ಅಸಹಿಷ್ಣುತೆ ವಿವಾದ: ಅನ್ಸಾರಿಗೆ ಮಾತಿನಲ್ಲೇ ಚಾಟಿ ಬೀಸಿದ ಪ್ರಧಾನಿ ಮೋದಿ
ಭಾರತದಲ್ಲಿ ಅಲ್ಪಸಂಖ್ಯಾತರು ಅಸುರಕ್ಷಿತರೆಂದಿದ್ದ ಹಮೀದ್. ಇದಕ್ಕೆ ಪರೋಕ್ಷ ಉತ್ತರ ನೀಡಿರುವ ಮೋದಿ, ಉಪರಾಷ್ಟ್ರಪತಿ ಹುದ್ದೆಯಿಂದ ಕೆಳಗಿಳಿದ ನಂತರ ನಿಮ್ಮ ಮೂಲ ಸ್ವಭಾವದಂತೆ ನಡೆಯಬಹುದು ಎಂದಿದ್ದಾರೆ.
ನವದೆಹಲಿ, ಆಗಸ್ಟ್ 11: ತಮ್ಮ ಸ್ಥಾನದಿಂದ ನಿರ್ಗಮಿಸುವ ಹೊತ್ತಿನಲ್ಲಿ ಅಸಹಿಷ್ಟುತೆಯ ಬಗ್ಗೆ ಮಾತನಾಡಿ ವಿವಾದಕ್ಕೆ ಸಿಲುಕಿಕೊಂಡಿರುವ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಮಾತಿನಲ್ಲೇ ಚಾಟಿ ಬೀಸಿದ್ದಾರೆ.
ಇತ್ತೀಚೆಗೆ, ಹೇಳಿಕೆಯೊಂದನ್ನು ನೀಡಿದ್ದ ಹಮೀದ್ ಅನ್ಸಾರಿ, ''ಭಾರತದಲ್ಲಿ ಅಸಹಿಷ್ಣುತೆ (ಧಾರ್ಮಿಕ ವಿಚಾರದಲ್ಲಿ) ಹೆಚ್ಚಾಗಿದೆ. ಅಲ್ಪ ಸಂಖ್ಯಾತರು ಅಭದ್ರತೆಯ ಪರಿಸ್ಥಿತಿ ಎದುರಿಸುತ್ತಿದ್ದಾರೆ'' ಎಂದು ಹೇಳುವ ಮೂಲಕ ವಿವಾದ ಮೈಮೇಲೆಳೆದುಕೊಂಡಿದ್ದರು. ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು.

ಈ ಬಗ್ಗೆ ಪ್ರಧಾನಿ ಮೋದಿ ಕೂಡ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ''ನೀವಿನ್ನು ನಿಮ್ಮ ಮೂಲ ಸ್ವಭಾವ, ಮೂಲ ಸಿದ್ಧಾಂತದಂತೆಯೇ ನಡೆದುಕೊಳ್ಳಬಹುದು'' ಎಂದು ಹೇಳಿ ಅನ್ಸಾರಿಯವರಿಗೆ ಮಾತಿನಲ್ಲೇ ಹೊಡೆತ ಕೊಟ್ಟಿದ್ದಾರೆ. ರಾಜ್ಯಸಭೆಯಲ್ಲಿ ಗುರುವಾರ ನಡೆದ ಹಮೀದ್ ಅನ್ಸಾರಿಯವರ ಬೀಳ್ಕೊಡುಗೆ ಸಮಾರಂಭದಲ್ಲಿ ಅನ್ಸಾರಿಯವರ ರಾಜಕೀಯ ಜೀವನ ಹಾಗೂ ಅವರ ಸಾಧನೆಗಳನ್ನು ಕೊಂಡಾಡಿದ ಅವರು, ಹೀಗೆ ಪರೋಕ್ಷವಾಗಿ ಅನ್ಸಾರಿಯವರನ್ನು ಚುಚ್ಚಿದರು.
ಹಮೀದ್ ಅವರ ಈ ಹೇಳಿಕೆಗೆ ಈಗಾಗಲೇ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನಿಯೋಜಿತ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ''ಇದೊಂದು ರಾಜಕೀಯ ಪ್ರೇರಿತ ಹೇಳಿಕೆ. ಭಾರತದಲ್ಲಿ ಅಲ್ಪಸಂಖ್ಯಾತರು ಸುಭದ್ರವಾಗಿದ್ದಾರೆ, ಅವರಿಗೆ ಸಿಗಬೇಕಾದ ಎಲ್ಲಾ ಸವಲತ್ತುಗಳೂ ಸಿಗುತ್ತಿವೆ'' ಎಂದಿದ್ದಾರೆ.












Click it and Unblock the Notifications