ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿವಿ ರಾಮನ್ ನಗರ : ವಿವಿಧ ಕಾಮಗಾರಿಗಳಿಗೆ ಚಾಲನೆ

By Staff
|
Google Oneindia Kannada News

MLA Raghu
ಬೆಂಗಳೂರು, ನ. 25 : "ಕೆರೆ ಉಳಿಸಿ" ಅಭಿಯಾನ ಹಿನ್ನೆಲೆಯಲ್ಲಿ ಸರ್ ಸಿ ವಿ ರಾಮನ್‌ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಕೆರೆಗಳ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಿದ್ದು, ಇದರ ಮೊದಲ ಹಂತವಾಗಿ ಕಗ್ಗದಾಸಪುರ ಕೆರೆಯ ಪುನರುಜ್ಜೀವನಕ್ಕೆ ಇಂದು ಭೂಮಿ ಪೂಜೆ ಮಾಡಲಾಯಿತು ಎಂದು ಸಿವಿ ರಾಮನ್ ನಗರ ಕ್ಷೇತ್ರದ ಶಾಸಕ ಎಸ್ ರಘು ಹೇಳಿದರು.

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, "ಕೆರೆಗಳು ಉಳಿದರೆ ಮಾತ್ರ ಮನುಕುಲ ಉಳಿಯಲು ಸಾಧ್ಯ" ಎಂಬ ಹಿರಿಯರ ನಾಣ್ಣುಡಿಯಂತೆ ಈ ಕೆರೆಯ ಸರ್ವತೋಮುಖ ಅಭಿವೃದ್ಧಿಗೆ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿ ಮೂಲಕ ಹಣಕಾಸಿನ ಸೌಲಭ್ಯವನ್ನು ಒದಗಿಸಲಾಗಿದೆ. ಶಾಸಕರ ನಿಧಿಯ ಮುಕ್ಕಾಲು ಪಾಲು ಹಣವನ್ನು ಈ ಯೋಜನೆಗೆಂದೇ ಸದ್ವಿನಿಯೋಗ ಮಾಡಲಾಗುತ್ತಿದೆ ಎಂದರು.

ಬೆಂಗಳೂರು ಉತ್ತರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬೆಂಗಳೂರು ಜಲಮಂಡಳಿ ಖಾತೆ ಸಚಿವರಾದ ಕಟ್ಟಾ ಸುಬ್ರಮಣ್ಯನಾಯ್ಡು ಅವರ ಮಾರ್ಗದರ್ಶನದಲ್ಲಿ ಈ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದ್ದು, ಕಗ್ಗದಾಸಪುರ ಕೆರೆಯ ಪುನರುಜ್ಜೀವನಕ್ಕೆ ಮೊದಲ ಆದ್ಯತೆ ನೀಡಲಾಗಿದೆ ಎಂದರು.

ಈ ಕೆರೆಯ ಅಭಿವೃದ್ಧಿಯನ್ನು ಹಂತಹಂತವಾಗಿ ಕೈಗೆತ್ತಿಕೊಳ್ಳಲಾಗಿದ್ದು, ಮೊದಲ ಹಂತದಲ್ಲಿ ಕೆರೆ ಪ್ರದೇಶದ ಒತ್ತುವರಿ ತಡೆಯಲು ತಡೆಗೋಡೆಯನ್ನು ನಿರ್ಮಿಸಲಾಗುತ್ತಿದೆ. ಎರಡನೇ ಹಂತದಲ್ಲಿ ಕೆರೆಗಳ ಹೂಳನ್ನು ತೆಗೆದು, ಮಾಲಿನ್ಯ ರಹಿತ ಸ್ಥಳವನ್ನಾಗಿ ಪರಿವರ್ತಿಸುವುದು, ಈ ಭಾಗಗಳ ಜನರಿಗೆ ಸುಂದರವಾದ ಉದ್ಯಾನವನ್ನು ರೂಪಿಸಿ ಒಟ್ಟಾರೆ ಅಂದವಾದ ಕೆರೆಯನ್ನಾಗಿ ನಿರ್ಮಿಸಿ ನನ್ನ ಕ್ಷೇತ್ರದ ವಿಶಿಷ್ಟವಾದ ಪ್ರವಾಸಿ ತಾಣವನ್ನಾಗಿ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ರಘು ವಿವರಿಸಿದರು.

