ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಡರಹಳ್ಳಿಗೆ ಬಂದು ಅಟ್ಟ ಹತ್ತಿ ಕುಳಿತ ಚಿರತೆ

By Rajendra
|
Google Oneindia Kannada News

Cheetah in Byadara Halli
ಸಾಮಾನ್ಯವಾಗಿ ಹುಲಿ, ಸಿಂಹ, ಚಿರತೆ ಮತ್ತು ಕಾಡುಪ್ರಾಣಿಗಳು ಕಾನನದಲ್ಲೇ ಚಟುವಟಿಕೆಯಲ್ಲಿರುತ್ತವೆ. ಆಗೊಮ್ಮೆ ಈಗೊಮ್ಮೆ ಕಾಡಿನಿಂದ ನಾಡಿಗೆ ಬಂದು ಕುರಿ, ಮೇಕೆ, ಜಾನುವಾರುಗಳನ್ನ ಸ್ವಾಹ ಮಾಡುತ್ತಿವೆ. ಆದರೆ ಕಾಡಿನಿಂದ ನಾಡಿಗೆ ಬಂದು ಮನೆಯ ಅಟ್ಟವೇರಿ ಕುಳಿತು ಕೋಳಿ ಕುರಿಯನ್ನ ಸ್ವಾಹ ಮಾಡುತ್ತಿದ್ದರೆ ಮನೆಮಂದಿಗೆಲ್ಲ ಏನಾಗಬೇಕೇಳಿ, ಮೃತ್ಯುಕುಣಿಕೆಯೇ ಕೊರಳಿಗೆ ಬಿದ್ದಂತಹ ಅನುಭವವಾಗುತ್ತದೆ.

* ಪೂರ್ಣಚಂದ್ರ ಮಾಗಡಿ

ಅದೇ ರೀತಿ ಮಾಗಡಿ ತಾಲ್ಲೂಕ್ ಬೆಳಗವಾಡಿಯ ಎಸ್.ಬ್ಯಾಡರಹಳ್ಳಿಯ ಗಿರಿದಾಸಪ್ಪರ ಮನೆಯ ಅಟ್ಟವೇರಿ ಕುಳಿತ ಚಿರತೆ ಕೋಳಿ ಕುರಿಗಳನ್ನ ಭಕ್ಷಿಸುತ್ತಾ ಸುಮಾರು 6 ಗಂಟೆಗಳ ಕಾಲ ಗ್ರಾಮಸ್ಥರನ್ನೆಲ್ಲ ಆತಂಕದಲ್ಲಿರುವಂತೆ ಮಾಡಿತ್ತು. ಅಡವಿಯ ಗುಹೆಯಲ್ಲಿರಬೇಕಾದ ಚಿರತೆ ಮನೆಯ ಅಟ್ಟವೇರಿ ಕುಳಿತು ಗಾಬರಿಯುಟ್ಟಿಸಿತ್ತು. ಏನ್ ಸ್ವಾಮಿ.. ಈ ಚಿರತೆ ಏಕೆ ಅಟ್ಟ ಏರಿ ಕುಳಿತು ಏನ್ ಮಾಡ್ತಿದೆ ಅಂತ ಯೋಚಿಸ್ತಿದೀರಾ... ಈ ಚಿರತೆಯನ್ನೇನು ಮನೆಯವರು ಸಾಕಿ ಬೆಳೆಸಿದ್ದಲ್ಲ.... ಮನೆ ಮಂದಿ ಬೆಳೆಸಕ್ಕೆ ಇದೇನು ಬೆಕ್ಕೋ ನಾಯಿನೋ ಹೇಳಿ. ಕಾಡಿನಲ್ಲಿ ಕುಳಿತು ನಾಡಿಗೆ ಬಂದು ಕುರಿ ಮೇಕೆ ಜಾನುವಾರುಗಳ ಮೇಲೆ ಅಟ್ಯಾಕ್ ಮಾಡಿ ಸ್ವಾಹ ಮಾಡುತ್ತಿದ್ದ ಈ ಚಿರತೆ ಕಳೆದ 2ತಿಂಗಳಿನಿಂದ ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಎಸ್.ಬ್ಯಾಡರಹಳ್ಳಿ ಗ್ರಾಮಸ್ಥರಿಗೆ ಭಯದ ನೆರಳಿನಲ್ಲೇ ಬದುಕು ಸಾಗಿಸುವಂತೆ ಮಾಡಿತ್ತು.

