದೂ, ವೈಜ್ಞಾನಿಕ ವಿವರಣೆಗೆ ನಿಲುಕದಂತಹ ಮಾರಣಾಂತಿಕ ಕಾಯಿಲೆ, ಆ ವ್ಯಕ್ತಿಯ ಪ್ರಭಾವದಿಂದಾಗಿ ಗುಣವಾಗಿರಬೇಕು.

ಇಷ್ಟು ಮಾತ್ರವಲ್ಲ, ಈ ಪವಾಡ ಸಂಭವಿಸಿದ್ದು ಸಂತ ಪದವಿಗೇರುವ ವ್ಯಕ್ತಿಯ ಪ್ರಭಾವದಿಂದ ಎಂದು ನುರಿತ ವೈದ್ಯರು, ದೈವಿಕ ಶಕ್ತಿಯನ್ನು ಅಧ್ಯಯನ ಮಾಡಿದ ತಜ್ಞರು, ಬಿಷಪ್ ಗಳು ಮತ್ತು ಪೋಪ್ ರಿಂದ ನಾಮನಿರ್ದೇಶನವಾಗಿರುವ ರೋಮನ್ ಕ್ಯಾಥೊಲಿಕ್ ಚರ್ಚ್‌ನ ಹಿರಿಯ ಅಧಿಕಾರಿಗಳಿರುವ ಸಮಿತಿ ಪ್ರಮಾಣಪತ್ರ ನೀಡಬೇಕು.

Oneindia Explainer : How Mother Teresa became Saint and her miracles

ಪವಾಡ ಅಂದ್ರೆ ಏನು?

ನೈಸರ್ಗಿಕ ಅಥವಾ ವೈಜ್ಞಾನಿಕ ವಿವರಣೆಗೆ ಒಳಪಡದ, ವೈದ್ಯಕೀಯ ವಿವರಣೆಗೆ ನಿಲುಕದ, ಮತ್ತು ಕೇವಲ ದೈವೀಕ ಶಕ್ತಿಯಿಂದ ಕಾಯಿಲೆ ಗುಣಮುಖವಾಗಿರಬೇಕು. ಅಲ್ಲದೆ, ಆ ಕಾಯಿಲೆ ತಕ್ಷಣ ಗುಣವಾಗಿರಬೇಕು ಮತ್ತು ಎಂದಿಗೂ ಮರುಕಳಿಸದಂತಿರಬೇಕು.

ಮದರ್ ತೆರೆಸಾ ಮಾಡಿರುವ ಪವಾಡಗಳು

ಮದರ್ ತೆರೆಸಾ ಅವರ ಮರಣಾನಂತರ ಜರುಗಿದ ಎರಡು ಪವಾಡಗಳನ್ನು ದೃಢೀಕರಿಸಲು ಒಟ್ಟು 35 ಸಾವಿರ ಪುಟಗಳ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಮೊದಲನೆಯದು ಪವಾಡ ನಡೆದದ್ದು 2003ರಲ್ಲಿ. ಪಶ್ಚಿಮ ಬಂಗಾಳದ ಗುಡ್ಡಗಾಡು ಪ್ರದೇಶದ ಮೋನಿಕಾ ಬೆಸ್ರಾ ಎಂಬಾಕೆಯ ಹೊಟ್ಟೆಯ ನೋವು ಮದರ್ ತೆರೆಸಾ ಅವರ ಅತೀಂದ್ರೀಯ ಶಕ್ತಿಯಿಂದ ಗುಣಮುಖವಾಯಿತು.

