ಹುಬ್ಬಳ್ಳಿಯಲ್ಲಿ ಪಾಟೀಲ ಪುಟ್ಟಪ್ಪರಿಂದ ಧ್ವಜಾರೋಹಣ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಆಗಸ್ಟ್ 15: ನಗರದಲ್ಲಿ ಸೋಮವಾರ ಸಂಭ್ರಮದ 70 ನೇ ಸ್ವಾತಂತ್ರ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ನೆಹರು ಮೈದಾನ, ಈದ್ಗಾ ಮೈದಾನ ಸೇರಿದಂತೆ ಶಾಲಾ, ಕಾಲೇಜುಗಳಲ್ಲಿ ಧ್ವಜಾರೋಹಣ ಮಾಡಲಾಯಿತು.

ಹಲವಾರು ರಸ್ತೆ, ವೃತ್ತಗಳಲ್ಲಿ ಸಂಘ- ಸಂಸ್ಥೆಗಳ ಪದಾಧಿಕಾರಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನಗರದ ವಿವಿಧ ಸರಕಾರಿ ಕಚೇರಿಗಳಲ್ಲೂ ಧ್ವಜಾರೋಹಣ ನೆರವೇರಿಸಿದ ಸಿಬ್ಬಂದಿ, ವಿದ್ಯಾರ್ಥಿಗಳಿಗೆ ಸಿಹಿ ಹಂಚಿದರು.

Indepedence day celebration in Hubballi

ಕೆಲವೆಡೆ ರಾಷ್ಟ್ರಧ್ವಜವನ್ನು ಉಚಿತವಾಗಿ ವಿತರಿಸಲಾಗುತ್ತಿತ್ತು. ನಗರದ ಗೆಳೆಯರ ಬಳಗವೊಂದರ ಸದಸ್ಯರು ರಾಷ್ಟ್ರಧ್ವಜವನ್ನು ಬೇಕಾಬಿಟ್ಟಿಯಾಗಿ ಬಳಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.

ಸಿಂಗಾರಗೊಂಡ ಆಟೋಗಳು:
ನಗರದಲ್ಲಿ ಹಲವಾರು ಆಟೋ ಚಾಲಕರು ತಮ್ಮ ವಾಹನಗಳನ್ನು ಹೂವಿನಿಂದ ಮತ್ತು ರಾಷ್ಟ್ರಧ್ವಜಗಳಿಂದ ಅಲಂಕರಿಸಿದ್ದರು. ಕೆಲವರು ಮಹದಾಯಿ ಹೋರಾಟದ ಕುರಿತಾದ ಚಿತ್ರಗಳನ್ನು ಬಿಡಿಸಿಕೊಂಡಿದ್ದರು. ಇನ್ನೂ ಕೆಲವರು ಮಹದಾಯಿ ಡ್ಯಾಂ ಚಿತ್ರದ ಮೂಲಕ ಗಮನ ಸೆಳೆದರು.

ಕೆಲವೆಡೆ ಆಟೋ ಚಾಲಕರ ಸಂಘಟನೆಗಳಿಂದ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ವಾತಂತ್ರ್ಯೋತ್ಸವ ಅಗವಾಗಿ ವಿವಿಧೆಡೆ ಉಚಿತ ಆರೋಗ್ಯ ತಪಾಸಣೆ, ಉಚಿತ ಯೋಗ ಶಿಬಿರ, ಉಚಿತ ಸಸಿ ವಿತರಣೆ ಮತ್ತಿತರ ಕಾರ್ಯಕ್ರಮ ಆಯೋಜಿಸಲಾಗಿತ್ತು. .

ಜಿಮಖಾನಾ ಮೈದಾನದಲ್ಲಿ ಧ್ವಜಾರೋಹಣ:
ನಗರದಲ್ಲಿ ವಿವಾದಿತ ಪ್ರದೇಶ ಎಂದೇ ಕರೆಸಿಕೊಂಡಿರುವ ದೇಶಪಾಂಡೆ ನಗರದ ಜಿಮಖಾನಾ ಮೈದಾನದಲ್ಲಿ ಸೋಮವಾರ ಗ್ರೌಂಡ್ ಬಚಾವ್ ಸಮಿತಿ ವತಿಯಿಂದ ಧ್ವಜಾರೋಹಣವನ್ನು ಪತ್ರಕರ್ತ ಡಾ.ಪಾಟೀಲ ಪುಟ್ಟಪ್ಪ ನೆರವೇರಿಸಿದರು. ಮೈದಾನವನ್ನು ಸಾರ್ವಜನಿಕರ ಬಳಕೆಗೆ ಮುಕ್ತವಾಗಿಡಬೇಕು ಎಂದರು.

ಸಮಿತಿ ಅಧ್ಯಕ್ಷ ಸಿಬಿಎಲ್ ಹೆಗಡೆ ಮಾತನಾಡಿ, ಎರಡು ಕೋರ್ಟ್ ಗಳಲ್ಲಿ ನಮ್ಮದೇ ಗೆಲುವು ಆಗಿದೆ. ಆದರೆ ಯಾವುದೇ ಕಾರಣಕ್ಕೂ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದರು.