ಇದೇ ಸಂದರ್ಭದಲ್ಲಿ ಮಲ್ಲೇಶ್‌ಪಾಳ್ಯದಲ್ಲಿ ಶಾಸಕರ ನಿಧಿಯಿಂದ ನೂತನವಾಗಿ ನಿರ್ಮಾಣಗೊಂಡಿರುವ ಬಸ್‌ ನಿಲ್ದಾಣವನ್ನೂ ಸಹ ಉದ್ಘಾಟಿಸಲಾಯಿತು. ಬೆಂಗಳೂರು ಕೇಂದ್ರ ಬಸ್ ನಿಲ್ದಾಣ ಸೇರಿದಂತೆ ಹಲವಾರು ಪ್ರದೇಶಗಳಿಂದ ಈ ಭಾಗಕ್ಕೆ ದಿನಂಪ್ರತಿ ಹೆಚ್ಚಿನ ಬಸ್‌ಗಳ ಸಂಚಾರ ಇರುವುದನ್ನು ಗಮನಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಸದುದ್ದೇಶದಿಂದ ಶಾಸಕರ ಅನುದಾನದಿಂದ ಹಣ ತೊಡಗಿಸಿ ನವೀನ ಶೈಲಿಯ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದೆ ಎಂದರು.

ಸರ್. ಸಿ.ವಿ.ರಾಮನ್‌ನಗರ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಹೈಮಾಸ್ಕ್ ವಿದ್ಯುದ್ದೀಪಗಳನ್ನು ಅಳವಡಿಸುವ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಈ ಕಾರ್ಯಕ್ರಮದಡಿಯಲ್ಲಿ ಮಲ್ಲೇಶ್‌ಪಾಳ್ಯದಲ್ಲಿ ಎರಡು ಹೈಮಾಸ್ಟ್ ದೀಪಗಳನ್ನು ಉದ್ಘಾಟಿಸಲಾಯಿತು. ಇದೇ ವೇಳೆ ಡಾಂಬರೀಕರಣ ಕಾಮಗಾರಿ ಪೂರ್ಣಗೊಂಡ ಮಲ್ಲೇಶ್‌ಪಾಳ್ಯದ ಮುಖ್ಯ ರಸ್ತೆಯನ್ನು ಸಾರ್ವಜನಿಕರ ಬಳಕೆಗೆ ಅರ್ಪಿಸಲಾಗಿದ್ದು, ಇದರಿಂದ ಈ ಭಾಗದಲ್ಲಿ ಇಲ್ಲಿಯವರೆಗೆ ಇದ್ದ ಸಂಚಾರ ಸಮಸ್ಯೆಗೆ ಒಂದು ದೊಡ್ಡ ಪರಿಹಾರ ದೊರೆತಂತಾಗಿದೆ. ಅಲ್ಲದೆ ಮಲ್ಲೇಶ್‌ಪಾಳ್ಯದಲ್ಲಿ ನಿರ್ಮಿಸಲಾಗಿದ್ದ ಕಿರುನೀರು ಯೋಜನೆಗೂ ಸಹ ಇಂದು ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.

ಇನ್ನೊಂದು ಪ್ರಮುಖವಾದ ಸಂಗತಿಯೆಂದರೆ ಮಲ್ಲೇಶ್‌ಪಾಳ್ಯದಿಂದ ನಗರದ ನಾಲ್ಕು ಕಡೆಗಳಿಗೆ ವೋಲ್ವೋ ಬಸ್‌ಗಳ ಸೌಲಭ್ಯವನ್ನು ಕಲ್ಪಿಸಿರುವುದು. ಈ ಸೌಲಭ್ಯದಿಂದ ಮಲ್ಲೇಶ್‌ಪಾಳ್ಯ ಮತ್ತು ಸುತ್ತ-ಮುತ್ತಲ ಪ್ರದೇಶಗಳ ಜನರು ಇನ್ನುಮುಂದೆ ಕೆಂಪೇಗೌಡ ಬಸ್‌ನಿಲ್ದಾಣ, ಶಿವಾಜನಗರ ಬಸ್‌ನಿಲ್ದಾಣ, ಕೆ.ಆರ್.ಮಾರ್ಕೆಟ್ ವರೆಗೆ "ವೋಲ್ವೋ" ಬಸ್‌ನಲ್ಲಿ ಪ್ರಯಾಣ ಮಾಡಬಹುದಾಗಿದೆ ಎಂದು ಶಾಸಕ ಎಸ್ ರಘು ವಿವರಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X