Gujarat Elections Schedule: ನೀವು ತಿಳಿಯಬೇಕಿರುವ ಪ್ರಮುಖ ಅಂಶಗಳು
ನವದೆಹಲಿ: ದೇಶದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಗುಜರಾತ್ ವಿಧಾನಸಭಾ ಚುನಾವಣೆ ದಿನಾಂಕಗಳನ್ನು ಕೇಂದ್ರ ಚುನಾವಣಾ ಆಯೋಗ ಇಂದು ಪ್ರಕಟಿಸಿತು.
ಗುಜರಾತ್ ವಿಧಾನಸಭೆಗೆ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಡಿಸೆಂಬರ್ 1 ಹಾಗೂ 5ರಂದು ಚುನಾವಣೆಗಳು ನಡೆಯಲಿದ್ದು, ಡಿಸೆಂಬರ್ 8ರಂದು ಮತ ಏಣಿಕೆ ಪ್ರಕ್ರಿಯೆ ನಡೆಯಲಿದೆ.
182 ಸದಸ್ಯ ಬಲವನ್ನು ಹೊಂದಿರುವ ಗುಜರಾತ್ ವಿಧಾನಸಭೆಯ ಅವಧಿ 2022ರ ಫೆಬ್ರವರಿ 18ಕ್ಕೆ ಅಂತ್ಯಗೊಳ್ಳಲಿದೆ.

ಗುಜರಾತ್ ಚುನಾವಣೆ ವೇಳಾಪಟ್ಟಿಯ ಪ್ರಮುಖ ಅಂಶಗಳು
*ಅಕ್ಟೋಬರ್ 10 ರಂದು ಪ್ರಕಟಿಸಲಾದ ಮತದಾರರ ಪಟ್ಟಿಯ ಪ್ರಕಾರ, ಗುಜರಾತ್‌ನಲ್ಲಿ 4.9 ಕೋಟಿಗೂ ಅಧಿಕ ಮತದಾರರು ನೋಂದಾಯಿಸಿಕೊಂಡಿದ್ದಾರೆ.
*ನೋಂದಾಯಿಸಿಕೊಂಡಿರುವ ಮತದಾರರಲ್ಲಿ 4.04 ಲಕ್ಷ ವಿಶೇಷ ಚೇತನರು, 9.8 ಲಕ್ಷಕ್ಕೂ ಹೆಚ್ಚು ಹಿರಿಯ ನಾಗರಿಕರು(80 ವರ್ಷ ಮೀರಿದ) ಮತ್ತು 4.61 ಲಕ್ಷ ಜನರು ಮೊದಲ ಬಾರಿಗೆ ಮತ ಚಲಾಯಿಸುವವರು ಇದ್ದಾರೆ.
*ಹೊಸ ಮತದಾರರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ವರ್ಷವೊಂದರಲ್ಲಿ ನಾಲ್ಕು ಅವಕಾಶಗಳನ್ನು ಪಡೆದಿದ್ದಾರೆ.
*ರಾಜ್ಯದ 1,274 ಮತಗಟ್ಟೆಗಳನ್ನು ಸಂಪೂರ್ಣವಾಗಿ ಮಹಿಳಾ ಅಧಿಕಾರಿಗಳು ಹಾಗೂ ಮಹಿಳಾ ಭದ್ರತಾ ಸಿಬ್ಬಂದಿ ನಿರ್ವಹಿಸಲಿದ್ದಾರೆ.

