ರಾಜಸ್ಥಾನ: ಗೋಕಳ್ಳನೆಂದು ವ್ಯಕ್ತಿಯನ್ನು ಹೊಡೆದು ಕೊಂದ ಜನ
ಅಲ್ವಾರ್, ಜುಲೈ 21: ಗೋವುಗಳ ಕಳ್ಳ ಸಾಗಾಣಿಕೆಯ ಆರೋಪದ ಮೇಲೆ ರಾಜಸ್ಥಾನದ ಅಲ್ವಾರ್ ನಲ್ಲಿ ವ್ಯಕ್ತಿಯೊಬ್ಬನನ್ನು ಹೊಡೆದು ಸಾಯಿಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
28 ವರ್ಷ ವಯಸ್ಸಿನ ಅಕ್ಬರ್ ಖಾನ್ ಎಂಬ ಯುವಕ ಗೋವುಗಳ ಕಳ್ಳಸಾಗಣೆ ಮಾಡುತ್ತಿದ್ದಾನೆ ಎಂದು ಆರೋಪಿಸಿ ಜನರೇ ಹೊಡೆದು ಕೊಂದಿದ್ದಾರೆ. ರಾಮಗಢ ಎಂಬ ಹಳ್ಳಿಯಲ್ಲಿ ಇಬ್ಬರು ಯುವಕರು ಹಸುಗಳೊಂದಿಗೆ ಇರುವುದನ್ನು ನೋಡಿದ ಜನರು, ಅವರು ಗೋವಿನ ಕಳ್ಳರು ಎಂದು ಭಾವಿಸಿದ್ದಾರೆ.
ಅಕ್ಬರ್ ಖಾನ್ ಹರ್ಯಾಣದ ಕೊಲ್ಗಾಂವಿನ ನಿವಾಸಿ. ಅಲ್ವಾರಿನ ಲಾಲಾವಂಡಿ ಎಂಬ ಊರಿನ ಮೂಲಕ ಹಸುಗಳನ್ನು ಕಾಡಿನ ದಾರಿಯಲ್ಲಿ ಇವರು ಕೊಂಡೊಯ್ಯುತ್ತಿದ್ದರು. ಈ ಸಂದರ್ಭದಲ್ಲಿ ರಾಮಗಢ ಎಂಬ ಜನರು ಇವರನ್ನು ಕಂಡು ಹಸುವಿನ ಕಳ್ಳರೆಂದು ಕೂಗಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಅಕ್ಬರ್ ಖಾನ್ ಕೊನೆಯುಸಿರೆಳೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ, 'ಈ ಘಟನೆ ಖಂಡನಾರ್ಹ. ಎಲ್ಲಾ ಸಂಭವನೀಯ ಕಠಿಣ ಕ್ರಮಗನ್ನೂ ಅಪರಾಧಿಗಳ ವಿರುದ್ಧ ತೆಗೆದುಕೊಳ್ಳಲಾಗುವುದು' ಎಂದಿದ್ದಾರೆ.
"ಅವರು ಗೋ ಕಳ್ಳರು ಹೌದೋ ಅಲ್ಲವೋ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ದೊರಕಿಲ್ಲ" ಎಂದು ಪೊಲೀಸರು ತಿಳಿಸಿದ್ದಾರೆ.
ಗೋ ರಕ್ಷಣೆಯ ಹೆಸರಿನಲ್ಲಿ ಗುಂಪುಗೂಡಿಕೊಂಡು ಹೊಡೆಯುವುದು, ಕೊಲ್ಲುವುದು ಅಪರಾಧ. ಅದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಇತ್ತೀಚೆಗಷ್ಟೇ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಅಷ್ಟರಲ್ಲೇ ಇಂಥದೊಂದು ದುರಂತ ನಡೆದಂತಾಗಿದೆ.












Click it and Unblock the Notifications