ಈ ನಡುವೆ ಇದ್ದಕ್ಕಿದ್ದಂತೆ ಹೊಲಗದ್ದೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಚಿರತೆ ಮನೆಯಲ್ಲಿದ್ದ ಕೋಳಿ ಕುರಿಯನ್ನ ಸ್ವಾಹ ಮಾಡಲು ನೇರವಾಗಿ ಮನೆಯನ್ನೇ ಪ್ರವೇಶ ಮಾಡಿತು. ಮನೆಯ ಅಟ್ಟದ ಮೇಲೆ ಆರಾಮವಾಗಿ ವಿರಾಜಮಾನವಾಗಿದ್ದ ಚಿರತೆ ಕೋಳಿ ಕುರಿಯನ್ನ ಯಾವ ಅಳುಕಿಲ್ಲದೇ ಸ್ವಾಹ ಮಾಡುತ್ತಿತ್ತು.ಇದನ್ನ ನೋಡಿದಾಕ್ಷಣ ಮನೆಮಂದಿಗೆಲ್ಲ ಜೀವವೇ ಹೋದು ಬಂದ ಅನುಭವವಾಗಿದೆ, ಆದರೆ ಧೈರ್ಯಗೆಡದೇ ಮನೆಯ ಬಾಗಿಲನ್ನ ಹಾಕಿ ಬೀಗ ಹಾಕಿದ್ದಾರೆ. ಹೇಗಿದ್ದರು ಮನೆಯಲ್ಲಿ ಬಂಧಿಯಾದ ಚಿರತೆ ಇದ್ದಬದ್ದ ಕೋಳಿಯನ್ನೆಲ್ಲ ನಿಧಾನವಾಗಿ ತಿಂದುಹಾಕಿತು.

ಕಳೆದೆರಡು ವರ್ಷಗಳಿಂದ ಈ ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿತ್ತು. ಎರಡು ತಿಂಗಳಿನಿಂದ ಈ ಚಿರತೆ ಹಲವಾರು ಮಂದಿಗೆ ಕಾಣಿಸಿಕೊಂಡು ಹೆಚ್ಚು ಕಾಟ ಕೊಡುತ್ತಿತ್ತು. ಮತ್ತು ಮೇಯಲು ಹೋದ ಜಾನುವಾರು ಏಕಾಏಕಿ ಮುಗಿಬೀಳುತ್ತಿದ್ದ ಚಿರತೆ ಕುರಿ,ಮೇಕೆ, ಹಸುಗಳನ್ನ ಬಲಿತೆಗೆದುಕೊಳ್ಳುತ್ತಿತ್ತು.ಇದರಿಂದ ಗ್ರಾಮಸ್ಥರು ಜಾನುವಾರುಗಳನ್ನ ಮೇವು ಮೇಯಿಸಲು ಕರೆದುಕೊಂಡು ಹೋಗಲು ಭಯದಲ್ಲೇ ತೆರಳುತ್ತಿದ್ದರು. ಒಂದೆರಡು ಬಾರಿ ದಾರಿಹೋಕರಿಗೂ ರಾತ್ರಿ ಸಮಯದಲ್ಲಿ ಈ ಚಿರತೆ ಪ್ರತ್ಯಕ್ಷವಾಗಿ ಭೀತಿಯನ್ನ ಹುಟ್ಟಿಸಿತ್ತು.