Indepedence day celebration in Hubballi

ಗೇಟ್ ಬಂದ್ :
ಗ್ರೌಂಡ್ ಬಚಾವ್ ಸಮಿತಿಯವರು ಸೋಮವಾರ ಬೆಳಗ್ಗೆ ಧ್ವಜಾರೋಹಣಕ್ಕೆ ಬರುತ್ತಿದ್ದಾರೆ ಎಂದು ಮೊದಲೇ ಅರಿತಿದ್ದ ಜಿಮಖಾನಾ ಕ್ಲಬ್ ನವರು, ಯಾವ ವಾಹನವೂ ಒಳಗಡೆ ಬರಬಾರದೆಂದು. ಗೇಟ್ ಮುಂದೆ ದೊಡ್ಡ ಪಿಚ್ ರೋಲರ್ ನಿಲ್ಲಿಸಿದ್ದರು. ಪಾಟೀಲ ಪುಟ್ಟಪ್ಪನವರ ಕಾರು ಬಂದಾಗ ಗೇಟ್ ತೆಗೆಯಲು ಕ್ಲಬ್ ನವರಿಗೆ ಸಮಿತಿಯವರು ಮನವಿ ಮಾಡಿದರು. ಆದರೆ ಪಿಚ್ ರೋಲರ್ ಕೆಟ್ಟಿದೆ ಅದು ಚಾಲೂ ಆಗುವುದಿಲ್ಲ ಎಂದು ಹೇಳಿದರು. ಪಟ್ಟು ಬಿಡದ ಸಮಿತಿ ಸದಸ್ಯರು ಪೊಲೀಸರ ಮಧ್ಯಸ್ಥಿಕೆಯಲ್ಲಿ ಗೇಟ್ ತೆಗೆಯಿಸಿ, ಪಾಟೀಲ ಪುಟ್ಟಪ್ಪನವರ ವಾಹನವನ್ನು ಒಳಗಡೆ ಬಿಡಲಾಯಿತು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮತ್ತು ಸಂಸದ ಪ್ರಹ್ಲಾದ ಜೋಶಿಯವರ ಕುಮ್ಮಕ್ಕಿನಿಂದ ಪಾಲಿಕೆ ಸದಸ್ಯ ವೀರಣ್ಣ ಸವಡಿ ಗೇಟ್ ಬಂದ್ ಮಾಡಿಸಿದ್ದಾರೆ ಎಂದು ಸಮಿತಿ ಸದಸ್ಯರು ಆರೋಪಿಸಿದ್ದಾರೆ.

ಮತ್ತೊಂದು ಮನೆಗಳ್ಳತನ:
ಸರಗಳ್ಳರ ಮತ್ತು ಮನೆಗಳ್ಳರ ರಾಜಧಾನಿ ಎಂದೇ ಕುಖ್ಯಾತಿ ಗಳಿಸುತ್ತಿರುವ ಹುಬ್ಬಳ್ಳಿಯಲ್ಲಿ ಮತ್ತೊಂದು ಮನೆಗಳವು ಪ್ರಕರಣ ನಡೆದಿದೆ.

ಕೇಶ್ವಾಪುರ ಭಾಗದ ಬಾಲಾಜಿ ನಗರದ ಮನೆಯಲ್ಲಿ ಕಳ್ಳತನ ನಡೆದಿದ್ದು, ಸುಮಾರು 35 ಗ್ರಾಂ. ಬಂಗಾರ ಮತ್ತು 3 ಸಾವಿರ ರು. ನಗದನ್ನು ಕಳ್ಳರು ಎಗರಿಸಿದ್ದಾರೆ.

ಈ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಗೆ ದೂರು ನೀಡಿರುವ ವಿಜಯಪುರದ ಹುಡ್ಕೋ ಕಾಲೋನಿಯ ಶ್ರೀದೇವಿ ಮಹೇಶ ಬಡಿಗೇರ ಹುಬ್ಬಳ್ಳಿಯ ತಮ್ಮ ಸಂಬಂಧಿಕರ ಮನೆಯಲ್ಲಿ ಕಳ್ಳತನವಾಗಿದೆ ಎಂದು ತಿಳಿಸಿದ್ದಾರೆ.

ವ್ಯಾನಿಟಿ ಬ್ಯಾಗ್ ನಲ್ಲಿದ್ದ ಹಣ ಮತ್ತು ಮಂಗಳಸೂತ್ರವನ್ನು ಕದಿಯಲಾಗಿದೆ ಎಂದು ಶ್ರೀದೇವಿ ದೂರು ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Different group and organisations celebrated Independence day in Hubballi. Free health check up, Yoga camps conducted. Senior Journalist Patil puttappa flag hoisted in Deshapande nagar.
Please Wait while comments are loading...