ಬಳ್ಳಾರಿ : ಭ್ರಷ್ಟಾಚಾರ ನಿಗ್ರಹಕ್ಕೆ ಸಿಸಿಟಿವಿ ಕ್ಯಾಮೆರಾ

ಜಿಲ್ಲೆಯ ಗಣಿ ಹಗರಣದಲ್ಲಿ ನೂರಾರು ಅಧಿಕಾರಿಗಳು ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿದ್ದಾರೆ. ಈ ಸಾಲಿನಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಕೂಡ ಹೊರತಾಗಿಲ್ಲ. ಈ ಸೂಕ್ಷ್ಮಗಳನ್ನು ತಿಳಿದ ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಅವರು ಕಚೇರಿಯ ಪ್ರಾಂಗಣ, ಆಪ್ತ ಸಹಾಯಕರ ವಲಯ, ಸಭಾಂಗಣ, ಚೇಂಬರ್, ಕಂದಾಯ ವಿಭಾಗ, ಸಹಾಯಕ ಆಯುಕ್ತರ ಕಚೇರಿ ಮತ್ತು ಡೆಪ್ಯುಟಿ ಡೈರೆಕ್ಟರ್ ಆಫ್ ಲ್ಯಾಂಡ್ ರೆಕಾಡ್ಸ್ ಕಚೇರಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಆದೇಶ ಜಾರಿ ಮಾಡಿದ್ದಾರೆ.
ಮೇಲ್ಕಾಣಿಸಿದ ಸ್ಥಳಗಳಲ್ಲಿ ತಾಂತ್ರಿಕವಾಗಿ ಸಂಪೂರ್ಣ ಚಿತ್ರೀಕರಣಕ್ಕೆ ಅನುಕೂಲವಾಗುವ ರೀತಿಯಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲು ಆದೇಶ ನೀಡಿರುವ ಜಿಲ್ಲಾಧಿಕಾರಿಗಳು ಅವರೇ ಖುದ್ಧಾಗಿ ಟಿವಿ ಪರದೆಯ ಮೇಲೆ ಎಲ್ಲಾ ಅಧೀನ ನೌಕರರ ಚಟುವಟಿಕೆಗಳನ್ನು ಗಮನಿಸಲಿದ್ದಾರೆ. ಕಾರಣ ಕ್ಯಾಮರಾಗಳ ಕೇಂದ್ರಬಿಂದು ಟಿವಿಯು ಜಿಲ್ಲಾಧಿಕಾರಿಗಳ ಚೇಂಬರ್‌ನಲ್ಲೇ ಇರಲಿದೆ.
ಕೇರಳ ಮುಖ್ಯಮಂತ್ರಿ ಕಚೇರಿಯ ಆಡಳಿತದ ಚಟುವಟಿಕೆಗಳನ್ನು ಇಂಟರ್‌ನೆಟ್‌ನಲ್ಲಿ ಜನಸಾಮಾನ್ಯರು ಲೈವ್ ಆಗಿ ನೋಡುವ ವ್ಯವಸ್ಥೆ ಜಾರಿಯಲ್ಲಿ ಇದೆ. ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಬಳ್ಳಾರಿ ಜಿಲ್ಲಾಧಿಕಾರಿಗಳು ಮಾದರಿ - ಆದರ್ಶರಾಗಲಿದ್ದಾರೆ. ಸೆಪ್ಟೆಂಬರ್ 1 ಅಥವಾ 5ರಿಂದ ಈ ತಂತ್ರಜ್ಞಾನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಾರ್ಯಾರಂಭ ಮಾಡಲಿದೆ.











Click it and Unblock the Notifications