ಕಾಡಿನಿಂದ ನಾಡಿಗೆ ಬರುತ್ತಿದ್ದ ವನ್ಯಜೀವಿಗಳು ಈಗ ಮನೆಗಳ ಬಳಿಯೇ ಬೇಟೆಯನ್ನ ಹುಡುಕಿಕೊಂಡುಬರುತ್ತಿವೆ. ಇದರಿಂದ ಗಟ್ಟಿಪುರ ಅರಣ್ಯಕ್ಕೆ ಹೊಂದಿಕೊಂಡಂತಿರುವ ಹಳ್ಳಿಗಳ ಜನತೆ ಭಯದಲ್ಲೇ ಬದುಕು ಸಾಗಿಸುವಂತಾಗಿದೆ ಎಂಬುದು ಗ್ರಾಮಸ್ಥರು ಅಳಲು ತೋಡಿಕೊಂಡರು. ಜನರಿಗೆ ಇಷ್ಟೆಲ್ಲಾ ಕಾಟ ಕೊಡುತ್ತಿದ್ದ ಈ ಹಳದಿ ಕಪ್ಪು ಚುಕ್ಕೆಯ ಚಿರತೆ ಕೊನೆಗೆ ಮನೆಯಲ್ಲೇ ಬೇಟೆಯನ್ನ ಹುಡುಕಿಬಂದು ಬಂಧಿಯಾಯಿತು. ಬಂಧಿಯಾದ ಚಿರತೆ ಸುರಕ್ಷಿತವಾಗಿ ರಕ್ಷಿಸಲು ಗ್ರಾಮಸ್ಥರು ಅರಣ್ಯ ಇಲಾಖೆಗೆ ತಕ್ಷಣವೇ ಸುದ್ದಿ ಮುಟ್ಟಿಸಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಬೆಳಿಗ್ಗೆಯಿಂದಲೇ ಈ ಚಿರತೆಯನ್ನ ಹಿಡಿಯಲು ಹರಸಾಹಸ ಪಟ್ಟರು.

ಸರಿಯಾದ ಉಪಕರಣಗಳಿಲ್ಲದ ಕಾರಣ ಮಾಗಡಿಯ ಅರಣ್ಯ ಸಿಬ್ಬಂದಿಗಳಿಂದ ಚಿರತೆ ಸೆರೆಹಿಡಿಯಲು ಸಾಧ್ಯವಾಗಲಿಲ್ಲ. ನಂತರ ಬನ್ನೇರುಘಟ್ಟ ವನ್ಯಜೀವ ಸಂರಕ್ಷಣಾ ಸಿಬ್ಬಂದಿಗಳು ಆಗಮಿಸಿ ಸುಮಾರು 3ಗಂಟೆಗಳ ಕಾಲ ಬಲೆಬೀಸಿ ಅರವಳಿಕೆ ಮದ್ದು ನೀಡಲು ಹರಸಾಹಸ ಪಟ್ಟರು. ಅಟ್ಟವೇರಿ ಕುಳಿತಿದ್ದ ಈ ಚಿರತೆರಾಯ ಮಾತ್ರ ಸಿಬ್ಬಂದಿಗಳ ಅರವಳಿಕೆ ಗುರಿಗೆ ಸಿಕ್ಕಲೇ ಇಲ್ಲ. ಕೊನೆಗೆ ಸತಾಯಿಸಿದ್ದು ಸಾಕು ಎಂದು ಚಿರತೆ ಅಟ್ಟದ ಮೂಲೆಯಲ್ಲಿ ಕುಳಿತು ಸುಮ್ಮನಾಯಿತು. ಸುಮಾರು ಒಂದು ವರ್ಷದ ಚಿರತೆಗೆ ಅರವಳಿಕೆ ಬರಲು 5ಎಂ.ಎಲ್. ಜೈಲೋಜೆನ್ ಮತ್ತು ಕೆಟೋಮಿನ್ ಮಿಶ್ರಣ ಮಾಡಿ ಸಿರಂಜ್ ಮೂಲಕ ಪೈರ್ ಮಾಡಲಾಯಿತು. ಅರವಳಿಕೆಗೆ ಸುಮ್ಮನಾದ ಚಿರತೆಯನ್ನ ಮನೆಯ ಹೆಂಚು ತೆಗೆದು ಸುರಕ್ಷಿತವಾಗಿ ಚಿರತೆಯನ್ನ ರಕ್ಷಿಸಲಾಯಿತು. ಮಂಪರಿನಲ್ಲಿದ್ದ ಚಿರತೆಗೆ ಮತ್ತೆ ರಿವರ್ಸನ್ ಇಂಜೆಕ್ಷನ್ ನೀಡಿ ಪ್ರಜ್ಞೆ ಬರುವಂತೆ ಮಾಡಲಾಯಿತು.