*ಯುವ ಮತದಾರರನ್ನು ಪ್ರೇರೇಪಿಸಲು ಮೊದಲ ಬಾರಿಗೆ 33 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಈ ಮತಗಟ್ಟೆಗಳಲ್ಲಿ ಅತ್ಯಂತ ಕಿರಿಯ ವಯಸ್ಸಿನ ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದಾರೆ.
*ಚುನಾವಣಾ ಪ್ರಕ್ರಿಯೆಯಲ್ಲಿ ತೃತೀಯಲಿಂಗಿ ಮತದಾರರ ಭಾಗವಹಿಸುವಿಕೆಗೆ ಕೇಂದ್ರ ಚುನಾವಣಾ ಆಯೋಗ ವಿಶೇಷ ಒತ್ತು ನೀಡಿದೆ. ಈ ಮೂಲಕ ದಾಖಲಾತಿಗೆ ಅನುಕೂಲವಾಗುವಂತೆ ಪ್ರತಿ ಜಿಲ್ಲೆಯಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸಲಾಗಿದೆ. 2017 ಕ್ಕೆ ಹೋಲಿಸಿದರೆ 2022 ರಲ್ಲಿ ನೋಂದಾಯಿತ ತೃತೀಯ ಲಿಂಗ ಮತದಾರರ ಸಂಖ್ಯೆ ದ್ವಿಗುಣಗೊಂಡಿದೆ ಎಂದು ಆಯೋಗ ತಿಳಿಸಿದೆ.
*2017 ರಲ್ಲಿ, ಹಿಮಾಚಲ ಪ್ರದೇಶ ಮತ್ತು ಗುಜರಾತ್ ಚುನಾವಣೆಗಳ ದಿನಾಂಕಗಳನ್ನು ಬೇರೆಯಾಗಿ ಘೋಷಿಸಲಾಗಿತ್ತು. ಆದರೆ, ಡಿಸೆಂಬರ್ 18 ರಂದು ಎಣಿಕೆ ಒಟ್ಟಿಗೆ ನಡೆಯಿತು.
*ಚುನಾವಣಾ ಆಯೋಗವು ಕಳೆದ ತಿಂಗಳು ಹಿಮಾಚಲ ಪ್ರದೇಶದ ಚುನಾವಣಾ ದಿನಾಂಕಗಳನ್ನು ಘೋಷಿಸಿತ್ತು. ಈ ವೇಳೆ, ಗುಜರಾತ್ ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಿರಲಿಲ್ಲ. ಇದು ಹಲವು ಶಂಕೆಗಳಿಗೆ ಕಾರಣವಾಗಿದೆ.

*ಹಿಮಾಚಲ ಪ್ರದೇಶದಲ್ಲಿ ನವೆಂಬರ್ 12 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ. ಗುಜರಾತ್ ವಿಧಾನಸಭೆ ಚುನಾವಣೆಯು ಎರಡು ಹಂತಗಳಲ್ಲಿ ನಡೆಯಲಿದೆ. ಡಿಸೆಂಬರ್ 1 ಹಾಗೂ 5ರಂದು ಮತದಾನ ನಡೆಯಲಿದೆ. ಡಿಸೆಂಬರ್ 8ರಂದು ಮತ ಎಣಿಕೆ ನಡೆಯಲಿದೆ.
*ಹಿಮಾಚಲ ಪ್ರದೇಶದೊಂದಿಗೆ ಗುಜರಾತ್‌ಗೆ ಚುನಾವಣಾ ದಿನಾಂಕಗಳನ್ನು ಘೋಷಿಸಿರಲಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಾವು ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ಗುಜರಾತ್‌ನಲ್ಲಿ ತ್ರಿಕೋನ ಸ್ಪರ್ಧೆ
ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯವಾದ ಗುಜರಾತ್‌ನಲ್ಲಿ ಗೆಲ್ಲುವುದು ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಕಾಂಗ್ರೆಸ್ ಎದುರಾಳಿಯಾಗಿತ್ತು. ಆದರೆ, ಈ ಬಾರಿಯ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ಈ ಬಾರಿ ಗುಜರಾತ್ ಚುನಾವಣೆಯಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸಲು ಮುಂದಾಗಿದೆ. ಈಗಾಗಲೇ ದೆಹಲಿ ಹಾಗೂ ಪಂಜಾಬ್‌ನಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಗದ್ದುಗೆ ಏರಿರುವ ಎಎಪಿ ಗುಜರಾತ್‌ನಲ್ಲಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿದೆ. ಅದರಲ್ಲೂ ನಗರ ಕೇಂದ್ರಿತ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಎಎಪಿ ಕೆಲಸ ಮಾಡುತ್ತಿದೆ. ಬಿಜೆಪಿಯ ವೋಟ್ ಬ್ಯಾಂಕ್ ಎಂದೇ ಗುರುತಿಸಲಾಗುವ ನಗರ ಭಾಗದ ಮತದಾರರು ಎಎಪಿ ಕಡೆ ವಾಲುತ್ತಿದ್ದಾರೆ ಎಂಬ ಮಾತುಗಳೂ ಕೇಳಿಬಂದಿವೆ. ಇದು ಬಿಜೆಪಿಗೆ ಸಂಕಷ್ಟವನ್ನು ಒಡ್ಡಿದೆ.












Click it and Unblock the Notifications