ಎರಡನೇ ಪವಾಡ ನಡೆದದ್ದು 2008ರಲ್ಲಿ. ಬ್ರಜಿಲ್‌ನ ಮರ್ಸಿಲಿಯೋ ಅಡ್ಡಾಡ್ ಆಂಡ್ರಿಯೋ ಎಂಬಾತ ವೈರಲ್ ಮಿದುಳು ಜ್ವರ ಬಂದಿದ್ದರಿಂದ ಕೋಮಾದಲ್ಲಿದ್ದ. ಮದರ್ ತೆರೆಸಾ ಅವರ ಶಕ್ತಿಯಿಂದಾಗಿ ಆತ ತಕ್ಷಣ ಗುಣಮುಖ ಹೊಂದಿದ. ಆಂಡ್ರಿಯೋನ ಹೆಂಡತಿ ಫರ್ನಾಂಡಾಗೆ ಮದರ್ ತೆರೆಸಾ ಕುರಿತು ಪ್ರಾರ್ಥನೆ ಮಾಡಬೇಕೆಂದು ಹೇಳಲಾಗಿತ್ತು. ಮರುದಿನ ಹೋಗಿ ನೋಡಿದಾಗ ಜೀವನ್ಮರಣದ ಹೋರಾಟ ನಡೆಸಿದ್ದ ಆಂಡ್ರಿಯೋ ತನ್ನ ಹಾಸಿಗೆಯ ಮೇಲೆ ಏನೂ ಆಗಿಲ್ಲವೆಂಬಂತೆ ಎದ್ದು ಕುಳಿತಿದ್ದ.

ವಿವಾದಗಳು

ಕ್ಯಾಥೋಲಿಕ್ ಚರ್ಚ್ ಪವಾಡದ ಕುರಿತು ನೀಡಿರುವ ವ್ಯಾಖ್ಯಾನದ ಬಗ್ಗೆ ಸಾಕಷ್ಟು ಅಸಮ್ಮತಿಯಿದೆ. ಅಸಲಿಗೆ ಅವು ಪವಾಡಗಳೇ ಅಲ್ಲ ಎಂಬ ಮಾತುಗಳ ಕೂಡ ಕೇಳಿಬಂದಿವೆ. ಅಲ್ಲದೆ, ಮದರ್ ತೆರೆಸಾ ಕೂಡ, ಹಲವಾರು ಬಾರಿ, ಕೆಲವೊಂದು ರೋಗಗಳು ಗುಣಮುಖವಾಗುವಂತಿದ್ದರೂ, ರೋಗಿಗಳನ್ನು ಹಾಗೆಯೇ ನರಳಲು ಬಿಡುತ್ತಿದ್ದರು ಎಂಬ ಆರೋಪ ಎದುರಿಸಿದ್ದರು.

ಮದರ್ ತೆರೆಸಾ ಅವರ ಆಶ್ರಮದಲ್ಲಿ ರೋಗಿಗಳು ಉತ್ತರ ಆಹಾರವಿಲ್ಲದೆ, ಸ್ವಚ್ಛವಿಲ್ಲದ ಪರಿಸರದಲ್ಲಿ ನರಳುತ್ತಿದ್ದರು. ಮದರ್ ತೆರೆಸಾ ಚಾರ್ಲ್ಸ್ ಕೀಟಿಂಗ್ ಎಂಬ ವಂಚಕನಿಂದ ಭಾರೀ ವಂತಿಗೆ ಪಡೆದಿದ್ದರು. ಆತನ ಬೆಂಬಲಕ್ಕೆ ನಿಂತಿದ್ದ ಮದರ್ ತೆರೆಸಾ ಆತನಿಗೆ ಮಾಫಿ ಮಾಡಬೇಕೆಂದು ಮನವಿ ಸಲ್ಲಿಸಿದ್ದರು ಎಂದು ಕ್ರಿಸ್ಟೋಫರ್ ಹಿಚೆನ್ಸ್ ಎಂಬಾತನೂ ತೆರೆಸಾರ ವಿರುದ್ಧ ಆರೋಪ ಮಾಡಿದ್ದ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Oneindia Explainer : How Mother Teresa became Saint and what are her miracles? Mother Teresa was declared saint by Pope Francis at Vatican City on 4th September, Sunday, Thousands gathered at St. Peter's Square in the Vatican City to witness the canonisation ceremony.
Please Wait while comments are loading...