ಅಟ್ಟವೇರಿ ಕುಳಿತ ಚಿರತೆಯನ್ನ ಸುರಕ್ಷಿತವಾಗಿ ಬಂಧಿಸಲು ಸಿಬ್ಬಂದಿಗಳ ಮನೆ ಮಾಳಿಗೆ ಏರಿದರೆ ಇನ್ನು ಕೆಲವು ಸಿಬ್ಬಂದಿಗಳು ಕಿಟಕಿಯ ಮೂಲಕ ಚಿರತೆಯ ಜಾಗಬದಲಿಸಲು ಬಾರೀ ಪ್ರಯತ್ನ ಪಟ್ಟರು. ಒಟ್ಟಾರೆ ಚಿರತೆಯ ಸುರಕ್ಷಿತ ಬಂಧನದಿಂದ ಆತಂಕದಲ್ಲಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಬಂಧಿಯಾದ ಚಿರತೆಯನ್ನ ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಬಿಟ್ಟುಬರಲು ಅರಣ್ಯ ಇಲಾಖೆ ಸಿಬ್ಬಂದಿಗಳು ತೆರಳಿದರು.

ಅರಣ್ಯ ಇಲಾಖಾ ಸಿಬ್ಬಂದಿಗಳಾದ ಶಾಂತಕುಮಾರ್‌ಸ್ವಾಮಿ, ಚಂದ್ರಾನಾಯ್ಕ್, ಶಿವರಾಮ್, ಬನ್ನೇರುಘಟ್ಟ ವನ್ಯಜೀವ ಸಂರಕ್ಷಣ ಇಲಾಖೆಯ ಅರವಳಿಕೆ ತಜ್ಞ ಡಾ.ಚಿತ್ತಪ್ಪ, ಅರವಳಿಕೆ ಶೂಟರ್ ಶ್ರೀರಾಮ್ ಮತ್ತಿತರ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಕಾರ್ಯಾಚರಣೆ ಸಂಧರ್ಭದಲ್ಲಿ ಸೀಗೇಕುಪ್ಪೆ ಕಾಂತರಾಜ್, ಕಲ್ಯಾಚಿದಾನಂದ್, ಬೆಳಗವಾಡಿ ನಾರಾಯಣ್, ಗ್ರಾಮಸ್ಥರಾದ ಅರುಣ್, ರವೀಶ್ ಮತ್ತಿತರರು ಅರಣ್ಯ ಇಲಾಖಾ ಸಿಬ್ಬಂದಿಗಳ ಕಾರ್ಯಾಚರಣೆಗೆ ಸ್ಪಂಧಿಸಿದರು.

ಮನವಿ : ಈ ನಡುವೆ ಶಾಸಕ ಹೆಚ್.ಸಿ.ಬಾಲಕೃಷ್ಣ ಸಹೋದರ ಅಶೋಕ್ ತಮ್ಮಾಜಿ ಕಾರ್ಯಾಚರಣೆ ಸಂಧರ್ಭದಲ್ಲಿ ಹಾಜರಿದ್ದರು. ಗ್ರಾಮಗಳಿಗೆ ದಾಳಿಯಿಡುತ್ತಿರುವ ವನ್ಯಜೀವಿಗಳ ತಡೆಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಅರಣ್ಯ ಇಲಾಖಾಧಿಕಾರಿಗಳಲ್ಲಿ ಮನವಿ ಮಾಡಿದರು. ಕಾಡುಪ್ರಾಣಿಗಳ ದಾಳಿಯಿಂದ ಹಳ್ಳಿಗಳಲ್ಲಿ ಜೀವನೋಪಾಯಕ್ಕಾಗಿ ಆಶ್ರಯಿಸುವ ಜಾನುವಾರುಗಳು ಕಾಡುಪ್ರಾಣಿಗಳ ಪಾಲಾಗುತ್ತಿವೆ. ಆದ್ದರಿಂದ ಕಾಡುಪ್ರಾಣಿಗಳು ಗ್ರಾಮಗಳು ಪ್ರವೇಶಿಸಿದಂತೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಅಶೋಕ್ ತಮ್ಮಾಜಿ ಒತ್ತಾಯಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X